ನಾನು ಪರಮೇಶ್ವರ್ ಅವರ ಮನೆಗೆ ಭೇಟಿ ಮಾಡಿ ಅವರ ಜತೆ ಚರ್ಚೆ ಮಾಡಿದೆ. ನಾವು ಸಾರ್ವಜನಿಕ ಜೀವನದಲ್ಲಿದ್ದು ಬೇಕಾದಷ್ಟು ಜನ ಟ್ರಸ್ಟ್ ನಡೆಸುತ್ತಾರೆ. ಮದುವೆ ಶುಭ ಸಮಾರಂಭದಲ್ಲಿ ಅನೇಕ ಉಡುಗೊರೆಗಳು ಕೊಟ್ಟಿರಬಹುದು. ಆದರೆ, ಪರಮೇಶ್ವರ್ ಅವರಂತಹ ಪ್ರಭಾವಿ ವ್ಯಕ್ತಿ ಬೇರೆಯವರಿಗೆ ಸ್ಮಗ್ಲಿಂಗ್ ಮಾಡಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರು ‘ಗೃಹ ಸಚಿವರ ಶಿಕ್ಷಣ ಸಂಸ್ಥೆ ಮೇಲಿನ ಇಡಿ ದಾಳಿಗೂ ರನ್ಯಾ ರಾವ್ ಅವರ ಪ್ರಕರಣಕ್ಕೂ ಲಿಂಕ್ ಮಾಡಲಾಗುತ್ತಿದೆ’ ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಅವರು, “ಪರಮೇಶ್ವರ್ ಪ್ರಾಮಾಣಿಕರು, ಯಾವುದೇ ತಪ್ಪು ಮಾಡಿಲ್ಲ. ಆ ಹೆಣ್ಣು ಮಗಳು ತಪ್ಪು ಮಾಡಿದ್ದರೆ ಅದು ಆಕೆಯ ವೈಯಕ್ತಿಕ ವಿಚಾರ. ತಪ್ಪು ಸಾಬೀತಾದರೆ ಆಕೆಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಪರಮೇಶ್ವರ್ ಅವರ ಪ್ರಕರಣದಲ್ಲಿ ಅವರು ಕಾನೂನಿಗೆ ತಲೆಬಾಗುವ ವ್ಯಕ್ತಿ” ಎಂದರು.
“ಪರಮೇಶ್ವರ್ ಅವರು ರಾಜ್ಯದ ಗೃಹ ಸಚಿವರು. ಅವರು ದೊಡ್ಡ ನಾಯಕರು, ಎಂಟು ವರ್ಷ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ನಮಗೆ ಹೆಮ್ಮೆಯಿದೆ. 1990ರಿಂದಲೂ ಅವರು ನನ್ನೊಂದಿಗೆ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರು ಸಜ್ಜನ ಹಾಗೂ ಪ್ರಾಮಾಣಿಕ ರಾಜಕಾರಣಿ. ಅವರು ಯಾವುದೇ ತಪ್ಪು ಮಾಡಿಲ್ಲ” ಎಂದು ತಿಳಿಸಿದರು.
ಪರಮೇಶ್ವರ್ ಅವರಿಗೆ ಏನಾದರೂ ಸಂದೇಶ ನೀಡುತ್ತೀರಾ ಎಂದು ಕೇಳಿದಾಗ, “ನಾನು ಅವರ ಮನೆಗೆ ಹೋಗಿ ಭೇಟಿ ಮಾಡಿದ್ದೇನೆ. ನಾವು ನಿಮ್ಮ ಪರವಾಗಿ ನಿಲ್ಲುತ್ತೇವೆ ಎಂದು ಹೇಳಿದ್ದೇನೆ. ಅವರು ಚೆನ್ನಾಗಿದ್ದಾರೆ, ಅವರು ಕೂಡ ಸಚಿವ ಸಂಪುಟ ಸಭೆಗೆ ಬರಲಿದ್ದಾರೆ” ಎಂದರು.
ವಿರೋಧ ಪಕ್ಷಗಳಿರುವುದೇ ರಾಜಕೀಯ ಮಾಡಲು
ಬುಧವಾರ ಮಳೆ ಹಾನಿ ಪ್ರದೇಶಗಳ ವೀಕ್ಷಣೆ ವೇಳೆ ಕೆಲವರು ನಿಮ್ಮನ್ನು ಭೇಟಿ ಮಾಡುವುದಕ್ಕೆ ನಿರಾಕರಿಸಿದರು ಎಂಬ ವಿಚಾರವಾಗಿ ಕೇಳಿದಾಗ, “ಅನೇಕರು ನಮ್ಮನ್ನು ಭೇಟಿ ಮಾಡಿದರು, ನಮ್ಮ ಮೇಲೆ ಕೂಗಾಡಿದರು. ನಾನು ಅವರೆಲ್ಲರ ದೂರುಗಳನ್ನು ಆಲಿಸಿದೆ. ಈ ರೀತಿ ಸಮಸ್ಯೆಗೆ ಒಳಗಾದವರು ಕೂಗಾಡುವುದು ಸಹಜ. ನಾವಿರುವುದೇ ಅವರ ಸಮಸ್ಯೆ ಆಲಿಸಲು. ಅವರ ಸಮಸ್ಯೆಗಳನ್ನು ಬಗೆಹರಿಸಲೇ ನಾವಿರುವುದು. ನಾನು ಯಾವಾಗ ಬೇಕಾದರೂ ಅವರನ್ನು ಭೇಟಿ ಮಾಡುತ್ತೇನೆ. ನೂರಾರು ಜನರನ್ನು ಭೇಟಿ ಮಾಡಲಾಗದಿದ್ದರೂ ಅವರ ಪರವಾಗಿ ಬರುವವರನ್ನು ನಾನು ಭೇಟಿ ಮಾಡಿಯೇ ಮಾಡುತ್ತೇನೆ. ಕೆಲವರು ನಮ್ಮ ವಿರುದ್ಧ ಕೂಗಾಡಿದರೆ, ಮತ್ತೆ ಕೆಲವರು ನಮ್ಮ ಕೆಲಸಕ್ಕೆ ಪ್ರಶಂಸೆ ನೀಡುತ್ತಾರೆ. ಬೆಂಗಳೂರು ನಗರದಲ್ಲಿ ಮಳೆಯಿಂದ ಸಮಸ್ಯೆಗೆ ಸಿಲುಕುತ್ತಿದ್ದ ಜಾಗಗಳ ಸಂಖ್ಯೆ 211 ಇತ್ತು. ಈ ಪೈಕಿ 166 ಪ್ರದೇಶಗಳಲ್ಲಿ ಸಮಸ್ಯೆ ಬಗೆಹರಿಸಲಾಗಿದೆ. ಉಳಿದ 44 ಕಡೆ ಕೆಲಸ ಬಾಕಿ ಇದ್ದು, ಇದರಲ್ಲಿ 24 ಕಡೆಗಳಲ್ಲಿ ಕಾರ್ಯ ಪ್ರಗತಿಯಲ್ಲಿದೆ. ವಿರೋಧ ಪಕ್ಷದವರು ಇರುವುದೇ ರಾಜಕೀಯ ಮಾಡಲು, ಮಾಡಲಿ. ನಾವು ಅವರ ಸಲಹೆಗಳನ್ನು ಸ್ವಾಗತಿಸುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇದು ‘ಬಲಿಷ್ಠರು’ ಬೆತ್ತಲಾಗುವ ಕಾಲ
ಬಿಜೆಪಿ ಶಾಸಕರ ಕ್ಷೇತ್ರದಲ್ಲೇ ಇಂತಹ ಸಮಸ್ಯೆ
ನಾವು 2 ಸಾವಿರ ಕೋಟಿ ಯೋಜನೆ ಇಟ್ಟಿದ್ದೆವು ಆದರೆ ರಾಜ್ಯ ಸರ್ಕಾರ ಅದನ್ನು ಬಳಸಿಕೊಂಡಿಲ್ಲ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಅವರ ಕಾಲದಲ್ಲಿ ಯಾವುದೇ ಪರಿಹಾರ ಕಾರ್ಯವನ್ನು ಮಾಡಿಲ್ಲ. ನಮ್ಮ ಸರ್ಕಾರ ಮಳೆನೀರು ಗಾಲುವೆ ಯೋಜನೆಯನ್ನು ಏಕಕಾಲಕ್ಕೆ ಪೂರ್ಣಗೊಳಿಸಲು ಮುಂದಾಗಿದ್ದೇವೆ. ಆರ್.ಅಶೋಕ್ ಅವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಇಂತಹ ಸಮಸ್ಯೆಗಳು ಆಗುತ್ತಿರುವುದು ಕೇವಲ ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಮಾತ್ರ. ಅವರು ತಮ್ಮ ಅವಧಿಯಲ್ಲಿ ಸರಿಯಾಗಿ ಕೆಲಸ ಮಾಡದೇ ಇರುವ ಕಾರಣ ಈ ಸಮಸ್ಯೆ ಎದುರಾಗಿದೆ” ಎಂದು ತಿಳಿಸಿದರು.
ಶಾಶ್ವತ ಪರಿಹಾರ
“ಮಳೆ ನೀರಿನಿಂದಾಗುತ್ತಿರುವ ಅನಾಹುತಗಳನ್ನು ತಪ್ಪಿಸಲು ಶಾಶ್ವತ ಪರಿಹಾರ ಕಂಡುಹಿಡಿಯುವುದು ನಮ್ಮ ಜವಾಬ್ದಾರಿ. ನಾವದನ್ನು ಮಾಡುತ್ತೇವೆ. ನಾನು ಹೆಚ್ಚು ಮಳೆಯಾಗಬೇಕು ಎಂದು ಬಯಸುವವನು. ಮಳೆ ಹೆಚ್ಚಾಗಿ ಬಂದಷ್ಟು ನಾವು ಏನೆಲ್ಲಾ ಸರಿಪಡಿಸಿಕೊಳ್ಳಬಹುದು ಎಂದು ತಿಳಿಯುತ್ತದೆ. ಇತ್ತೀಚೆಗೆ ಸಿಎಂ ನೇತೃತ್ವದಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಭೆ ಮಾಡಿದ್ದು, ಮುಂಜಾಗ್ರತಾ ಸಭೆಯನ್ನು ಮಾಡಿದ್ದೇವೆ. ಬೆಂಗಳೂರಿನಲ್ಲಿ ಮಳೆನೀರುಗಾಲುವೆಗಳ ಅಭಿವೃದ್ಧಿ ಪೂರ್ಣಗೊಳಿಸಲು 2 ಸಾವಿರ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಮಳೆಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಜನರಿಗೆ ಆಕ್ರೋಶವಿದೆ. ಹೀಗಾಗಿ ತಗ್ಗು ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಬೇಸ್ ಮೆಂಟ್ ಪಾರ್ಕಿಂಗ್ ನಿರ್ಮಾಣ ಮಾಡದಿರುವಂತೆ ನಿಯಮ ರೂಪಿಸಲು ನಗರ ಯೋಜನಾ ಪ್ರಾಧಿಕಾರಕ್ಕೆ ಸೂಚಿಸಿದ್ದೇನೆ” ಎಂದು ಹೇಳಿದರು.