Ground Report | ಹತ್ಯೆಯೋ, ಆತ್ಮಹತ್ಯೆಯೋ? ಕೆ.ಆರ್‌.ಪೇಟೆ ದಲಿತ ಯುವಕನ ಸಾವಿನ ಸುತ್ತ ಹಬ್ಬಿದ ಅನುಮಾನ!

Date:

Advertisements
ಪ್ರಕರಣದ ಹಿಂದೆ ಇಷ್ಟೆಲ್ಲ ಸಾಧ್ಯತೆ ಇದ್ದರೂ 'ಆತ್ಮಹತ್ಯೆ' ಎಂಬ ಪದ ಎಫ್ಐಆರ್‌ನಲ್ಲಿ ನಮೂದಾಗಿದ್ದು ಹೇಗೆ ಎಂಬುದೇ ಎಲ್ಲರ ಪ್ರಶ್ನೆ

“ಆತ ಬಿದ್ದಲ್ಲೇ ಬಿದ್ದಿದ್ದ.. ಬೆಂಕಿ ಮೈಮೇಲೆ ತಗುಲಿದಾಗ ಅತ್ತಿಂದಿತ್ತ ಓಡಾಡುವುದು, ಚೀರಾಡುವುದು ಸಾಮಾನ್ಯ. ಆದರೆ ಚೀರಾಡಿದ್ದು ಕೇಳಿಸಿಲ್ಲ! ಬೆಂಕಿ ಹತ್ತಿಕೊಂಡ ಮೇಲೆ ಅಕ್ಕಪಕ್ಕದಲ್ಲಿ ಓಡಾಡಿದ ಗುರುತ್ತಿಲ್ಲ. ಮೃತದೇಹ ಸಿಕ್ಕ ಎದುರಲ್ಲೇ ಒಂದು ಮನೆ ಇದೆ. ರಸ್ತೆಯೂ ಇದೆ. ಸ್ವಲ್ಪ ಜೋರಾಗಿ ಕೂಗಿದರೆ ಅಕ್ಕಪಕ್ಕದ ಮನೆಗಳಿಗೂ ಕೇಳಿಸುವ ಪ್ರದೇಶವದು. ಇದ್ಯಾವುದೂ ಆಗಿಲ್ಲ.. ಇದು ಖಂಡಿತ ಆತ್ಮಹತ್ಯೆಯಲ್ಲ, ಕೊಲೆ. ಕೊಂದವನು ತಲೆ ಮರೆಸಿಕೊಂಡಿದ್ದಾನೆ..”

-ಹೀಗೆ ತಮ್ಮದೇ ಅನುಮಾನಗಳನ್ನು ವ್ಯಕ್ತಪಡಿಸುತ್ತಾ ಹೋಗುತ್ತಾರೆ ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮಸ್ಥರು. “ಗ್ರಾಮದಲ್ಲಿ ವಾಸವಿದ್ದ ಪರಿಶಿಷ್ಟ ಜಾತಿಯ ಯುವಕ ಜಯಕುಮಾರ್ ಸಾಯುವಂತಹ ವ್ಯಕ್ತಿಯಲ್ಲ. ಆತನನ್ನು ಕೊಂದ ಬಳಿಕ, ಬೆಂಕಿಗೆ ಎಸೆದಂತೆ ಕಾಣುತ್ತದೆ. ಊರಿನ ಸವರ್ಣೀಯ ಜಾತಿಯ ಅನಿಲ್ ಕುಮಾರ್‌ ಎಂಬಾತ ಕೆಲ ವರ್ಷಗಳಿಂದಲೂ ಜಯಕುಮಾರ್‌ ಜಮೀನಲ್ಲಿ ಹುಲ್ಲಿನ ಮೆದೆ ಹಾಕಿಕೊಂಡು, ದಬ್ಬಾಳಿಕೆ ಮಾಡುತ್ತಿದ್ದ. ಆತ ಈಗ ಕೊಲೆ ಮಾಡಿ ನಾಪತ್ತೆಯಾಗಿರುವುದು ಸ್ಪಷ್ಟ. ಆದರೂ ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಿ, ಮೃತದೇಹವನ್ನು ಸುಟ್ಟು ಅಂತ್ಯಕ್ರಿಯೆ ಮಾಡಲಾಗಿದೆ” ಎಂಬುದು ಜನರ ಆಕ್ರೋಶ.

jayakumar
ಅನುಮಾನಾಸ್ಪದವಾಗಿ ಸಾವಿಗೀಡಾದ ಜಯಕುಮಾರ್
Anilkumar
ತಲೆಮರೆಸಿಕೊಂಡಿರುವ ಆರೋಪಿ ಅನಿಲ್ ಕುಮಾರ್

ಜಯಕುಮಾರ್ ಪತ್ನಿ ಲಕ್ಷ್ಮಿ ಕೆ.ಬಿ. ಅನಕ್ಷರಸ್ಥೆ. ಎರಡು ಎಳೆಯ ಮಕ್ಕಳ ತಾಯಿ. ಗಂಡನ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸುತ್ತಿರುವ ಬಗ್ಗೆ ಆ ಹೆಣ್ಣುಮಗಳಿಗೆ ಇನ್ನಿಲ್ಲದ ಸಂಕಟ. “ನನ್ನ ಗಂಡನನ್ನು ಕೊಂದಿದ್ದಾರೆ ಹೊರತು ಆತ್ಮಹತ್ಯೆಯಲ್ಲ; ಪೊಲೀಸರು ನನ್ನ ಮುಂದೆ ದೂರಿನಲ್ಲಿರುವ ವಿಚಾರಗಳನ್ನು ಓದಿ ಹೇಳಿಯೇ ಇಲ್ಲ. ಸಹಿ ಹಾಕಿಸಿಕೊಂಡು ಪ್ರಕರಣವನ್ನು ತಿರುಚಿದ್ದಾರೆ. ನನ್ನ ಗಂಡ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನಾನು ಹೇಳಿಯೇ ಇಲ್ಲ. ಆದರೂ ದೂರಿನಲ್ಲಿ ತಪ್ಪಾಗಿ ದಾಖಲಿಸಿದ್ದಾರೆ. ಎರಡು ಮಕ್ಕಳನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ನನ್ನ ಗಂಡನದ್ದಲ್ಲ” ಎಂದಿರುವ ಲಕ್ಷ್ಮಿ, ಈಗ ಡಿವೈಎಸ್‌ಪಿಗೆ ಮರು ದೂರು ನೀಡಿದ್ದಾರೆ. ಸತ್ಯಕ್ಕಾಗಿ ಹಂಬಲಿಸುತ್ತಿರುವ ದಲಿತ, ರೈತ ಮತ್ತು ಪ್ರಗತಿಪರ ಸಂಘಟನೆಗಳು ಸಂತ್ರಸ್ತೆಯ ಬೆನ್ನಿಗೆ ನಿಂತಿವೆ.

Advertisements
lakshmi 2
ಮಕ್ಕಳೊಂದಿಗೆ ಸಂತ್ರಸ್ತೆ ಲಕ್ಷ್ಮಿ ಕೆ.ಬಿ.

‘ಈದಿನ ಡಾಟ್ ಕಾಮ್’ ಜೊತೆ ಮಾತನಾಡಿದ ಗ್ರಾಮದ ದಲಿತ ಮುಖಂಡ ರಾಜೇಶ್, ಜಯಕುಮಾರ್ ಅವರ ಬದುಕಿನ ಕುರಿತು ಎಳೆಎಳೆಯಾಗಿ ಬಿಡಿಸಿಟ್ಟರು. ಜಯಕುಮಾರ್ ಮತ್ತು ಆರೋಪಿ ಅನಿಲ್‌ ಕುಮಾರ್ ನಡುವೆ ನಡೆಯುತ್ತಿದ್ದ ಗಲಾಟೆಯ ಕುರಿತು ವಿವರಿಸಿದರು.

ಇದನ್ನೂ ಓದಿರಿ: ‘ಕೊಲೆಯನ್ನು ಆತ್ಮಹತ್ಯೆ ಎಂದು ತಿರುಚಿದ ಕೆ.ಆರ್.ಪೇಟೆ ಪೊಲೀಸರು’; ಸಂತ್ರಸ್ತ ದಲಿತ ಮಹಿಳೆ ಮರುದೂರು

“ಜಯಕುಮಾರ್ ಬಹಳ ಶ್ರಮಜೀವಿ. ಆತನ ಜಮೀನು ಕುರಿತ ಸಮಸ್ಯೆಯನ್ನು ಸರಿ ಮಾಡಬೇಕೆಂದು ಪರದಾಡುತ್ತಿದ್ದ. ಕೆಲಕಾಲ ಬೆಂಗಳೂರಿಗೆ ಹೋಗಿ ಕೆಲಸ ಮಾಡಿದ. ಬೆಂಗಳೂರಿನಲ್ಲಿ ದುಡಿದು ಉಳಿಸಿದ ಹಣದಲ್ಲಿ ಜಮೀನನ್ನು ಸರಿ ಮಾಡಿಕೊಳ್ಳಲು ಯೋಚಿಸಿದ. ಕಲ್ಲು- ಮಣ್ಣುಗಳಿಂದ ಕೂಡಿದ ಆ ಜಾಗವನ್ನು ಮಟ್ಟ ಮಾಡಿಸಬೇಕು ಎಂದು ನನಗೆ ಹೇಳುತ್ತಲೇ ಇದ್ದ. ಅವರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ ಜಮೀನು ಅದಾಗಿತ್ತು. ಐದು ವರ್ಷಗಳ ಹಿಂದಿನ ಮಾತು; ಕಡಿಮೆ ದುಡ್ಡಲ್ಲಿ ಕೆಲಸ ಮಾಡಿಕೊಡುವ ಜೆಸಿಬಿ ಏನಾದರೂ ಇದ್ದರೆ ಹೇಳಣ್ಣ ಅಂತ ತಿಳಿಸಿದ್ದ. ಒಂದಿಷ್ಟು ಜಾಗವನ್ನು ಮಟ್ಟ ಮಾಡಿಸಲಾಗಿತ್ತು. ಆತನ ಜಮೀನಿನಲ್ಲಿ ಒಂದಿಷ್ಟು ಗುಡ್ಡವಿತ್ತು. ಅದೇ ಜಾಗದಲ್ಲಿ ಅನಿಲ್‌ ಕುಮಾರ್ ಹುಲ್ಲಿನ ಮೆದೆ ಹಾಕಿಕೊಂಡಿದ್ದ. ಅದನ್ನು ತೆರವು ಮಾಡುವಂತೆ ಜಯಕುಮಾರ್ ಕೇಳಿಕೊಂಡಿದ್ದ. ಜಮೀನನ್ನು ಉಳುಮೆಗೆ ಯೋಗ್ಯವಾಗಿಸಲು ಜಯಕುಮಾರ್‌ಗೆ ಹಣದ ಕೊರತೆ ಇತ್ತು. ‘ಅಣ್ಣ, ಬೆಂಗಳೂರಿಗೆ ಹೋಗಿ ಇನ್ನೊಂದಿಷ್ಟು ದುಡಿದುಕೊಂಡು ಬರುತ್ತೇನೆ, ಆವರೆಗೂ ಉಳಿದ ಜಮೀನನ್ನು ಸರಿ ಮಾಡಿಸಲು ಆಗಲ್ಲ’ ಎಂದಿದ್ದ. ಊರಿಗೆ ಬಂದು ನೆಲೆಸಿದ ಬಳಿಕವೂ ಅನಿಲ್‌ ಮೆದೆಯನ್ನು ತೆರವು ಮಾಡಲಿಲ್ಲ. ‘ಇದು ನನ್ನ ಜಾಗ’ ಎಂದು ವಾದಿಸುತ್ತಿದ್ದ. ‘ಆರ್‌ಟಿಸಿ ತೆಗೆದುಕೊಂಡು ಬಾ, ನಿನ್ನದಾಗಿದ್ದರೆ ನಿನಗೆ, ಆತನದಾಗಿದ್ದರೆ ಆತನಿಗೆ ಬಿಟ್ಟುಕೊಡೋಣ. ನಾನು ಆರ್‌ಟಿಸಿಯನ್ನು ನೋಡಿದ್ದೇನೆ. ಈ ಜಮೀನು ಜಯಕುಮಾರ್‌ನದ್ದು’ ಎಂದು ತಿಳಿಸಿದ್ದೆ. ಎರಡೂವರೆ ವರ್ಷದ ಹಿಂದೆ ನಡೆದಿದ್ದ ಘಟನೆ. ಮೆದೆಯಲ್ಲಿದ್ದ ಹುಲ್ಲು ಖಾಲಿಯಾಗಿತ್ತು. ಈಗಲಾದರೂ ಜಾಗ ಬಿಟ್ಟುಕೊಡು ಎಂದು ಕೇಳಿದ್ದ ಜಯಕುಮಾರ್. ಆದರೆ ರಾತ್ರೋರಾತ್ರಿ ಹುಲ್ಲನ್ನು ತಂದು ಮತ್ತೆ ಮೆದೆ ಹಾಕಿಕೊಂಡಿದ್ದ…”

“ಜಯಕುಮಾರ್ ಮುಗ್ಧ, ಯಾರ ತಂಟೆಗೂ ಹೋಗದವನು. ಜಗಳ ಆಡುವುದಕ್ಕೆ ಹೆದರುತ್ತಿದ್ದ. ಭಯದ ವಾತಾವರಣದಲ್ಲೇ ಬದುಕುತ್ತಿದ್ದ. ಕೆಲವು ದಿನಗಳ ಹಿಂದೆ ಮತ್ತೆ ಜಮೀನು ಮಟ್ಟ ಮಾಡಲು ಮುಂದಾದಾಗ ಅನಿಲ್‌ ಕ್ಯಾತೆ ತೆಗೆದಿದ್ದಾನೆ. ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ. ಈ ಸಂಬಂಧ ಪೊಲೀಸರಿಗೆ ಜಯಕುಮಾರ್ ದೂರು ನೀಡಿದ್ದ. ಆದರೆ ಪೊಲೀಸರು ಅನಿಲ್‌ನಿಗೆ ಯಾವುದೇ ಎಚ್ಚರಿಕೆಯನ್ನು ನೀಡದೆ ಇರುವುದು ಪೊಲೀಸರ ವೈಫಲ್ಯಕ್ಕೆ ಕನ್ನಡಿ ಹಿಡಿಯುತ್ತದೆ…”

rajesh
ಕತ್ತರಘಟ್ಟ ಗ್ರಾಮದ ಮುಖಂಡರಾದ ರಾಜೇಶ್

“ತಾನಾಗಿಯೇ ಬೆಂಕಿಗೆ ಬಿದ್ದು ಜಯಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಅನಿಲ್‌ ಆ ಹುಡುಗನಿಗೆ ಹೊಡೆದು ಬೆಂಕಿಗೆ ತಳ್ಳಿರುವಂತೆ ಕಾಣುತ್ತಿದೆ. ಇದೊಂದು ಪೂರ್ವನಿಯೋಜಿತ ಕೊಲೆ ಎಂಬುದು ನನ್ನ ಅಭಿಪ್ರಾಯ. ಅನಿಲ್ ಕುಮಾರ್ ಮೊದಲಿನಿಂದಲೂ ಪುಂಡಾಟಿಕೆ ಮಾಡಿಕೊಂಡು ಬಂದವನು. ಆತ ರೌಡಿ ಶೀಟರ್ ಆಗಿದ್ದ. ಪೋಕ್ಸೋ ಪ್ರಕರಣವೊಂದರಲ್ಲಿ ಒಂದು ವರ್ಷ ಜೈಲಿಗೆ ಹೋಗಿ ಬಂದಿದ್ದ” ಎನ್ನುತ್ತಾರೆ ರಾಜೇಶ್.

ಇದನ್ನೂ ಓದಿರಿ: ವಿಚಾರ ಹಂಚಿದರೆ ವಿಚಾರಣೆ, ಜೈಲು; ಇದು ನವಭಾರತದ ನವ ನಿಯಮವೆ?

ಪ್ರಕರಣದ ಹಿಂದೆ ಇಷ್ಟೆಲ್ಲ ಸಾಧ್ಯತೆ ಇದ್ದರೂ ‘ಆತ್ಮಹತ್ಯೆ’ ಎಂಬ ಪದ ಎಫ್ಐಆರ್‌ನಲ್ಲಿ ನಮೂದಾಗಿದ್ದು ಹೇಗೆ ಎಂಬುದೇ ಎಲ್ಲರ ಪ್ರಶ್ನೆ. ದೂರು ನೀಡುವ ಸಂದರ್ಭದಲ್ಲಿ ಕೆ.ಆರ್.ಪೇಟೆ ಪೊಲೀಸ್ ಠಾಣೆಗೆ ಹೋಗಿದ್ದ ದಲಿತ ಯುವಕ ಸುನಿಲ್‌, ದೂರಿನ ಸುತ್ತಮುತ್ತ ನಡೆದಿರುವ ಕೆಲವು ವಿದ್ಯಮಾನಗಳನ್ನು ‘ಈದಿನ ಡಾಟ್ ಕಾಮ್’ ಜೊತೆಯಲ್ಲಿ ಹಂಚಿಕೊಂಡರು.

“ಜಯಕುಮಾರ್ ಅವರ ಪತ್ನಿ ಲಕ್ಷ್ಮಿ, ಗ್ರಾಮದ ಮುಖಂಡರಾದ ಸಿದ್ದಯ್ಯ, ಊರಿನ ವಕೀಲರಾದ ಪ್ರಸಾದ್ ಮತ್ತಿತರರು ಠಾಣೆಗೆ ಬಂದೆವು. ಪ್ರಸಾದ್ ಎಂಬ ವಕೀಲರಿಂದ ಎಲ್ಲವನ್ನೂ ಬರೆಸಿ, ಇದು ಕೊಲೆ ಎಂದೇ ನಮೂದಿಸಿದ್ದೆವು. ಅಟ್ರಾಸಿಟಿಯನ್ನೂ ಸೇರಿಸಿದ್ದೆವು. ಆ ವೇಳೆಗೆ ಕೆ.ಆರ್.ಪೇಟೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತರಲಾಗಿತ್ತು. ಡೆಡ್ ಬಾಡಿ ಬಳಿ ಯಾರೂ ಇಲ್ಲ, ನೀವು ಅಲ್ಲಿಗೆ ಹೋಗಿ ಎಂದು ಪೊಲೀಸರು ಕಳುಹಿಸಿದರು. ನಾವೆಲ್ಲರೂ ಆಸ್ಪತ್ರೆಗೆ ಹೋದೆವು. ನಾವು ಬರೆದ ದೂರಿನಲ್ಲಿ ಸ್ಪಷ್ಟವಾಗಿ ಕೊಲೆ ಎಂಬ ಪದವನ್ನು ಉಲ್ಲೇಖಿಸಿದ್ದೆವು. ಅದನ್ನು ಲಕ್ಷ್ಮಿಯವರಿಗೆ ಓದಿಯೂ ಹೇಳಿದ್ದೆವು” ಎನ್ನುತ್ತಾರೆ ಸುನಿಲ್.

‘ಈದಿನ’ಕ್ಕೆ ಪ್ರತಿಕ್ರಿಯಿಸಿದ ಹಿರಿಯ ರೈತ ಹೋರಾಟಗಾರ ರಾಜೇಗೌಡ ಅವರು, “ಕಾನೂನು ಪ್ರಕಾರ ಜಯಕುಮಾರ್‌ ಅವರಿಗೆ ಜಮೀನು ಮಂಜೂರಾಗಿದೆ. ಸವರ್ಣೀಯ ಹಿನ್ನಲೆಯ ಕಿಡಿಗೇಡಿ ಯುವಕ ಅನಿಲ್, ಅಕ್ರಮವಾಗಿ ಆ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದಾನೆ. ಒಂದೂವರೆ ವರ್ಷದಿಂದಲೂ ಕಿರುಕುಳ ಕೊಟ್ಟಿದ್ದಾನೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಈ ಅನಿಲ್‌ ಕ್ರಿಮಿನಲ್ ಎಲಿಮೆಂಟ್ ಎಂದು ಹಲವಾರು ದೂರುಗಳು ದಾಖಲಾಗಿವೆ. ಒಮ್ಮೆ ಜೈಲು ವಾಸವನ್ನೂ ಮಾಡಿದ್ದಾನೆ. ಇಂಥವನು ದಲಿತ ಯುವಕನನ್ನು ಹತ್ಯೆಗೈದಿದ್ದಾನೆ ಎಂಬುದು ನಮಗೆ ಬಂದಿರುವ ಮಾಹಿತಿ. ಜಯಕುಮಾರ್ ಪತ್ನಿಯನ್ನು ನೈತಿಕವಾಗಿ ಬೆದರಿಸಿ, ಕೊಲೆಯನ್ನು ಆತ್ಮಹತ್ಯೆ ಎಂದು ನಮೂದಿಸಿರುವುದು ಸ್ಪಷ್ಟ. ಒಬ್ಬ ರೌಡಿ ಪರ ವ್ಯವಸ್ಥೆ ನಿಂತಿದೆ. ಈ ಪ್ರಕರಣದಲ್ಲಿ ಅನಿಲ್‌ನಿಗೆ ಶಿಕ್ಷೆಯಾಗದಿದ್ದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಸೂಕ್ತ ಕಾನೂನು ಕ್ರಮ ಜರುಗಿಸದಿದ್ದರೆ ಬೀದಿ ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಸಿದರು.

rejegowda
ಹಿರಿಯ ದಲಿತ ಹೋರಾಟಗಾರರಾದ ರಾಜೇಗೌಡ

ದಲಿತ ಮುಖಂಡ ಮಾಂಬಳ್ಳಿ ಜಯರಾಮ್ ಮಾತನಾಡಿ, “ಆರೋಪಿ ಅನಿಲ್ ಮೊದಲಿನಿಂದಲೂ ಕೊಲೆ ಬೆದರಿಕೆಯನ್ನು ಹಾಕುತ್ತಿದ್ದ ಎಂದು ಗ್ರಾಮಸ್ಥರೆಲ್ಲ ತಿಳಿಸಿದ್ದಾರೆ. ಅನಿಲ್‌ ಎಂಬುವನೇ ಕೊಂದಿದ್ದಾನೆ ಎಂಬ ಅನುಮಾನವಿದೆ. ತಪ್ಪಿತಸ್ಥನಿಗೆ ಶಿಕ್ಷೆಕೊಡಿಸಲು ನಾವು ಹೋರಾಟ ಮಾಡುತ್ತೇವೆ” ಎಂದು ಹೇಳಿದರು.

ಇದನ್ನೂ ಓದಿರಿ: ರಾಜ್ಯದ ಹಲವೆಡೆ ಭಾರೀ ಮಳೆ; ಬೆಳೆಹಾನಿಯಿಂದ ಕಾಂಗಾಲಾದ ರೈತರು

ನಾಗಮಂಗಲದಲ್ಲಿ ಪೊಲೀಸ್ ಮೇಲಧಿಕಾರಿಗಳಿಗೆ ಮರುದೂರು ಕೊಡುವ ಸಂದರ್ಭದಲ್ಲಿ ‘ಈದಿನ’ಕ್ಕೆ ಪ್ರತಿಕ್ರಿಯಿಸಿದ ದಲಿತ ಹೋರಾಟಗಾರ ಬಸ್ತಿ ರಂಗಪ್ಪ ಅವರು, “ಕೊಲೆಯಾಗಿದ್ದರೂ ತಿರುಚಿ ಆತ್ಮಹತ್ಯೆ ಎಂದು ದಾಖಲಿಸಿದ್ದಾರೆ. ಹೀಗಾಗಿ ಹೈಕೋರ್ಟ್ ವಕೀಲರು ಮತ್ತು ದಲಿತ ಮುಖಂಡರೆಲ್ಲ ಕತ್ತರಘಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿದೆವು. ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬುದು ನಮಗೆ ಸ್ಪಷ್ಟವಾಗಿದೆ. ಹೀಗಾಗಿ ಕೆ.ಆರ್.ಪೇಟೆ ಪೊಲೀಸರು ಮಾಡಿರುವ ಎಫ್‌ಐಆರ್‌ನಲ್ಲಿರುವ ಲೋಪಗಳ ಸಂಬಂಧ ಡಿವೈಎಸ್‌ಪಿ ಕಚೇರಿಯಲ್ಲಿ ಮರುದೂರನ್ನು ಲಕ್ಷ್ಮಿ ಅವರು ದಾಖಲಿಸಿದ್ದಾರೆ. ಅವರ ಬೆನ್ನಿಗೆ ನಾವು ನಿಂತಿದ್ದೇವೆ. ಇದು ಕೂಲಂಕಷ ತನಿಖೆಯಾಗಬೇಕು. ಆರೋಪಿಯನ್ನು ಬಂಧಿಸದಿದ್ದರೆ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ” ಎಂದು ತಿಳಿಸಿದರು.

basti rangappa
ದಲಿತ ಹೋರಾಟಗಾರ ಬಸ್ತಿ ರಂಗಪ್ಪ

ಲಕ್ಷ್ಮಿಅವರಿಗೆ ಕಾನೂನು ಸಲಹೆಗಳನ್ನು ನೀಡಲು ಮುಂದಾಗಿರುವ ಹೈಕೋರ್ಟ್ ಅಡ್ವೊಕೇಟ್ ಮೈತ್ರೇಯಿ ಅವರು ಪ್ರತಿಕ್ರಿಯಿಸಿ, “ಅನಿಲ್ ಅವರೇ ಕೊಲೆ ಮಾಡಿರುವುದಾಗಿ ಲಕ್ಷ್ಮಿ ತಿಳಿಸಿದ್ದಾರೆ. ಮೊದಲು ದೂರು ಕೊಡುವಾಗಲೇ ಕೊಲೆ ಎಂದು ಲಕ್ಷ್ಮಿ ಹೇಳಿದ್ದರು” ಎಂದು ವಿವರಿಸಿದರು.

maitreyi
ಹೈಕೋರ್ಟ್‌ ವಕೀಲರಾದ ಮೈತ್ರೇಯಿ

ಹೀಗೆ ಎಲ್ಲರ ಕಣ್ಣಿಗೆ ಕಾಣುತ್ತಿರುವುದು ಇದು ಕೊಲೆಯೆಂದೇ ಹೊರತು, ಆತ್ಮಹತ್ಯೆಯಾಗಿ ಅಲ್ಲ. ಅನಕ್ಷರಸ್ಥ ಲಕ್ಷ್ಮಿ ಅವರ ಮಾತನ್ನು ಹೇಗೆ ತಿರುಚಲಾಯಿತು, ಎಫ್‌ಐಆರ್ ದಾಖಲಿಸುವಾಗ ಯಾರಿಂದ ಲೋಪವಾಗಿದೆ ಎಂಬುದು ತನಿಖೆಯಾಗಬೇಕಾಗಿದೆ. ಸಂತ್ರಸ್ತ ಹೆಣ್ಣುಮಗಳ ಕುಟುಂಬಕ್ಕೆ ನ್ಯಾಯ ದೊರಕಬೇಕಾಗಿದೆ ಎಂಬುದೇ ಎಲ್ಲ ಹೋರಾಟಗಾರರ ಆಗ್ರಹ.

ಚಿತ್ರಗಳು: ಮುಸ್ತಫಾ ಅಳವಂಡಿ

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X