ಈ ವರ್ಷ ನಿರೀಕ್ಷೆಗೂ ಮುನ್ನವೇ ಮುಂಗಾರು ಕೇರಳ ಕರಾವಳಿಯನ್ನು ಪ್ರವೇಶಿಸಿದೆ. ಈ ಹಿಂದೆ ಮೇ 27ರ ವೇಳೆಗೆ ಕೇರಳದಲ್ಲಿ ಮುಂಗಾರು ಆರಂಭವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಹೇಳಿತ್ತು. ಆದರೆ ಇದೀಗ ನಿರೀಕ್ಷೆಗೂ ಮೂರು ದಿನ ಮುನ್ನವೇ ಮಾನ್ಸೂನ್ ಆರಂಭವಾಗಿದೆ.
ಸಾಮಾನ್ಯವಾಗಿ, ನೈಋತ್ಯ ಮುಂಗಾರು ಜೂನ್ 1ರ ವೇಳೆಗೆ ಕೇರಳವನ್ನು ಪ್ರವೇಶಿಸುತ್ತದೆ. ಜುಲೈ 8ರ ವೇಳೆಗೆ ಇಡೀ ದೇಶದಲ್ಲಿ ಮುಂಗಾರು ಆರಂಭಿಸುತ್ತದೆ. ಸೆಪ್ಟೆಂಬರ್ 17ರ ಸುಮಾರಿಗೆ ವಾಯುವ್ಯ ಭಾರತದಿಂದ ಮುಂಗಾರು ನಿಧಾನವಾಗಿ ಅಂತ್ಯವಾಗುತ್ತಾ ಸಾಗುತ್ತದೆ. ಅಕ್ಟೋಬರ್ 15ರ ವೇಳೆಗೆ ಸಂಪೂರ್ಣವಾಗಿ ಕೊನೆಯಾಗುತ್ತದೆ.
ಇದನ್ನು ಓದಿದ್ದೀರಾ? ನೈಋತ್ಯ ಮುಂಗಾರು 4-5 ದಿನಗಳಲ್ಲಿ ಕೇರಳ ತಲುಪುವ ಸಾಧ್ಯತೆ: ಹವಾಮಾನ ಇಲಾಖೆ
ಈ ಹಿಂದೆ 2009ರ ಮೇ 23ರಂದು ಶೀಘ್ರ ಮುಂಗಾರು ಆರಂಭವಾಗಿತ್ತು. ಈ ವರ್ಷ(2025) ಮೇ 24ರಂದು ಮುಂಗಾರು ಪ್ರವೇಶಿಸಿದೆ. 1990ರಲ್ಲಿ ಮೇ 18ರಂದೇ ಮುಂಗಾರು ಆರಂಭವಾಗಿತ್ತು.
ಕಳೆದ ವರ್ಷ(2024) ಮೇ 30ರಂದು ದಕ್ಷಿಣ ರಾಜ್ಯದ ಮೇಲೆ ಮುಂಗಾರು ಪ್ರವೇಶಿಸಿದೆ. 2023ರಲ್ಲಿ ಜೂನ್ 8, 2022ರಲ್ಲಿ ಮೇ 29, 2021ರಲ್ಲಿ ಜೂನ್ 3, 2020ರಲ್ಲಿ ಜೂನ್ 1, 2019ರಲ್ಲಿ ಜೂನ್ 8 ಮತ್ತು 2018ರಲ್ಲಿ ಮೇ 29ರಂದು ಮುಂಗಾರು ಆರಂಭವಾಗಿದೆ.
ಇನ್ನು ಈಗಾಗಲೇ 2025ರ ಏಪ್ರಿಲ್‌ನಲ್ಲಿ ಐಎಂಡಿ ಮುಂಗಾರು ಋತುವಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ಮುನ್ಸೂಚನೆ ನೀಡಿದೆ. ಎಲ್ ನಿನೊ ಪರಿಸ್ಥಿತಿಯನ್ನು ತಳ್ಳಿಹಾಕಿದೆ.
