ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಮೇ 26 ರಿಂದ ಜೂನ್ 2 ರವರೆಗೆ ನಡೆಯಲಿದ್ದು, ಪರೀಕ್ಷೆಯು ಯಾವುದೇ ಲೋಪದೋಷವಿಲ್ಲದೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ರ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ʼಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರಲ್ಲಿ ಅನುತ್ತೀರ್ಣರಾದ ಒಟ್ಟು 13,632 ವಿದ್ಯಾರ್ಥಿಗಳು ಪರೀಕ್ಷೆ-2 ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದು, ಒಟ್ಟು 566 ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಹಾಗೂ ಜಿಲ್ಲಾ ಹಂತದ ವೆಬ್ ಕೌನ್ಸೆಲಿಂಗ್ ವೀಕ್ಷಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆʼ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಲೀಂ ಪಾಷ ಮಾತನಾಡಿ, ʼಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಮೊಬೈಲ್ ನಿಷೇಧಿಸಲಾಗಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಹಾಗೂ ಪರೀಕ್ಷಾ ಕೇಂದ್ರಗಳ ಹತ್ತಿರದಲ್ಲಿರುವ ಜೆರಾಕ್ಸ್ ಮತ್ತು ಸೈಬರ್ ಕೇಂದ್ರಗಳನ್ನು ಪರೀಕ್ಷಾ ಸಮಯದಲ್ಲಿ ಮುಚ್ಚಿಸಲು ಆದೇಶ ಹೊರಡಿಸಲಾಗಿದೆʼ ಎಂದರು.
ಒಟ್ಟು 47 ಪರೀಕ್ಷಾ ಕೇಂದ್ರ : ಜಿಲ್ಲೆಯಲ್ಲಿ ಔರಾದ (5), ಬಸವಕಲ್ಯಾಣ (9), ಭಾಲ್ಕಿ (8), ಬೀದರ (15), ಹುಮನಾಬಾದ (10) ಸೇರಿದಂತೆ ಒಟ್ಟು (47) ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿಗಳು, ತಾಲೂಕು ನೋಡಲ್ ಅಧಿಕಾರಿಗಳು ಹಾಗೂ ಎಲ್ಲ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಉಪ ಮುಖ್ಯ ಅಧೀಕ್ಷಕರು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಪಿಯುಸಿ ಪರೀಕ್ಷೆ-3 : ಮೇ.26ರೊಳಗಾಗಿ ಹೆಸರು ನೊಂದಾಯಿಸಿ
2025ರ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಅವಕಾಶ ಕಲ್ಪಿಸಿದ್ದರಿಂದ ಪರೀಕ್ಷೆ ಬರೆದ 5,727 ವಿದ್ಯಾರ್ಥಿಗಳ ಪೈಕಿ 2,066 ವಿದ್ಯಾರ್ಥಿಗಳು ಉತ್ತೀರ್ಣರಾಗಿ 2025ರ ದ್ವಿತೀಯ ಪಿಯುಸಿ ಒಟ್ಟಾರೆ ಫಲಿತಾಂಶ ಉತ್ತಮಗೊಂಡಿದೆ.
ಇದನ್ನೂ ಓದಿ : ಬೀದರ್ | ಭಾರಿ ಮಳೆಗೆ ಕೊಚ್ಚಿ ಹೋದ ಸೇತುವೆ: ₹50 ಲಕ್ಷ ಅನುದಾನಕ್ಕೆ ವಿಜಯ ಸಿಂಗ್ ಮನವಿ
ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ನೀಡುವ ಸಂಬಂಧ ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆ ತಂದು 2025ರ ದ್ವಿತೀಯ ಪಿಯುಸಿ-3ನೇ ಪರೀಕ್ಷೆಯನ್ನು ಜೂನ್ 9ರಿಂದ ಜೂ.20ರವರೆಗೆ ನಡೆಸಲಾಗುತ್ತಿದೆ.
ವಿದ್ಯಾರ್ಥಿಗಳು ಮೇ 26ರೊಳಗಾಗಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡು ಪರೀಕ್ಷೆಗೆ ಹಾಜರಾಗಬೇಕೆಂದು ಬೀದರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.