2025-26ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೆ ವಾರವಷ್ಟೇ ಬಾಕಿ ಇದ್ದು ಮೇ 29ರಂದು ಸರ್ಕಾರಿ ಶಾಲೆಗಳು ಪುನರಾರಂಭವಾಗಲಿವೆ. ಶಾಲೆಗಳ ಪುನರಾರಂಭಕ್ಕೆ ರಾಜ್ಯ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ನಡೆಸಿದ್ದು ಯಾವುದೇ ತೊಂದರೆ, ಕೊರತೆ ಆಗದಂತೆ ಎಲ್ಲಾ ತಯಾರಿಗಳನ್ನು ಪೂರ್ತಿಗೊಳಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆಗಳು ಆರಂಭಗೊಂಡು ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಪೂರೈಕೆ ವಿಳಂಬವಾಗುವುದು ಹೆಚ್ಚಿನ ವರ್ಷಗಳಲ್ಲಿ ಕೇಳಿ ಬರುವ ಆರೋಪವಾಗಿದೆ. ಆದರೆ 2025-26ನೇ ಸಾಲಿನಲ್ಲಿ ಪಠ್ಯ ಪುಸ್ತಕ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಶಾಲೆ ಪ್ರಾರಂಭವಾಗುವ ಮೊದಲೇ ರಾಜ್ಯದ ಎಲ್ಲಾ ಶಾಲೆಗಳಿಗೂ ಶೇ 100ರಷ್ಟು ಪಠ್ಯ ಪುಸ್ತಕಗಳ ಪೂರೈಕೆಗೆ ತಯಾರಿ ನಡೆಸಲಾಗಿದೆ ಎಂದು ಶಿಕ್ಷಣ ಅಧಿಕಾರಿಗಳು ತಿಳಿಸಿದ್ದಾರೆ.
ಈ ದಿನ.ಕಾಮ್ ಜೊತೆಗೆ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ ಕೆ ವಿ ತ್ರಿಲೋಕ್ ಚಂದ್ರ, “ರಾಜ್ಯದ ಸುಮಾರು 40 ಲಕ್ಷ ವಿದ್ಯಾರ್ಥಿಗಳಿಗೆ ಪಠ್ಯೆ ಪುಸ್ತಕ ಪೂರೈಕೆಯಾಗಬೇಕಿದೆ. ಪಠ್ಯ ಪುಸ್ತಕ ವಿಳಂಬವಾಗದಂತೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಶಾಲಾ ಆರಂಭಕ್ಕೆ ಮೊದಲೇ ರಾಜ್ಯದ ಎಲ್ಲಾ ಶಾಲೆಗಳಿಗೆ 100 ಶೇ ಪುಸ್ತಕ ತಲುಪಿಸಲಾಗುವುದು. ಶಾಲಾ ಆರಂಭದಲ್ಲೇ ಪುಸ್ತಕ ಮಕ್ಕಳ ಕೈ ಸೇರಲಿದೆ” ಎಂದು ತಿಳಿಸಿದ್ದಾರೆ.
ಈಗಾಗಲೇ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ 2025-26ನೇ ಸಾಲಿನ ಶೈಕ್ಷಣಿಕ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2025ರ ಮೇ 29ರಿಂದ ಶಾಲೆಗಳು ಆರಂಭಗೊಂಡು ಸೆಪ್ಟೆಂಬರ್ 19ರ ವರೆಗೆ ಮೊದಲ ಅವಧಿಯ ತರಗತಿಗಳು ನಡೆಯಲಿದೆ. 2025ರ ಸೆಪ್ಟೆಂಬರ್ 20ರಿಂದ ಅಕ್ಟೋಬರ್ 7ರ ವರೆಗೆ ದಸರಾ ರಜೆ ಇರಲಿದೆ. 2025ರ ಅಕ್ಟೋಬರ್ 8ರಿಂದ ಶಾಲೆಗಳು ಪುನಾರಂಭಗೊಂಡು 2026ರ ಏಪ್ರಿಲ್ 10ರವರೆಗೆ ಎರಡನೇ ಅವಧಿಯ ತರಗತಿಗಳು ಕಾರ್ಯನಿರ್ವಹಿಸಲಿದೆ. 2026ರ ಏಪ್ರಿಲ್ 11ರಿಂದ, 2026ರ ಮೇ 28ರವರೆಗೆ ಬೇಸಿಗೆ ರಜೆ ಇರಲಿದೆ ಎಂದು ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.
2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಮೇ 29ರಂದು ಶಿಕ್ಷಕರು ಹಾಜರಾಗಿ ಪೂರ್ವಸಿದ್ಧತೆ ನಡೆಸಬೇಕು. 2025ರ ಮೇ 30ರಿಂದ 2025ರ ಜೂನ್ 30ರವರೆಗೆ ದಾಖಲಾತಿ ಪ್ರಕ್ರಿಯೆ ನಡೆಸಬೇಕು. ಶಾಲೆಗೆ ಗೈರು ಹಾಜರಾಗುವ ಮಕ್ಕಳನ್ನು ಶಿಕ್ಷಣ ಸಂಯೋಜಕರು, ಬಿ.ಆರ್.ಪಿ. / ಸಿ.ಆರ್.ಪಿ. ತಂಡಗಳು ಪತ್ತೆ ಹಚ್ಚಿ ಶಾಲೆಗೆ ದಾಖಲಿಸಬೇಕು. ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಕರ್ನಾಟಕ ರಾಜ್ಯೋತ್ಸವವನ್ನು ಪ್ರತೀ ಶಾಲೆಯಲ್ಲಿ ಕಡ್ಡಾಯವಾಗಿ ಆಚರಿಸಬೇಕು ಎಂದು ಸೂಚಿಸಿದೆ.

2025-26ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಒಟ್ಟು 123 ರಜಾ ದಿನಗಳು ಇರಲಿದ್ದು 242 ಶಾಲಾ ದಿನಗಳು ಇರಲಿವೆ. 2025ರ ಜೂನ್ ತಿಂಗಳಲ್ಲಿ 6, ಜುಲೈನಲ್ಲಿ 4, ಆಗಸ್ಟ್‌ನಲ್ಲಿ 7, ಸೆಪ್ಟೆಂಬರ್ ನಲ್ಲಿ 14, ಅಕ್ಟೋಬರ್ ನಲ್ಲಿ 12, ನವೆಂಬರ್‌ನಲ್ಲಿ 7, ಡಿಸೆಂಬರ್‌ನಲ್ಲಿ 5, 2026ರ ಜನವರಿಯಲ್ಲಿ 6, ಫೆಬ್ರವರಿಯಲ್ಲಿ 4, ಮಾರ್ಚ್‌ನಲ್ಲಿ 8, ಏಪ್ರಿಲ್‌ನಲ್ಲಿ 22, ಮೇನಲ್ಲಿ 28 ದಿನಗಳು ರಜೆಗಳು ಇರಲಿವೆ. ಖಾಸಗಿ ಶಾಲೆಗಳು ಕ್ರಿಸ್ಮಸ್ ರಜೆಗೆ ಅರ್ಜಿ ಸಲ್ಲಿಸಿದರೆ ಶಿಕ್ಷಣ ಇಲಾಖಾ ಜಿಲ್ಲಾ ಉಪನಿರ್ದೇಶಕರು ಅನುಮೋದಿಸಬೇಕು. ಮುಷ್ಕರ, ಮಳೆ ಅಥವಾ ಇತರ ಕಾರಣಗಳಿಂದ ಶಾಲೆಗೆ ಹೆಚ್ಚುವರಿ ರಜೆ ಘೋಷಿಸಿದರೆ ನಂತರದ ರಜಾ ದಿನಗಳಲ್ಲಿ ಪೂರಕ ತರಗತಿಗಳನ್ನು ನಡೆಸಬೇಕು ಎಂದು ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ ಈ ದಿನ ಸಂಪಾದಕೀಯ | ‘ಹದ್ದು ಮೀರಿದ ಇಡಿ ವರ್ತನೆ’ಗೆ ಯಾರು ಕಾರಣ?
ಕರ್ನಾಟಕದಲ್ಲಿ ಅಂದಾಜು 49,679 ಸರ್ಕಾರಿ ಶಾಲೆಗಳಿವೆ. ಇದರಲ್ಲಿ ಸುಮಾರು 21,045 ಶಾಲೆಗಳು ಪ್ರಾಥಮಿಕ (1-5ನೇ ತರಗತಿ) ಮತ್ತು 6ರಿಂದ 8ನೇ ತರಗತಿವರೆಗಿನ 22,086ರಷ್ಟು ಉನ್ನತ ಪ್ರಾಥಮಿಕ ಶಾಲೆಗಳು, ಮತ್ತು 5,051ರಷ್ಟು ಪ್ರೌಢ ಶಾಲೆಗಳಿವೆ. ದಾಖಲಾತಿ ಕಡಿಮೆ ಎಂಬ ಕಾರಣಕ್ಕೆ ಯಾವುದೇ ಸರಕಾರಿ ಶಾಲೆಯನ್ನು ಮುಚ್ಚುವುದಿಲ್ಲ. ಇತರ ಸಮೀಪದ ಶಾಲೆಯೊಂದಿಗೆ ವಿಲೀನ ಮಾಡುವುದಿಲ್ಲ. ಆದರೆ ಶೂನ್ಯ ದಾಖಲಾತಿಯಾದರೆ ಮಾತ್ರ ತಾತ್ಕಾಲಿಕವಾಗಿ ಶಾಲೆಯನ್ನು ಮುಚ್ಚಲಾಗುತ್ತದೆ. ಭವಿಷ್ಯದಲ್ಲಿ ಮಕ್ಕಳ ದಾಖಲಾತಿಯಾದರೆ ಆ ಶಾಲೆಯನ್ನು ಪುನಾರಂಭಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಹಲವು ಕ್ರಮಗಳನ್ನು ಸರಕಾರ ಹಮ್ಮಿಕೊಂಡಿದೆ. ಮೇ ತಿಂಗಳಲ್ಲಿ ಮಕ್ಕಳ ದಾಖಲಾತಿಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ. ಜೂನ್ ತಿಂಗಳಲ್ಲಿ ಎಂದಿನಂತೆ ಸಾಮಾನ್ಯ ಅಭಿಯಾನ ನಡೆಯುತ್ತಿದೆ. ಮನೆ ಮನೆ ಭೇಟಿ, ಕರಪತ್ರ ಹಂಚಿಕೆ, ಜಾಥಾ ಮೊದಲಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಶಾಲಾ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಊಟ, ಶೂ, ಸಾಕ್ಸ್ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.