ಹಾವೇರಿಯಲ್ಲಿ ಅಂತಧರ್ಮೀಯ ದಂಪತಿಗಳಿಗೆ ಥಳಿಸಿ, ಮಹಿಳೆಯನ್ನು ಕಾಡಿಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪಿಗಳಿಗೆ ಜಾಮೀನು ದೊರೆತಿದೆ. ಜಾಮೀನು ದೊರೆತು ಹೊರ ಬಂದ ಕಾಮುಕ ಆರೋಪಿಗಳು ಹಾವೇರಿ ಅಕ್ಕಿಹಾಲೂರು ಪಟ್ಟಣದಲ್ಲಿ ಕಾರು, ಬೈಕ್‌ಗಳಲ್ಲಿ ಹಾಡು ಹಾಕಿಕೊಂಡು ವಿಜಯೋತ್ಸವ ಮೆರವಣಿಗೆ ನಡೆಸಿದ್ದಾರೆ.
ಈ ಕೃತ್ಯಕ್ಕೆ ಸಹಾಯ ಮಾಡಿದ್ದ 10 ಮಂದಿಗೆ ಈ ಹಿಂದೆಯೇ ಜಾಮೀನು ನೀಡಲಾಗಿತ್ತು. ಇದೀಗ, ಪ್ರಮುಖ ಆರೋಪಿಗಳಾದ ಆಫ್ತಾಬ್ ಚಂದನಕಟ್ಟಿ, ಮದಾರ್ ಸಾಬ್ ಮಂಡಕ್ಕಿ, ಸಮಿವುಲ್ಲಾ ಲಾಲನವರ್, ಮೊಹಮ್ಮದ್ ಸಾದಿಕ್ ಅಗಸಿಮನಿ, ಶೋಯಿಬ್ ಮುಲ್ಲಾ, ತೌಸೀಫ್ ಚೋಟಿ ಹಾಗೂ ರಿಯಾಜ್ ಸವಿಕೇರಿ ಎಂಬವರಿಗೆ ಹಾವೇರಿ ಸೆಷನ್ಸ್ ನ್ಯಾಯಾಲಯವು ಇತ್ತೀಚೆಗೆ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಪಡೆದು ಹೊರಬಂದಿರುವ ಆರೋಪಿಗಳು ತಮ್ಮ ಬೈಕ್ ಮತ್ತು ಕಾರುಗಳಲ್ಲಿ ಜೋರಾಗಿ ಹಾಡನ್ನು ಹಾಕಿಕೊಂಡು ಅಕ್ಕಿ ಆಲೂರು ಪಟ್ಟಣದಲ್ಲಿ ಮೆರವಣಿಗೆ ನಡೆಸಿದ್ದಾರೆ. ಸಂಭ್ರಮಾಚರಣೆ ನಡೆಸಿದ್ದಾರೆ.
2025ರ ಜನವರಿ 8ರಂದು ಹಾವೇರಿ ಜಿಲ್ಲೆಯ ಹಾನಗಲ್‌ನ ನಾಲ್ಕರ್ ಕ್ರಾಸ್ ಬಳಿಕ ಹೋಟೆಲ್‌ನಲ್ಲಿ ಅಂತರ್ಧಮೀಯ ಜೋಡಿಯೊಂದು ತಂಗಿತ್ತು. ಅವರಿದ್ದ ಕೊಠಡಿಗೆ ನುಗ್ಗಿದ ಕಾಮುಕರ ಗುಂಪು ಯುವಕನಿಗೆ ಥಳಿಸಿ, ಮಹಿಳೆಯನ್ನು ಸಮೀಪದ ಕಾಡಿಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಪ್ರಕರಣದಲ್ಲಿ 19 ಮಂದಿಯನ್ನು ಬಂಧಿಸಲಾಗಿದೆ. ಅವರಲ್ಲಿ, ಏಳು ಮಂದಿ ಪ್ರಮುಖ ಆರೋಪಿಗಳು, ಉಳಿದವರು ಕೃತ್ಯಕ್ಕೆ ಸಹಾಯ ಮಾಡಿದ್ದವರು.
ಪ್ರಕರಣವು ಆರಂಭದಲ್ಲಿ ಅನೈತಿಕ ಪೊಲೀಸ್‌ಗಿರಿಯ ನಿದರ್ಶನವಾಗಿ ಬೆಳಕಿಗೆ ಬಂದಿತ್ತು. ಆ ಬಳಿಕ, ಜನವರಿ 11ರಂದು ಸಂತ್ರಸ್ತೆಯು ನ್ಯಾಯಾಲಯದ ಮುಂದೆ ಹಾಜರಾಗಿ, ತನ್ನ ಮೇಲೆ ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಬಳಿಕ, ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿತ್ತು. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಅತ್ಯಾಚಾರ ಎಸಗಿರುವುದು ದೃಢಪಟ್ಟಿತ್ತು.