- ಪುನೀತ್ ಕೆರೆಹಳ್ಳಿ ದೇವರಿಗೆ ಕೈಮುಗಿಯಲು ಪೋಲಿಸರ ಅನುಮತಿ ಬೇಕಾ?
- ಬಿಜೆಪಿಗರು ಗದ್ದಲ ಎಬ್ಬಿಸಿ ಕಲಾಪಕ್ಕೆ ಅಡ್ಡಿಪಡಿಸಬೇಡಿ: ಸಭಾಪತಿ ಹೊರಟ್ಟಿ
ರಾಜ್ಯವನ್ನು ಲೂಟಿ ಮಾಡುವುದು, ಜನಸಾಮಾನ್ಯರಿಗೆ ಅನ್ಯಾಯ ಮಾಡುವುದು ಹಾಗೂ ಅನವಶ್ಯಕ ಕೂಗಾಟಗಳ ಮೂಲಕ ಸದನ ಕಲಾಪದ ಸಮಯ ವ್ಯರ್ಥ ಮಾಡುವುದಷ್ಟೇ ಬಿಜೆಪಿ ನಾಯಕರ ಕೆಲಸ ಎಂದು ಸಚಿವ ಕೃಷ್ಣಭೈರೇಗೌಡ ಕಿಡಿ ಕಾರಿದರು.
ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಗೆ ಉಪ್ಪಾರಪೇಟೆ ಪೊಲೀಸ್ ಠಾಣಾ ಅಧಿಕಾರಿ ಇತ್ತೀಚೆಗೆ ನೋಟೀಸ್ ಜಾರಿ ಮಾಡಿದ್ದರು. ಆ ನೊಟೀಸ್‌ನಲ್ಲಿ ಮೆಜೆಸ್ಟಿಕ್ ಬಳಿ ಇರುವ ನಾಗರ ಕಟ್ಟಗೆ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯುವಂತೆ ಸೂಚಿಸಲಾಗಿತ್ತು.
ಬುಧವಾರ ವಿಧಾನ ಪರಿಷತ್ ಶೂನ್ಯ ವೇಳೆ ಕಲಾಪದಲ್ಲಿ ವಿರೋಧ ಪಕ್ಷದ ನಾಯಕರು ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ್ದರು. ಅಲ್ಲದೆ, “ಪುನೀತ್ ಕೆರೆಹಳ್ಳಿ ಹಿಂದೂ ದೇವರಿಗೆ ಕೈಮುಗಿಯಲು ಪೋಲಿಸರ ಅನುಮತಿ ಪಡೆಯಬೇಕೆ?” ಎಂದು ಆಕ್ರೋಶ ಹೊರಹಾಕಿದರು.
ಈ ವೇಳೆ ಸರ್ಕಾರದ ಪರವಾಗಿ ಉತ್ತರಿಸಿದ ಸಚಿವ ಕೃಷ್ಣಭೈರೇಗೌಡ, “ಈ ಪ್ರಕರಣದ ಬಗ್ಗೆ ಮಾಹಿತಿ ಇಲ್ಲ. ಸಂಬಂಧಪಟ್ಟ ಅಧಿಕಾರಿಯಿಂದ ಮಾಹಿತಿ ಪಡೆದು ಎರಡು ದಿನಗಳಲ್ಲಿ ಸದನಕ್ಕೆ ಉತ್ತರ ನೀಡಲಾಗುವುದು” ಎಂದು ಸ್ಪಷ್ಟೀಕರಣ ನೀಡಿದರು.
ಆದರೆ ಇಷ್ಟಕ್ಕೆ ಸುಮ್ಮನಾಗದ ವಿರೋಧ ಪಕ್ಷದ ನಾಯಕರು ‘ಈಗಲೇ ಉತ್ತರ ಬೇಕು’ ಎಂದು ಪಟ್ಟುಹಿಡಿದರು. ಈ ವೇಳೆ ಸದನದ ನೀತಿ ನಿಯಮಗಳನ್ನು ಉಲ್ಲೇಖಿಸಿದ ಕೃಷ್ಣಭೈರೇಗೌಡ “ಸದನದ ನಿಯನ 51ಡಿ ಪ್ರಕಾರ ವಿರೋಧ ಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಲು ಎರಡು ದಿನಗಳ ಅವಕಾಶ ಇದೆ. ವಿರೋಧ ಪಕ್ಷದ ನಾಯಕರು ದಯವಿಟ್ಟು ನಿಯಮಗಳ ಅನುಸಾರ ಕಲಾಪ ನಡೆಸಲು ಅನುವು ಮಾಡಿಕೊಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯದಲ್ಲಿ ಮತ್ತೆ ಶುರುವಾಯಿತು ಹೆಣ ರಾಜಕಾರಣ
ಸಭಾಪತಿ ಬಸವರಾಜ ಹೊರಟ್ಟಿ ಸಹ ಸಚಿವ ಕೃಷ್ಣಭೈರೇಗೌಡ ಅವರ ಮಾತಿಗೆ ದನಿಗೂಡಿಸಿದರು. “ಬಿಜೆಪಿಗರು ಗದ್ದಲ ಎಬ್ಬಿಸಿ ಸದನದ ಕಲಾಪಕ್ಕೆ ಅಡ್ಡಿಪಡಿಸಬಾರದು” ಎಂದು ಸೂಚಿಸಿದರು.
ಸಭಾಪತಿಗಳ ಮಾತಿಗೂ ಕಿವಿಗೊಡದ ಬಿಜೆಪಿ ಸದಸ್ಯರು ಸದನದ ಭಾವಿಗಿಳಿದು ‘ಸಚಿವರು ಈಗಲೇ ಉತ್ತರ ನೀಡಬೇಕು’ ಎಂದು ಪಟ್ಟು ಹಿಡಿದರು. ಇದರಿಂದಾಗಿ ಸದನದಲ್ಲಿ ಗದ್ದಲ ಉಂಟಾಗಿತ್ತು.
ಈ ವೇಳೆ ವಿರೋಧ ಪಕ್ಷದ ಸದಸ್ಯರ ವರ್ತನೆಯ ವಿರುದ್ಧ ಕಿಡಿ ಕಾರಿದ ಸಚಿವ ಕೃಷ್ಣಭೈರೇಗೌಡ, “ನಿಮಯದ ಅನುಸಾರ ಎರಡು ದಿನಗಳಲ್ಲಿ ಉತ್ತರ ನೀಡುವುದಾಗಿ ಹೇಳಿದರೂ ವಿರೋಧ ಪಕ್ಷದ ನಾಯಕರು ಉದ್ದೇಶಪೂರ್ವಕವಾಗಿ ಸದನದ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಇವರಿಗೆ ಸದನ ನಡೆಯುವುದು ಬೇಕಾಗಿಲ್ಲ. ರಾಜ್ಯವನ್ನು ಲೂಟಿ ಮಾಡುವುದು, ಜನರಿಗೆ ಅನ್ಯಾಯ ಮಾಡುವುದೊಂದೇ ಇವರ ಗುರಿ. ಇವರು ಏನೇ ಗದ್ದಲ ಎಬ್ಬಿಸಿದರೂ ಸತ್ಯವೇನು ಎಂಬುದು ಜನರಿಗೆ ಗೊತ್ತು” ಎಂದು ವಾಗ್ದಾಳಿ ನಡೆಸಿದರು.