ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡದ ಸಾಹಿತಿ ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಾ ಭಾಸ್ತಿ ಅವರುಗಳಿಗೆ ಸರ್ಕಾರದ ವತಿಯಿಂದ ತಲಾ 10 ಲಕ್ಷ ಹಮ್ಮಿಣಿ ನೀಡುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಮೊನ್ನೆಯಷ್ಟೇ ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ಕನ್ನಡಕ್ಕೆ ದೊರಕಿಸಿಕೊಟ್ಟ ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಾ ಬಾಸ್ತಿ ಅವರುಗಳಿಗೆ ಪ್ರಶಸ್ತಿ ಮೊತ್ತವಾಗಿ ಒಬ್ಬೊಬ್ಬರಿಗೆ ಅಂದಾಜು 28.5 ಲಕ್ಷ ರೂಪಾಯಿ ದೊರಕಿರುತ್ತದೆ. ವಿಚಿತ್ರವೆಂದರೆ ಈ ಪುರಸ್ಕಾರದ ಹಣದ ಮೇಲೆಯೂ ಕೇಂದ್ರ ಸರ್ಕಾರ ಅಂದಾಜು 30% ರಷ್ಟು ಜಿಎಸ್ಟಿ ಇತ್ಯಾದಿ ರೂಪದಲ್ಲಿ ಟ್ಯಾಕ್ಸ್ ವಿಧಿಸುತ್ತದೆ. ಬೂಕರ್ ಪ್ರಶಸ್ತಿ ಪುರಸ್ಕೃತರಾದ ಇಬ್ಬರು ಮಹಿಳೆಯರಿಗೆ ಯಾವುದೇ ತೆರಿಗೆಗಳನ್ನು ವಿಧಿಸದೆ ಪ್ರಶಸ್ತಿಯ ಸಂಪೂರ್ಣ ಮೊತ್ತವು ಸಿಗುವಂತೆ ಮಾಡಬೇಕು” ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬಾನು ಮುಷ್ತಾಕ್ ಬರಹಕ್ಕೆ ಇನ್ನಾದರೂ ʼಸಾಹಿತ್ಯಕ ಮನ್ನಣೆʼ ಸಿಗಲಿ
“ಇನ್ನು ರಾಜ್ಯ ಸರ್ಕಾರವು ಈ ಇಬ್ಬರಿಗೂ ತಲಾ 10 ಲಕ್ಷ ರೂಪಾಯಿಯಂತೆ ವಿಶೇಷ ಹಮ್ಮಿಣಿಯನ್ನು ಅರ್ಪಿಸಬೇಕೆಂದು ಒತ್ತಾಯಿಸಿರುವ ಅವರು, ಈ ಹಿಂದೆ ಡಾ. ಚಂದ್ರಶೇಖರ ಕಂಬಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಕರ್ನಾಟಕ ಸರ್ಕಾರ ಅವರಿಗೆ ವಿಶೇಷವಾಗಿ 5 ಲಕ್ಷ ರೂಪಾಯಿ ಹಮ್ಮಿಣಿಯನ್ನು ಅರ್ಪಿಸಿತ್ತು. ಡಾ. ಭೈರಪ್ಪನವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಬಂದಾಗಲೂ 5 ಲಕ್ಷ ರೂಪಾಯಿ ಹಮ್ಮಿಣಿಯನ್ನು ನೀಡಲಾಗಿತ್ತು. ಅದೇ ರೀತಿ ಈ ಇಬ್ಬರು ಹೆಮ್ಮೆಯ ಕನ್ನಡದ ಸಾಹಿತಿಗಳಿಗೆ ತಲಾ 10 ಲಕ್ಷ ರೂಪಾಯಿಯಂತೆ ಹಮ್ಮಿಣಿ ನೀಡಬೇಕು” ಎಂದು ಹೇಳಿದ್ದಾರೆ.