ಅಧಿಕಾರಿಗಳ ನಿರ್ಲಕ್ಷ್ಯದಿಂದ ಖರೀದಿ ಆಗದೆ ಉಳಿದ ಜೋಳ ಮಳೆಗೆ ನೆನೆದು ಮೊಳಕೆ ಒಡೆದು ಲಕ್ಷಾಂತರ ರೂ ನಷ್ಟವಾಗಿದೆ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ನಷ್ಟ ಹೊಂದಿದ ರೈತರಿಗೆ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ಸೋಮಲಿಂಗಪ್ಪ ಆಗ್ರಹಿಸಿದರು.
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದಲ್ಲಿರುವ ಎಪಿಎಂಸಿಗೆ ರೈತರು ತಮ್ಮ ಜೋಳವನ್ನು ಖರೀದಿ ಕೇಂದ್ರಕ್ಕೆ ತಂದಿದ್ದು, ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ರೈತರ ಹಿಂಗಾರು ಜೋಳ ಮೊಳೆಕೆ ಒಡೆದು ನಾಶವಾಗಿದ್ದು, ಇದಕ್ಕೆ ಎಪಿಎಂಸಿಯವರ ನಿರ್ಲಕ್ಷ್ಯ ಹಾಗೂ ಖರೀದಿ ಮಾಡುವಲ್ಲಿ ವಿಳಂಬವೇ ಕಾರಣ ಎಂದು ರೈತರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಮಾಜಿ ಶಾಸಕರು ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, “ಸಿರಗುಪ್ಪ ಎಪಿಎಂಸಿಯಲ್ಲಿ ಜೋಳ ಖರೀದಿ ಕೇಂದ್ರದಲ್ಲಿ ರೈತರ ಜೋಳ ಮಳೆಯಿಂದ ಸಂಪೂರ್ಣವಾಗಿ ನಾಶವಾಗಿದ್ದು, ರೈತರು ತುಂಬಾ ತೊಂದರೆ ಮತ್ತು ಲಕ್ಷಾಂತರ ರೂಪಾಯಿಗಳ ನಷ್ಟವನ್ನು ಅನುಭವಿಸಿದ್ದಾರೆ. ಅಲ್ಲದೆ ಸಂಬಂಧಿಸಿದ ಅಧಿಕಾರಿಗಳು ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ಜೋಳ ಖರೀದಿ ಕೇಂದ್ರದಲ್ಲಿ ಆದ ಅವ್ಯವಸ್ಥೆಗಳನ್ನು ಗಮನಿಸಿ ಅವುಗಳನ್ನು ಸರಿಪಡಿಸಬೇಕು” ಎಂದು ರೈತರ ಆಗ್ರಹಿಸಿದರು.
ಇದನ್ನೂ ಓದಿ: ಬಳ್ಳಾರಿ | ಬೆಂಬಲ ಬೆಲೆಯಡಿ ಜೋಳ ಖರೀದಿಗೆ ಅವಧಿ ವಿಸ್ತರಿಸಲು ರೈತರ ಆಗ್ರಹ
ಪ್ರತಿಭಟನೆಯಲ್ಲಿ ಮೊಳಕೆ ಒಡೆದ ಜೋಳವನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ದಂಡಾಧಿಕಾರಿ ನರಸಪ್ಪ “ಇನ್ನು ಎರಡು ದಿನಗಳಲ್ಲಿ ಸಂಪೂರ್ಣವಾಗಿ ರೈತರು ತಂದಂತಹ ಜೋಳವನ್ನು ಖರೀದಿಸಲಾಗುವುದು” ಎಂದು ಭರವಸೆಯನ್ನು ನೀಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಕುಂಟನಹಳ್ ಮಲ್ಲಿಕಾರ್ಜುನ ಸ್ವಾಮಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ ಎಸ್ ಸಿದ್ದಪ್ಪಣ್ಣ, ಮಹಾದೇವ, ರಾಮಕೃಷ್ಣ ವೈ ಡಿ, ವೆಂಕಟೇಶ ಹಾಗೂ ನೂರಾರು ಜನ ರೈತ ಮುಖಂಡರು ಪಾಲ್ಗೊಂಡಿದ್ದರು.