ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು ಬೆಣಗಾಲು ಗ್ರಾಮದ ಮಹಾಚೇತನ ಯುವ ವೇದಿಕೆ ವತಿಯಿಂದ ಸಾವಿತ್ರಿ ಬಾಯಿ ಪುಲೆ ಪಾಠ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ, ಪಿಯುಸಿ ಬಳಿಕೆ ಮುಂದೇನು? ಎನ್ನುವ ಕುರಿತಾಗಿ ವಿಚಾರ ಸಂಕೀರಣ ನಡೆಯಿತು.
ಕುಶಲನಗರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರಾದ ಸಿ. ಎಂ. ರಾಜೇಶ್ ಮಾತನಾಡಿ ” ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಬಾರದು. ಹೆಚ್ಚು ಅಂಕ ಬಂದರೆ ಹಿಗ್ಗುವುದು, ಕಡಿಮೆ ಅಂಕ ಬಂದಾಗ ಕುಕ್ಕುವ ಅಗತ್ಯವಿಲ್ಲ. ಯಾವುದೇ ಹಿಂಜರಿಕೆ, ನಾನು ಕಡಿಮೆ ಅಂಕ ಗಳಿಸಿದೆ ಎನ್ನುವ ಮುಜುಗರ ಪಡುವುದನ್ನು ಬಿಡಬೇಕು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದ ಆಯ್ಕೆಗಳು ಸಹಜವಾಗಿ ಕೊರತೆ ಇರುತ್ತದೆ. ಆಯ್ಕೆ ಯಾವತ್ತಿಗೂ ನಿಮ್ಮ ಇಚ್ಛಾನುಸಾರ ಇದ್ದರೆ ಸೂಕ್ತ. ಮನೆಯವರ ಬಲವಂತಕ್ಕೆ ಕಾಲೇಜು ಸೇರಿ ನನಗೆ ಕಲಿಕೆ ಕಷ್ಟವಾಗುತ್ತಿದೆ ಅನ್ನುವ ಖಿನ್ನತೆ ಬರ ಕೂಡದು. ಅಲ್ಲದೆ ಪೋಷಕರು ಸಹ ಸಹಕರಿಸಬೇಕು.”
” ಮಕ್ಕಳಿಗೆ ಒತ್ತಡ ಹೇರುವುದು, ಹೆಚ್ಚು ಅಂಕಗಳಿಸಿದ ಮಕ್ಕಳ ಬಗ್ಗೆ ಉದಾಹರಣೆ ಕೊಟ್ಟು ಮಾನಸಿಕವಾಗಿ ಕುಗ್ಗಿಸುವ ಕೆಲಸ ಎಂದಿಗೂ ಮಾಡಬಾರದು. ಪಟ್ಟಣ ಪ್ರದೇಶದಲ್ಲಿ ಓದುವ ಮಕ್ಕಳಿಗೆ ಸಿಗುವ ಅನುಕೂಲ ಗ್ರಾಮೀಣ ಭಾಗದ ಮಕ್ಕಳಿಗೆ ಸಿಗುವುದಿಲ್ಲ. ಅಂತಹ ವ್ಯವಸ್ಥೆ ಇಲ್ಲದೆಯೂ ಸಹ ಸಾಕಷ್ಟು ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗ, ಖಾಸಗಿ ಉದ್ಯೋಗ ಇಲ್ಲವೇ ಸ್ವಂತ ಉದ್ದಿಮೆ ಸ್ಥಾಪಿಸಲು ಸಹಕಾರಿ. ಆಯ್ಕೆಯು ಸಹ ಸಕಾಲದಲ್ಲಿ ಸೂಕ್ತವಾಗಿ ಇದ್ದರೆ. ನಿಮ್ಮ ಆಯ್ಕೆ ನಿಮ್ಮದೇ ಹಾದಿಯಲ್ಲಿ ಸಾಗಲು ಸಹಕರಿಸುತ್ತದೆ. ಅಲ್ಲದೆ, ಕೆಲಸ ಗಳಿಸಲು ಓದು ಅನ್ನುವಂತೆ ಆಗದೆ. ಜ್ಞಾನರ್ಜನೆ ಬಹಳ ಮುಖ್ಯ ಅನ್ನುವುದು ಮಕ್ಕಳ ಅರಿವಿನಲ್ಲಿ ಇರಬೇಕು.”
” ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಬದುಕಿನಲ್ಲಿ ತಿರುವು ಕೊಡುವ ಸಂದರ್ಭ. ಆಯ್ಕೆಯು ಸಹಜವಾಗಿ ಕೂಡಿರಬೇಕು ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಸಹಕಾರಿ. ನಮ್ಮಿಂದ ಸಾಧ್ಯವಿಲ್ಲ ಅನ್ನುವ ಮನೋಧೋರಣೆ ಇರಬಾರದು. ಮನೆಯ ಆರ್ಥಿಕ ಪರಿಸ್ಥಿತಿ, ಮನೆಯಲ್ಲಿನ ಜಂಜಾಟಗಳು ನಮಗೆ ಉನ್ನತ ವ್ಯಾಸಂಗಕ್ಕೆ ತೋಡಕಾಗುತ್ತಿದೆ ಎಂದುಕೊಳ್ಳದೆ ಉತ್ತಮವಾಗಿ ಓದುವ ಕಡೆಗೆ ಲಕ್ಷ್ಯ ವಹಿಸಬೇಕು.
ಓದುವ ಹಂತಗಳಲ್ಲಿ ಸ್ಕಾಲರ್ಶಿಪ್ ಪಡೆದುಕೊಳ್ಳುವುದು ರಾಜ್ಯ, ಕೇಂದ್ರ ಸರ್ಕಾರಗಳ ಯೋಜನೆಗಳಲ್ಲಿ ಉನ್ನತ ವ್ಯಾಸಂಗಕ್ಕೆ ಇರುವ ಧನ ಸಹಾಯ ಮಾಹಿತಿ, ಬ್ಯಾಂಕ್ ಮೂಲಕ ನೆರವು ಇತ್ಯಾದಿ ಮಾಹಿತಿಗಳ ಅರಿವು ಮೂಡಿಸಿಕೊಳ್ಳಬೇಕು. ಆತ್ಮಸ್ಥೈರ್ಯದಿಂದ ವಿದ್ಯಾರ್ಥಿಗಳು ಓದಿನ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಬಡವರಿಗೆ ದಕ್ಕಲಿಲ್ಲ ವಸತಿ ಯೋಜನೆ
ಇಂಜಿನಿಯರ್ ವಿಜಯ್ ಕುಮಾರ್, ವಿದ್ಯಾರ್ಥಿಗಳಾದ ಸಾನ್ಯ, ರಕ್ಷಿತಾ, ಮೌಲ್ಯ, ಐಶ್ವರ್ಯ, ಬಿ. ಜೆ. ರೋಹಿತ್, ಬಿ. ಆಕಾಶ್, ಶರತ್ ಕಿಶೋರ್, ಬಿ. ಆರ್. ಪವನ್, ಪ್ರಶಾಂತ್, ಡೀನ, ಯೋಕ್ಷಾ, ಬಿ. ಆರ್. ಪವನ್, ದಿನೇಶ್, ಸೋನಿತ್, ಶ್ರೀಹಾನ್, ಪ್ರಣವರಾಜ್ ಹಾಗೂ ಪೋಷಕರು ಸೇರಿದಂತೆ ಇನ್ನಿತರರು ಇದ್ದರು.