ವಿಕೃತ ವ್ಯಕ್ತಿಯೊಬ್ಬ ಮೊಬೈಲ್ ಫೋನ್‌ನ ‘ವಾಲ್ಯೂಮ್’ ಕಡಿಮೆ ಮಾಡುವಂತೆ ಕೇಳಿದ ಪತ್ನಿಯ ಮೇಲೆ ಆ್ಯಸಿಡ್ ಎರಚಿ, ವಿಕೃತ ದಾಳಿ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಚಿಕ್ಕಬಾಣಾವರ ಬಳಿಯ ಎನ್‌ಎಚ್‌ಎಂ ಲೇಔಟ್‌ನಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯು ಹೆಚ್ಚು ವಾಲ್ಯೂಮ್ ಇಟ್ಟುಕೊಂಡು ಸಂಗೀತ ಕೇಳುತ್ತಿದ್ದ. ರಾತ್ರಿಯ ವೇಳೆ ನಿದ್ರೆಗೆ ಅಡ್ಡಿಯಾಗುತ್ತಿದೆಯೆಂದು ವಾಲ್ಯೂಮ್ ಕಡಿಮೆ ಮಾಡುವಂತೆ ಆತನ ಪತ್ನಿ ಕೇಳಿದ್ದಾರೆ. ಅದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ ಎಂದು ವರದಿಯಾಗಿದೆ.
ಜಗಳದಿಂದ ಕುಪಿತಗೊಂಡ ದುರುಳ ಪತಿ, ಶೌಚಾಲಯದಲ್ಲಿದ್ದ ಆ್ಯಸಿಡ್‌ಅನ್ನು ತನ್ನ ಪತ್ನಿಯ ಮೇಲೆ ಎರಚಿದ್ದಾನೆ. ಘಟನೆಯಲ್ಲಿ ಮಹಿಳೆಯ ತಲೆ ಮತ್ತು ಮುಖದ ಮೇಲೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಲೇಖನ ಓದಿದ್ದೀರಾ?: ಪಹಲ್ಗಾಮ್ ದಾಳಿಗೆ ಒಂದು ತಿಂಗಳು; ಸಿಂಧೂರ ಅಳಿಸಿದ ಹಂತಕರನ್ನು ಹಿಡಿದರೇ ಮೋದಿ?
“ವೃತ್ತಿಯಲ್ಲಿ ಬ್ಯೂಟಿಷಿಯನ್ ಆಗಿರುವ ಮಹಿಳೆಯ ಬಳಿ ರಾತ್ರಿ 9 ಗಂಟೆ ಸುಮಾರಿಗೆ ಆಕೆಯ ಪತಿ ಮದ್ಯ ಖರೀದಿಸಲು ಹಣ ಕೇಳಿದ್ದಾರೆ. ಆಕೆ ನಿರಾಕರಿಸಿದ್ದು, ಕಿರುಕುಳ ನೀಡಿ ಹಣ ಪಡೆದುಕೊಂಡಿದ್ದಾನೆ. ಕುಡಿದು ಮನೆಗೆ ಬಂದ ಆರೋಪಿ, ತನ್ನ ಮೊಬೈಲ್ ಫೋನ್‌ನಲ್ಲಿ ಹೆಚ್ಚಿನ ವಾಲ್ಯೂಮ್‌ನೊಂದಿಗೆ ಹಾಡು ಹಾಕಿದ್ದಾನೆ. ವಾಲ್ಯೂಮ್‌ಅನ್ನು ಕಡಿಮೆ ಮಾಡುವಂತೆ ಕೇಳಿದ ಪತ್ನಿಯ ಮೇಲೆ ದಾಳಿ ನಡೆಸಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.
“ಮಹಿಳೆ ಕೂಗಿಕೊಂಡಾಗ, ಆತ ಪರಾರಿಯಾಗಿದ್ಧಾನೆ. ನೆರೆಹೊರೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ ತನಿಖೆ ನಡೆಯುತ್ತಿದೆ. ಆರೋಪಿಗಾಗಿ ಹುಡುಕಾಟವೂ ನಡೆಯುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.