ಕರ್ನಲ್ ಸೋಫಿಯಾ ಖುರೇಷಿ ಅವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಮಧ್ಯಪ್ರದೇಶ ಬಿಜೆಪಿ ಸಚಿವ ವಿಜಯ್ ಶಾ ನಾಪತ್ತೆಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ವಿಜಯ್ ಶಾ ನಾಪತ್ತೆ ಬಗ್ಗೆ ಪೋಸ್ಟರ್ ಬಿಡುಗಡೆ ಮಾಡಿದೆ.
ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ನಡೆದಿದ್ದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಬಗ್ಗೆ ದೇಶದ ಜನರಿಗೆ ಕರ್ನಲ್ ಸೋಫಿಯಾ ಖುರೇಷಿ ವಿವರಿಸಿದ್ದರು. ಆದರೆ, ಅವರನ್ನು ಬಿಜೆಪಿ ಸಚಿವ ವಿಜಯ್ ಶಾ ‘ಭಯೋತ್ಪಾದಕರ ಸಹೋದರಿ’ ಎಂದು ಕರೆದಿದ್ದರು. ಅವರ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೊಶ ವ್ಯಕ್ತವಾಗಿತ್ತು. ವಿಜಯ್ ಶಾ ವಿರುದ್ಧ ಮಧ್ಯಪ್ರದೇಶ ಹೈಕೋರ್ಟ್ ಎಫ್‌ಐಆರ್ ದಾಖಲಿಸಿಲು ಪೊಲೀಸರಿಗೆ ಸೂಚಿಸಿತ್ತು. ಅಂತೆಯೇ, ಅವರ ವಿರುದ್ದ ತನಿಖೆಗೆ ಸುಪ್ರೀಂ ಕೋರ್ಟ್ ಎಸ್‌ಐಟಿ ರಚನೆ ಮಾಡಿತ್ತು.
ಆದಾಗ್ಯೂ, ವಿಜಯ್ ಶಾ ಅವರನ್ನು ಎಸ್‌ಐಟಿ ಪೊಲೀಸರು ಬಂಧಿಸಿಲ್ಲ. ವಿಚಾರಣೆಗೂ ಒಳಪಡಿಸಿಲ್ಲ. ವಿಜಯ್ ಶಾ ಪ್ರಕರಣದಲ್ಲಿ ಪೊಲೀಸರು ಮತ್ತು ಸರ್ಕಾರದ ನಡೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. “ಕರ್ನಲ್ ಸೋಫಿಯಾ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಸಚಿವ ‘ಕಾಣೆಯಾಗಿದ್ದಾರೆ’. ಹುಡುಕಿಕೊಡಿ” ಎಂದು ಪೋಸ್ಟರ್ ಬಿಡುಗಡೆ ಮಾಡಿದೆ.

ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಕಾಂಗ್ರೆಸ್ ಸೇವಾ ದಳದ ಅಧ್ಯಕ್ಷ ವಿವೇಕ್ ಖಂಡೇಲ್ವಾಲ್ ಅವರು ‘ಗುಮ್ಶುದಾ ಕಿ ತಲಾಶ್’ (ಕಾಣೆಯಾದ ವ್ಯಕ್ತಿಗಾಗಿ ಹುಡುಕಾಟ) ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್‌ಗಳನ್ನು ವಿವೇಕ್ ಹಂಚಿಕೊಂಡಿದ್ದಾರೆ. ಬುಡಕಟ್ಟು ವ್ಯವಹಾರಗಳ ಸಚಿವ ವಿಜಯ್ ಶಾ ಅವರ ಬಗ್ಗೆ ‘ಮಾಹಿತಿ’ ನೀಡಿದವರಿಗೆ 11,000 ರೂ.ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಪಹಲ್ಗಾಮ್ ದಾಳಿಗೆ ಒಂದು ತಿಂಗಳು; ಸಿಂಧೂರ ಅಳಿಸಿದ ಹಂತಕರನ್ನು ಹಿಡಿದರೇ ಮೋದಿ?
“ಸಚಿವ ವಿಜಯ್ ಶಾ ಎಲ್ಲಿಯೂ ಕಾಣುತ್ತಿಲ್ಲ. ಸಂಪುಟ ಸಭೆಗಳಲ್ಲಿಯೂ ಕಾಣಿಸದ ಕಾರಣ ನಾವು ಈ ಪೋಸ್ಟರ್‌ಗಳನ್ನು ಹಾಕಿದ್ದೇವೆ” ಎಂದು ಅವರು ಶನಿವಾರ ಹೇಳಿದ್ದಾರೆ. ಅವರು ರಾಜೀನಾಮೆ ನೀಡುವವರೆಗೂ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ” ಎಂದು ವಿವೇಕ್ ಖಂಡೇಲ್ವಾಲ್ ಹೇಳಿದ್ದಾರೆ.