- ಪಂಪಾ ಬಡಾವಣೆಯಲ್ಲಿ ಮಂಗಳವಾರ ನಡೆದ ಘಟನೆ
- ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಹಾಡಹಗಲೇ ಜೋಡಿ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕ್ಷಣಕ್ಕೊಂದು ಹೊಸ ಮಾಹಿತಿ ಹೊರಬೀಳುತ್ತಿದ್ದು, ಯುವತಿಗೋಸ್ಕರ ಈ ಹತ್ಯೆ ನಡೆದಿದೆಯಾ, ಇದರಲ್ಲಿ ಜಿ ನೆಟ್ ಅರುಣ್ ಪಾತ್ರವಿದೆಯಾ ಎಂಬ ಸಂಶಯ ಹುಟ್ಟಿಕೊಂಡಿದೆ.
ಬೆಂಗಳೂರಿನ ಹೆಬ್ಬಾಳ ಸಮೀಪದ ಪಂಪಾ ಬಡಾವಣೆಯಲ್ಲಿ ಮಂಗಳವಾರ ಏರೋನಿಕ್ಸ್ ಇಂಟರ್ನೆಟ್ ಕಂಪನಿ ಸಿಇಒ ವಿನುಕುಮಾರ್ ಮತ್ತು ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಫಣೀಂದ್ರ ಸುಬ್ರಮಣ್ಯ ಅವರ ಹತ್ಯೆಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಹಳ್ಳಿ ಠಾಣೆಯ ಪೊಲೀಸರು ಶಬರೀಶ್ ಅಲಿಯಾಸ್ ಫೆಲಿಕ್ಸ್, ಶಿವು ಹಾಗೂ ವಿನಯ್ ರೆಡ್ಡಿ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಫಣೀಂದ್ರ ಸುಬ್ರಮಣ್ಯ ಫೆಲಿಕ್ಸ್ ವ್ಯವಹಾರಕ್ಕೆ ಅಡ್ಡಿಪಡಿಸಿದ ಹಿನ್ನೆಲೆ, ಕೊಲೆಗೆ ಸಂಚು ರೂಪಿಸಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿತ್ತು.
ಇದೀಗ ಆರೋಪಿ ಫೆಲಿಕ್ಸ್ ಹುಡುಗಿ ವಿಚಾರಕ್ಕಾಗಿ ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಎಂಡಿ ಫಣೀಂದ್ರನ ಜತೆ ಜಗಳ ಮಾಡಿಕೊಂಡು ಕೊಲೆ ಮಾಡುವ ಬೆದರಿಕೆ ಹಾಕಿದ್ದನು ಎನ್ನಲಾಗಿದೆ.
ಫೆಲಿಕ್ಸ್ ಹಾಗೂ ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಫಣೀಂದ್ರ ಸುಬ್ರಮಣ್ಯ ಇಬ್ಬರು ಬನ್ನೇರುಘಟ್ಟದಲ್ಲಿದ್ದ ಜಿ ನೆಟ್ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಆರೋಪಿ ಫೆಲಿಕ್ಸ್ ಜತೆಗೆ ಯುವತಿಯೊಬ್ಬಳು ಸಲುಗೆಯಿಂದಿದ್ದಳು. ಅದೇ ಹುಡುಗಿ ಎಂಡಿ ಫಣಿಂದ್ರ ಜತೆಗೂ ಸಲುಗೆಯಿಂದ ಇದ್ದಳು. ಹೀಗೆ ಇರುವುದನ್ನು ಸಹಿಸದ ಫೆಲಿಕ್ಸ್ ಇದೇ ವಿಚಾರವಾಗಿ ಎಂಡಿ ಫಣಿಂದ್ರನ ಜತೆಗೆ ಜಗಳವಾಡುತ್ತಿದ್ದನು. ನನ್ನ ಹುಡುಗಿ ವಿಚಾರಕ್ಕೆ ಬಂದರೆ ನಿನ್ನನ್ನು ಮುಗಿಸಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದನು ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹಾಡಹಗಲೇ ಜೋಡಿ ಕೊಲೆ; ಮೂವರು ಆರೋಪಿಗಳ ಬಂಧನ
ಇದೀಗ ತನಿಖೆ ಆರಂಭಿಸಿರುವ ಅಮೃತಹಳ್ಳಿ ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ಮುಂದುವರೆಸಿದ್ದಾರೆ. ಜಿ ನೆಟ್ ಕಂಪನಿಯ ಮಾಲೀಕ ಅರುಣ್ ಕುಮಾರ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಬಿ.ಎಂ.ಲಕ್ಷ್ಮೀಪ್ರಸಾದ್, “ಮಂಗಳವಾರ ಮಧ್ಯಾಹ್ನ ಸುಮಾರು 3.30ರಿಂದ ಸಂಜೆ 4 ಗಂಟೆಗೆ ಇಬ್ಬರ ಕೊಲೆಯಾಗಿದೆ. ಆರೋಪಿಗಳು ಕೆಲಸ ಕೇಳುವ ನೆಪದಲ್ಲಿ ಬೈಕ್‌ನಲ್ಲಿ ಆಫೀಸ್‌ಗೆ ಬಂದು ಕೊಲೆ ಮಾಡಿ ಹಿಂಬಾಗಿಲಿನಿಂದ ಪರಾರಿಯಾಗಿದ್ದರು. ಇದರಲ್ಲಿ ಜಿ ನೆಟ್ ಕಂಪನಿಯ ಮಾಲೀಕ ಅರುಣ್ ಕುಮಾರ್ ಶಾಮೀಲಾಗಿರುವ ಶಂಕೆ ಇದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ತುಮಕೂರು ಜಿಲ್ಲೆ ಕುಣಿಗಲ್ನಲ್ಲಿ ಬಂಧಿಸಲಾಗಿದೆ” ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಅಮೃತಹಳ್ಳಿ ಪೊಲೀಸರನ್ನು ಈ ದಿನ.ಕಾಮ್ ಸಂಪರ್ಕಿಸಿದ್ದು, ಪೊಲೀಸರು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸದೇ, ಕರೆಯನ್ನು ಕಟ್ ಮಾಡಿದರು