ನಮ್ಮ ಪಕ್ಷದ ಅಭಿಪ್ರಾಯಗಳನ್ನು ಮಂಡಿಸುವಾಗ ಅಥವಾ ಬಿಜೆಪಿಯನ್ನು ಬಯಲು ಮಾಡುವಾಗ ಆಕ್ರಮಣಕಾರಿಯಾಗಿ ಮಾತನಾಡಿ. ಆದರೆ ಬಿಜೆಪಿಯ ಬಲೆಗೆ ಬೀಳಬೇಡಿ ಎಂದು ರಾಹುಲ್ ಗಾಂಧಿ ಕಾಂಗ್ರೆಸ್ ವಕ್ತಾರರಿಗೆ ಕಿವಿಮಾತು ಹೇಳಿದ್ದಾರೆ.
ನವದೆಹಲಿಯ ಇಂದಿರಾ ಭವನದಲ್ಲಿ ಕಾಂಗ್ರೆಸ್ ವಕ್ತಾರರಿಗೆ ತರಬೇತಿ ನೀಡಿದ ರಾಹುಲ್ ಗಾಂಧಿ, “ನರೇಂದ್ರ ಮೋದಿ ಸರ್ಕಾರವು ಒತ್ತಡದಿಂದ ಘೋಷಿಸಿದ ಜಾತಿ ಜನಗಣತಿಯ ಶ್ರೇಯಸ್ಸು ಕಾಂಗ್ರೆಸ್‌ಗೆ ಸಿಗುವಂತೆ ನೋಡಿಕೊಳ್ಳಬೇಕು” ಎಂದು ತಿಳಿಸಿದರು.
ಇದನ್ನು ಓದಿದಿದ್ದೀರಾ? ಶೇ.50 ಮಹಿಳಾ ಮುಖ್ಯಮಂತ್ರಿಗಳು ಕಾಂಗ್ರೆಸ್ ಗುರಿ: ರಾಹುಲ್ ಗಾಂಧಿ
ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಜಾತಿ ಜನಗಣತಿಯನ್ನು ಒಪ್ಪದ ಬಗ್ಗೆಯೂ ರಾಹುಲ್ ಗಾಂಧಿ ಮಾತನಾಡಿದ್ದಾರೆ. “ಹಿಂದಿನ ಕಾಂಗ್ರೆಸ್ ಸರ್ಕಾರಗಳು ಮಂಡಲ್ ಯುಗಕ್ಕೆ ಬಹಳ ಹಿಂದೆಯೇ ಒಬಿಸಿ ಕೋಟಾವನ್ನು ಒದಗಿಸಿವೆ. ಭಾರತದಲ್ಲಿ ಜಾತಿ ಒಂದು ವಾಸ್ತವ. ಹಾಗಾಗಿ ಈ ಹಿಂದೆ ನಮ್ಮ ನಾಯಕರು ಅನುಸರಿಸಿದ ಮಾರ್ಗವನ್ನು ನಾವು ಯಾಕೆ ಅಳವಡಿಸಿಕೊಳ್ಳಬೇಕು” ಎಂದು ರಾಹುಲ್ ಪ್ರಶ್ನಿಸಿದ್ದಾರೆ.
“ಸದ್ಯ ಮಾಧ್ಯಮಗಳು ನಮ್ಮ ವಕ್ತಾರರಿಗೆ ಪರವಾದ ವಾತಾವರಣವನ್ನು ಹೊಂದಿಲ್ಲ. ಆದರೆ ನಾವು ನಮ್ಮ ಗುರಿಯನ್ನು ತಪ್ಪಬಾರದು. ಬಿಜೆಪಿಗೆ ಸಹಾಯ ಮಾಡುವಂತೆ ಟಿವಿ ಚರ್ಚೆಗಳನ್ನು ನಡೆಸಲಾಗುತ್ತದೆ. ಆದರೆ ನೀವು ಈ ವಾತಾವರಣದಲ್ಲಿಯೂ ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ ಎಂದು ನನಗೆ ತಿಳಿದಿದೆ” ಎಂದು ವಕ್ತಾರರನ್ನು ರಾಹುಲ್ ಗಾಂಧಿ ಶ್ಲಾಘಿಸಿದರು.
