ಪ್ರಸ್ತುತ ಸಾಮಾಜಿಕ ಹಾಗೂ ಆರ್ಥಿಕ ವೈರುದ್ಯಗಳು ಹೆಚ್ಚಾಗಿದ್ದು, ಸಾಮಾಜಿಕ ಪ್ರಜಾತಂತ್ರದಲ್ಲಿ ಬ್ರಾಹ್ಮಣಶಾಹಿ ಹಾಗೂ ಆರ್ಥಿಕ ಪ್ರಜಾತಂತ್ರದಲ್ಲಿ ಬಂಡವಾಳಶಾಹಿ ಇವೆರಡು ದಮನಿತರಿಗೆ ದೊಡ್ಡ ಶತೃಗಳಾಗಿವೆ. ಈ ಎರಡು ಶತೃಗಳನ್ನು ರಾಜಕೀಯ ಪ್ರಜಾತಂತ್ರದಿಂದ ನಾಶ ಮಾಡಲಾಗದು ಎಂದು ಪ್ರಗತಿಪರ ಚಿಂತಕ ಶಿವಸುಂದರ್ ಹೇಳಿದರು.
ನಗರದ ಕೃಷಿ ವಿಶ್ವ ವಿದ್ಯಾಲಯ ಆವರಣದ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಹೈದ್ರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರ ಹಾಗೂ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ವರ್ತಮಾನ ಸಂದರ್ಭದ ರಾಜಕಾರಣ ತತ್ವ ಸಿದ್ಧಾಂತಗಳ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ಮತ್ತು ಬಯಸಿದ್ದ ಸಂವಿಧಾನ ವಿಷಯದ ಕುರಿತು ಮಾತನಾಡಿದರು.
ದಲಿತ, ದಮನಿತರಿಗೆ ಎರಡು ಅತಿ ದೊಡ್ಡ ಶತೃಗಳೆಂದರೇ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಗಳಾಗಿದೆ.ಈ ಸಾಮಾಜಿಕ ಹಾಗೂ ಆರ್ಥಿಕ ಪ್ರಜಾತಂತ್ರವನ್ನು ರಾಜಕೀಯ ಪ್ರಜಾತಂತ್ರ ನಾಶ ಮಾಡಲು ಸಾಧ್ಯವಿಲ್ಲ.ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಹಾಗೂ ಪತ್ರಿಕಾರಂಗ ಈ ನಾಲ್ಕು ಅಂಗಗಳಿಂದ ಸಂವಿಧಾನದ ಕುರಿತು ವಿಪರತೆ ಮೂಡುತ್ತದೆ. ಈ ನಾಲ್ಕು ಅಂಗಗಳು ಸಂಪೂರ್ಣವಾಗಿ ನಮ್ಮನ್ನು ಸೋಲಿಸುತ್ತಿವೆ. ಮೂರು ಸಾವಿರ ವರ್ಷದ ನಾಗರೀಕತೆಯಿಂದಲೂ ಇರುವ ಸಮಾನತೆಯೂ ಪ್ರಸ್ತುತ ಮಾಯವಾಗುತ್ತಿವೆ ಎಂದರು.
1949 ರಲ್ಲಿ ಸಂವಿಧಾನ ರಚನೆಯಾದ ನಂತರ ಅದನ್ನು ಸಮರ್ಪಿಸಿಕೊಂಡಿದ್ದೇವೆ ಜೊತೆಗೆ ಸಮಾಜದಲ್ಲಿ ವೈರುದ್ಯವಾದ ಯುಗವನ್ನು ಪ್ರವೇಶಿಸಿದ್ದೇವೆ. ಪಕ್ಷಗಳು ತೀವ್ರ ರೀತಿಯಲ್ಲಿ ಕುಲಗೆಟ್ಟು ಹೋಗಿದ್ದು, ಸಂವಿಧಾನಕ್ಕೂ ಒಂದು ಏಜೆನ್ಸಿಯ ಅಗತ್ಯತೆಯಿದೆ. ಹಿಂದೂ ಮುಸ್ಲಿಂ, ಕ್ರೈಸ್ತ ,ಪಾರ್ಸಿ, ಸಿಖ್‌ಗಳಂತೆ ದಲಿತರಿಗೂ ಚುನಾವಣೆಯಲ್ಲಿ ಕನಿಷ್ಟ ಪ್ರಾತಿನಿಧ್ಯ ಸಿಗಬೇಕಿದೆ.1942 ರಲ್ಲಿ ಭಾವಿ ಭಾರತವನ್ನು ಕಟ್ಟಲು ಚರ್ಚೆಗಳು ನಡೆದಿದ್ದು, ಸಂವಿಧಾನ ಸಭೆಯೂ ಆಗಿದೆ. ಆದರೆ ಅಂಬೇಡ್ಕರ್ ಅವರು ಅಂದುಕೊಂಡಂತೆ ಭಾರತ ನಿರ್ಮಾಣವಾಗಿಲ್ಲ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಇ-ಟೆಂಡರ್ ನಲ್ಲಿ ಅವ್ಯವಹಾರ;ಪಿಡಿಒ ಅಮಾನತಿಗೆ ಆಗ್ರಹ
ಸಂವಿಧಾನದಲ್ಲಿ 141 ಬಾರಿ ವಿ ದ ಪೀಪಲ್ ಎಂದು ಬಳಸಲಾಗಿದೆ. ಇದೊಂದು ಅತ್ಯುತ್ತಮವಾದ ಅಂಶವಾಗಿದ್ದು, ಒಂದು ದೇಶದಲ್ಲಿ ಎರಡು ವಿಧದಲ್ಲಿ ರಾಜಕಾರಣ ನಡೆಯುತ್ತದೆ. ಒಂದು ಕೇಂದ್ರ ಸರ್ಕಾರದ ರಾಜಕಾರಣ, ಇನ್ನೊಂದು ರಾಜ್ಯ ರಾಜಕಾರಣ ಆದರೆ ಭಾರತದಲ್ಲಿ ಕೆಟ್ಟದೊಂದು ರಾಜಕಾರಣವಿದ್ದು, ಕೇಂದ್ರ ಸರ್ಕಾರ ಬಲಿಷ್ಠವಾದಾಗ ತಮ್ಮ ವಿರೋಧ ಪಕ್ಷಗಳು ಆಡಳಿತದಲ್ಲಿ ಇರುವ ರಾಜ್ಯಗಳ ಮೇಲೆ ತಮ್ಮ ಶಕ್ತಿ ಪ್ರದರ್ಶನ ತೋರಿಸುವುದು ಇದೊಂದು ಕೆಟ್ಟ ಹಾಗೂ ಕಾಳಸಂತೆಯ ವ್ಯಾಪಾರದಂತಿದೆ ಎಂದು ತಿಳಿಸಿದರು.
ದೇಶದಲ್ಲಿ ಎಂದಿಗೂ ಸಂಪತ್ತು ಎನ್ನುವುದು ಒಂದು ಕಡೆ ಕೇಂದ್ರೀಕೃತವಾಗಬಾರದು. ನಮ್ಮಲ್ಲಿ ಅಸಮಾನತೆ ಹಾಗೂ ತಾರತಮ್ಯಗಳ ಬೇರು ಆಳವಾಗಿದ್ದು, ಮೂಲಭೂತ ಹಕ್ಕುಗಳ ಅವಶ್ಯಕತೆ ಹೆಚ್ಚಿದೆ. ಸಂಪತ್ತು, ಅಧಿಕಾರ, ಶಿಕ್ಷಣದಿಂದ ದೂರ ಇರುವವರು ನಿಜವಾದ ಅಲ್ಪಸಂಖ್ಯಾತರಾಗಿದ್ದಾರೆ.ಸಮಾನತೆ ಇಲ್ಲದ ಸ್ವಾತಂತ್ರ್ಯ ಉಳ್ಳವರ ಸ್ವಾತಂತ್ರ್ಯವಾಗುತ್ತದೆ. ಜಾತಿ, ಲಿಂಗ ತಾರತಮ್ಯ ಇರುವವರೆಗೂ ನಮ್ಮಲ್ಲಿ ಸಮಾನತೆ ಬರುವುದಿಲ್ಲ ಎಂದರು ಹೇಳಿದರು.
ಇದೇ ವೇಳೆ ಹೈದ್ರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಬದುಕನ್ನು ಬಿಟ್ಟು ಭಾವನಾತ್ಮಕ ವಿಷಯಗಳ ಕುರಿತು ಚರ್ಚೆಗಳಾಗುತ್ತಿವೆ. ಜನವಿರೋಧಿ, ಜಾತಿವಾದ ಮಾತುಗಳು ಬಿಟ್ಟು ಬದುಕಿಗೆ ಪೂರಕವಾದ ತತ್ವ ಚಿಂತನೆಗಳು ಬೆಳೆಯಬೇಕಿದೆ ಎಂದರು.
ಪ್ರಸ್ತುತ ಸಂವಿಧಾನವನ್ನು ಕಡೆಗಣಿಸುವ ಪ್ರಕ್ರಿಯೆ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದ್ದು, ಸಂವಿಧಾನದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ಸಂವಿಧಾನವೇ ನಮ್ಮ ಜೀವನದ ಆದರ್ಶ, ತತ್ವಸಿದ್ಧಾಂತವಾಗಬೇಕಿದೆ. ಆದರೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿಗಳು ದೇಶದ ಗೃಹ ಸಚಿವರು, ಪ್ರಧಾನಮಂತ್ರಿಗಳು,ರಾಜ್ಯದ ಮುಖ್ಯಮಂತ್ರಿ ಮತ್ತು ಸಚಿವರಾಗಿರುವುದು ದುರಂತವಾಗಿದೆ. ಸಂವಿಧಾನ ಸಶಕ್ತವಾಗಬೇಕಿದೆ ಎಂದು ತಿಳಿಸಿದರು.
ವರ್ತಮಾನದ ಪ್ರಭುತ್ವ ಸ್ವರೂಪದ ಆಳ ಅಗಲ ತಿಳಿದುಕೊಳ್ಳದೇ ಸಂವಿಧಾನ ಉಳಿಸಲು ಸಾಧ್ಯವಿಲ್ಲ. ಹೈದ್ರಾಬಾದ್ ಕರ್ನಾಟಕದಲ್ಲಿ ಶಿಕ್ಷಣ ಸೇರಿದಂತೆ ಅನೇಕ ಸಮಸ್ಯೆಗಳನ್ನು ತೊಲಗಿಸಲು ಯುವಕರನ್ನು ಒಳಗೊಂಡ ಚರ್ಚೆಗಳಾಗಬೇಕಿದೆ. ಚರ್ಚೆಗಳು ಸಮಾಜದ ಮುಂದೆಯೂ ಹೋಗಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೋರಾಟಗಾರ ಚಂದ್ರಶೇಖರ ಬಾಳೆ, ರವಿ ಪಾಟೀಲ್ ಫೌಂಡೇಶನ್ ಸಂಸ್ಥಾಪಕ ರವಿ ಪಾಟೀಲ್, ಚಂದ್ರಗೀರೀಶ, ಜನಾಂದೋಲನ ಕೇಂದ್ರದ ಗೌರವಾಧ್ಯಕ್ಷೆ ಶಾರದಾ ಹುಲಿನಾಯಕ, ಜಿಲ್ಲಾಧ್ಯಕ್ಷ ಬಿ.ಬಸವರಾಜ, ಖಾಜಾ ಅಸ್ಲಂ, ಬೂದೆಪ್ಪ ಕರ್ಲಿ, ಶಾಮಲಾ ಪೂಜಾರ, ಸಮದ, ಜಾನ್‌ವೆಸ್ಲಿ, ಚನ್ನಬಸವ ಜಾನೇಕಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
