ಕಾಂಗ್ರೆಸ್ ಸರ್ಕಾರ ತಮ್ಮನ್ನು ಆಯ್ಕೆ ಮಾಡಿದ ಮತದಾರರ ಮುಂದೆ ವಿನಯದಿಂದಲೇ ನಾವಿಷ್ಟು ಕೆಲಸ ಮಾಡಿದ್ದೇವೆ. ಮುಂದಿನ ಮೂರು ವರ್ಷ ಮತ್ತಷ್ಟು ಕೆಲಸ ಮಾಡುವ ಸಂಕಲ್ಪ ತೊಟ್ಟಿದ್ದೇವೆ ಎನ್ನುವ ಸಂದೇಶವನ್ನು ಸಮರ್ಪಣೆ ಸಂಕಲ್ಪ ಸಮಾವೇಶದ ಮೂಲಕ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎರಡು ವರ್ಷವನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಮಂಗಳವಾರ (ಮೇ 20) ಹೊಸಪೇಟೆಯಲ್ಲಿ ಆಯೋಜಿಸಿದ್ದ ‘ಸಮರ್ಪಣೆ ಸಂಕಲ್ಪ ಸಮಾವೇಶ-2025’ ಹಲವು ಕಾರಗಳಿಂದ ಮಹತ್ವ ಪಡೆಯಿತು.
ಎಂಟು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನಾಗರಿಕ ಸಮಾಜದಲ್ಲಿ ಮೂಲ ಸೌಲಭ್ಯಗಳಿಂದ ವಂಚಿತರಾದ ಮತ್ತು ಹಿಂದುಳಿದ ಜನ ಸಮೂಹಕ್ಕೆ ಸಹಾಯವಾಗುವ ಕಂದಾಯ ಗ್ರಾಮಗಳ ಹಕ್ಕುಪತ್ರ ವಿತರಣೆಗೆ ಮುಕ್ತಿ ಸಿಕ್ಕಿತು. 1,11,111 ಫಲಾನುಭವಿಗಳಿಗೆ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಕಂದಾಯ ಇಲಾಖೆ ಹಕ್ಕುಪತ್ರ ನೀಡಿದ್ದು, ಇದು ಚರಿತ್ರೆಯಲ್ಲಿ ದಾಖಲಾಯಿತು.
ಕಾಂಗ್ರೆಸ್ ಸರ್ಕಾರ ಆದಿಯಾಗಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಈವರೆಗೂ ತಮ್ಮ ಸರ್ಕಾರದಲ್ಲಿ ನಡೆಯುವ ಇಂತಹ ದೊಡ್ಡ ಕಾರ್ಯಕ್ರಮಗಳನ್ನು ಸಾಧನಾ ಸಮಾವೇಶ ಎಂದೇ ಕರೆದುಕೊಳ್ಳುತ್ತವೆ. ಆ ದಿಕ್ಕಿನಲ್ಲೇ ಹೆಚ್ಚು ಪ್ರಚಾರ ಕೂಡ ಪಡೆಯುತ್ತವೆ. ಆದರೆ, ಹೊಸಪೇಟೆಯಲ್ಲಿ ನಡೆದ ‘ಸಮರ್ಪಣೆ ಸಂಕಲ್ಪ ಸಮಾವೇಶ-2025’ ಪೂರ್ಣ ಭಿನ್ನವಾಗಿತ್ತು. ಎಐಸಿಸಿ ವರಿಷ್ಠರಿಂದ ಹಿಡಿದು, ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಆದಿಯಾಗಿ ಯಾವುದೇ ಕಾಂಗ್ರೆಸ್ ನಾಯಕರು ಒಂದು ಲಕ್ಷಕ್ಕಿಂತಲೂ ಹೆಚ್ಚು ಕುಟುಂಬಗಳಿಗೆ ನೀಡಿದ “ಭೂ ಗ್ಯಾರಂಟಿ”ಯನ್ನು ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ ಎಂದು ಬಳಸಿಕೊಳ್ಳಲಿಲ್ಲ ಎಂಬುದು ಗಮನಾರ್ಹ.
ಈ ಮೂಲಕ ಕಾಂಗ್ರೆಸ್ ಸರ್ಕಾರ ತಮ್ಮನ್ನು ಆಯ್ಕೆ ಮಾಡಿದ ಮತದಾರರ ಮುಂದೆ ವಿನಯದಿಂದಲೇ ನಾವಿಷ್ಟು ಕೆಲಸ ಮಾಡಿದ್ದೇವೆ. ಮುಂದಿನ ಮೂರು ವರ್ಷ ಮತ್ತಷ್ಟು ಕೆಲಸ ಮಾಡುವ ಸಂಕಲ್ಪ ತೊಟ್ಟಿದ್ದೇವೆ ಎನ್ನುವ ಸಂದೇಶವನ್ನು ಸಮರ್ಪಣೆ ಸಂಕಲ್ಪ ಸಮಾವೇಶದ ಮೂಲಕ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು.
“ನಮ್ಮದು ‘ಸಮರ್ಪಣೆ ಮತ್ತು ಸಂಕಲ್ಪ’ ಕಾರ್ಯಕ್ರಮ. ಸಾಧನಾ ಸಮಾವೇಶವಲ್ಲ, ಎರಡನೇ ವರ್ಷದ ಕಾರ್ಯಕ್ರಮ ನಮ್ಮ ತುತ್ತೂರಿ ಊದುವ ಕಾರ್ಯಕ್ರಮವೂ ಅಲ್ಲ, ಕೇಕ್ ಕಟ್ ಮಾಡಿಕೊಳ್ಳುವ ಕಾರ್ಯಕ್ರಮ ಖಂಡಿತ ಅಲ್ಲ. ಎರಡು ವರ್ಷದ ಜನಪರ ಸೇವೆಯ ಸಮರ್ಪಣೆ ಇದಾಗಿದ್ದು, ಮುಂದಿನ ಮೂರು ವರ್ಷ ಜನಪರ ಸೇವೆ ನೀಡುವ ಸಂಕಲ್ಪ ತೊಟ್ಟ ಕಾರ್ಯಕ್ರಮ” ಎಂದು ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ಅವರು ‘ಈ ದಿನ.ಕಾಮ್’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ಮೊದಲೇ ಸುಳಿವು ನೀಡಿದ್ದರು.

“ಸರ್ಕಾರ ಎರಡು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ 1 ಲಕ್ಷ ಕುಟುಂಬಗಳ ಬದುಕಿಗೆ ನೆಮ್ಮದಿ, ಅವರ ಬಾಳಿಗೆ ಗ್ಯಾರಂಟಿ ಕೊಡುತ್ತಿದ್ದೇವೆ. ಸೂರಿಗೆ ಗ್ಯಾರಂಟಿ ಇಲ್ಲ ಎಂದ ಮೇಲೆ, ಅನಿಶ್ಚಿತತೆಯ ಬದುಕು ಬದುಕಬೇಕಾದರೆ ಇರುವ ವಾಸದ ಮನೆಗೆ ಗ್ಯಾರಂಟಿ ಇಲ್ಲ ಎಂದರೆ ಬದುಕಿಗೆ ಹೇಗೆ ಗ್ಯಾರಂಟಿ? ಈಗ ವಾಸದ ಮನೆಗೆ ಪಕ್ಕಾ ಹಕ್ಕುಪತ್ರದ ಗ್ಯಾರಂಟಿ ಕೊಡುವ ಮೂಲಕ ಪಕ್ಕಾ ಹಕ್ಕುಪತ್ರ ವಿತರಣೆ ಮಾಡುತ್ತಿದ್ದೇವೆ. ಇದಕ್ಕಿಂತ ಇನ್ನೇನು ಒಳ್ಳೆ ಕೆಲಸ ಮಾಡಲು ಸಾಧ್ಯ ಜನಗಳಿಗೆ? ಅದನ್ನು ಎರಡನೇ ವರ್ಷ ಪೂರೈಸಿದ ದಿನ ಜನಗಳಿಗೆ ಸಮರ್ಪಣೆ ಮಾಡುವ ಭಾಗ್ಯ ಕಂದಾಯ ಇಲಾಖೆಗೆ ಸಿಕ್ಕಿರುವ ಸೌಭಾಗ್ಯ”ಎಂದು ಕೃಷ್ಣ ಬೈರೇಗೌಡ ವಿವರಿಸಿದ್ದರು.
ಕೃಷ್ಣ ಬೈರೇಗೌಡರ ಮಾತಿನಂತೆ ಸಮರ್ಪಣೆ ಮತ್ತು ಸಂಕಲ್ಪ ಸಮಾವೇಶದಲ್ಲಿ ಬಾಗಿಯಾದ ನಾಯಕರೆಲ್ಲರೂ ಎಲ್ಲೂ ಸಾಧನಾ ಸಮಾವೇಶ ಎಂದು ಭಾಷಣ ಬಿಗಿಯಲಿಲ್ಲ. ಇಡೀ ಸಮಾವೇಶದ ನಿರೂಪಣೆಯನ್ನು ನಿರ್ವಹಿಸಿದ ಕೃಷ್ಣ ಬೈರೇಗೌಡರು, ಬಹುತೇಕ ಸಚಿವರಿಗೆ ಮತ್ತು ಶಾಸಕರಿಗೆ ಮಾತನಾಡಲು ಕಲ್ಪಿಸಿಕೊಡುತ್ತಲೇ ಸರ್ಕಾರದ ಸಾಧನೆಯನ್ನು ಪರೋಕ್ಷವಾಗಿ ಜನರ ಮುಂದಿಟ್ಟರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾನು-ಭಾಸ್ತಿ ಜೋಡಿ- ಕನ್ನಡಕ್ಕೆ ಬೂಕರ್ ಗೆದ್ದ ಮೋಡಿ
ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿರುವ ಬಗ್ಗೆ ಸ್ಪಷ್ಟನೆ ನೀಡಿದ ಕೃಷ್ಣ ಬೈರೇಗೌಡ ಅವರು, “2015ರಲ್ಲಿ ಹಾವೇರಿಗೆ ಬಂದಿದ್ದ ರಾಹುಲ್ ಗಾಂಧಿ ಅವರು ಹಕ್ಕುಪತ್ರಗಳ ಬಗ್ಗೆ ಆಶ್ವಾಸನೆ ನೀಡಿದ್ದರು. ಇಂದಿನ ಹಕ್ಕುಪತ್ರ ವಿತರಣೆಗೆ ಅವರು ಸಾಕ್ಷಿಯಾಗಲಿ ಮತ್ತು ಅವರಿಂದಲೇ ವಿತರಣೆಯಾಗಲಿ ಎಂಬ ಉದ್ದೇಶದಿಂದ ಅವರನ್ನು ಕರೆದಿದ್ದೇವೆ” ಎಂದು ಜನರಿಗೆ ಮನವರಿಕೆ ಮಾಡಿದರು. ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಮೂಲಕವೇ 1,11,111 ಫಲಾನುಭವಿಗಳ ಪೈಕಿ ಸಾಂಕೇತಿಕವಾಗಿ ವೇದಿಕೆ ಮೇಲೆ ಐದು ಕುಟುಂಬಗಳಿಗೆ ‘ಭೂ ಗ್ಯಾರಂಟಿ’ ಹಕ್ಕುಪತ್ರ ಒದಗಿಸಿದರು.
ಒಂದು ಲಕ್ಷ ಕುಟುಂಬಗಳಿಗೆ ಸರ್ಕಾರಿ ಸೇವೆ ಅರ್ಪಣೆಯಾಗಿದೆ. ಈ ಮೂಲಕ ಅರ್ಥಪೂರ್ಣವಾಗಿ ಸರ್ಕಾರ ಎರಡು ವರ್ಷ ಪೂರೈಸಿದ್ದನ್ನು ಆಚರಣೆ ಮಾಡಿದೆ. ಇಂತಹ ಕಾರ್ಯಕ್ರಮ ಮಾಡುವ ಜವಾಬ್ದಾರಿ ಕಂದಾಯ ಇಲಾಖೆ ಹೊತ್ತಿದ್ದು, ಎಲ್ಲೂ ಕೂಡ ಇಲಾಖೆಯ ಕಾರ್ಯಕ್ರಮ ಅಂತ ಅನ್ನಿಸಲಿಲ್ಲ. “ನಮ್ಮ ಇಲಾಖೆಗೆ ಈ ಕಾರ್ಯಕ್ರಮದ ಜವಾಬ್ದಾರಿ ಕೊಟ್ಟಿರುವುದು ನಮಗೆ ಹೆಮ್ಮೆಯ ವಿಷಯ. ನಾವು ಸರ್ಕಾರದ ಕಳಶವಲ್ಲ. ಅದರ ಭಾಗವಷ್ಟೇ” ಎಂದ ಕೃಷ್ಣ ಬೈರೇಗೌಡ ಅವರ ಮಾತು “ಎನಗಿಂತ ಕಿರಿಯರಿಲ್ಲ…” ಎನ್ನುವ ವಿನಿತ ಭಾವವನ್ನೇ ತೋರಿಸಿದೆ.
ಒಂದು ಸರ್ಕಾರ ಜನರ ಮುಂದೆ ಹೀಗೆ ವಿನಯ ಭಾವದಿಂದ ಸಮಾವೇಶ ಮಾಡಿಕೊಂಡಿರುವುದು ಇದೇ ಮೊದಲು ಅನ್ನಿಸುತ್ತದೆ. ಕರ್ನಾಟಕ, ರಾಜಸ್ತಾನ ಹಾಗೂ ಕೇರಳ ರಾಜಕಾರಣದ ಚರಿತ್ರೆಯಲ್ಲಿ ಒಂದು ವಿಶೇಷತೆ ಇದೆ. ಒಂದು ಪಕ್ಷ ಅಧಿಕಾರಕ್ಕೆ ಬಂದರೆ ಮತ್ತೊಂದು ಅವಧಿಗೆ ಅದೇ ಪಕ್ಷಕ್ಕೆ ಅಧಿಕಾರ ಲಭಿಸಿಲ್ಲ. ರಾಜಸ್ತಾನದಲ್ಲಿ ಮುಖ್ಯಮಂತ್ರಿಯಾಗಿದ್ದ ಅಶೋಕ್ ಗೆಹ್ಲೋಟ್ ಅವರು ಸಾಕಷ್ಟು ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿ, ಅನೇಕ ಗ್ಯಾರಂಟಿಗಳನ್ನು ನೀಡಿದರೂ ಅಲ್ಲಿಯ ಮತದಾರರು ಅವರನ್ನು ಮತ್ತೊಂದು ಅವಧಿಗೆ ಕೈಹಿಡಿಯಲಿಲ್ಲ. ಕರ್ನಾಟಕದಲ್ಲಿ ಸಹ ಇತ್ತೀಚಿನ ದಶಕಗಳಲ್ಲಿ ಇದೇ ಪುನರಾವರ್ತನೆಯಾಗಿದ್ದನ್ನು ಗಮನಿಸಬಹುದು.

ಕಾಂಗ್ರೆಸ್ ಸರ್ಕಾರ ಈ ಸಂಪ್ರದಾಯವನ್ನು ಮುರಿಯಲೆಂದೇ ಈಗಿನಿಂದಲೇ ಜನರ ಎದುರು ವಿನಯದಿಂದ ಹೋಗುತ್ತಿರಲುಬಹುದು. ಇದು ಸ್ವಾಗತಾರ್ಹ ನಡೆ ಕೂಡ ಹೌದು. ಮತದಾರರಿಗಿಂತ ಯಾವತ್ತೂ ಸರ್ಕಾರ ದೊಡ್ಡದಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದೆ ಎಂಬುದೇನೋ ನಿಜ. ಈ ಎರಡು ವರ್ಷದಲ್ಲಿ ಐದು ಗ್ಯಾರಂಟಗಳ ಆಚೆ ತನ್ನ ಕಾರ್ಯಕ್ರಮಗಳು, ಅಭಿವೃದ್ಧಿ ಕೆಲಸಗಳು ಹಾಗೂ ಹೊಸ ಯೋಜನೆಗಳ ಮೂಲಕ ರಾಜ್ಯದ ಜನರ ಜೀವನಮಟ್ಟವನ್ನು ಸುಧಾರಣೆ ಮಾಡಿದೆಯೇ ಎಂಬುದಕ್ಕೆ ಸ್ಪಷ್ಟ ಉತ್ತರಗಳಿಲ್ಲ.
ಬಿಜೆಪಿ ಅವಧಿಯಲ್ಲಿನ ಶೇ.40 ಕಮಿಷನ್ ಆರೋಪವನ್ನು ಮುಂದುಮಾಡಿ, ಸಾಕಷ್ಟು ಪ್ರಚಾರಗಿಟ್ಟಿಸಿಕೊಂಡ ಕಾಂಗ್ರೆಸ್‌ನಿಂದಾದರೂ ಕಮಿಷನ್ ದಂಧೆಗೆ ಕಡಿವಾಣ ಬಿದ್ದಿದೆಯಾ? ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ಹಿಂದಿಗಿಂತ ಹೆಚ್ಚೇ ತಾಂಡವ ಆಡುತ್ತಿದೆ. ಸರ್ಕಾರವೇ ಹೇಳಿಕೊಂಡಂತೆ ಮುಂದಿನ ಮೂರು ವರ್ಷಗಳಲ್ಲಾದರೂ ಜನಸ್ನೇಹಿ ಸರ್ಕಾರವಾಗುವತ್ತ ಸಿದ್ದರಾಮಯ್ಯ ಸರ್ಕಾರ ಹೆಜ್ಜೆ ಇಡಲಿ ಎಂದು ಆಶಿಸೋಣ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.