ಗಾರ್ಮೆಂಟ್ಸ್ ಕಾರ್ಮಿಕರು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮುಗಿಸಿ, ತಮ್ಮೂರಿಗೆ ಮರಳುತ್ತಿದ್ದಾಗ ಆಟೋ ಪಲ್ಟಿಯಾಗಿದ್ದು, ಹಲವರು ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ.
ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿರುವ ಶಾಹಿ ಎಕ್ಸ್‌ಪೋರ್ಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಕೆಲಸ ಮುಗಿಸಿ ತಮ್ಮೂರಿಗೆ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ, ಮದ್ದೂರಿನ ಟಿವಿ ಸರ್ಕಲ್ ಬಳಿ ಆಟೋಗೆ ನಾಯಿ ಅಡ್ಡಬಂದಿದೆ. ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಯತ್ನಿಸಿದ್ದು, ಆಟೋ ಪಲ್ಟಿಯಾಗಿದೆ.
ಘಟನೆಯಲ್ಲಿ ಆಟೋದಲ್ಲಿದ್ದ ಎಲ್ಲ ಕಾರ್ಮಿಕರಿಗೂ ಪೆಟ್ಟಾಗಿದ್ದು, ಇವರಲ್ಲಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಟೋದಲ್ಲಿ ಪೂರ್ಣಿಮಾ, ಸುಶೀಲಮ್ಮ, ಪವಿತ್ರ, ಉಮೇಶ್, ಶೈಲಜಾ, ರೇಣುಕಾ, ಶೋಭಾ, ಪ್ರಭಾಮಣಿ ಸುಕನ್ಯಾ, ಸತ್ಯಮ್ಮ ಮತ್ತು ಆಟೋ ಚಾಲಕ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಆಟೋದಲ್ಲಿದ್ದ ಪೂರ್ಣಿಮಾ ಅವರ ಎಡ ಭಾಗದ ಭುಜಕ್ಕೆ ತೀವ್ರವಾದ ಪೆಟ್ಟು ಬಿದ್ದಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.