ಬೆಂಗಳೂರು ನಗರದಲ್ಲಿ ರಾಜಕಾಲುವೆ ಒತ್ತುವರಿಯನ್ನು ಎಷ್ಟೇ ಪ್ರಭಾವಿಗಳು ಮಾಡಿದ್ದರೂ, ಅದನ್ನು ಮುಲಾಜಿಲ್ಲದೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು (ಮೇ 21) ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಬೆಂಗಳೂರಿನಲ್ಲಿ ನೆರೆ ನೀರು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ರಾಜಕಾಲುವೆ ಅಭಿವೃದ್ದಿಯಂತಹ ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಸರ್ಕಾರ ಯೋಜನೆಗಳನ್ನು ರೂಪಿಸಿ ಕಾಮಗಾರಿಗಳನ್ನು ಕೈಗೊಂಡಿದ್ದೇವೆ” ಎಂದರು.
“ರಾಜಕಾಲುವೆ ಸುಮಾರು 860 ಕಿ.ಮೀ ಇದೆ. 491 ಕಿ.ಮೀ ರಾಜಕಾಲುವೆಯಲ್ಲಿ ಲೈನಿಂಗ್ ಕೆಲಸ ಮುಗಿದಿದೆ. 125 ಕಿ.ಮೀ ರಾಜಕಾಲುವೆ ಕಾಮಗಾರಿ ನಡೆಯುತ್ತಿದ್ದು, ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸಲಾಗುವುದು. ಇನ್ನುಳಿದ 173 ಕಿ.ಮೀ ರಾಜಕಾಲುವೆ ಅಭಿವೃದ್ಧಿಗೆ ವಿಶ್ವಬ್ಯಾಂಕ್‌ನಿಂದ 2 ಸಾವಿರ ಕೋಟಿ ರೂ. ಸಾಲ ಪಡೆದು ಕಾಮಗಾರಿಗೆ ಕೈಗೊಂಡಿದ್ದೇವೆ. ಇದರ ಟೆಂಡರ್ ಮುಗಿದಿದ್ದು, ಮೂರು ವರ್ಷಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ತಿಳಿಸಿದ್ದೇವೆ” ಎಂದು ಹೇಳಿದರು.
“ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿರುವ ಎಲ್ಲಾ ಸಂತ್ರಸ್ತರಿಗೆ ತಕ್ಷಣ ಪರಿಹಾರ ಒದಗಿಸಲಾಗುವುದು. ಹಾನಿ ಕುರಿತು ಕೂಡಲೇ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಲು ಸೂಚನೆ ನೀಡಿದ್ದೇನೆ. ತಗ್ಗು ಪ್ರದೇಶಗಳಲ್ಲಿ ಬೇಸ್ಮೆಂಟ್ಗಳಲ್ಲಿ ನಿರ್ಮಾಣಕ್ಕೆ ಇನ್ನು ಮುಂದೆ ಅನುಮತಿ ನೀಡದಂತೆ ಸಂಬಂಧಿತ ಪ್ರಾಧಿಕಾರಗಳಿಗೆ ಸೂಚನೆ ನೀಡಿದ್ದೇನೆ. 166 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ತಗ್ಗು ಪ್ರದೇಶಗಳೆಂದು ಗುರುತಿಸಿ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದೆ” ಎಂದರು.
“ಮಾನ್ಯತಾ ಟೆಕ್ಪಾರ್ಕ್ ಬಳಿ ರಾಜಕಾಲುವೆ ಪರಿಶೀಲನೆ ನಡೆಸಿದ್ದು ಅಲ್ಲಿ ರಾಜಕಾಲುವೆ ಒತ್ತುವರಿ ಗಮನಿಸಲಾಗಿದೆ. ಒತ್ತುವರಿಯನ್ನು ಕೂಡಲೇ ತೆರವುಗೊಳಿಸಲು ಸೂಚನೆ ನೀಡಿದ್ದೇನೆ. ಮಾನ್ಯತಾ ಟೆಕ್ಪಾರ್ಕ್ ಸಿಇಒ ಅವರು ಸ್ವಂತ ರಸ್ತೆಯಲ್ಲಿ 90ದಿನಗಳಲ್ಲಿ ಚರಂಡಿ ನಿರ್ಮಿಸಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾನು-ಭಾಸ್ತಿ ಜೋಡಿ- ಕನ್ನಡಕ್ಕೆ ಬೂಕರ್ ಗೆದ್ದ ಮೋಡಿ
“ಹೆಚ್‌ಬಿಆರ್ ಬಡಾವಣೆಯ ಐದನೇ ಹಂತದ ರಾಜಕಾಲುವೆ ಸಮಸ್ಯೆಯಿದ್ದು, ಅಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆಗೆ ಅಲ್ಲಿ ತಡೆಗೋಡೆ ನಿರ್ಮಾಣವಾಗುತ್ತಿದೆ. ಈ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ ನೀಡಿದ್ದೇವೆ. ಚರಂಡಿಗೆ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಸೂಚನೆ ನೀಡಿದ್ದೇವೆ. ಸಾಯಿ ಲೇಔಟ್ ಭೇಟಿ ನೀಡಿದ್ದು, ಅದು ರಾಜಕಾಲುವೆಗಿಂತ ತಗ್ಗು ಪ್ರದೇಶದಲ್ಲಿದೆ. ರೈಲ್ವೆ ಸೇತುವೆ ಬಳಿ ವೆಂಟ್ ಕಿರಿದಾಗಿದ್ದು, ಅದನ್ನು ಅಗಲಗೊಳಿಸಿದರೆ ಮಾತ್ರ ಸಮಸ್ಯೆ ಪರಿಹಾರ ಸಾಧ್ಯ. ಅನೇಕ ವರ್ಷದಿಂದ ಈ ಸಮಸ್ಯೆಯಿದೆ. ವೆಂಟ್‌ಗಳ ನಿರ್ಮಾಣ ಮತ್ತು ಅಗಲಗೊಳಿಸಲು ಈಗಾಗಲೇ ಅನುದಾನ ಒದಗಿಸಲಾಗಿದ್ದು, ಕಾಮಗಾರಿ ಆದಷ್ಟು ಬೇಗನೆ ಪೂರ್ಣಗೊಳಿಸಲು ಸೂಚನೆ. ಬಿಬಿಎಂಪಿ ಇದಕ್ಕಾಗಿ ಒಟ್ಟು 13 ಕೋಟಿ ರೂ. ಬಿಡುಗಡೆಗೆ ಸೂಚನೆ ನೀಡಿದ್ದೇನೆ. ಈಗಾಗಲೇ 6 ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡಿದ್ದು, 3 ಕೋಟಿ ರೂ. ಪಾವತಿಸಿದ್ದಾರೆ” ಎಂದು ಹೇಳಿದರು.
“ಮಹಾದೇವಪುರದ ಪಣತ್ತೂರು ಗಾರ್ಡ್‌ನಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಪ್ರತಿ ವರ್ಷ ಸಮಸ್ಯೆ. ರೈಲ್ವೇ ಲೈನ್ ಕೆಳಗಡೆ ಅಗಲ ಬಹಳ ಕಡಿಮೆಯಿದೆ. ಇದನ್ನು ವಿಸ್ತರಿಸಲು ಹಾಗೂ ರಸ್ತೆ ಅಗಲೀಕರಣ ಕಾರ್ಯ ಈಗಾಗಲೇ ನಡೆಯುತ್ತಿದ್ದು, ಶೇ.20ರಷ್ಟು ಕಾಮಗಾರಿ ಬಾಕಿಯಿದೆ. ಇಲ್ಲಿ ಟ್ರೆಂಚ್ಲೆಸ್ ತಾಂತ್ರಿಕತೆ ಬಳಸಿ ಕೆಲಸ ಮಾಡುತ್ತಿದ್ದು, 45 ದಿನಗಳ ಒಳಗಾಗಿ ಉಳಿದಿರುವ ಎಲ್ಲಾ ಕಾಮಗಾರಿ ಮುಗಿಸಲು ಸೂಚನೆ ನೀಡಲಾಗಿದೆ” ಎಂದರು.
“ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ನಾಲ್ಕು ಕಡೆಗಳಿಂದ ನೀರು ಬರುತ್ತಿದ್ದು, ಅಲ್ಲಿಂದ ಎಲ್ಲ ನೀರು ಹೆಚ್ಎಸ್ಆರ್ ಲೇಔಟ್ ಕಡೆ ಹರಿದು ಬರುತ್ತದೆ. ಮೆಟ್ರೋ, ಬಿಬಿಎಂಪಿ ಮತ್ತು ರಾಷ್ಟ್ರೀಯ ಹೆದ್ದಾರಿ ಸಮನ್ವಯದಿಂದ ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಈ ಮೂರು ವಿಭಾಗಗಳು ಈ ಕುರಿತು ಯೋಜನೆ ರೂಪಿಸಲು ಸೂಚನೆ ನೀಡಿದ್ದೇನೆ. ಬೆಂಗಳೂರಿನಲ್ಲಿ 2022ರಲ್ಲಿ 299 ಮಿ.ಮೀ ಮಳೆಯಾಗಿತ್ತು. 10 ವರ್ಷಗಳಲ್ಲಿ ಇದು ಎರಡನೇ ಬಾರಿ ಹೆಚ್ಚಿನ ಮಳೆಯಾಗಿದೆ. ಮೇ. 19 ರಂದು ಮಧ್ಯರಾತ್ರಿ 132 ಮಿ.ಮೀ ಮಳೆ ದಾಖಲಾಗಿದೆ” ಎಂದು ಮಾಹಿತಿ ಹಂಚಿಕೊಂಡರು.