ವಕ್ಫ್ ತಿದ್ದುಪಡಿ ಕಾನೂನಿಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.
ವಕ್ಫ್-ಬೈ-ಯೂಸರ್ ಅಥವಾ ವಕ್ಫ್- ಬೈ-ಡೀಡ್ ಎಂದು ಘೋಷಿಸಿದ ಆಸ್ತಿಗಳನ್ನು ರದ್ದುಪಡಿಸುವ ಅಧಿಕಾರ ಸೇರಿದಂತೆ ಮೂರು ವಿಷಯಗಳ ಕುರಿತು ತನ್ನ ಮಧ್ಯಂತರ ಆದೇಶಗಳನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ. ಕೇಂದ್ರ ಸರ್ಕಾರವು ಈ ಕಾಯ್ದೆಯನ್ನು ಬಲವಾಗಿ ಸಮರ್ಥಿಸಿಕೊಂಡಿದೆ. ವಕ್ಫ್ ಒಂದು ಜಾತ್ಯತೀತ ಪರಿಕಲ್ಪನೆ. ಸಂವಿಧಾನದ ಮಾನ್ಯತೆ ಇರುವುದರಿಂದ ಇದಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ವಾದಿಸಿದೆ. ಈ ಕಾನೂನು ಐತಿಹಾಸಿಕ ಕಾನೂನು ಮತ್ತು ಸಾಂವಿಧಾನಿಕ ತತ್ವಗಳಿಂದ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠವು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ವಾದ ಮಂಡಿಸಿದ ಹಿರಿಯ ವಕೀಲರಾದ ಕಪಿಲ್ ಸಿಬಲ್, ರಾಜೀವ್ ಧವನ್ ಮತ್ತು ಅಭಿಷೇಕ್ ಸಿಂಘ್ವಿ ಅವರ ವಾದಗಳನ್ನು ಆಲಿಸಿತು. ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಸುಮಾರು ಮೂರು ದಿನಗಳ ಕಾಲ ವಾದ, ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು ತೀರ್ಪನ್ನು ಕಾಯ್ದಿರಿಸಿದೆ.
ಅರ್ಜಿದಾರರ ಪರ ವಕೀಲರಾದ ಕಪಿಲ್ ಸಿಬಲ್ ಅವರು ಈ ಕಾನೂನು ಐತಿಹಾಸಿಕ ಕಾನೂನು ಮತ್ತು ಸಾಂವಿಧಾನಿಕ ತತ್ವಗಳಿಂದ ಸಂಪೂರ್ಣವಾಗಿ ಭಿನ್ನವಾಗಿದೆ. ಇದು ವಕ್ಫ್ ಆಸ್ತಿಯನ್ನು ವಶಪಡಿಸಿಕೊಳ್ಳುವ ಒಂದು ವ್ಯವಸ್ಥಿತ ಮಾರ್ಗ. ಯಾವ ವಿಷಯಗಳನ್ನು ಪ್ರಸ್ತಾಪಿಸಬೇಕು ಎಂದು ಸರ್ಕಾರ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಸಿಬಲ್ ಕೋರ್ಟ್‌ಗೆ ಮನವರಿಕೆ ಮಾಡಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಇದು ‘ಬಲಿಷ್ಠರು’ ಬೆತ್ತಲಾಗುವ ಕಾಲ
ಅರ್ಜಿದಾರರು ಮೂರು ಪ್ರಮುಖ ವಿಷಯಗಳ ಬಗ್ಗೆ ಮಧ್ಯಂತರ ಆದೇಶಗಳನ್ನು ಕೋರಿದ್ದಾರೆ. ಮೊದಲನೆಯದಾಗಿ, ಸುಪ್ರೀಂಕೋರ್ಟ್ ವಕ್ಫ್-ಬೈ-ಯೂಸರ್ ಅಥವಾ ವಕ್ಫ್-ಬೈ-ಡೀಡ್ ಎಂದು ಘೋಷಿಸಿದ ಆಸ್ತಿಗಳನ್ನು ರದ್ದುಪಡಿಸುವ ಅಧಿಕಾರ. ಎರಡನೆಯದಾಗಿ, ರಾಜ್ಯ ವಕ್ಫ್ ಮಂಡಳಿಗಳು ಮತ್ತು ಕೇಂದ್ರ ವಕ್ಫ್ ಮಂಡಳಿಯ ರಚನೆ. ಇದರಲ್ಲಿ ಮುಸ್ಲಿಮರು ಮಾತ್ರ ಇರಬೇಕು. ಕೊನೆಯದಾಗಿ, ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ ಆಸ್ತಿ ಸರ್ಕಾರಿ ಜಮೀನು ಎಂದು ತೀರ್ಮಾನಿಸಿದರೆ, ಅದನ್ನು ವಕ್ಫ್ ಆಸ್ತಿಯೆಂದು ಪರಿಗಣಿಸಬಾರದು ಎಂಬ ನಿಯಮವನ್ನು ಪ್ರಶ್ನಿಸಲಾಗಿದೆ.
ಏಪ್ರಿಲ್ 25 ರಂದು, ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು 1,332 ಪುಟಗಳ ಪ್ರಾಥಮಿಕ ಅಫಿಡವಿಟ್ ಸಲ್ಲಿಸಿತ್ತು. 2025 ರ ತಿದ್ದುಪಡಿ ಮಾಡಿದ ವಕ್ಫ್ ಕಾಯ್ದೆಯನ್ನು ಸಮರ್ಥಿಸಿತ್ತು. ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಕಾನೂನಿಗೆ ತಡೆ ನೀಡಬಾರದು ಎಂದು ವಾದಿಸಿತ್ತು.