ಅಣ್ಣಾ ಈ ನನ್ನ ರಾಜ ಒಂದೇ ಕಣ್ಣಿದ್ದರೂ, ಹುಲಿಯ ತರಹ… ನೋಡಿಕೊಂಡು ಸರಿಯಾಗಿ ಕತ್ತಿಗೆ ಹೊಡೆಯುತ್ತೆ. ಜನರಿಗೆ ನನ್ನ ರಾಜ ಅಂದ್ರೆ ಬಹಳ ಪ್ರೀತಿ. ಇದರ ಮೇಲೆ ನೂರು, ಇನ್ನೂರು ರೂಪಾಯಿ ಬಾಜಿ ಕಟ್ಟುತ್ತಾರೆ. ನಾನು ಅಂಚೆಟ್ಟಿ, ಮಂಚಿಬೆಟ್ಟ, ಮರಳವಾಡಿ ಜಾತ್ರೆಗೆ ಹೋದರೆ ಬೇರೆಯವರು ನನ್ನ ಕೋಳಿ ಜೊತೆ ಜಗಳಕ್ಕೆ ಬರಲು ಅಂಜುತ್ತಾರೆ. ಎಲ್ಲಾ ನನ್ನ ರಾಜನದ್ದೇ ಸಂಪಾದನೆ ಎಂದು ತನ್ನ ಒಕ್ಕಣ್ಣಿನ ಹುಂಜನನ್ನು ಹೊಗಳತೊಡಗಿದ.
ತಮಿಳುನಾಡು ಮತ್ತು ಕರ್ನಾಟಕದ ಗಡಿಭಾಗದಲ್ಲಿ ʼಥಳಿʼ ಎನ್ನುವ ಒಂದು ಹಳ್ಳಿಯ ಸಮೀಪವಿದ್ದ ಜೀವ ವೈವಿಧ್ಯತೆ, ಕೃಷಿ ಧಾನ್ಯಗಳ ತಳಿ ಸಂರಕ್ಷಣೆಯಲ್ಲಿ ತೊಡಗಿದ್ದ ಸಂಸ್ಥೆಯೊಂದರಲ್ಲಿ ಕೃಷಿ ವ್ಯವಸ್ಥಾಪಕನಾಗಿ ನನ್ನ ಮೊದಲ ವೃತ್ತಿ ಜೀವನ ಆರಂಭವಾಗಿತ್ತು. ತೋಟದಲ್ಲಿಯೇ ನನ್ನ ವಾಸ, ಸಮೀಪದಲ್ಲಿ ಯಾವುದೇ ಜನವಸತಿಯಿರಲಿಲ್ಲ, ಬೆಳಿಗ್ಗೆ ದೂರದ ಊರಿಂದ ಕೆಲಸಗಾರರೂ ಬಂದು ಕೆಲಸ ಮಾಡಿ ಹೋಗುತ್ತಿದ್ದರು. ಆ ಸಮಯದಲ್ಲಿ ಇನ್ನೂ ಪೋನ್ ಬಂದಿರಲಿಲ್ಲ. ಭಾನುವಾರವಷ್ಟೇ ಹೊರ ಜಗತ್ತು ನೋಡುವ ಭಾಗ್ಯ ದೊರಕುತ್ತಿತ್ತು. ದೂರದ ಆನೇಕಲ್ ಅಥವಾ ತಮಿಳುನಾಡಿನ ಹೊಸೂರಿಗೆ ಹೋಗಿ ಅಲ್ಲಿಯೇ ಊಟ ಮಾಡಿ, ತಮಿಳು ಇಲ್ಲವೇ ತೆಲುಗು ಸಿನಿಮಾ ನೋಡಿ ಬರುವುದು ವಾಡಿಕೆಯಾಗಿತ್ತು. ಎರಡು ಅಥವಾ ಮೂರು ತಿಂಗಳಿಗೊಮ್ಮೆ ಮಳವಳ್ಳಿ ಸಮೀಪದ ನಮ್ಮ ಊರಿಗೆ ಹೋಗಿ ಬರುತ್ತಿದ್ದೆ. ಮೂರು ದಿನಕ್ಕಿಂತ ಹೆಚ್ಚು ರಜಾ ತೆಗೆದುಕೊಂಡವರನ್ನು ಅವರ ಕಷ್ಟ, ಕಾರಣ ಕೇಳದೇ ಕೆಲಸದಿಂದ ತೆಗೆದು ಹಾಕುವುದು ಅವರಿಗೆ ಖಯಾಲಿಯಾಗಿತ್ತು. ರಜಾ ಬೇಕೆಂದಾಗ ಶನಿವಾರ ಮಧ್ಯಾಹ್ನ ಥಳಿ-ಮರಳವಾಡಿ-ಕನಕಪುರ ಮಾರ್ಗವಾಗಿ ಊರಿಗೆ ಹೋಗಿ, ಸೋಮವಾರ ಬೆಳಿಗ್ಗೆ ಹಿಂತಿರುಗುತ್ತಿದ್ದೆ. ಹೀಗೆಯೇ ಒಂದು ಶನಿವಾರ ರಜಾ ಕೇಳಿ ಊರಿಗೆ ಹೊರಟೆ. ಥಳಿಗೆ ಬಂದು, ಮೂಲೆಯಲ್ಲಿರುವ ಬಸ್ ಸ್ಟ್ಯಾಂಡ್ ಗೆ ಬಂದು ಅಲ್ಲಿನ ಕಟ್ಟೆಯ ಮೇಲೆ ಕುಳಿತೆ. ಅಲ್ಲೊಬ್ಬ ಬಣ್ಣದ ಕೊಳಕಾಗಿದ್ದ ಲುಂಗಿ ತೊಟ್ಟು, ಅಲ್ಲಲ್ಲಿ ತೂತು ಬಿದ್ದ ಬನಿಯನ್ ಧರಿಸಿ, ಒಂದು ಹುಂಜ ಹಿಡಿದು ಕುಳಿತಿದ್ದ. ಅದರ ಒಂದು ಕಣ್ಣು ಕುರುಡಾಗಿತ್ತು. ಕಣ್ಣಿನ ಪಕ್ಕ ಗಾಯವಾಗಿದ್ದ ಕುರುಹುಗಳಿದ್ದವು.
ಥಳಿ ಊರಿನಲ್ಲಿ ದಿನಕ್ಕೆ ಮೂರು ಇಲ್ಲವೇ ನಾಲ್ಕು ಬಸ್ಸುಗಳು ಮಾತ್ರ ಬರುವ ಜಾಗವದು. ಹಾಗಾಗಿ ಗಂಟೆಗಟ್ಟಲೇ ನಿಧಾನಕ್ಕೆ, ಯಾವಾಗಲೋ ಬಂದು ಹೋಗುತ್ತಿದ್ದವು. ಎಲ್ಲಾ ಊರುಗಳಲ್ಲಿ ಇರುವಂತೆ ಅಲ್ಲಿಯೂ ಜನರು ಕುಳಿತು ಹರಟೆ ಹೊಡೆಯಲು ರಸ್ತೆಯ ಕೊನೆಯಲ್ಲಿ ಒಂದು ನೆರಳಿನ ಕಟ್ಟೆಯಿತ್ತು, ಸುತ್ತ ಹಳೆಯದಾದ ನಾಲ್ಜೈದು ಹಳ್ಳಿ ಹೆಂಚಿನ ಮನೆಗಳು. ಅಲ್ಲಿಯೇ ಹಳೆಯದಾಗಿರುವ ಖಾಸಗಿ ಬಸ್ಸುಗಳು ಬಂದು ಜನರನ್ನು ಜೊತೆಗೆ ಕುರಿ, ಮೇಕೆಗಳನ್ನು ತುಂಬಿಕೊಂಡು ಹೋಗುತ್ತಿದ್ದವು. ಆಗ ಮಟ ಮಟ ಮಧ್ಯಾಹ್ನ ಎರಡು ಗಂಟೆಯ ಸುಮಾರು, ಅಷ್ಟೇನು ಬಿಸಿಲಿರಲಿಲ್ಲ, ತಣ್ಣನೆಯ ವಾತಾವರಣ. ಮೆಲ್ಲಗೆ ನಿದ್ರೆಗೆ ಜಾರಬಹುದಾದ ಆ ಕಟ್ಟೆಯ ಮೇಲೆ ಕತೆಯ ನಾಯಕ ಲುಂಗಿ, ತೂತುಗಳು ಬಿದ್ದಿದ್ದ ಬನಿಯನ್ ನಲ್ಲಿ ತನ್ನ ವಯಸ್ಸಾದ ಬಿಳಿಯ ಬಣ್ಣ, ಅಲ್ಲಲ್ಲಿ ಪುಕ್ಕ ಕಿತ್ತು ಬಂದಿದ್ದ ಒಂದೇ ಕಣ್ಣಿನ ಹುಂಜದೊಂದಿಗೆ ಕುಳಿತಿದ್ದ. ಕೆದರಿದ ಕೆಂಚಗಿನ ಕೂದಲು, ಜೊತೆಗೆ ಕೆಲ ಹುಡುಗರು, ಕೆಲವು ವಯಸ್ಸಾದವರು ತಮ್ಮಷ್ಟಕ್ಕೆ ತಾವೇ ಹರಟುತ್ತಾ ಮಗ್ನರಾಗಿದ್ದರು. ಸ್ವಲ್ಪ ದಪ್ಪನೆಯ ಶರೀರದ ಆತನ ತಲೆ ಕೂದಲು ಬಾಚಣಿಗೆ ಕಂಡು ಬಹಳ ದಿನಗಳಾಗಿದ್ದವು. ಕೆದರಿದ ಕೆಂಚಗಿನ ಕೂದಲು, ಎಣ್ಣೆ, ಧೂಳು ಮೆತ್ತಿದ ಮುಖ, ಕೆಂಪಗಿನ ಅತ್ತಿತ್ತ ನೋಡುತ್ತಿದ್ದ ಆತನ ಮೆಳ್ಳಗಣ್ಣು ಆತ ಸಾಮಾನ್ಯನಲ್ಲ ಎಂದೂ ಸೂಚಿಸುತ್ತಿತ್ತು.

ಬಹಳ ಹೊತ್ತು ಆತ ಕುಳಿತಿದ್ದರೂ ಯಾರೂ ಆತನನ್ನು ಗಮನಿಸಿರಲಿಲ್ಲ. ಕೊನೆಗೆ ಆತನೇ ಮೌನ ಮುರಿದ. ಕುತೂಹಲಭರಿತವಾಗಿ, “ಅಣ್ಣಾವ್ರೆ! ನಿಮಗೆ ಈ ಹುಂಜ ನೋಡಿದ್ರೆ ಏನ್ ಅನ್ನಿಸುತ್ತೆ” ಎಂದ. ಥಟ್ಟನೇ ಎಲ್ಲರೂ ಆತನತ್ತ ತಿರುಗಿದರು. ಯಾರಿಂದಲೂ ಏನೂ ಮಾತು ಬರಲಿಲ್ಲ.
“ನೋಡಿ! ಇದು ಯಾವ ತರಹದ ಹುಂಜ ಅಂತಾ ಹೇಳಿ” ಅಂತ ಎಲ್ಲರನ್ನೂ ಮತ್ತೆ ಕೇಳಿದ. ಆತ ಒಳ ಮನದ ಬಯಕೆಯಂತೆ ಯಾರಿಂದಲೂ ಉತ್ತರ ಬಾರದಿದ್ದಾಗ, “ಅಣ್ಣಾ! ಇದು ಜಗಳವಾಡುವ ಹುಂಜ. ಐದು ವರುಷದಿಂದ ಸಾಕ್ತಾ ಇದ್ದೇನೆ. ಇದು ನನ್ನ ಮಗ ರಾಜ ಮರಿ ಎಂದ. ಎಲ್ಲಿ ಹೋದರೂ ಹಿಂದೆನೇ ಓಡಿ ಬರುತ್ತೆ, ಅದಕ್ಕೆ ನನ್ನನ್ನು ಕಂಡರೇ ಪ್ರಾಣ. ನಾನು ಅಷ್ಟೇ ಅದಕ್ಕೆ ಚೆನ್ನಾಗಿ ಕಾಳು ಕಡ್ಡಿ ಹಾಕಿ ಸಾಕ್ತಾ ಇದ್ದೇನೆ. ಇವತ್ತು ಡಂಕಣಿಕೋಟೆ ಜಾತ್ರೆಗೆ ಇದರ ಜೊತೆಗೆ ಹೋಗಿದ್ದೆ. ಅಲ್ಲಿ ಕೋಳಿ ಅಂಕ ಇತ್ತು” ಎಂದೂ ತೊದಲುತ್ತಾ ಹೇಳತೊಡಗಿದ. ಮೈ ಮೇಲೆ ದೇವರಿರುವುದು ಖಾತರಿಯಾಯಿತು.
ನನಗೆ ಅದುವರೆಗೆ ಕೋಳಿ ಜಗಳ ಆಟದ ಬಗ್ಗೆ ತಿಳಿದಿರಲಿಲ್ಲ. ನನಗೂ ಒಂದು ತರಹದ ಖುಷಿಯಾಗಿ ಆತನ ಮಾತುಗಳನ್ನು ಒಬ್ಬ ವಿದೇಯ ಶಿಷ್ಯನಂತೆ ತದೇಕಚಿತ್ತವಾಗಿ ಆಲಿಸತೊಡಗಿದೆ. ನನ್ನ ರಾಜಮರಿ ಎರಡು ವರುಷಗಳಿಂದ ಯಾವತ್ತೂ ಸೋತಿಲ್ಲ, ಇದು ಐವತ್ತಕ್ಕೂ ಹೆಚ್ಚು ಹುಂಜುಗಳನ್ನು ಸೋಲಿಸಿದೆ ಮತ್ತು ಕತ್ತರಿಸಿ ಹಾಕಿದೆ ಎಂದಾಗ ಆಶ್ಚರ್ಯವಾಗಿ ಹುಂಜ ಕತ್ತರಿಸಿ ಹಾಕುವುದು ಎಂದರೇ ಹೇಗೆ ಕೇಳಿದೆ!. “ನೋಡು ತಮ್ಮ ಅದರ ಕಾಲಿನ ಬೆರಳನ್ನು ಸರಿಯಾಗಿ ನೋಡು. ಎಷ್ಟು ಗಟ್ಟಿಯಿದೆಯಲ್ಲಾ? ಕೋಳಿ ಜಗಳ ಶುರುವಾಗುವ ಮುನ್ನ ಅದರ ತುದಿಗೆ ಚೂಪಾದ ಬ್ಲೇಡನ್ನು ಕಟ್ಟುತ್ತೇನೆ. ಜಗಳ ಶುರುವಾದ ಮೇಲೆ ಅದು ಜೋರಾಗಿ ಎಗರಿ, ಎಗರಿ ತನ್ನ ಎದುರಾಳಿ ಹುಂಜದ ಮೇಲೆ ಆಕ್ರಮಣ ಮಾಡುತ್ತದೆ. ಮೊದಲಿಗೆ ಇದು ಬಹಳ ಏಟು ತಿನ್ನುತ್ತಿತ್ತು. ನಾಲ್ಕು ವರುಷದ ಹಿಂದೆ ಧರ್ಮಪುರಿಯಲ್ಲಿ ನಡೆದಿದ್ದ ಒಂದು ಕೋಳಿ ಜಗಳದಲ್ಲಿ ಎದುರಾಳಿ ಹುಂಜದ ಬ್ಲೇಡಿನಿಂದ ಇದರ ಕಣ್ಣಿಗೆ ಗಾಯ ಮಾಡಿತ್ತು. ಅವತ್ತೇ ನನ್ನ ರಾಜನಿಗೆ ಒಂದು ಕಣ್ಣು ಹೋಯಿತು. ಅದರ ಮೈ ಮೇಲಿದ್ದ ಗಾಯಗಳು, ಅದರ ಕಣ್ಣುಗಳನ್ನು ನೋಡಿ ಅದು ಇದುವರೆಗೆ ಮಾಡಿರಬಹುದಾದ ಅದಕ್ಕಾಗಿರಬಹುದಾದ ಗಾಯಗಳು ಬಗ್ಗೆ ಯೋಚಿಸತೊಡಗಿದೆ.
ಇದನ್ನೂ ಓದಿ ಈ ದಿನ ಸಂಪಾದಕೀಯ | ‘ಹದ್ದು ಮೀರಿದ ಇಡಿ ವರ್ತನೆ’ಗೆ ಯಾರು ಕಾರಣ?
“ಅಣ್ಣಾ ಈ ನನ್ನ ರಾಜ ಒಂದೇ ಕಣ್ಣಿದ್ದರೂ, ಹುಲಿಯ ತರಹ… ನೋಡಿಕೊಂಡು ಸರಿಯಾಗಿ ಕತ್ತಿಗೆ ಹೊಡೆಯುತ್ತೆ. ಜನರಿಗೆ ನನ್ನ ರಾಜ ಅಂದ್ರೆ ಬಹಳ ಪ್ರೀತಿ. ಇದರ ಮೇಲೆ ನೂರು, ಇನ್ನೂರು ರೂಪಾಯಿ ಬಾಜಿ ಕಟ್ಟುತ್ತಾರೆ. ನಾನು ಅಂಚೆಟ್ಟಿ, ಮಂಚಿಬೆಟ್ಟ, ಮರಳವಾಡಿ ಜಾತ್ರೆಗೆ ಹೋದರೆ ಬೇರೆಯವರು ನನ್ನ ಕೋಳಿ ಜೊತೆ ಜಗಳಕ್ಕೆ ಬರಲು ಅಂಜುತ್ತಾರೆ. ಪ್ರತಿ ಜಾತ್ರೆ ಬಂದಾಗಲೂ ನಮ್ಮ ಮನೆಯಲ್ಲಿ ಪುಲ್ ಚಿಕನ್ ಪೀಸ್. ನನ್ನ ಹೆಂಡತಿ ಮತ್ತು ಮಕ್ಕಳಿಗೆ ಹಬ್ಬವೋ ಹಬ್ಬ. ಅಣ್ಣಾ… ಇದು ಸರಿಯಾಗಿ ನೋಡಿ ಎದುರಾಳಿ ಹುಂಜದ ಕತ್ತಿಗೆಗೆ ಹೊಡೆಯುತ್ತೆ, ಆಗ ಆ ಹುಂಜ ಮಟಾಶ್. ಅದು ನನ್ನ ಪಾಲಾಗುತ್ತೆ. ಜೊತೆಗೆ ಮಸಾಲೆಗೆ, ಎಣ್ಣೆಗೆ ಜೂಜಿನ ಹಣವೂ ಸಿಗುತ್ತೆ. ನಾನು ಹೊಟ್ಟೆಗೆ, ಬಟ್ಟೆಗೆ ಬೇರೆ ಯಾವ ಕೆಲಸಾನೂ ಮಾಡಲ್ಲ. ಎಲ್ಲಾ ನನ್ನ ರಾಜನದ್ದೇ ಸಂಪಾದನೆ” ಎಂದು ತನ್ನ ಒಕ್ಕಣ್ಣಿನ ಹುಂಜನನ್ನು ಹೊಗಳತೊಡಗಿದ. ನಿಧಾನಕ್ಕೆ ಆತನ ಮಾತಿನ ಮೋಡಿಗೆ ಕೇಳುವವರ ಸಂಖ್ಯೆ ಒಂದೊಂದಾಗಿ ಹೆಚ್ಚಾಗುತ್ತಿತ್ತು. ಜನರ ಉತ್ಸಾಹ ನೋಡಿ ಅವನ ಮಾತು ಇನ್ನೂ ರಂಗೇರುತ್ತಿತ್ತು.

ಗಂಗಾಧರ ಸ್ವಾಮಿ
ಕೃಷಿ ಅಭಿವೃದ್ಧಿ ಸಲಹೆಗಾರ, ದಾವಣಗೆರೆ