ಬಾನು ಮುಷ್ತಾಕ್ ಜೊತೆ ‘ಲಂಕೇಶ್ ಪತ್ರಿಕೆ’ ಬೆಳೆಸಿ ಹೊಳೆಯಿಸಿದ ಮತ್ತೊಂದು ಪ್ರತಿಭೆ ಸಾರಾ ಅಬೂಬಕ್ಕರ್. ‘ಮುಸ್ಲಿಮ್ ಹುಡುಗಿ ಶಾಲೆ ಕಲಿತದ್ದು’ ಎಂಬ ಸಾರಾ ಅವರದೇ ಅನುಭವ ಕಥನ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ರೂಢಿವಾದಿಗಳ ವಲಯದಲ್ಲಿ ತಳಮಳ ಎಬ್ಬಿಸಿತ್ತು. ಜೊತೆಗೆ ಹೊಸ್ತಿಲು ದಾಟುವುದೇ ವಿರಳವಾಗಿದ್ದ ಹೆಣ್ಣುಮಕ್ಕಳ ‘ಕೈ ಹಿಡಿದು’ ಶಾಲೆಯನ್ನು ಮುಟ್ಟಿಸಿತ್ತು.
ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಅಗ್ಗಳಿಕೆಯ ಕನ್ನಡ ಸಾಹಿತ್ಯ ಮುಕುಟಕ್ಕೆ ಈ ಸಲದ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಗರಿಯೂ ಸೇರಿದೆ. ವಿಶೇಷವಾಗಿ ಕನ್ನಡದ ಮಹಿಳೆಯರಿಬ್ಬರು ಈ ಪ್ರಶಸ್ತಿಗೆ ಭಾಜನರಾಗಿರುವುದು ಅತ್ಯಂತ ಹರ್ಷದಾಯಕ ಸಂಗತಿ. ಐತಿಹಾಸಿಕ ವಿದ್ಯಮಾನ.
ಕನ್ನಡದ ಓದುಗರಿಗೆ ಬಾನು ಮುಷ್ತಾಕ್ ಬಹುಕಾಲದಿಂದ ಚಿರಪರಿಚಿತ ಹೆಸರು. ಲಂಕೇಶ್ ಪತ್ರಿಕೆ ಅರಳಿಸಿದ ಪ್ರತಿಭೆಗಳಲ್ಲೊಬ್ಬರು. ದೀಪಾ ಭಾಸ್ತಿ ವೃತ್ತಿಯಿಂದ ಪತ್ರಕರ್ತೆ, ಪ್ರವೃತ್ತಿಯಿಂದ ಪ್ರಬುದ್ಧ ತರ್ಜುಮೆಕಾರ್ತಿ. ಕನ್ನಡ ಇಂಗ್ಲಿಷ್ ಎರಡರಲ್ಲೂ ಪಳಗಿದ ಯುವ ಬರೆಹಗಾರ್ತಿ. ಈ ಇಬ್ಬರ ಸಮಾಗಮ ಕನ್ನಡಕ್ಕೆ ಬೂಕರ್ ತಂದುಕೊಟ್ಟ ಹೆಮ್ಮೆ.
ಉಳಿವಿಗಾಗಿ ಹೋರಾಡುವ ಮತ್ತು ಅದುಮಿದಷ್ಟೂ ಪುಟಿದು ನಿಲ್ಲುವ ಸ್ಥಿತಿಸ್ಥಾಪಕ ಗುಣ ಹೊಂದಿರುವ ಸೋಜಿಗದ ಹೆಣ್ಣು ಪಾತ್ರಗಳು ಬಾನು ಅವರ ಕೃತಿಗಳ ಜೀವ ಜೀವಾಳ ಎಂದು ಬೂಕರ್ ತೀರ್ಪುಗಾತಿಯರು-ತೀರ್ಪುಗಾರರು ಹೇಳಿದ್ದಾರೆ.
‘ನಮ್ಮನ್ನು ಬಹುತೇಕ ಒಡೆಯುವ ಹವಣಿಕೆಯಲ್ಲೇ ತೊಡಗಿರುವ ಜಗತ್ತಿನಲ್ಲಿ, ಕೆಲವೇ ಪುಟಗಳವರೆಗಾದರೂ ಒಬ್ಬರೊಳಗೆ ಮತ್ತೊಬ್ಬರು ಜೀವಿಸುವ ಅಂತಿಮವಾಗಿ ಉಳಿದಿರುವ ಪವಿತ್ರ ಆವರಣ ಸಾಹಿತ್ಯವೊಂದೇ’ ಎಂದು ಮಂಗಳವಾರ ಮಧ್ಯರಾತ್ರಿಯ ನಂತರ ನಡೆದ ಲಂಡನ್ ನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಬಾನು ಮುಷ್ತಾಕ್ ಆಡಿರುವ ಮಾತು ಇಂದಿನ ವಿಷಮ ಕಾಲಕ್ಕೆ ಅತ್ಯಂತ ಪ್ರಸ್ತುತವಾದದ್ದು.
ಯಾವ ಕತೆಯೂ ಎಂದೆಂದಿಗೂ ಸಣ್ಣದಲ್ಲ. ಅನುಭವ ಎಂಬ ಸಂಕೀರ್ಣ ಚಿತ್ರವಿನ್ಯಾಸಗಳನ್ನು ಹೊಂದಿದ ನೇಯ್ಗೆಯ ಎಳೆ ಎಳೆಯೂ ಪರಿಪೂರ್ಣತೆಯ ತೂಕವನ್ನೇ ಹಿಡಿದಿಟ್ಟುಕೊಂಡಿರುತ್ತದೆ ಎಂಬುದೂ ಬಾನು ಅವರು ಜಾಗತಿಕ ವೇದಿಕೆಯಿಂದ ಆಡಿರುವ ಸಮಕಾಲೀನ ವಿವೇಕವೇ ಆಗಿದೆ.
ಬಾನು ತಮ್ಮ ಕೃತಿಯಲ್ಲಿ ಚಿತ್ರಿಸಿರುವ ಪಾತ್ರಗಳು ಧಾರ್ಮಿಕ ಸಂಪ್ರದಾಯವಾದ ಮತ್ತು ಗಂಡಾಳಿಕೆಯು ಶತಮಾನಗಳಿಂದ ಕಟ್ಟಿಕೊಂಡು ಬಂದಿರುವ ಅಭೇದ್ಯ ತಡೆಗೋಡೆಯ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಪರಿಯೇ ಅನನ್ಯ.
ಒಲಿದ ಸಂಗಾತಿಯನ್ನೇ ಕೈ ಹಿಡಿದ ನಂತರ ಬುರ್ಖಾ ಧರಿಸಿ ಮನೆಗೆಲಸದಲ್ಲಿ ತೊಡಗಬೇಕೆಂಬ ಆಣತಿಗೆ ತಲೆಬಾಗಿ ಮಗುವನ್ನು ಹೆತ್ತು ಪ್ರಸವಾನಂತರದ ಖಿನ್ನತೆಯನ್ನು ದಾಟಿ ಬಂದ ಅವರಿಗೆ ಬರವಣಿಗೆ ಸುಲಭವೇನೂ ಆಗಿರಲಿಲ್ಲ. ಒಮ್ಮೆ ಹತಾಶರಾಗಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಕಡ್ಡಿ ಗೀರಿ ಹಚ್ಚಿಕೊಳ್ಳುವವರಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ ಅವರ ಪತಿ ಅವರನ್ನು ತಬ್ಬಿಕೊಂಡು ಬೆಂಕಿಪೆಟ್ಟಿಗೆಯನ್ನು ಕಸಿದುಕೊಂಡರು. ಮಗುವನ್ನು ಬಾನು ಅವರ ಪಾದದ ಬಳಿ ಇರಿಸಿ ನಮ್ಮನ್ನು ಬಿಟ್ಟು ಹೋಗಬೇಡ ಎಂದು ಅಂಗಲಾಚಿದರು. ಈ ಪ್ರಸಂಗವನ್ನು ದಿ ವೀಕ್ ಸಾಪ್ತಾಹಿಕಕ್ಕೆ ನೀಡಿದ ಸಂದರ್ಶನದಲ್ಲಿ ಬಾನು ಹಂಚಿಕೊಂಡಿದ್ದಾರೆ.
ಭಾರತದ ಮುಖ್ಯಧಾರೆಯ ಸಾಹಿತ್ಯದಲ್ಲಿ ಮುಸ್ಲಿಮ್ ಮಹಿಳೆಯರನ್ನು ಪ್ರತಿಮೆ ಅಥವಾ ರೂಪಕಗಳಲ್ಲೇ ಅದುಮಿ ಇರಿಸಲಾಗುತ್ತದೆ. ಅವರು ಮತ್ತೊಬ್ಬರ ನೈತಿಕತೆಯ ವಾದವಿವಾದಗಳ ನಡುವೆ ಸಿಕ್ಕಿ ಬಳಲಿ ತೊಳಲುವ ಮೌನದುಮ್ಮಾನ ಜೀವಿಗಳು. ಈ ಎರಡೂ ರೂಪಗಳನ್ನು ಬಾನು ತಿರಸ್ಕರಿಸಿದ್ದಾರೆ. ಅವರ ಪಾತ್ರಗಳು ಜಿದ್ದು ಜಿಗುಟಿನಿಂದ ಬದುಕಿ ಬಾಳುತ್ತವೆ, ಅನುಸಂಧಾನ ಮಾಡಿಕೊಳ್ಳುತ್ತವೆ ಹಾಗೂ ಆಗಾಗ ದಬಾವಣೆ ದಬ್ಬಾಳಿಕೆಗಳನ್ನು ಹಿಂದಕ್ಕೆ ತಳ್ಳುತ್ತಲೂ ಇರುತ್ತವೆನ್ನುತ್ತವೆ ಅವರ ಕೃತಿಗಳ ವಿಮರ್ಶೆಗಳು.
ಬಂಡಾಯ ಚಳವಳಿಯೊಂದಿಗೆ ಗುರುತಿಸಿಕೊಂಡಿದ್ದ ಬಾನು, ಪತ್ರಿಕೋದ್ಯೋಗವನ್ನೂ ತೊರೆದು ವಕೀಲಿವೃತ್ತಿ ಕೈಗೊಳ್ಳುತ್ತಾರೆ. ಮಸೀದಿಗಳಲ್ಲಿ ಪ್ರಾರ್ಥಿಸುವ ಅವಕಾಶವನ್ನು ಮಹಿಳೆಗೂ ನೀಡಬೇಕೆನ್ನುವ ಬಾನು ಅವರನ್ನು ಕೊಲ್ಲಲು ಬಂದ ಹಂತಕನಿಂದ ಪತಿಯೇ ಪಾರು ಮಾಡುತ್ತಾರೆ.
ಬಾನು ಮುಷ್ತಾಕ್ ಜೊತೆ ‘ಲಂಕೇಶ್ ಪತ್ರಿಕೆ’ ಬೆಳೆಸಿ ಹೊಳೆಯಿಸಿದ ಮತ್ತೊಂದು ಪ್ರತಿಭೆ ಸಾರಾ ಅಬೂಬಕ್ಕರ್. ‘ಮುಸ್ಲಿಮ್ ಹುಡುಗಿ ಶಾಲೆ ಕಲಿತದ್ದು’ ಎಂಬ ಸಾರಾ ಅವರದೇ ಅನುಭವ ಕಥನ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ರೂಢಿವಾದಿಗಳ ವಲಯದಲ್ಲಿ ತಳಮಳ ಎಬ್ಬಿಸಿತ್ತು. ಜೊತೆಗೆ ಹೊಸ್ತಿಲು ದಾಟುವುದೇ ವಿರಳವಾಗಿದ್ದ ಹೆಣ್ಣುಮಕ್ಕಳ ‘ಕೈ ಹಿಡಿದು’ ಶಾಲೆಯನ್ನು ಮುಟ್ಟಿಸಿತ್ತು.
ಅವರೇ ಹೇಳಿಕೊಂಡಿರುವ ಪ್ರಕಾರ ಅವರು ಶಾಲೆಗೆ ಹೋಗಲು, ಅದರಲ್ಲೂ ಕನ್ನಡ ಕಲಿಯಲು ಅವರ ತಂದೆಯವರ ಪ್ರೋತ್ಸಾಹವೇ ಕಾರಣ. ಲಂಕೇಶ್ ಪತ್ರಿಕೆ ಗೆ ಬರೆಯಲು ಆನಂತರ ಸ್ವತಂತ್ರ ಸಾಹಿತ್ಯ ಕೃತಿಗಳನ್ನು ರಚಿಸಲು ಅವರ ಪತಿ ನೀಡಿದ ಬೆಂಬಲವೂ ದೊರೆತಿದೆ. ಬಾನು ಅವರ ಜೊತೆ ಲಂಕೇಶ್ ಹೊಳೆಯಿಸಿದ ಮತ್ತೊಬ್ಬ ಬರೆಹಗಾರ್ತಿ ಮತ್ತು ಹೋರಾಟಗಾರ್ತಿ ಬಿ.ಟಿ.ಲಲಿತಾನಾಯಕ್.
ಮೂರು ವರ್ಷಗಳ ಹಿಂದೆ ಗೀತಾಂಜಲಿಶ್ರೀ ಅವರ ಹಿಂದಿ ಕಾದಂಬರಿ ‘ರೇತ್ ಸಮಾಧಿ’ಯನ್ನು ಅಮೆರಿಕೆಯ ಅನುವಾದಕಿ ಡೇಸಿ ರಾಕ್ವೆಲ್ ಅವರು Tomb of Sand ಎಂದು ಇಂಗ್ಲಿಷ್‌ಗೆ ಅನುವಾದಿಸಿದ್ದರು. ಈ ಅನುವಾದಿತ ಕೃತಿಗೆ 2022ರ ಬೂಕರ್ ಪ್ರಶಸ್ತಿ ಸಿಕ್ಕಿತ್ತು. ಅನುವಾದಿತ ಕೃತಿಗಳು ಆಯ್ಕೆಯಾದಾಗ ಬಹುಮಾನವನ್ನು ಮೂಲ ಕೃತಿಕಾರ್ತಿ ಮತ್ತು ಅನುವಾದಕಿ ಇಬ್ಬರಿಗೂ ಸಮನಾಗಿ ಹಂಚಲಾಗುವುದು.
ಹೀಗೆಯೇ ಪ್ರಶಸ್ತಿಯನ್ನು ಬಾನು ಅವರೊಂದಿಗೆ ಹಂಚಿಕೊಳ್ಳುತ್ತಿರುವ ಅನುವಾದಕಾರ್ತಿ ದೀಪಾ ಭಾಸ್ತಿ ಅಂತಾರಾಷ್ಟ್ರೀಯ ಮಟ್ಟದ ನಿಯತಕಾಲಿಗಳಿಗೆ ಬರೆಯುತ್ತಿರುವ ಗುಣಮಟ್ಟದ ಬರೆಹಗಾರ್ತಿ. ಪುಟ್ಟ ಮಡಿಕೇರಿಯಲ್ಲಿ ಕುಳಿತೇ ಜಾಗತಿಕ ನೋಟವನ್ನು ದಕ್ಕಿಸಿಕೊಂಡಿರುವಾಕೆ. ಕನ್ನಡಿಗರು ಹೆಮ್ಮೆಪಡಬೇಕಿರುವ ಈ ಯುವಪ್ರತಿಭೆಗೆ ಸಿಕ್ಕಿರುವ ಬೂಕರ್ ಪ್ರಶಸ್ತಿಯು ಕನ್ನಡ ಸಾಹಿತ್ಯದ ಇನ್ನೂ ಅನೇಕ ಅಪಾರ ಸತ್ವಯುತ ಕೃತಿಗಳು ಇಂಗ್ಲಿಷಿಗೆ ತರ್ಜುಮೆಗೊಳ್ಳಲು ಸಹಾಯಕ ಆಗಲಿದೆ ಎಂಬುದು ನಿಶ್ಚಿತ.
ಪ್ರಪಂಚದ ಅತ್ಯುನ್ನತ ಸಾಹಿತ್ಯಿಕ ಪ್ರಶಸ್ತಿಗಳು ಕನ್ನಡಕ್ಕೆ ಲಭಿಸಿಲ್ಲವೆಂಬುದರ ಅರ್ಥ, ಅಂತಹ ಯೋಗ್ಯ ಕೃತಿಗಳು ಕನ್ನಡದಲ್ಲಿ ಇಲ್ಲ ಎಂದಲ್ಲ. ಬದಲಾಗಿ ಅಂತಾರಾಷ್ಟ್ರೀಯ ಓದುಗರನ್ನು, ಮುಖ್ಯವಾಗಿ ಇಂಗ್ಲಿಷ್ ಓದುಗರನ್ನು ತಲುಪಬಲ್ಲ ಸಮರ್ಥ ಅನುವಾದಗಳು ಬರುತ್ತಿಲ್ಲ ಎಂಬುದು ಹೆಚ್ಚು ನಿಜವಾದ ಮಾತು. ಕನ್ನಡದಿಂದ ಇಂಗ್ಲಿಷಿಗೆ ಅನುವಾದಿಸಬಲ್ಲ ಕೆಲವೇ ಅನುವಾದಕರ ಪಟ್ಟಿಗೆ ದೀಪಾ ಕೂಡ ಸೇರಿದ್ದಾರೆ.
ಕನ್ನಡ ಭಾಸ್ತಿಯವರ ಅಟ್ಟದ ಭಾಷೆ, ಅವರ ಮನೆ ಭಾಷೆ, ಅವರು ನಡೆದಾಡುವ ಓಣಿಗಳು ರಸ್ತೆಗಳ ಭಾಷೆ, ಅವರ ಮನೆಯಂಗಳದ- ಮನೆ ಹಿತ್ತಿಲಿನ ಭಾಷೆ. ಶಾಲೆಯುದ್ದಕ್ಕೂ ಕನ್ನಡ ಕಲಿತಿದ್ದಾರೆ. ಕನ್ನಡ ಅವರ ‘ಮಾತೃಭಾಷೆ’. ಆದರೆ ಅವರ ಅಮ್ಮನ ಭಾಷೆ ಅಲ್ಲ. ಹುಟ್ಟಿದಾಗಿನಿಂದ ಅವರ ಸುತ್ತಮುತ್ತ ಕಿವಿ ಮೇಲೆ ಬಿದ್ದಿರುವ ಭಾಷೆಯೆಂದು ಬಣ್ಣಿಸುತ್ತಾರೆ.
ಅವರ ಪ್ರಬಂಧಗಳು, ವಿಮರ್ಶೆಗಳು, ಅಂಕಣಗಳು ದಿ ಪ್ಯಾರಿಸ್ ರಿವ್ಯೂ, ದಿ ಗಾರ್ಡಿಯನ್, ದಿ ಕಾರವಾನ್, ದಿ ಹಿಂದು ಹಾಗೂ ಲಿಟರರಿ ಹಬ್ ನಂತಹ ಪ್ರತಿಷ್ಠಿತ ಪತ್ರಿಕೆಗಳು-ನಿಯತಕಾಲಿಗಳಲ್ಲಿ ಪ್ರಕಟವಾಗಿವೆ. ಕನ್ನಡದ ಬಹುಮುಖೀ ದೈತ್ಯ ಪ್ರತಿಭೆ ಶಿವರಾಮ ಕಾರಂತರ “ದಿ ಸೇಮ್ ವಿಲೇಜ್ ದಿ ಸೇಮ್ ಟ್ರೀ” (ಅದೇ ಊರು ಅದೇ ಮರ), ಕೊಡಗಿನ ಗೌರಮ್ಮ ಅವರ ಕತೆಗಳ ಅನುವಾದ ‘ದಿ ಫೇಟ್ಸ್ ಗೇಮ್’ (ವಿಧಿಯ ಆಟ ಮತ್ತು ಇತರೆ ಕಥೆಗಳು) ಕೃತಿಗಳನ್ನೂ ಇಂಗ್ಲಿಷಿಗೆ ಅನುವಾದಿಸಿದ್ದಾರೆ ಭಾಸ್ತಿ. ಇಂಗ್ಲಿಷನ್ನು ಹೆಣ್ಣೋಟದಿಂದ ಬಳಸುವ ಕುರಿತು ಅವರು ನೀಡುವ ವಿವರಣೆ ಅತ್ಯಂತ ಅರ್ಥಪೂರ್ಣ. ಈ ಹೆಣ್ಣೋಟದ ಭಾಷೆ ಬಾನು ಮುಷ್ತಾಕ್ ಅವರ ಮತ್ತು ಕೊಡಗಿನ ಗೌರಮ್ಮ ಕೃತಿಗಳಲ್ಲಿ ಸದ್ದಿಲ್ಲದ ಕಂಪನದಂತೆ ಓಡುವ ಬಗೆಯನ್ನು ಅವರು ಬಣ್ಣಿಸಿದ್ದಾರೆ. ಈ ಎರಡೂ ಕೃತಿಗಳು ಹೆಣ್ಣಿನ ಒಳಜಗತ್ತುಗಳ ಭೂಮಿಕೆಯಲ್ಲಿ ಅನಾವರಣಗೊಳ್ಳುತ್ತವೆ. 1930ರ ದಶಕದಲ್ಲಿ ಜೀವಿಸಿದ್ದ ಗೌರಮ್ಮ ಮತ್ತು ಸಮಕಾಲೀನ ಬಾನು ಅವರು ಜೀವಿತಾವಧಿಗಳು ಮತ್ತು ಧಾರ್ಮಿಕ ಅಸ್ಮಿತೆಗಳು ಭಿನ್ನವಾಗಿದ್ದರೂ ಅವರು ಬರೆದ ಸ್ತ್ರೀ ಸಮುದಾಯಗಳು ಈ ಭಿನ್ನತೆಗಳನ್ನು ದಾಟಿ ಜೀವಿಸುತ್ತವೆ. ಒಂದರ ಜಗತ್ತನ್ನು ದಾಟಿ ಇನ್ನೊಂದರ ಜಗತ್ತನ್ನು ಪ್ರವೇಶಿಸಿ ಒಡನಾಡುತ್ತವೆ. ಗಂಡಾಳಿಕೆಯ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ಬದಲಾಗಿರುವುದು ಅತ್ಯಲ್ಪ ಎಂಬುದಕ್ಕೆ ಹಿಡಿದ ಕನ್ನಡಿಯಿದು ಎನ್ನುತ್ತಾರೆ ಭಾಸ್ತಿ.
“ಹಸೀನಾ ಮತ್ತು ಇತರೆ ಕತೆಗಳು” ಬಾನು ಅವರ ಪ್ರಸಿದ್ಧ ಕಥಾ ಸಂಕಲನ. ಈ ಕೃತಿಯನ್ನು ದೀಪಾ ಭಾಸ್ತಿ ಇಂಗ್ಲಿಷ್ ಗೆ (ಹಾರ್ಟ್ ಲ್ಯಾಂಪ್) ಅನುವಾದಿಸಿದ್ದರು. ಇಂಗ್ಲಿಷ್ ಅನುವಾದ ‘ಹಾರ್ಟ್ ಲ್ಯಾಂಪ್’ಗೆ ಬೂಕರ್ ಲಭಿಸಿದೆ. ಕನ್ನಡ ಮೂಲದ ಕೃತಿಗೆ ಸಂದ ಅಪರೂಪದ ಅಂತಾರಾಷ್ಟ್ರೀಯ ಶ್ರೇಯಸ್ಸು ಇದಾಗಿದೆ. 2013ರಲ್ಲಿ ಡಾ.ಯು.ಆರ್. ಅನಂತಮೂರ್ತಿ ಅವರ ಹೆಸರು 10 ಮಂದಿ ಬೂಕರ್ ಲೇಖಕರ ಕಿರುಪಟ್ಟಿಯಲ್ಲಿತ್ತು. ಅವರು ಆಯ್ಕೆಯಾಗಿರಲಿಲ್ಲ.
ಈ ಮುನ್ನ ಭಾರತೀಯ ಮೂಲದ ಐವರಿಗೆ ಬೂಕರ್ ಸಂದಿದೆ. ಬಾನು-ಭಾಸ್ತಿ ಜೋಡಿಯದು ಆರನೆಯ ಸಾಧನೆ. ಭಾರತೀಯ ಮಹಿಳೆಯರ ಲೆಕ್ಕದಲ್ಲಿ ನಾಲ್ಕನೆಯದು. ಈ ಹಿಂದೆ ಅರುಂಧತಿ ರಾಯ್ ಅವರ God of Small Things (1997), ಕಿರಣ್ ದೇಸಾಯಿ ಅವರ The Inheritance of Loss (2006), ಗೀತಾಂಜಲಿಶ್ರೀ ಅವರ ಹಿಂದೀ ಕೃತಿ ‘ರೇತ್ ಸಮಾಧಿ’ಯ ಇಂಗ್ಲಿಷ್ ಅನುವಾದ The Tomb of Sand (2022) ಕೃತಿಗಳು ಬೂಕರ್ ಪ್ರಶಸ್ತಿ ಗೆದ್ದಿವೆ.
ಭಾರತೀಯ ಮೂಲದ ಸಲ್ಮಾನ್ ರುಷ್ದೀ ಅವರ ‘ದಿ ಮಿಡ್ ನೈಟ್ ಚಿಲ್ಡ್ರನ್’ , 2008ರಲ್ಲಿ ಅರವಿಂದ ಅಡಿಗ ಅವರ ‘ವೈಟ್ ಟೈಗರ್’ ಇಂಗ್ಲಿಷ್ ಕೃತಿಗಳು ಈ ಪ್ರಶಸ್ತಿಗೆ ಪಾತ್ರವಾಗಿದ್ದವು. ನಿಕಿತಾ ಲಾಲ್ವಾನಿ, ಜೀತ್ ಥಾಯಿಲ್, ರೋಹಿಂಟನ್ ಮಿಸ್ತ್ರಿ, ಅನಿತಾ ದೇಸಾಯಿ, ಝುಂಪಾ ಲಾಹಿರಿ ಮುಂತಾದವರ ಕೃತಿಗಳು ಈ ಹಂದೆ ಬೂಕರ್ ಪ್ರಶಸ್ತಿಯ ಅಂತಿಮ ಸುತ್ತನ್ನು ಪ್ರವೇಶಿಸಿದ್ದುಂಟು.
ಮಹಿಳಾ ಸಾಹಿತ್ಯವನ್ನು ಅಡುಗೆ ಮನೆ ಸಾಹಿತ್ಯವೆಂದು ಗಂಡಾಳಿಕೆಯು ಮೂಗು ಮುರಿಯುತ್ತಿದ್ದ ಕಾಲವೊಂದಿತ್ತು. ಮಹಿಳೆಯಿಂದ ಅಕ್ಷರವನ್ನು ಕಿತ್ತುಕೊಂಡು ಶತಮಾನಗಳ ಕಾಲ ಆಕೆಯನ್ನು ಅಕ್ಷರವಂಚಿತವಾಗಿಸಿದ್ದ ಗಂಡಾಳಿಕೆಯ ಈ ಟೀಕೆ ಅತೀವ ಅನ್ಯಾಯದ್ದಾಗಿತ್ತು. ಕಾಲು ಕಟ್ಟಿ ಹಾಕಿ ಓಟದ ಸ್ಪರ್ಧೆಯಲ್ಲಿ ಗೆಲ್ಲಲಿಲ್ಲ ಎಂದು ಹಳಿಯುವುದು ಅನ್ಯಾಯ ಮಾತ್ರವಲ್ಲ ಅಮಾನುಷವೂ ಹೌದು. ಹನ್ನೆರಡನೆಯ ಶತಮಾನದ ವಚನ ಚಳವಳಿಯು ತಳವರ್ಗಗಳಿಗೆ ಮಾತ್ರವಲ್ಲದೆ ಮಹಿಳೆಗೂ ಸಮಾನ ಅವಕಾಶ ಕಲ್ಪಿಸಿತ್ತು. ಅಕ್ಕಮಹಾದೇವಿ, ಕಾಳವ್ವೆ, ಗೊಗ್ಗವ್ವೆ, ಸೂಳೆ ಸಂಕವ್ವೆ, ಅಮುಗೆ ರಾಯಮ್ಮ ಮುಂತಾದ ಹತ್ತಾರು ಪ್ರತಿಭಾರಾಶಿಗಳು ಅರಳಿದವು.
ಅರ್ಧ ಆಕಾಶ ಮಹಿಳೆಯರಿಗೆ ಸೇರಿದ್ದು ಎಂದು ಮಾವೋ ತ್ಸೇ ತುಂಗ್ ಹೇಳಿದ್ದ. ಅರ್ಧ ಆಕಾಶವಿರಲಿ, ಚೂರು ಚಾರು ಭೂಮಿ ಕೂಡ ಮಹಿಳೆಯರಿಗೆ ಹೆಸರಿಗಿಲ್ಲ. ಆದರೆ ಅವರು ಪುರುಷರಿಗೆ ಮಿಗಿಲಾಗಿ ಹೊಲ ಮನೆ ಎರಡೂ ಕಡೆ ಗೇಯುವುದು ನಿಂತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ರೈತನ ನಂತರ ಆ ಕುಟುಂಬದ ನೊಗಕ್ಕೆ ಒಂಟಿ ಎತ್ತಾಗಿ ದುಡಿಯುವವಳು ಮಹಿಳೆ.
ಚಲಿಸುವ ಆಸ್ತಿಯಾಗಿ, ಭೋಗದ ಸರಕಾಗಿ, ತೊತ್ತಾದ ಮಹಿಳೆಗೆ ಶತಮಾನಗಳ ನಂತರ ಮತ್ತೆ ವಿಮೋಚಕರಾಗಿ, ಅಕ್ಷರ ರೂಪಗಳಾಗಿ ಒದಗಿಬಂದವರು ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ, ಆನಂತರ ಡಾ ಬಾಬಾಸಾಹೇಬ ಅಂಬೇಡ್ಕರ್.
ಅಸಮಾನ ಸಮಾಜದ ಅಂತಿಮ ವಿಮೋಚನೆಯಾಗಬೇಕಿದ್ದರೆ ಮಹಿಳೆಯ ಸಬಲೀಕರಣ ಆಗಬೇಕಿದೆ. ವಂಚಿಸಲಾಗಿರುವ ಸಮಪಾಲು ಆಕೆಗೆ ದಕ್ಕಬೇಕಿದೆ. ಈ ಸತ್ಯವನ್ನು ಗಂಡಾಳಿಕೆ ತ್ವರಿತವಾಗಿ ಅರಿಯಬೇಕಿದೆ. ಬಾನು ಮುಷ್ತಾಕ್, ಕರ್ನಲ್ ಸೋಫಿಯಾ ಖುರೇಶಿ, ದೀಪಾ ಭಾಸ್ತಿಯಂತಹವರು ಗಂಡಾಳಿಕೆಯ, ಮನುವಾದಿ ತಡೆಗೋಡೆಗಳನ್ನು ಬಡಿದು ಕೆಡವಿದ್ದಾರೆ. ಈ ಮಾತನ್ನು ಬದುಕಿ ತೋರಿದ್ದಾರೆ. ಬಹುತ್ವದ ಪ್ರತೀಕಗಳೇ ಆಗಿದ್ದಾರೆ. ಇಂತಹವರ ಸಂಖ್ಯೆ ಕೋಟಿ ಕೋಟ್ಯಂತರ ಆಗಬೇಕಿದೆ.
