ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ಯಹೂದಿ ವಸ್ತು ಸಂಗ್ರಹಾಲಯದ ಬಳಿ ಗುಂಡಿನ ದಾಳಿ ನಡೆದಿದ್ದು, ಇಸ್ರೇಲಿ ರಾಯಭಾರ ಕಚೇರಿಯ ಓರ್ವ ಸಿಬ್ಬಂದಿಯ ಹತ್ಯೆಯಾಗಿದೆ ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಹೇಳಿದೆ.
ಯಹೂದಿ ವಸ್ತುಸಂಗ್ರಹಾಲಯದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ವೇಳೆ, ಸಂಗ್ರಹಾಲಯದ ಹೊರಭಾಗದಲ್ಲಿ ಗುಂಡಿನ ದಾಳಿ ನಡೆದಿದೆ. ದಾಳಿಕೋರನೊಬ್ಬ ‘ಫ್ರೀ ಪ್ಯಾಲೆಸ್ತೀನ್’ ಎಂದು ಘೋಷಣೆ ಕೂಗುತ್ತಲೇ, ಇಸ್ರೇಲಿ ರಾಯಭಾರ ಕಚೇರಿಯ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಅಲ್ಲದೆ, ಕಚೇರಿ ಒಳಗೆ ನುಗ್ಗಿ, ತಮಗೆ ನೀರು ಮತ್ತು ಸುರಕ್ಷಿತ ಸ್ಥಳಬೇಕು ಎಂದು ಕೇಳಿದ್ದಾಗಿ ವರದಿಯಾಗಿದೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ.
“ಇಸ್ರೇಲ್ ರಾಯಭಾರ ಕಚೇರಿಯ ನೌಕರರೊಬ್ಬರು ಭೀಕರ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇದು ಯೆಹೂದಿಗಳ ವಿರುದ್ಧದ ಭಯೋತ್ಪಾದನಾ ದುಷ್ಕೃತ್ಯವಾಗಿದೆ. ಯಹೂದಿ ಸಮುದಾಯಕ್ಕೆ ಹಾನಿ ಮಾಡಲು ದುಷ್ಕರ್ಮಿಗಳು ಸಂಚು ರೂಪಿಸಿರಬಹುದು ಎಂದು ಶಂಕಿಸಲಾಗಿದೆ. ಅಧಿಕಾರಿಗಳು ಇನ್ನೂ ವಿವರಗಳನ್ನು ನೀಡಿಲ್ಲ. ಶಂಕಿತನ ಗುರುತು ಇನ್ನೂ ಪತ್ತೆಯಾಗಿಲ್ಲ” ಎಂದು ವಿಶ್ವಸಂಸ್ಥೆಯ ಇಸ್ರೇಲ್ ರಾಯಭಾರಿ ಡ್ಯಾನಿ ಡ್ಯಾನನ್ ಹೇಳಿದ್ದಾರೆ.
“ಬುಧವಾರ ಸಂಜೆ ಯಹೂದಿ ವಸ್ತುಸಂಗ್ರಹಾಲಯದ ಬಳಿ ಇಬ್ಬರು ಇಸ್ರೇಲಿ ರಾಯಭಾರ ಕಚೇರಿಯ ನೌಕರರನ್ನು ಗುಂಡಿಕ್ಕಿ ಕೊಲ್ಲಲಾಗಿದೆ” ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ತಿಳಿಸಿದ್ದಾರೆ.