ಹೈದರಾಬಾದ್- ಕರ್ನಾಟಕ ಜನಾಂದೋಲನ ಕೇಂದ್ರ ಜಿಲ್ಲಾ ಸಮಿತಿಯಿಂದ ಮೇ 24, 25 ರಂದು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೆವಿಕೆ ಸಭಾಂಗಣದಲ್ಲಿ ವರ್ತಮಾನ ಸಂದರ್ಭದ ರಾಜಕಾರಣ ತತ್ವ ಸಿದ್ಧಾಂತಗಳ ಮನನ ಕುರಿತು ಚಿಂತನ-ಮಂಥನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೈದರಾಬಾದ್- ಕರ್ನಾಟಕ ಜನಾಂದೋಲನ ಕೇಂದ್ರ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಬಸವರಾಜ ತಿಳಿಸಿದರು.
ಮೇ 24 ರಂದು ಬೆಳಿಗ್ಗೆ 9.30 ರಿಂದ 12 ರವರೆಗೆ ಗೋಷ್ಠಿ-1 ನಡೆಯಲಿದೆ. ಹೈದರಾಬಾದ್- ಕರ್ನಾಟಕ ಜಿಲ್ಲಾ ಕೇಂದ್ರದ ಸಂಸ್ಥಾಪಕ ರಾಘವೇಂದ್ರ ಕುಷ್ಟಗಿ ಅಂಬೇಡ್ಕರ್ ಬರೆದ ಸಂವಿಧಾನದ ಬಗ್ಗೆ ಪ್ರಸ್ತಾವನೆ ಮಾಡಲಿದ್ದಾರೆ. ಸಾಹಿತಿ ಶಿವಸುಂದರ ಅಂಬೇಡ್ಕರ್ ಬಯಸಿದ್ದ ಸಂವಿಧಾನ ಕುರಿತು ವಿಷಯ ಮಂಡಿಸಲಿದ್ದಾರೆ. ವಿದ್ಯಾನಿಧಿ ಕಾಲೇಜಿನ ಪ್ರಾಂಶುಪಾಲ ಚಂದ್ರಗಿರೀಶ ಅಧ್ಯಕ್ಷತೆ ವಹಿಸುವರು ಎಂದು ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.
ಗೋಷ್ಠಿ-2 ಮಧ್ಯಾಹ್ನ 12.15 ರಿಂದ 2 ಗಂಟೆವರೆಗೆ ನಡೆಯಲಿದೆ. ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ ಸಂವಿಧಾನ ಸಶಕ್ತೀಕರಣ- ಸವಾಲುಗಳು ಮತ್ತು ಸಾಧ್ಯತೆ ಕುರಿತು ವಿಷಯ ಮಂಡಿಸಲಿದ್ದಾರೆ. ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಕಾರ್ಯದರ್ಶಿ ಕೆ. ವಿ. ಭಟ್ ಅಧ್ಯಕ್ಷತೆ ವಹಿಸುವರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮಸೀದಿ ಆವರಣದಲ್ಲಿದ್ದ ಅನಧಿಕೃತ ಮನೆ, ಅಂಗಡಿ ತೆರವು
ಗೋಷ್ಠಿ-3 ಮಧ್ಯಾಹ್ನ 3 ರಿಂದ 5 ರವರೆಗೆ ನಡೆಯಲಿದೆ. ಕರ್ನಾಟಕ ರಾಷ್ಟ್ರ ಸಮಿತಿಯ ಸಂಸ್ಥಾಪಕ ರವಿಕೃಷ್ಣ ರೆಡ್ಡಿ ವರ್ತಮಾನ ಸಂದರ್ಭದಲ್ಲಿ ಗಾಂಧಿವಾದದ ಸ್ಥಾನಮಾನ ಸ್ಥಿತಿಗತಿ ಕುರಿತು ವಿಷಯ ಮಂಡಿಸಲಿದ್ದಾರೆ. ಸಾಮಾಜಿಕ ಕಾರ್ಯಕರ್ತ ದಿಲೀಪ ಕಾಮತ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಮೇ 25 ರಂದು ಬೆಳಿಗ್ಗೆ 9.30 ರಿಂದ 12 ಗಂಟೆ ವರೆಗೆ ಗೋಷ್ಠಿ-4 ನಡೆಯಲಿದೆ. ಸಾಮಾಜಿಕ ಕಾರ್ಯಕರ್ತ ದಿಲೀಪ ಕಾಮತ್ ಭಾರತದ ಪರಿಕಲ್ಪನೆ- ವ್ಯವಸ್ಥೆ ಮತ್ತು ಜನಬದುಕಿನ ವೈರುಧ್ಯಗಳ ಕುರಿತು ವಿಷಯ ಮಂಡಿಸಲಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಅಧ್ಯಕ್ಷತೆ ವಹಿಸುವರು.
ಗೋಷ್ಠಿ-5 ಬೆಳಿಗ್ಗೆ 12.15 ರಿಂದ 2 ರವರೆಗೆ ನಡೆಯಲಿದೆ. ಬೆಂಗಳೂರಿನ ಬಿಜಿವಿಎಸ್‌ನ ಚೇಗರೆಡ್ಡಿ, ಶಿಕ್ಷಣದ ಚಿಂತಕ ಸಯ್ಯದ್ ಹಫೀಜುಲ್ಲಾ ಹೈದರಾಬಾದ್- ಕರ್ಣಾಟಕ ಶೈಕ್ಷಣಿಕ ಪರಿಸ್ಥಿತಿ ಮತ್ತು ಕಥೆ-ವ್ಯಥೆ ಕುರಿತು ಮಾತನಾಡಲಿದ್ದಾರೆ. ಜತೆಗೆ ಗೋಷ್ಠಿಯಲ್ಲಿ ಸಹಸ್ಪಂದನಾ ಸಂವಾದ ಏರ್ಪಡಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ ಶಿಕ್ಷಣ ಪ್ರೇಮಿಗಳು, ದಲಿತರ ಪರ ಚಿಂತಕರು, ಸಾಹಿತಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಡಾ. ಶಾರದ ಹುಲಿನಾಯಕ, ಲಿಂಗಪ್ಪ ಪೂಜಾರಿ, ಜಾನ್ ವೆಸ್ಲಿ, ಖಾಜಾ ಅಸ್ಲಂ ಮಹಮ್ಮದ್, ವೀರಣ್ಣ ಭಂಡಾರಿ, ಬೂದೇಪ್ಪ, ಲಕ್ಷ್ಮಣ, ಶಾಂತ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
