ವಂಚನೆ ಮತ್ತು ನಾಗರಿಕ ಸೇವಾ ಪರೀಕ್ಷೆಯಲ್ಲಿ ಒಬಿಸಿ ಮತ್ತು ಅಂಗವೈಕಲ್ಯ ಕೋಟಾವನ್ನು ದುರುಪಯೋಗ ಮಾಡಿಕೊಂಡ ಆರೋಪವನ್ನು ಹೊತ್ತಿರುವ ಮಾಜಿ ತರಬೇತಿ ನಿರತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್‌ಗೆ ಸುಪ್ರೀಂ ಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು ಖೇಡ್ಕರ್ ಅವರಿಗೆ ತನಿಖೆಯಲ್ಲಿ ಸಹಕರಿಸುವಂತೆ ಸೂಚಿಸಿದೆ.
ಇದನ್ನು ಓದಿದ್ದೀರಾ? ನಟ ದರ್ಶನ್‌ಗೆ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ
“ಅವರು (ಪೂಜಾ ಖೇಡ್ಕರ್) ಮಾಡಿದ ಗಂಭೀರ ಅಪರಾಧವೇನು? ಅವರು ಮಾದಕವಸ್ತು ಜಾಲದಲ್ಲಿರುವವರೂ ಅಲ್ಲ ಭಯೋತ್ಪಾದಕಿಯೂ ಅಲ್ಲ. ಅವರು ಕೊಲೆ ಮಾಡಿಲ್ಲ. ಅವರು ಎನ್‌ಡಿಪಿಎಸ್ ಅಪರಾಧಿ ಅಲ್ಲ. ನಿಮಗೆ ಒಂದು ವ್ಯವಸ್ಥೆ ಇರಬೇಕು. ನೀವು ತನಿಖೆಯನ್ನು ಪೂರ್ಣಗೊಳಿಸಿ. ಅವರೂ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಎಲ್ಲಿಯೂ ಕೆಲಸ ಸಿಗಲ್ಲ” ಎಂದು ಪೀಠ ಮೌಖಿಕವಾಗಿ ಹೇಳಿದೆ.
“ಪ್ರಕರಣದ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಹೈಕೋರ್ಟ್ ಅರ್ಜಿದಾರರಿಗೆ ಜಾಮೀನು ನೀಡಬೇಕಾಗಿದ್ದ ಸೂಕ್ತವಾದ ಪ್ರಕರಣ ಇದು” ಎಂದು ಹೇಳಿದ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
ಖೇಡ್ಕರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡುವುದನ್ನು ದೆಹಲಿ ಪೊಲೀಸರ ಪರ ವಕೀಲರು ತೀವ್ರವಾಗಿ ವಿರೋಧಿಸಿದ್ದಾರೆ. ಖೇಡ್ಕರ್ ತನಿಖೆಯಲ್ಲಿ ಸಹಕರಿಸುತ್ತಿಲ್ಲ ಮತ್ತು ಅವರ ವಿರುದ್ಧ ಗಂಭೀರ ಆರೋಪಗಳಿವೆ ಎಂದು ಹೇಳಿದ್ದಾರೆ.
2022ರ ಕೇಂದ್ರ ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗಲು ತಮ್ಮ ಪ್ರಮಾಣ ಪತ್ರಗಳನ್ನು ತಿರುಚಿದ ಹಾಗೂ ತನ್ನ ಕುಟುಂಬದ ಆದಾಯ ಸ್ಥಿತಿ ಹಾಗೂ ಇನ್ನಿತರ ವಿವರಗಳನ್ನು ತಪ್ಪಾಗಿ ನಮೂದಿಸಿದ ಆರೋಪವನ್ನು ಪೂಜಾ ಖೇಡ್ಕರ್ ಹೊಂದಿದ್ದಾರೆ. ದೆಹಲಿ ಪೊಲೀಸರು ಖೇಡ್ಕರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ ಈ ಎಲ್ಲಾ ಆರೋಪವನ್ನು ಖೇಡ್ಕರ್ ನಿರಾಕರಿಸಿದ್ದಾರೆ.
