ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಅಡಿ ಕೈಗೊಳ್ಳುವ ಎಲ್ಲ ಕಾಮಗಾರಿಗಳ ನಾಮಫಲಕದಲ್ಲಿ ಕಡ್ಡಾಯವಾಗಿ ಓಂಬಡ್ಸಮನ್ ಮತ್ತು ಆಯುಕ್ತಾಲಯದ ಉಚಿತ ಸಹಾಯವಾಣಿ ನಮೂದಿಸಬೇಕು ಎಂದು ಗದಗ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಬಿ ಸೂಚನೆ ನೀಡಿದರು.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ, ಪು ಬಡ್ನಿ ಮತ್ತು ಬಟ್ಟೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನರೇಗಾ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಅವರು ಪರಿಶೀಲಿಸಿದರು. “ಮನರೇಗಾ ಯೋಜನೆಯಲ್ಲಿ ಸಂಪೂರ್ಣ ಮಾಹಿತಿ ಒಳಗೊಂಡ ನಾಮಫಲಕ ಅಳವಡಿಸಲು ಹಣ ಮೀಸಲಿಡಲಾಗಿರುತ್ತದೆ. ಗ್ರಾಮ ಪಂಚಾಯತಿ ಹಂತದ ಸಿಬ್ಬಂದಿ ಮೇಲೆ ತಾಲೂಕು ಹಂತದ ಸಿಬ್ಬಂದಿ ಮೇಲ್ವಿಚಾರಣೆ ಮಾಡಬೇಕು. ನಾಮ ಫಲಕದಲ್ಲಿ ಜನರಿಗೆ ಮಾಹಿತಿ ದೊರಕುವಂತೆ ಮಾಡಬೇಕು” ಎಂದರು.
“ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಆಸ್ತಿ ಸೃಜನೆ ಮಾಡುವ ಮೂಲಕ ಅವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಕೆಲಸ ಮಾಡಬೇಕು. ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರೀತಿಯ ಲೋಪ ಆಗದಂತೆ ನಿಗಾವಹಿಸಬೇಕು” ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಧರ್ಮರ, ಪಿಡಿಒ ಎಂ.ಆರ್ ಮಾದರ, ಕಾರ್ಯದರ್ಶಿ ಎಸ್.ಕೆ ಡಂಬಳ, ತಾಂತ್ರಿಕ ಸಂಯೋಜಕ ಅರುಣಕುಮಾರ ತಂಬ್ರಳ್ಳಿ, ತಾಂತ್ರಿಕ ಸಹಾಯಕರಾದ ಸುರೇಶ ಬಳ್ಳಾರಿ, ವಿ.ಎಸ್ ಅಳವಂಡಿಮಠ, ಲಿಂಗರಾಜ ಅರಿಷಿಣದ, ಬಿಎಫ್‌ಟಿ ಸತೀಶ ಅರಿಷಿಣದ, ಶಿಲ್ಪಾ ಲಮಾಣಿ, ಗ್ರಾಪಂ ಸಿಬ್ಬಂದಿ ಇತರರು ಇದ್ದರು.