ಅಲ್ಪಸ್ವಲ್ಪ ಬದಲಾವಣೆಗಳನ್ನು ಹೊರತುಪಡಿಸಿದರೆ ಬಹುತೇಕ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಮಾದರಿಯಲ್ಲೇ ಎರಡು ವರ್ಷದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದುವರಿದಿದ್ದು, ಮುಂದೆಯೂ ಇದೇ ಮಾದರಿಯಲ್ಲಿ ಮುಂದುವರಿದರೆ ಭಾರೀ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ರೈತ ನಾಯಕ, ಎದ್ದೇಳು ಕರ್ನಾಟಕ ಕೇಂದ್ರ ಸಮಿತಿ ಸದಸ್ಯ ಜೆ.ಎಂ.ವೀರಸಂಗಯ್ಯ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ಬಿಜೆಪಿ ಸರ್ಕಾರದ ನೀತಿಗಳನ್ನೇ ಕಾಂಗ್ರೆಸ್ ಸರ್ಕಾರ ಕೂಡಾ ಮುಂದುವರಿಸಿಕೊಂದು ಹೋಗುತ್ತಿದೆ. ಜನಹಿತದ ದೃಷ್ಟಿಯಿಂದ ರಾಜ್ಯ ಸರ್ಕಾರದ ಜೊತೆ ಸಂಘರ್ಷಕ್ಕೆ ಇಳಿಯಲು ಎದ್ದೇಳು ಕರ್ನಾಟಕ ತೀರ್ಮಾನ ಮಾಡಿದೆ. ಇದರ ಮೊದಲ ಭಾಗವಾಗಿ ‘ನಿಷ್ಠುರ ಪತ್ರಿಕಾಗೋಷ್ಠಿ’ಯನ್ನು ಇಂದು ಇಲ್ಲಿ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಭೂ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ, ಕಾರ್ಮಿಕರ ದುಡಿಮೆಯ ಅವಧಿ 8ರಿಂದ 12 ಗಂಟೆಗೆ ಹೆಚ್ಚಿಸಿದ ಕಾಯ್ದೆ ಸಹಿತ ಅನೇಕ ಜನ ವಿರೋಧಿ ಕಾಯ್ದೆಗಳನ್ನು ಕಳೆದ ಬಿಜೆಪಿ ಸರಕಾರ ಜಾರಿಗೆ ತಂದಿದೆ. ನಾವು ಅಧಿಕಾರಕ್ಕೆ ಬಂದರೆ ಈ ಎಲ್ಲಾ ಕಾಯ್ದೆಗಳನ್ನು ರದ್ದು ಮಾಡಲಾಗುವುದು ಎಂದು ಚುನಾವಣೆಗೆ ಮೊದಲು ಕಾಂಗ್ರೆಸ್ ನಾಯಕರು ನಮಗೆ ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದು ಎರಡು ವರ್ಷ ಸಂದರೂ ಇನ್ನೂ ಕಾಯ್ದೆಗಳನ್ನು ರದ್ದು ಮಾಡದೆ ಮುಂದುವರಿಸುತ್ತಿದೆ. ಹೀಗಾದರೆ ಬಿಜೆಪಿಗಿಂತ ಕಾಂಗ್ರೆಸ್ ಹೇಗೆ ಭಿನ್ನ ಎಂದು ಅವರು ಪ್ರಶ್ನಿಸಿದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಶಾಸಕರು ಬಾಯಿ ತೆರೆದರೆ ಗ್ಯಾರಂಟಿ ಯೋಜನೆಗಳ ಸಾಧನೆಯನ್ನು ವೈಭವೀಕರಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಗುಂಗಿನಿಂದ ಸರ್ಕಾರ ಹೊರ ಬರಬೇಕು. ಗ್ಯಾರಂಟಿ ಯೋಜನೆಗಳು ಒಂದೇ ಸರ್ಕಾರದ ಸಂಪೂರ್ಣ ಸಾಧನೆ ಅಲ್ಲ. ಜನವಿರೋಧಿ ಕಾಯ್ದೆಗಳನ್ನು ರದ್ದು ಮಾಡುವುದು, ರೈತರು, ಕಾರ್ಮಿಕರು, ದಲಿತರು, ವಿದ್ಯಾರ್ಥಿಗಳು, ಮಹಿಳೆಯರ ನ್ಯಾಯಯುಕ್ತ ಬೇಡಿಕೆಗಳಿಗೆ ಸ್ಪಂದಿಸುವುದು ಕೂಡಾ ಸರಕಾರದ ಸಾಧನೆಯಾಗಿದೆ. ಇವುಗಳ ಬಗ್ಗೆ ಸರ್ಕಾರ ಕಿವುಡಾಗಿದೆ ಎಂದು ಅವರು ಆರೋಪಿಸಿದರು.
ಎರಡು ವರ್ಷದ ಅವಧಿಯನ್ನು ಪೂರ್ತಿಗೊಳಿಸಿದ ಸರ್ಕಾರ ಇನ್ನಾದರೂ ಜನ ಚಳವಳಿಗೆ ಕಿವಿಯಾಗಬೇಕು. ಚುನಾವಣೆಗೆ ಮೊದಲು ರಾಜ್ಯದ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ತಪ್ಪಿದಲ್ಲಿ ಸರ್ಕಾರದ ಕಣ್ಣು ಕಿವಿ ತೆರೆಸುವ ಕೆಲಸವನ್ನು ನಾವು ಮಾಡುತ್ತೇವೆ. ಎಲ್ಲಾ ವರ್ಗದ ಜನರನ್ನು ಸೇರಿಸಿ ನಡೆಸುವ ಭಾರೀ ಪ್ರತಿಭಟನೆಯನ್ನು ಸರಕಾರ ಎದುರಿಸಬೇಕಾಗಿದೆ ಎಂದು ಅವರು ಎಚ್ಚರಿಕೆ ನಿಡಿದರು.
ಎದ್ದೇಳು ಕರ್ನಾಟಕ ಕೇಂದ್ರ ಸಮಿತಿ ಸದಸ್ಯ ಕೆ.ಎಲ್.ಅಶೋಕ್ ಮಾತನಾಡಿ, ಬಿಜೆಪಿಯ ದುರಾಡಳಿತದಿಂದ ಬೆಸೆತ್ತ ರಾಜ್ಯದ ಜನತೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟು ಕಾಂಗ್ರೆಸ್ ಸರ್ಕಾರವನ್ನು ಆರಿಸಿದೆ. ಆದರೆ ಬಿಜೆಪಿ ಜನ ವಿರೋಧಿ ಕಾಯ್ದೆಗಳನ್ನು ಕಾಂಗ್ರೆಸ್ ಮುಂದುವರಿಸುತ್ತಿದೆಯಲ್ಲದೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೋಮು ಸಂಘರ್ಷವೂ ಹೆಚ್ಚಾಗಿದೆ. ಭ್ರಷ್ಟಾಚಾರವೂ ಹೆಚ್ಚಾಗಿರುವುದು ಕಂಡುಬರುತ್ತಿದೆ ಎಂದು ಅವರು ಆರೋಪಿಸಿದರು.
ಜನರು ಕೊಟ್ಟ ಅಧಿಕಾರವನ್ನು ಜನ ವಿರೋಧಿಯಾಗಿ ಬಳಸುವುದನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಬೇಕು. ಮತ್ತೆ ಧರ್ಮಾಂಧ ಶಕ್ತಿಗಳು ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಡಬೇಡಿ ಎಂದು ನಾವು ಕಾಂಗ್ರೆಸ್ ಸರ್ಕಾರದ ಜೊತೆ ಮನವಿ ಮಾಡುತ್ತಿದ್ದೇವೆ. ಚುನಾವಣೆಗೆ ಮೊದಲು ನೀವು ಹೇಳಿದ್ದೇನು. ಅಧಿಕಾರಕ್ಕೆ ಬಂದ ಬಳಿಕ ನೀವು ಮಾಡುತ್ತಿರುವುದು ಏನು ಎಂಬುದನ್ನು ಅವಲೋಕನ ಮಾಡಬೇಕು. ಗ್ಯಾರಂಟಿಯ ಗುಂಗಿನಿಂದ ಹೊರ ಬಂದು ಪ್ರಣಾಳಿಕೆಯನ್ನು ಒಮ್ಮೆ ತೆರೆದು ಓದಿ ಎಂದು ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದ ಅವರು, ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಒಂದು ತಿಂಗಳ ಅವಧಿ ನೀಡಲಾಗುವುದು. ಅದರೊಳಗೆ ಸರ್ಕಾರ ಸರಿ ದಾರಿಗೆ ಬಾರದಿದ್ದರೆ ಎದ್ದೇಳು ಕರ್ನಾಟಕದಡಿಯಲ್ಲಿ ರಾಜ್ಯದ ಎಲ್ಲಾ ರೈತ, ದಲಿತ, ಮಹಿಳಾ, ವಿದ್ಯಾರ್ಥಿ, ಕಾರ್ಮಿಕ ಸಂಘಟನೆಗಳನ್ನು ಒಗ್ಗೂಡಿಸಿ ಬೃಹತ್ ಜನಾಂದೋಲನ ನಡೆಸಲಾಗುವುದು ಎಂದು ಅವರು ಸರ್ಕಾರವನ್ನು ಎಚ್ಚರಿಸಿದರು.
ಎದ್ದೇಳು ಕರ್ನಾಟಕ ಕೇಂದ್ರ ಸಮಿತಿ ಸದಸ್ಯರಾದ ಬಿ.ಟಿ.ಲಲಿತಾ ನಾಯ್ಕ್, ಎನ್.ವೆಂಟಕಟೇಶ್, ರಾಜ್ಯ ಸಂಚಾಲಕಿ ತಾರಾ ರಾವ್, ಸದಸ್ಯರಾದ ನಾಗೇಶ್ ಅರಳಕುಪ್ಪೆ, ಬಾಬು, ಲಕ್ಷಣ್ ಮಂಡಲಗೇರ ಉಪಸ್ಥಿತರಿದ್ದರು.