ಮುಂಗಾರು ಶನಿವಾರ ಕೇರಳಕ್ಕೆ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಘೋಷಿಸಿದ್ದು, ಇದರ ಬೆನ್ನಲ್ಲೇ ಕರಾವಳಿ ಕರ್ನಾಟಕಕ್ಕೂ ಮುಂಗಾರು ಮಳೆ ಶನಿವಾರ ಪ್ರವೇಶ ಪಡೆದಿದೆ.
ಸಾಮಾನ್ಯವಾಗಿ ಮೇ 31ರ ಸುಮಾರಿಗೆ ಕೇರಳಕ್ಕೆ ಮುಂಗಾರು ಆಗಮಿಸುತ್ತದೆ. ಆದರೆ ಈ ಬಾರಿ ಸುಮಾರು ಒಂದು ವಾರದಷ್ಟು ಬೇಗನೆ, ಅಂದರೆ ಮೇ 24ರಂದೇ ಮುಂಗಾರು ಕೇರಳದ ಕರಾವಳಿಯನ್ನು ತಲುಪಿದೆ. ಕೇರಳದಲ್ಲಿ ಮುಂಗಾರು ಪ್ರವೇಶದೊಂದಿಗೆ, ಕರ್ನಾಟಕದ ಕರಾವಳಿ ಪ್ರದೇಶವಾದ ಮಂಗಳೂರಿಗೂ ಮುಂಗಾರು ಮುಂಚಿತನಾಗಿಯೇ ಆಗಮಿಸಿದೆ. ಸಾಮಾನ್ಯವಾಗಿ ಕರ್ನಾಟಕದ ಕರಾವಳಿಗೆ ಮುಂಗಾರು ಜೂನ್ ಮೊದಲ ವಾರದಲ್ಲಿ ಆಗಮಿಸುತ್ತದೆ, ಆದರೆ ಈ ಬಾರಿ ಮೇ 24ರಂದೇ ಮಂಗಳೂರಿನಲ್ಲಿ ಮುಂಗಾರು ಮಳೆ ಆರಂಭವಾಗಿದೆ.
ಈಗಾಗಲೇ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳವರೆಗೆ ಭಾರಿ ಮಳೆ ಮುಂದುವರಿಯಲಿದೆ.
ಮಂಗಳೂರಿನಲ್ಲಿ ಮುಂಗಾರು ಪ್ರವೇಶಕ್ಕೂ ಮುನ್ನ, ಪೂರ್ವ ಮುಂಗಾರು ಮಳೆ ಈಗಾಗಲೇ ಸುರಿಯುತ್ತಿತ್ತು. ಕಳೆದ ಒಂದು ವಾರದಿಂದ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುತ್ತಿದೆ. ಪೂರ್ವ ಮುಂಗಾರು ಮಳೆಯಿಂದಾಗಿ ನದಿಗಳು ಮತ್ತು ಕೆರೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೊಲೆ ಕೃತ್ಯಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಗಂಭೀರ ಮತ್ತು ಆಘಾತಕಾರಿ!
ಮಂಗಳೂರಿನಲ್ಲಿ ಮುಂಗಾರು ಪ್ರವೇಶದೊಂದಿಗೆ ಜನಜೀವನದಲ್ಲಿ ಸಹಜವಾಗಿ ಕೆಲವು ಬದಲಾವಣೆಗಳು ಕಂಡುಬಂದಿವೆ. ಭಾರಿ ಮಳೆಯಿಂದಾಗಿ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದು, ಸಂಚಾರದಲ್ಲಿ ಸ್ವಲ್ಪಮಟ್ಟಿನ ತೊಂದರೆಯಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದ್ದು, ಪ್ರವಾಸಿಗರಿಗೂ ಕಡಲತೀರದಲ್ಲಿ ಎಚ್ಚರಿಕೆಯಿಂದ ಇರಲು ತಿಳಿಸಲಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇ 26ರವರೆಗೆ ಮಳೆಯಾಗಲಿದೆ ಎಂದ ಶನಿವಾರವಷ್ಟೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆಯಾಗುವ ಹಿನ್ನೆಲೆಯಲ್ಲಿ ಮೂರು ಜಿಲ್ಲೆಗಳಲ್ಲಿ ಮುಂದಿನ 5 ದಿನ ಆರೆಂಜ್ ಅಲರ್ಟ್ ಜಾರಿಗೊಳಿಸಿದೆ.
ರಾಜ್ಯದ ಹಲವು ಕಡೆಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ರಾಮನಗರ, ಮೈಸೂರು, ಮಂಡ್ಯ, ತುಮಕೂರು, ಶಿವಮೊಗ್ಗ, ಕೋಲಾರ, ಕೊಡಗು, ಹಾಸನ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಯಚೂರು, ಕೊಪ್ಪಳ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿಯಲ್ಲಿ ಒಣಹವೆ ಮುಂದುವರೆಯಲಿದ್ದು, ಈ ಜಿಲ್ಲೆಗಳಲ್ಲೂ ಮಳೆ ಹೆಚ್ಚಾಗಲಿದೆ.