ಯಾವುದೇ ಸಣ್ಣ ಘಟನೆ ನಡೆದರೂ ಶಾಸಕರು ಹಾಗೂ ಜನಪ್ರತಿನಿಧಿಗಳು ಓಡೋಡಿ ಆಗಮಿಸುವುದನ್ನು ನಾವು ಎಷ್ಟೋ ಬಾರಿ ನೋಡಿದ್ದೇವೆ. ಆದರೆ ಹಾವೇರಿ ಪಟ್ಟಣದ ಗಣಜೂರು ರಸ್ತೆ ಶಾಂತಿನಗರದಲ್ಲಿ ಕಳೆದ ಎರಡು ದಿನಗಳಿಂದ ಸುರಿದ ನಿರಂತರ ಮಳೆ ಹಾಗೂ ಬಿಸಿಲು-ಗಾಳಿಯಿಂದ ತತ್ತರಿಸಿದ್ದ ಅಲೆಮಾರಿ ಸಮುದಾಯದ ಸುಮಾರು ಐವತ್ತೈದು ವರ್ಷದ ಮಹಿಳೆ ಪ್ರಾಣ ಕಳೆದುಕೊಂಡ ಘಟನೆಗೆ, ಇಲ್ಲಿಯ ಸ್ಥಳೀಯ ಜನಪ್ರತಿನಿಧಿಗಳು ಕನಿಷ್ಠ ಸೌಜನ್ಯಕ್ಕಾದರೂ ಸ್ಥಳಕ್ಕೆ ಭೇಟಿ ನೀಡದಿರುವುದು ಅತೀ ನೋವಿನ ಸಂಗತಿ.
“ಮೂರ್ನಾಲ್ಕು ದಿನಗಳಿಂದ ಮಳಿ ಆಗ್ತಿದೆ. ಗುಡಿಸಲೊಳಗೆ ನೀರು ಹೊಕ್ಕೊಂಡು, ಗುಡಿಸಲು ತುಂಬ ನೀರು ನಿಂತದೆ. ಗುಣಕಲ್ಲು ಇದ್ದಂಗಿದ್ದ ನಮ್ಮಕ್ಕ ಒಮ್ಮೆಲೇ ತೀರಿಕೊಂಡಾರ. ಎಲ್ಲೋ ಏನೇನೋ, ಸಣ್ಣಪುಟ್ಟಕ್ಕೆ ಪರಿಹಾರ ಕೊಡ್ತೀರಿ. ಒಂದು ಜೀವ ಹೊಗೈತಿ. ದೊಡ್ಡ ಅನಾಹುತ ಆಗೈತಿ ಇಲ್ಲೇ ಇರೋ ಶಾಸಕರು ಬಂದು ನೋಡಿಲ್ಲ. ಅಧಿಕಾರಿಗಳು ಬಂದು ಹೋದ್ರು, ಪರಿಹಾರ ಕೊಡ್ತೀವಿ ಅಂತ ಹೇಳಿ ಸತ್ತಿರೋ ನಮ್ಮಕ್ಕಗ ಹಾರ ಹಾಕಿ ಹೋದ್ರು, ಪರಿಹಾರ ಕೊಡ್ತಾರೋ ಇಲ್ಲೋ ಗೊತ್ತಿಲ್ಲ” ಎಂದು ಪ್ರಾಣ ಕಳೆದುಕೊಂಡ ಮಹಿಳೆಯ ಸಂಬಂಧಿ ಸಾವಂತ್ರವ್ವ ನೋವನ್ನು ತೋಡಿಕೊಂಡರು.

ಸುರಿಯುವ ಮಳೆಯಲ್ಲಿ ಸಣ್ಣ ಮಕ್ಕಳನ್ನು ಕಟ್ಕೊಂಡು ಜೀವನ ನಡೆಸುತ್ತಿದ್ದಾರೆ. ಇನ್ನೂ ಸತತ ಮಳೆ ಆರಂಭವಾದರೆ ನಮ್ಮ ಗತಿ ಏನು ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಶಾಂತಿ ನಗರದ ಖಾಸಗಿ ಜಾಗದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಅಲೆಮಾರಿ ಸಮುದಾಯದ ಗುಡಿಸಲುಗಳಿವೆ. ನೂರಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ. ಒಂದೊಂದು ಗುಡಿಸಲಿನಲ್ಲಿ ಮೂರು ನಾಲ್ಕು ಕುಟುಂಬಗಳು ವಾಸಮಾಡುತ್ತಿವೆ. ಇಲ್ಲಿಂದ ಒಕ್ಕಲೆಬ್ಬಿಸಿದರೆ ಬದುಕು ಇನ್ನೆಲ್ಲಿಗೋ… ನೆಲೆ ಕಾಣದ ಅಲೆಮಾರಿ ಜನರು ಶಾಶ್ವತ ನೆಲೆಗಾಗಿ ಹಂಬಲಿಸುತ್ತಿದ್ದಾರೆ.
ಗುಡಿಸಲುಗಳ ಸುತ್ತಲೂ ನೋಡಿದರೆ ಕಲ್ಲು ಮುಳ್ಳು, ಕಸ-ಕಂಟಿ ಬೆಳೆದು, ಹಾವು ಚೇಳು ಕಚ್ಚುವ ಭಯದಲ್ಲಿಯೇ ಬದುಕು ಸವೆಸುತ್ತಿದ್ದಾರೆ. ಸತತ ಸುರಿದ ಮಳೆಯಿಂದ ಗುಡಿಸಲುಗಳ ಹಿಂದೆ ಮುಂದೆ ಮಳೆ ನೀರು ನಿಂತು ಕೆಸರು ಗದ್ದೆಯಾಗಿದೆ. ಗುಡಿಸಲೊಳಗೂ ನೀರು ನಿಂತು ಗುಡಿಸಲೇ ಕಣ್ಮರೆಯಾದ ಕುರುಹು. ಗಾಳಿ ಮಳೆಗೆ ಗುಡಿಸಲು ಹಾರಿ ಹೋಗುವ ಭಯದ ಕನವರಿಕೆ.

ಇಷ್ಟಾದರೂ ಚುನಾವಣೆ ಸಮಯದಲ್ಲಿ ಎಲ್ಲಾ ರಾಜಕಾರಣಿಗಳು ಕಸ, ಕಂಟಿ ಮುಳ್ಳು ಎನ್ನದೆ ನಮ್ಮ ಗುಡಿಸಲಿಗೆ ಕೈಮುಗಿದು ಓಟು ಹಾಕಿ ಎಂದು ಕೇಳುವವರು, ಈಗ ಗುಡಿಸಲಲ್ಲಿ ಮಳೆ ಗಾಳಿಯಿಂದ ಒಂದು ಜೀವ ಹೋಗಿದೆ. ಶಾಸಕರು ನಮ್ಮ ಗುಡಿಸಲಿಗೆ ಬಂದಿಲ್ಲದೆ ಇರುವುದು, ಅವರ ಮಾನವೀಯತೆ, ಜನರ ಕಾಳಜಿ ಎಷ್ಟು ಎಂಬುದು ಗೊತ್ತಾಗುತ್ತದೆ ಎನ್ನುವುದು ಅಲೆಮಾರಿ ಸಮುದಾಯದ ಜನರ ನೋವಿನ ಮಾತು.
G+1 ಬದಲಿಗೆ ಶಾಶ್ವತ ಜಾಗ ಕೊಡಿ:
ಅಲೆಮಾರಿ ಸಮುದಾಯಗಳು ಶಾಶ್ವತ ನೆಲೆಗಾಗಿ ಕಾಯುತ್ತಿವೆ. G+1 ಮಾದರಿಯಲ್ಲಿ ಮನೆಗಳು ಈಗಾಗಲೇ ಮಂಜೂರಾಗಿದ್ದು, ಕಾಮಗಾರಿ ಮುಗಿದ ಕೂಡಲೇ ನಿಮಗೆ ಮನೆಗಳನ್ನು ಕೊಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಅಲೆಮಾರಿ ಸಮುದಾಯದ ಜನರು G+1 ಮಾದರಿ ಮನೆಗಳನ್ನು ಕೊಟ್ಟರೆ ಮುಂದೆ ಐವತ್ತು ವರ್ಷಕ್ಕೊ, ಎಪ್ಪತ್ತು ವರ್ಷಕ್ಕೊ ಬಿದ್ದರೆ ಮತ್ತೆ ನಾವು ನಮ್ಮ ಮಕ್ಕಳು ಬೀದಿಗೆ ಬರುತ್ತೇವೆ. ನಮಗ ಜಾಗ ಕೊಡ್ರಿ, ಯಾರ ಹಂಗಿಲ್ಲದ ಬದುಕ್ತೀವಿ ಎಂದು ಹೇಳುತ್ತವೆ ಅಲ್ಲಿನ ಬಡ ಜೀವಗಳು.

ಅಲೆಮಾರಿ ಸಮುದಾಯಗಳ ಅಭಿವೃದ್ಧಿ ಅನುಷ್ಠಾನ ಸಮಿತಿಯ ಹಾವೇರಿ ಜಿಲ್ಲಾಧ್ಯಕ್ಷ ಶೆಟ್ಟಿ ಚೆನ್ನದೊಡ್ಡಪ್ಪ ವಿಭೂತಿ ಮಾತನಾಡಿ, “ಎರಡು ಮೂರು ದಿನಗಳಿಂದ ಮಳೆ ಆಗ್ತಿದೆ. ಆಚೆ ಮಳೆಯಲ್ಲಿ ಹಾಗೂ ಗುಡಿಸಲಲಿಯೂ ನೆನೆದು ಸತ್ತಿದ್ದಾರೆ. ನಿನ್ನೆ ದಿನ ಕೆಲಸ ಮಾಡಿದ್ದಾರೆ. ಊರಾಗ ಹೋಗಿ ಭಿಕ್ಷೆ ಮಾಡಿದ್ದಾರೆ. ಶಾಸಕರಿಗೂ ಫೋನ್ ಮಾಡಿದ್ವಿ, ಅವರ ಪಿಎ, ಗನ್ ಮ್ಯಾನ್ ಗೂ ಕರೆಮಾಡಿ ತಿಳಿಸಿದ್ರೂ ಶಾಸಕರು ಬಂದಿಲ್ಲ. ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದಾಗ ತಹಶೀಲ್ದಾರ್ ಕಳಿಸಿದ್ದಾರೆ. ಮಳೆಯಿಂದ ತೀರಿಹೋದ ಹುಸೇನಮ್ಮಗ ಪರಿಹಾರ ಕೊಡ್ಬೇಕು. ನಮ್ಮೆಲ್ಲ ಅಲೆಮಾರಿ ಸಮುದಾಯ ಜನರಿಗೆ ಶಾಶ್ವತ ಜಾಗ ಮನೆ ಕೊಡ್ಬೇಕು” ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಹಾವೇರಿ ತಹಶೀಲ್ದಾರ್ ಶರಣಮ್ಮ ಕಾರಿ ಪ್ರತಿಕ್ರಿಯೆ ನೀಡಿದ್ದು, “ಎರಡು ದಿನಗಳಿಂದ ಮಳೆ ಆಗುತ್ತಿದ್ದು, ಅಲೆಮಾರಿ ಸಮುದಾಯಗಳ ಗುಡಿಸಲುಗಳು ಗಾಳಿಗೆ ಹಾರಿ ಹೋಗಿವೆ. ಸರ್ಕಾರದಿಂದ ಗುಡಿಸಲುಗಳಿಗೆ ತಾಡಪಲ್ ಕೊಡುತ್ತೇವೆ. ತೀರಿಹೋದ ಮಹಿಳೆಯ ಕುಟುಂಬಕ್ಕೆ ಪರಿಹಾರ ಕೊಡುವ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇವೆ” ಎಂದು ಹೇಳಿದರು.
ನೆಲೆ ಕಾಣದೆ ಬದುಕು ಸಾಗಿಸುತ್ತಿರುವ ಅಲೆಮಾರಿ ಸಮುದಾಯದ ಮಹಿಳೆಯರು ತಾವು ಉಟ್ಟ ಸೀರೆಯನ್ನೇ ಗುಡಿಸಲುಗಳಿಗೆ ಬಟ್ಟೆಯಂತೆ ಹೊದಿದು ಬದುಕು ಕಟ್ಟಿಕೊಳ್ಳುತ್ತಿರುವ ಸ್ಥಿತಿಯಲ್ಲಿದ್ದಾರೆ. ಇಂಥ ಕಷ್ಟದ ಬದುಕಿನಲ್ಲಿ ಮಳೆ ಮತ್ತು ಗಾಳಿ ಇವರ ಜೀವನದಲ್ಲಿ ಮತ್ತೊಂದು ಸಂಕಟವಾಗಿ ಆಟವಾಡುತ್ತಿದೆ. ಇಂಥ ದುರಂತದಲ್ಲಿ ಪ್ರಾಣ ಕಳೆದುಕೊಂಡ ಮಹಿಳೆಯ ಸಾವಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಸೂಕ್ತ ಪರಿಹಾರ ನೀಡುವುದು ಮಾತ್ರವಲ್ಲ, ಇಂತಹ ಸಮುದಾಯಗಳಿಗೆ ಶಾಶ್ವತ ನೆಲೆ ನೀಡುವ ಕುರಿತು ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ.


ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.