17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಹಿನ್ನಲೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿಯ ರಾಮಮಂದಿರದ ಲೋಕೇಶ್ವರ ಮಹಾರಾಜ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಬಾಗಲಕೋಟೆಯ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಹಿಳಾ ಠಾಣೆ ಪೊಲೀಸರು ಮೂಡಲಗಿ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದರು. ಸದ್ಯ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ.
ಮೇ 13ರಂದು ಮನೆಗೆ ಬಿಡುವುದಾಗಿ ಬಾಲಕಿಯನ್ನು ಸ್ವಾಮೀಜಿ ರಾಯಚೂರಿಗೆ ಕರೆದೊಯ್ದಿದ್ದರು. ಮೇ 13, 14ರಂದು ರಾಯಚೂರಿನಲ್ಲಿ ಎರಡು ದಿನ ಇದ್ದರು. ಬಳಿಕ 15ರ ರಾತ್ರಿ ಬಾಗಲಕೋಟೆಯಲ್ಲಿ ವಾಸ್ತವ್ಯ ಹೂಡಿದ್ದರು. ಎರಡೂ ಕಡೆ ವಾಸ್ತವ್ಯ ಇದ್ದಾಗಲೂ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ ಯಾರ ಬಳಿಯಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿಯೂ ಕೇಳಿಬಂದಿದೆ.
ಮೇ 16ರಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಸ್ವಾಮೀಜಿ ಬಾಲಕಿಯನ್ನು ಬಿಟ್ಟು ಹೋಗಿದ್ದರು. ಈ ಬಗ್ಗೆ ಮೇ 17ರಂದು ಬಾಗಲಕೋಟೆ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬಳಿಕ ಮಹಿಳಾ ಠಾಣೆ ಪೊಲೀಸರು ಪ್ರಕರಣವನ್ನು ಮೂಡಲಗಿ ಠಾಣೆಗೆ ವರ್ಗಾಯಿಸಿದ್ದರು.
ದೂರು ದಾಖಲಾಗುತ್ತಿದ್ದಂತೆ ಲೋಕೇಶ್ವರ ಸ್ವಾಮೀಜಿಯ ರಾಮಮಂದಿರ ಮಠಕ್ಕೆ ತೆರಳಿದ ಪೊಲೀಸರು ಮಠದಲ್ಲಿ ಶೋಧಕಾರ್ಯ ನಡೆಸಿದ್ದರು. ಕಳ್ಳ ಸ್ವಾಮೀಜಿಯ ಮಠದಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿರುವುದು ತಿಳಿದುಬಂದಿದೆ. ಹೀನಕೃತ್ಯವೆಸಗಿದ ಸ್ವಾಮೀಜಿಯನ್ನು ಬಂಧಿಸಿದ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಆರಾಮ ಇಲ್ಲದೇ ಇದ್ದಾಗ ಬಾಲಕಿಯ ತಂದೆ-ತಾಯಿಯೇ ಬಾಲಕಿಯನ್ನು ವಾರಗಟ್ಟಲೆ ಮಠದಲ್ಲೇ ಬಿಟ್ಟು ಹೋಗುತ್ತಿದ್ದರು. ಅದನ್ನೇ ಸ್ವಾಮೀಜಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಮಠದಲ್ಲಿ ಸಾಕಷ್ಟು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದರೆಂಬ ಆರೋಪವೂ ಇದೆ.
ಇದನ್ನೂ ಓದಿದ್ದೀರಾ? ದಾವಣಗೆರೆ | ಪರಿಶಿಷ್ಟ ಜಾತಿ ಗಣತಿ ಶೇ.100ರಷ್ಟು ಸಾಧನೆಯ ಹೆಗ್ಗಳಿಕೆ; ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.
2021ರಲ್ಲಿ ಸ್ವಾಮೀಜಿಗೆ ಧರ್ಮದೇಟು ನೀಡಿ ಗ್ರಾಮಸ್ಥರು ಬುದ್ಧಿವಾದ ಹೇಳಿದ್ದರು. ಇದೀಗ 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಹಿನ್ನಲೆ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಸ್ವಾಮೀಜಿಯನ್ನು ಯಾವುದೇ ಕಾರಣಕ್ಕೂ ಬಿಡದಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಘಟನೆ ಸಂಬಂಧ ಮಾಹಿತಿಗಾಗಿ ಈ ದಿನ.ಕಾಮ್ ರಾಯಬಾಗ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದೆಯಾದರೂ ಕರೆಗೆ ಯಾರೂ ಲಭ್ಯವಾಗಿಲ್ಲ.