ಲಿಂಗಾಯತ ಸಂಸ್ಕೃತಿ ನಾಶಕ್ಕೆ ಹಲವು ವರ್ಷಗಳಿಂದ ಹುನ್ನಾರ ನಡೆದಿದ್ದು, ಲಿಂಗಾಯತರು ಎಚ್ಚೆತ್ತುಕೊಳ್ಳಬೇಕು ಎಂದು ವಿಜಯಪುರದ ಶರಣ ತತ್ವ ಚಿಂತಕ ಡಾ. ಜೆ.ಎಸ್.ಪಾಟೀಲ ಹೇಳಿದರು.
ಬೀದರ್‌ನ ಬಸವಗಿರಿಯಲ್ಲಿ ಅಕ್ಕ ಅನ್ನಪೂರ್ಣತಾಯಿ ಪ್ರಥಮ ಸ್ಮರಣೊತ್ಸವದ ಎರಡನೇ ದಿನವಾದ ಶನಿವಾರ ನಡೆದ ಸಮವಸ್ತ್ರಧಾರಿ 770 ಶರಣ-ಶರಣೆಯರಿಂದ ಅಕ್ಕನ ಯೋಗಾಂಗ ತ್ರಿವಿಧಿ ಪಠಣ ಕಾರ್ಯಕ್ರಮದಲ್ಲಿ ‘ಲಿಂಗಾಯತ ಚಳವಳಿ ಐತಿಹಾಸಿಕ ಹಿನ್ನೆಲೆ’ ಕುರಿತು ಅವರು ಮಾತನಾಡಿದರು.
‘ಲಿಂಗಾಯತರು ಸಾಂಸ್ಕೃತಿಕ ದಬ್ಬಾಳಿಕೆಗಳಿಗೆ ಬಲಿಯಾಗಬಾರದು. ಅಸತ್ಯದ ವಿರುದ್ಧ ಹೊರಾಟ ನಡೆಸಬೇಕು ಎಂದು ತಿಳಿಸಿದರು. ಸಂಸ್ಕೃತಿಯ ಅರಿವು ಇಲ್ಲದಿದ್ದರೆ ಅನ್ಯ ಸಂಸ್ಕೃತಿಯ ದಾಸರಾಗಬೇಕಾಗುತ್ತದೆ. ಕಾರಣ, ಲಿಂಗಾಯತರು ತಮ್ಮ ಸಂಸ್ಕೃತಿ, ಇತಿಹಾಸವನ್ನು ಅರಿಯಬೇಕು. ಲಿಂಗಾಯತರು ಉತ್ಕೃಷ್ಟ ಸಂಸ್ಕೃತಿಯ ವಾರಸುದಾರರು. ಲಿಂಗಾಯತ ಚಳವಳಿ ಹುಟ್ಟಿದ್ದು ರಾಷ್ಟ್ರ ರಕ್ಷಣೆಗಾಗಿ. ಲಿಂಗಾಯತರು ರಾಷ್ಟ್ರೀಯವಾದಿಗಳು. ನಿಜವಾದ ದೇಶಭಕ್ತರು.ಇಷ್ಟಲಿಂಗ ಲಿಂಗಾಯತರ ದೇವರು. ಶೋಷಣಾ ಕೇಂದ್ರಗಳಿಂದ ದೂರವಿದ್ದು, ಶೋಷಣೆ ರಹಿತವಾದ ಇಷ್ಟಲಿಂಗವನ್ನು ಪೂಜಿಸಬೇಕು’ ಎಂದು ತಿಳಿಸಿದರು.
‘ಬಸವಣ್ಣ ಬಾರದಿದ್ದರೆ ನಾವೆಲ್ಲ ಶೋಷಿತರಾಗುತ್ತಿದ್ದೇವು. ನಡು ಬೀದಿಯಲ್ಲಿ ಓಡಾಡುವ ಹಾಗಿರಲಿಲ್ಲ. ಅಂದಿನ ಸಮಾಜದ ಸ್ಥಿತಿಗತಿಗಳನ್ನು ಗಮನಿಸಿದ ಬಸವಣ್ಣ ಸರ್ವ ಶೋಷಣಾ ಮುಕ್ತ ಸಮಾಜ ಕಟ್ಟಲು ಹೋರಾಟ ಆರಂಭಿಸಿದರು. ಜಾತಿಯತೆಯನ್ನು ಹೋಗಲಾಡಿಸಿದರು. ಅವರ ಕಾಯಕ, ದಾಸೋಹ ತತ್ವ ಜಗದಲ್ಲಿ ಹೊಸ ಗಾಳಿ ಬೀಸಿತು’ ಎಂದು ತಿಳಿಸಿದರು.
‘ಹೈಕೋರ್ಟ್ ನ್ಯಾಯವಾದಿ ಸಂತೋಷ ಎಸ್. ನಾಗರಾಳೆ ಮಾತನಾಡಿ, ಅಕ್ಕ ಅನ್ನಪೂರ್ಣ ಅವರದ್ದು ಅದ್ಭುತ ವ್ಯಕ್ತಿತ್ವ. ಯಾವಾಗಲೂ ನಗುತ್ತಲಿದ್ದರು. ಆನಂದ ಭಾವ ಅವರಲ್ಲಿತ್ತು. ಅನಾರೋಗ್ಯದ ಕಷ್ಟವಿದ್ದರೂ, ಹಸನ್ಮುಖಿಯಾಗಿರುತ್ತಿದ್ದರು. ಬಸವಗಿರಿಯನ್ನು ಸಾಧನೆಯ ಕೇಂದ್ರವಾಗಿ ಕಟ್ಟಿದರು. ನಾವು ಭಕ್ತರಾಗುವ ವಾತಾವರಣ ನಿರ್ಮಿಸಿ ಮೂಲ ಅರಿವಿಗೆ ಒಯ್ದರು. ಬಸವಗಿರಿ ಅಕ್ಕ ಅನ್ನಪೂರ್ಣತಾಯಿ ಅವರ ಆತ್ಮ, ವಚನ ಪಠಣ, ಪರುಷ ಕಟ್ಟೆ, ವಚನ ವಿಜಯೋತ್ಸವದಲ್ಲಿ ಅಕ್ಕನವರು ಇದ್ದಾರೆ ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಅಕ್ಕನವರಲ್ಲಿ ಧರ್ಮ ಪ್ರಸಾರದ ಅಪಾರ ಕಳಕಳಿ ಇತ್ತು. ನಾಡಿನಾದ್ಯಂತ ಅವರ ಪ್ರವಚನಗಳು ಜನಪ್ರಿಯವಾಗಿದ್ದವು. ಒಮ್ಮೆ ಅವರ ಪ್ರವಚನ ಕೇಳಿದವರು ಮತ್ತೆಂದೂ ತಪ್ಪಿಸುತ್ತಿರಲಿಲ್ಲ’ ಎಂದು ಹೇಳಿದರು.
‘ಬಸವಣ್ಣನವರ ಉದ್ದೇಶ ತತ್ವ ಸಂಘಟನೆಯಾಗಿತ್ತು. ಎಲ್ಲ ಜಾತಿಯವರಿಗೆ ಸಂಸ್ಕಾರ ನೀಡಿ ಲಿಂಗಾಯತರಾಗಿಸಿದ್ದರು. ಅನೇಕ ಬಸವ ತತ್ವ ಪ್ರಸಾರಕರಿಗೆ ಲಿಂಗಾನಂದರು ಪ್ರೇರಣೆಯಾಗಿದ್ದರು. ಅಕ್ಕನವರ ದೇಹವೆಲ್ಲ ಬಸವ ಮಾಯವಾಗಿತ್ತು. ಅನ್ಯ ಆಚರಣೆಗಳಿಂದ ಬಸವ ತತ್ವಕ್ಕೆ ಕರೆ ತರುವಲ್ಲಿ ನಿಸ್ಸೀಮರಾಗಿದ್ದರು. ಅಕ್ಕನವರು ಬಹಳ ಸಮರ್ಥರಾದ ಪ್ರಭುದೇವ ಸ್ವಾಮೀಜಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಪ್ರಭುದೇವ ಸ್ವಾಮೀಜಿ ನೂರಾರು ಕಡೆ ಪ್ರವಚನ ಮಾಡಿದ್ದಾರೆ. ಬಸವ ಬೆಳಕು ವಿಸ್ತರಿಸಿದ್ದಾರೆ’ ಎಂದು ಹೇಳಿದರು.
‘ಅನ್ನಪೂರ್ಣ’ ಯೋಜನೆಗೆ ಚಾಲನೆ ನೀಡಿದ ಕೂಡಲ ಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ.ಗಂಗಾದೇವಿ ಮಾತನಾಡಿ, ‘ಅಕ್ಕ ಅನ್ನಪೂರ್ಣತಾಯಿ ಹೆಸರಲ್ಲಿ ಹಸಿದವರಿಗೆ ಉಣ್ಣಿಸಲು ಅನ್ನಪೂರ್ಣ ಯೋಜನೆ ಆರಂಭಿಸಿರುವುದು ಸಂತೋಷದ ವಿಷಯ. ಇದೊಂದು ಮಾನವೀಯ ಕಾರ್ಯ. ಗುರುತರವಾದ ಜವಾಬ್ದಾರಿ. ‘ಅನ್ನಪೂರ್ಣ’ ಯೋಜನೆ ಅಕ್ಕನವರಿಗೆ ನಿಜವಾದ ಗೌರವ ಸಮರ್ಪಣೆ’ ಎಂದರು.
ನೇತೃತ್ವ ವಹಿಸಿದ್ದ ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಹಾಗೂ ಡಾ.ವಚನಶ್ರುತಿ ಮಾತನಾಡಿದರು. ಅಶ್ವಿನಿ ರಾಜಕುಮಾರ ಚಿಟ್ಟಾ ವಚನ ಸಂಗೀತ ನಡೆಸಿಕೊಟ್ಟರು.
ಅಕ್ಕ ಅನ್ನಪೂರ್ಣತಾಯಿ ಪ್ರಥಮ ಸ್ಮರಣೋತ್ಸವ ನಿಮಿತ್ತ ಲಿಂಗಾಯತ ಮಹಾ ಮಠದ ವತಿಯಿಂದ ನಗರದಲ್ಲಿ ಶನಿವಾರ ವಚನ ವಿಜಯೋತ್ಸವ ಪಥ ಸಂಚಲನ ವೈಭವದಿಂದ ನಡೆಯಿತು.
ಪಾಪನಾಶ ಗೇಟ್‍ನಿಂದ ಆರಂಭಗೊಂಡ ಪಥ ಸಂಚಲನವು ಪಾಪನಾಶ ದೇಗುಲದ ಮೂಲಕ ಹಾಯ್ದು ಬಸವಗಿರಿಗೆ ತಲುಪಿ ಸಮಾರೋಪಗೊಂಡಿತು. ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಹಸ್ರಾರು ಬಸವಾನುಯಾಯಿಗಳು ತಲೆ ಮೇಲೆ ವಚನ ಸಾಹಿತ್ಯ ಹೊತ್ತು ಶ್ರದ್ಧೆ, ಭಕ್ತಿಯಿಂದ ಸಾಗಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಕೊಲೆ ಕೃತ್ಯಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಗಂಭೀರ ಮತ್ತು ಆಘಾತಕಾರಿ!
ಆಳಂದದ ಕೋರಣೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ನೀಲಮ್ಮನ ಬಳಗದ ನೀಲಮ್ಮ ರೂಗನ್ ಅಧ್ಯಕ್ಷತೆ ವಹಿಸಿದ್ದರು. ಖೇಳಗಿಯ ಶಿವಲಿಂಗ ಸ್ವಾಮೀಜಿ, ಕಲಬುರಗಿಯ ಮಾತೆ ಪ್ರಭುಶ್ರೀ, ನಿಡವಂಚಾದ ಮಾತೆ ಮೈತ್ರಾದೇವಿ, ಶರಣಮ್ಮ ತಾಯಿ, ಲಲಿತಾ ತಾಯಿ, ಅಕ್ಕ ಮಹಾದೇವಿ, ಕಮಲಾಬಾಯಿ ತಾಯಿ ಮತ್ತಿತರರು ಭಾಗವಹಿಸಿದ್ದರು.