10 ವರ್ಷದ ಬಾಲಕಿಯನ್ನು ವ್ಯಕ್ತಿಯೊಬ್ಬ ಅಪಹರಿಸಲು ಯತ್ನಿಸಿದ ಘಟನೆ ಬೆಳಗಾವಿ ನಗರದ ಹಿಂದವಾಡಿ ಭಾಗದಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯಿಂದ ಅಲ್ಲಿನ ಜನರಲ್ಲಿ ಭೀತಿ ಆವರಿಸಿದೆ.
ಮಂಗಳವಾರ ಸಂಜೆ ಟ್ಯೂಷನ್ ತರಗತಿ ಮುಗಿಸಿ ಬಾಲಕಿ ಮನೆಗೆ ಮರಳುತ್ತಿದ್ದಾಗ ಹಿಂದವಾಡಿಯ ಮಹಾವೀರ್ ಗಾರ್ಡನ್ ಎದುರು ಸಂಜೆ 6.39ಕ್ಕೆ ಘಟನೆ ನಡೆದಿದೆ. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿಯ ಪತ್ತೆಗೆ ಪೊಲೀಸರು ಪ್ರತ್ಯೇಕ ತಂಡ ರಚಿಸಿದ್ದು, ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳದ ಸಮೀಪದ ಎರಡು ಮನೆಗಳಿಂದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡಿದ್ದಾರೆ. 40 ವರ್ಷ ಆಸುಪಾಸಿನ ವ್ಯಕ್ತಿಯೊಬ್ಬ ಬಾಲಕಿಯನ್ನು ಬಲವಂತವಾಗಿ ತನ್ನ ಭುಜದ ಮೇಲೆ ಹೊತ್ತೊಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಡಿಯೋದಲ್ಲಿ, ಬಾಲಕಿ ಕಿರುಚಿಕೊಂಡು, ಆತನ ಕೆನ್ನೆ ಮತ್ತು ಕುತ್ತಿಗೆಯನ್ನು ಎಳೆದಾಡಿದ್ದಾಳೆ. ಘಟನೆಯನ್ನು ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದು, ತಂದೆ ಮತ್ತು ಮಗಳ ನಡುವಿನ ತಮಾಷೆಯೆಂದು ಭಾವಿಸಿ ಹೋಗಿದ್ದಾರೆ. ಬಾಲಕಿಯ ಕಿರುಚಾಟವನ್ನು ಕೇಳಿದ ತೋಟಗಾರರೊಬ್ಬರು ಅನುಮಾನಗೊಂಡು ಅಪಹರಣಕಾರನನ್ನು ಬೆನ್ನಟ್ಟಿದ್ದಾರೆ. ಆಗ ಆರೋಪಿ ಬಾಲಕಿಯನ್ನು ಬಿಟ್ಟು ಸುಭಾಷ್ ಮಾರುಕಟ್ಟೆಯ ಕಡೆಗೆ ಓಡಿಹೋಗಿದ್ದಾನೆ. ಬಳಿಕ, ಘಟನಾ ಸ್ಥಳದಲ್ಲಿ ಜನರು ಜಮಾಯಿಸಿದ್ದು, ಬಾಲಕಿ ತನಗಾದ ಘೋರ ಅನುಭವವನ್ನು ವಿವರಿಸಿದ್ದಾಳೆ.
“ಆರೋಪಿಯ ಬಗ್ಗೆ ನಮಗೆ ಸುಳಿವು ಸಿಕ್ಕಿದ್ದು, ಶೀಘ್ರದಲ್ಲಿಯೇ ಬಂಧಿಸಲಾಗುವುದು” ಎಂದು ಉತ್ತರ ವಲಯದ ಐಜಿಪಿ ವಿಕಾಶ್ ಕುಮಾರ್ ವಿಕಾಶ್ ತಿಳಿಸಿದ್ದಾರೆ.