ಸರ್ಕಾರ ಸಮರ್ಪಕವಾಗಿ, ಜನಪರವಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ. ಕೇವಲ ಜನಪರ ಘೋಷಣೆಗಳು ಸಾಲದು. ಅವುಗಳನ್ನು ಫಲಪ್ರದವಾಗಿ ಜಾರಿಗೆ ತರುವ ಬದ್ಧತೆ ತೋರಿಸಬೇಕಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2 ವರ್ಷ ಪೂರೈಸಿ ‘ಸಮರ್ಪಣೆ ಸಂಕಲ್ಪ’ ಸಮಾವೇಶದಲ್ಲಿ ತನ್ನ ಸಾಧನೆಯನ್ನು ಹೇಳಿಕೊಂಡಿತು. ಆದರೆ, ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಏನೇನು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಕೇವಲ ಪಂಚ ಗ್ಯಾರಂಟಿಗಳು ಮಾತ್ರವೆ? ಇತರ ಹೊಸ ಯೋಜನೆಗಳ ಮೂಲಕ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದೆಯೇ ಎಂಬ ಬಗ್ಗೆ ರಾಜ್ಯದ ಜನರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯವನರ ಅಭಿವೃದ್ಧಿ ಸಾಧನೆಯ ಬಗ್ಗೆ ಹೇಳುವುದಾದರೆ ವೈಯಕ್ತಿಕವಾಗಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ವಿಪಕ್ಷಗಳಲ್ಲಿ ಅಪಸ್ವರಗಳಿದ್ದರೂ ಮುಂದುವರಿಸಿಕೊಂಡು ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಕುರ್ಚಿ ಹಾಗೂ ಕೆಲವೊಂದು ಅನಗತ್ಯ ವಿಚಾರಗಳ ಬಗ್ಗೆ ಸಿಎಂ ಆಪ್ತ ಬಳಗದ ಸಚಿವರ ಹೇಳಿಕೆ ಇರುಸುಮುರುಸು ತಂದಿದೆ. ಸಚಿವರುಗಳು ತಮಗೆ ನೀಡಿರುವ ಹೊಣೆಯನ್ನು ಮರೆತು ಇಂತಹ ಅನಗತ್ಯ ಚರ್ಚೆಗಳಿಂದಲೇ ಕಾಲ ಕಳೆಯುತ್ತಿದ್ದಾರೆ. ಸಿಎಂ ಕೂಡ ಸಚಿವರ ಹೇಳಿಕೆಗೆ ತಡೆ ನೀಡದೆ ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ.
ರಾಜ್ಯದ ಸಚಿವರ ಸಾಧನೆ ರಾಜ್ಯದ ಜನತೆಗೆ ಕಾಣುತ್ತಿಲ್ಲ. ಮುಖ್ಯಮಂತ್ರಿಯವರ ಸಂಪುಟದಲ್ಲಿ ಸದ್ಯ 33 ಸಚಿವರಿದ್ದಾರೆ. ಇವರಲ್ಲಿ ರಾಜ್ಯದ ಜನರ ಕಣ್ಣಿಗೆ ಕಾಣುತ್ತಿರುವುದು ಕಂದಾಯ ಸಚಿವ ಕೃಷ್ಣ ಬೈರೇಗೌಡ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕೆಲಸಗಳು. ಇವರು ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವುದರ ಜೊತೆ ಒಂದಷ್ಟು ಸುಧಾರಣೆಗಳನ್ನು ತಂದಿದ್ದಾರೆ. ಆದರೆ ಉಳಿದ ಇಲಾಖೆಗಳ ಪ್ರಗತಿಯನ್ನು ಭೂತ ಕನ್ನಡಿ ಹಿಡಿದು ಹುಡುಕಬೇಕಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮುಂದಿನ ಮೂರು ವರ್ಷದಲ್ಲಾದರೂ ಸರ್ಕಾರ ಜನಪರವಾಗಿರಬಹುದೇ?
ಈ ನಾಲ್ವರು ಸಚಿವರನ್ನು ಹೊರತುಪಡಿಸಿ ಉಳಿದ ಸಚಿವರಲ್ಲಿ ಬಹುತೇಕರ ಹೆಸರನ್ನು ಜನರು ಮರೆತುಬಿಟ್ಟಂತಿದೆ. ಮರೆತು ಹೋಗುವಂತೆ ಆ ಸಚಿವರುಗಳೇ ಅವರ ಕಾರ್ಯವೈಖರಿಯ ಮೂಲಕ ಮಾಡಿಕೊಂಡಿದ್ದಾರೆ. ಡಾ. ಜಿ ಪರಮೇಶ್ವರ್ ನಿರ್ವಹಿಸುತ್ತಿರುವ ಗೃಹ ಖಾತೆಯಂತೂ ಹೇಳತೀರದಾಗಿದೆ. ಅವರ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳು ಏರಿಕೆಯಾಗುತ್ತಿವೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು, ದಲಿತ ಸಮುದಾಯದವರ ಹತ್ಯೆ, ರಾಜ್ಯದ ವಿವಿಧ ಭಾಗದಲ್ಲಿ ನಡೆದ ಕೋಮು ಗಲಭೆಗಳನ್ನು ಗೃಹ ಸಚಿವರು ನಿಯಂತ್ರಿಸದಿರುವುದು ರಾಜ್ಯದ ಜನರಿಗೆ ಬೇಸರ ತರಿಸಿದೆ. ರಾಜ್ಯಕ್ಕೂ ಕೆಟ್ಟ ಹೆಸರು ಬಂದಿದೆ.
ಶಿಕ್ಷಣ ಇಲಾಖೆಯನ್ನು ನಿರ್ವಹಿಸುತ್ತಿರುವ ಕಾರ್ಯನಿರ್ವಹಣೆ ಕೂಡ ಹೇಳತೀರದಾಗಿದೆ. ಇವರ ಆಡಳಿತಾವಧಿಯಲ್ಲಿ ಇಲಾಖೆ ಕಳಪೆ ಮಟ್ಟಕ್ಕೆ ತಲುಪಿದೆ. ಸಾವಿರಾರು ಹುದ್ದೆಗಳು ಈ ಇಲಾಖೆಗಳಲ್ಲಿ ಈಗಲೂ ಖಾಲಿಯಿವೆ. ಪದವಿ ಪಡೆದಿರುವ ಸಾವಿರಾರು ಆಕಾಂಕ್ಷಿಗಳು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ಇದರ ನಡುವೆ ಬಹುತೇಕ ಕಡೆ ಹೊರ ಗುತ್ತಿಗೆಯ ನೇಮಕಾತಿ ಹೆಚ್ಚಾಗುತ್ತಿದೆ.
ಸಾರಿಗೆ, ಇಂಧನ, ನೀರಾವರಿ, ಜಲ ಸಂಪನ್ಮೂಲ ಖಾತೆಗಳಲ್ಲಿ ಆಗಿರುವ ಅಭಿವೃದ್ಧಿಯನ್ನು ಹುಡುಕಬೇಕಿದೆ. ಕೈಗಾರಿಕಾ ಇಲಾಖೆಯಲ್ಲಿ ಸಚಿವ ಎಂ ಬಿ ಪಾಟೀಲ್ ಹೊರದೇಶದಿಂದ ಸಂಪನ್ಮೂಲ ತರುತ್ತೇನೆಂದು ಮಾತನಾಡುತ್ತಿದ್ದಾರೆಯೆ ಹೊರತು ಎರಡು ವರ್ಷಗಳಲ್ಲಿ ರಾಜ್ಯಕ್ಕೆ ಎಷ್ಟು ಹಣ ಹರಿದು ಬಂದಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ನೀಡಿಲ್ಲ.
ಬೆಂಗಳೂರು ಅಭಿವೃದ್ಧಿ ಉಸ್ತುವಾರಿ ಹೊತ್ತಿರುವ ಡಿಸಿಎಂ ಕಾರ್ಯನಿರ್ವಹಣೆಯ ಬಗ್ಗೆ ನಿತ್ಯವೂ ಟೀಕೆಗಳು ವ್ಯಕ್ತವಾಗುತ್ತಿವೆ. ಬೆಂಗಳೂರು ಸಂಚಾರ ದಟ್ಟಣೆಯನ್ನು ದೇವರು ಬಂದರೂ ಕಾಪಾಡಲಾರ ಎಂಬಂತಹ ಹೇಳಿಕೆ ಇಲಾಖೆಯ ಅಸಮರ್ಥತೆಯನ್ನು ತೋರಿಸುತ್ತದೆ. ಸಾವಿರಾರು ಕೋಟಿ ಖರ್ಚು ಮಾಡಿ ರಸ್ತೆ ಸುರಂಗ ಮಾರ್ಗವನ್ನು ನಿರ್ಮಿಸುವ ಯೋಜನೆಗೂ ಅಪಸ್ವರಗಳು ಕೇಳಿಬಂದಿವೆ. ಒಂದೆರಡು ದಿನ ನಿರಂತರವಾಗಿ ಮಳೆ ಸುರಿದರೆ ರಾಜಧಾನಿ ಬೆಂಗಳೂರಿನ ಅರ್ಧ ನಗರ ಮುಳುಗುವ ಸ್ಥಿತಿ ನಿರ್ಮಾಣವಾಗುತ್ತದೆ. ಮಳೆಯಿಂದಾಗುವ ಸಮಸ್ಯೆಗೆ ಶಾಶ್ವತ ಪರಿಹಾರ ಇಲ್ಲಿಯವರೆಗೂ ದೊರಕಿಲ್ಲ. ಕಸದ ಸಮಸ್ಯೆ ಆಗಾಗ ಸುತ್ತಿಕೊಳ್ಳುತ್ತಲೆ ಇರುತ್ತದೆ. ಬಿಬಿಎಂಪಿಯನ್ನು ವಿಂಗಡಿಸುವ ಗ್ರೇಟರ್ ಬೆಂಗಳೂರಿನಿಂದ ನಗರದ ಸಮಸ್ಯೆಗಳು ನಿಜವಾಗಿಯೂ ಬಗೆಹರಿಯಲಿದೆಯೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಸರ್ಕಾರವು ಗ್ಯಾರಂಟಿ ಯೋಜನೆಗಳ ಜೊತೆಗೆ ದೀರ್ಘಕಾಲೀನ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ, ವಿಶೇಷವಾಗಿ ಗ್ರಾಮೀಣಾಭಿವೃದ್ಧಿ, ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಉನ್ನತ ಹಂತಕ್ಕೆ ತೆಗೆದುಕೊಂಡು ಹೋಗಬೇಕಾದ ಅಗತ್ಯವಿದೆ. ಬೆಂಗಳೂರು ಬಿಟ್ಟು ಹಿಂದುಳಿದ ಜಿಲ್ಲೆಗಳತ್ತ ಗಮನ ಹರಿಸಬೇಕಿದೆ. ಸರ್ಕಾರವು ತನ್ನ ಆಡಳಿತದ ದಕ್ಷತೆಯನ್ನು ಹೆಚ್ಚಿಸಬೇಕಿದೆ. ಭವಿಷ್ಯದಲ್ಲಿ, ಜನಪರ ಯೋಜನೆಗಳ ಜೊತೆಗೆ ದೀರ್ಘಕಾಲೀನ ಅಭಿವೃದ್ಧಿಗೆ ಒತ್ತು ನೀಡಿದರೆ, ಕರ್ನಾಟಕವು ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕತೆಯಲ್ಲಿ ದೇಶದ ಪ್ರಮುಖ ರಾಜ್ಯವಾಗಿ ಮುಂದುವರಿಯಬಹುದು.
ಇನ್ನು ಸರ್ಕಾರಕ್ಕೆ ಮೂರು ವರ್ಷಗಳು ಬಾಕಿ ಉಳಿದಿವೆ. ಅಧಿಕಾರ ಹಂಚಿಕೆ, ಒಳ ಜಗಳಗಳನ್ನು ಬಿಟ್ಟು ಈ ಅವಧಿಯಲ್ಲಿ ಸರ್ಕಾರ ಸಮರ್ಪಕವಾಗಿ, ಜನಪರವಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ. ಕೇವಲ ಜನಪರ ಘೋಷಣೆಗಳು ಸಾಲದು. ಅವುಗಳನ್ನು ಫಲಪ್ರದವಾಗಿ ಜಾರಿಗೆ ತರುವಷ್ಟು ಬದ್ಧತೆ ತೋರಿಸಬೇಕಾಗಿದೆ. ಜನರು ಆಯ್ಕೆ ಮಾಡಿದ ಸರ್ಕಾರ, ಅವರ ವಿಶ್ವಾಸಕ್ಕೆ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಂಡರೆ ಮಾತ್ರ ಅದು ಯಶಸ್ವಿ ಆಡಳಿತವೆಂದು ಪರಿಗಣಿಸಬಹುದಾಗಿದೆ. ಇಲ್ಲದಿದ್ದರೆ ಜನರಿಂದಲೇ ಪಾಠ ಕಲಿಯಬೇಕಾಗುತ್ತದೆ.
