ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಿಂದ ಅಸಮಾಧಾನಗೊಂಡಿದ್ದ ವಿದ್ಯಾರ್ಥಿ ತನ್ನ ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದರು. ಇದೀಗ, ಮರು ಮೌಲ್ಯಮಾಪನದ ಫಲಿತಾಂಶ ಬಂದಿದ್ದು, ಪರಿಷ್ಕೃತ ಫಲಿತಾಂಶದೊಂದಿಗೆ ಆತ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ್ದಾರೆ.
ಇತ್ತೀಚೆಗಷ್ಟೇ ಎಸ್‌ಎಸ್‌ಎಸ್‌ಸಿ ಫಲಿತಾಂಶ ಪ್ರಕಟವಾಗಿತ್ತು. 24 ಮಂದಿ 625 ಅಂಕಗಳಲ್ಲಿ 625 ಅಂಕಗಳನ್ನೂ ಗಳಿಸಿದ್ದರು. ಇದೀಗ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಯ ಅಂಕಗಳೂ 625ಕ್ಕೆ ಏರಿಕೆಯಾಗಿವೆ. ಈ ಬಾರಿಯ ಪರೀಕ್ಷೆಯಲ್ಲಿ ‘ಔಟ್ ಆಫ್ ಔಟ್’ ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ 25ಕ್ಕೆ ಏರಿದೆ.
ಮೈಸೂರಿನ ‘ಶ್ರೀ ರಾಮಕೃಷ್ಣ ವಿದ್ಯಾಲಯ’ದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಡಿಕೇರಿಯ ತನ್ಮಯಿ ಎಂ.ಎನ್ ಎಂಬ ವಿದ್ಯಾರ್ಥಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಅವರು ಮೂಲ ಫಲಿತಾಂಶದಲ್ಲಿ 622 ಅಂಕಗಳನ್ನು ಗಳಿಸಿದ್ದರು. ಆದರೆ, ಆ ಅಂಕಗಳಿಂದ ಅಸಮಾಧಾನಗೊಂಡಿದ್ದ ತನ್ಮಯಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು.
ಇದೀಗ, ಅವರ ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟವಾಗಿದೆ. ಅವರ ಅಂಕ 625ಕ್ಕೆ 625 ಬಂದಿದೆ. ಆ ಮೂಲಕ, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ 24 ವಿದ್ಯಾರ್ಥಿಗಳೊಂದಿಗೆ ತನ್ಮಯಿ ಕೂಡ ಸೇರಿಕೊಂಡಿದ್ದಾರೆ.
ಈ ಲೇಖನ ಓದಿದ್ದೀರಾ?: ಪಹಲ್ಗಾಮ್ ದಾಳಿಗೆ ಒಂದು ತಿಂಗಳು; ಸಿಂಧೂರ ಅಳಿಸಿದ ಹಂತಕರನ್ನು ಹಿಡಿದರೇ ಮೋದಿ?
ಇನ್ನು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಒಟ್ಟು 8,42,173 ವಿದ್ಯಾರ್ಥಿಗಳು ಬರೆದಿದ್ದರು. ಅವರಲ್ಲಿ, 5,24,984 (64%) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ ಶೇ.74ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದು, ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ.
ಮುಖ್ಯವಾಗಿ, ಮೇ 26ರಿಂದ ಜೂನ್ 2ರವರೆಗೆ ಎಸ್‌ಎಸ್‌ಎಲ್‌ಸಿ ಎರಡನೇ ಪರೀಕ್ಷೆ ನಡೆಯಲಿದೆ. ಒಂದು ವೇಳೆ ಅದರಲ್ಲೂ ಅನುತ್ತೀರ್ಣರಾದವರು ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶವಿದ್ದು, ಮೂರನೇ ಪರೀಕ್ಷೆಯು ಜೂನ್ 23ರಿಂದ 30ರವರೆಗೆ ನಡೆಯಲಿದೆ.