ನ್ಯೂಸ್‌ಲಾಂಡ್ರಿ ಕಾರ್ಯನಿರ್ವಾಹಕ ಸಂಪಾದಕಿ ಮನೀಷಾ ಪಾಂಡೆ ಮತ್ತು ಇತರ ಎಂಟು ಪತ್ರಕರ್ತೆಯರ ವಿರುದ್ಧ ಅವಹೇಳನಾಕಾರಿ ಪೋಸ್ಟ್ ಹಾಕಿದ್ದ ಬಲಪಂಥೀಯ ಲೇಖಕ ಅಭಿಜಿತ್ ಅಯ್ಯರ್ ಮಿತ್ರ ಅವರನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಐದು ಗಂಟೆಗಳೊಳಗೆ ಪೋಸ್ಟ್‌ಗಳನ್ನು ಡಿಲೀಟ್ ಮಾಡಬೇಕು. ಇಲ್ಲದಿದ್ದಾರೆ, ಎಫ್‌ಐಆರ್ ದಾಖಲಿಸಲು ಆದೇಶಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಅಭಿಜಿತ್ ಅಯ್ಯರ್ ವಿರುದ್ಧ ನ್ಯೂಸ್‌ಲ್ಯಾಂಡ್ರಿಯ ಪತ್ರಕರ್ತೆಯರು ಮೊಕದ್ದಮೆ ದಾಖಲಿಸಿದ್ದಾರೆ. ಆರೋಪಿ ಅಭಿಜಿತ್ ಲಿಖಿತವಾಗಿ ಕ್ಷಮೆಯಾಚಿಸಬೇಕು ಮತ್ತು 2 ಕೋಟಿ ರೂ. ಪರಿಹಾರ ಕೊಡಿಸಬೇಕೆಂದು ಮೊಕದ್ದಮೆಯಲ್ಲಿ ನ್ಯಾಯಾಲಯವನ್ನು ಮನವಿ ಮಾಡಿದ್ದಾರೆ.
ಅವರ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯವು ಅಭಿಜಿತ್ ಅವರು ಪತ್ರಕರ್ತೆಯರನ್ನು ವೇಶ್ಯೆಯರು ಎಂದು, ನ್ಯೂಸ್‌ಲ್ಯಾಂಡ್ರಿಯನ್ನು ವೇಶ್ಯಾಗೃಹವೆಂದೂ ಕರೆದಿದ್ದಾರೆ ಎಂಬುದನ್ನು ಗಮನಿಸಿದೆ. ಅಭಿಜಿತ್ ಅಯ್ಯರ್ ಅವರು ಸಾಮಾಜಿಕ ಜಾಲತಾನದಲ್ಲಿ ಹಾಕಿರುವ ಪೋಸ್ಟ್‌ಗಳನ್ನು ‘ಯಾವುದೇ ನಾಗರಿಕ ಸಮಾಜವು ಸಹಿಸುವುದಿಲ್ಲ. ಇಂತಹ ಪೋಸ್ಟ್‌ಗಳು ಸಮಾಜಕ್ಕೆ ಮಾರಕ ಎಂದು ಕೋರ್ಟ್ ಹೇಳಿದೆ.
ಈ ವರದಿ ಓದಿದ್ದೀರಾ?: ಸಂವಿಧಾನವೇ ಸುಪ್ರೀಂ: ಧನಕರ್‌ಗೆ ಸಿಜೆಐ ಪವರ್‌ಫುಲ್ ಕ್ಲಾಸ್
“ನಾಗರಿಕ ಸಮಾಜದಲ್ಲಿ ಮಹಿಳೆಯರ ವಿರುದ್ಧ ಅಭಿಜಿತ್ ಬಳಸಿರುವ ಭಾಷೆ ಮತ್ತು ಪದಗಳ ಬಳಕೆಯನ್ನು ಅನುಮತಿಸಬಹುದೇ? ಅಂತಹ ಪದ ಬಳಸಿರುವ ಅಭಿಜಿತ್ ವಿರುದ್ಧ ಸ್ವಯಂಪ್ರೇರಿತವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ಬಂಧಿಸಲು ನಾವು ನಿರ್ದೇಶಿಸಬಹುದು” ಎಂದು ನ್ಯಾಯಾಲಯ ಹೇಳಿದೆ.
ಆರೋಪಿ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲರು, ಪೋಸ್ಟ್‌ಗಳನ್ನು 5 ಗಂಟೆಗಳ ಒಳಗೆ ತೆಗೆದುಹಾಕುವುದಾಗಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.