ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿರುವ ಶಕ್ತಿ ಯೋಜನೆ ಬಗ್ಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಬುಧವಾರದ ಕಲಾಪದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಪಾಲರ ಭಾಷಣದ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಮಾಲೀಕರು, ಆಟೋ ಚಾಲಕರಿಗೆ ಭಾರೀ ತೊಂದರೆ ಆಗುತ್ತಿದೆ” ಎಂದು ಆರೋಪಿಸಿದರು.
“ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಿದ್ದೀರಿ. ಇದರ ಬಗ್ಗೆ ನಮಗೇನು ತಕಾರರು ಇಲ್ಲ. ಆದರೆ, ಇದರಿಂದ ನಷ್ಟ ಅನುಭವಿಸುತ್ತಿರೋ ಖಾಸಗಿ ಬಸ್ ಮಾಲೀಕರು, ಆಟೋ ಚಾಲಕರು ಏನು ಮಾಡಬೇಕು? ನಾವು ಇವರ ಬಗ್ಗೆಯೂ ಯೋಚಿಸಬೇಕು” ಎಂದು ಹೇಳೀದರು.
ಸರ್ಕಾರಿ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದ ಬೆನ್ನಲ್ಲೇ ಸರ್ಕಾರದ ವಿರುದ್ಧ ಆಟೋ ಚಾಲಕರು, ಖಾಸಗಿ ಬಸ್ ಮಾಲೀಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಅವರ ಪರವಾಗಿ ಕುಮಾರಸ್ವಾಮಿ ವಿಧಾನಸಭಾ ಕಲಾಪದಲ್ಲಿ ಧ್ವನಿ ಎತ್ತಿದ್ದಾರೆ.
ಅದ್ಭುತ ಸ್ಪಂದನೆ
ಕಳೆದ ಜೂನ್ ತಿಂಗಳಿನಿಂದಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡಿದೆ. ಈ ಸ್ಕೀಮ್ ಅಡಿಯಲ್ಲಿ ರಾಜ್ಯದ ಎಲ್ಲ ಮಹಿಳೆಯರಿಗೂ ಸರ್ಕಾರಿ ಬಸ್ನಲ್ಲಿ ಸಂಪೂರ್ಣ ಉಚಿತ. ಇಡೀ ರಾಜ್ಯದಲ್ಲಿ ಮಹಿಳೆಯರು ಎಲ್ಲಿಂದ ಎಲ್ಲಿಗೆ ಬೇಕಾದರೂ ಹೋಗಬಹುದು. ರಾಜ್ಯ ಸರ್ಕಾರದ ಈ ಮಹತ್ವದ ಯೋಜನೆಗೆ ಮಹಿಳೆಯರಿಂದಲೂ ಅದ್ಭುತ ಸ್ಪಂದನೆ ಸಿಗುತ್ತಿದೆ.