ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಗಣೇಶಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಔರಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ರಾಷ್ಟ್ರೀಯ ಸೇವೆ ಯೋಜನೆ ಶಿಬಿರವನ್ನು ಶನಿವಾರ ಉದ್ಘಾಟಿಸಲಾಯಿತು.
ಕಾಲೇಜು ಪ್ರಾಚಾರ್ಯೆ ಪ್ರೊ.ಅಂಬಿಕಾದೇವಿ ಕೊತಮೀರ್ ಮಾತನಾಡಿ, ‘ಭಾರತ ಸಮನ್ವಯದ ನಾಡಾಗಿದ್ದು, ಸಹಬಾಳ್ವೆ, ಸಹೋದರತೆ, ಶಾಂತಿ ಬಯಸುತ್ತದೆ. ದೇಶದ ಪ್ರಗತಿಯಲ್ಲಿ ನಮ್ಮ ಒಳಿತಿದೆ ಎಂಬ ಭಾವನೆ ಎಲ್ಲ ವಿದ್ಯಾರ್ಥಿಗಳು ಅರ್ಥೈಸಿಕೊಳ್ಳಬೇಕು’ ಎಂದು ಹೇಳಿದರು.
ಗಾ.ಪಂ. ಸದಸ್ಯ ಜ್ಞಾನೇಶ್ವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಗಣೇಶಪುರ ಗ್ರಾಮದಲ್ಲಿ ನಡೆಯುತ್ತಿರುವುದು ಅತ್ಯಂತ ಸಂತೋಷ ತರಿಸಿದೆ. ವಿದ್ಯಾರ್ಥಿಗಳು ಎನ್ಎಸ್ಎಸ್ ಶಿಬಿರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ಎನ್.ಎಸ್.ಎಸ್ ಘಟಕದ ಸಂಯೋಜಕ ಹಾಗೂ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ವಿನಾಯಕ ಕೊತಮೀರ್ ಪ್ರಾಸ್ತಾವಿಕ ಮಾತನಾಡಿ, ‘ಇಂದಿನ ಯುವಕರು ಅತ್ಯಮೂಲ್ಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಎನ್ಎಸ್ಎಸ್ ಶಿಬಿರ ಸಹಕಾರಿಯಾಗಿದೆ. ದೇಶದ ಪ್ರಗತಿ ಕುರಿತು ಆಲೋಚನೆ ನಡೆಸುವುದು ಅಗತ್ಯವಾಗಿದೆ’ ಎಂದರು.
ರಾಷ್ಟ್ರೀಯ ಸೇವಾ ಯೋಜನೆ ಕುರಿತು ಕನ್ನಡ ವಿಭಾಗದ ಮುಖ್ಯಸ್ಥ ರಾಮಣ್ಣ ಉಪ್ಪಾರ ಮಾತನಾಡಿ, ‘ವಿದ್ಯಾರ್ಥಿಗಳು ನಾಯಕತ್ವದ ಗುಣಗಳು ಬೆಳೆಸಿಕೊಳ್ಳಬೇಕು. ಸಹನೆ, ಸಮಯ ಪ್ರಜ್ಞೆ, ಆತ್ಮವಿಶ್ವಾಸ ಹಾಗೂ ಕಠಿಣ ಪರಿಶ್ರಮದಿಂದ ಬದುಕಿನಲ್ಲಿ ಯಶಸ್ಸು ಸಾಧಿಸಬಹುದು’ ಎಂದು ಹೇಳಿದರು.
ಬಳಿಕ ಶಿಬಿರದ ವಿದ್ಯಾರ್ಥಿಗಳು ಶಾಲಾ ಆವರಣ, ಗ್ರಾಮದಲ್ಲಿ ಶ್ರಮದಾನ, ಸ್ವಚ್ಛತಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ : ಬೀದರ್ | ಪತ್ರಿಕೋದ್ಯಮ ಅಧ್ಯಯನದಿಂದ ಸಾಮಾಜಿಕ ಹೊಣೆಗಾರಿಕೆ
ಕಾರ್ಯಕ್ರಮದಲ್ಲಿ ಸುನೀಲ ಮಾಳಗೆ, ಪ್ರೊ. ಸಂಜುಕುಮಾರ ತಾಂದಳೆ, ಡಾ.ದಯಾನಂದ ಬಾವಗೆ ಸೇರಿದಂತೆ ವಿದ್ಯಾರ್ಥಿಗಳು ಮತ್ತಿತರರಿದ್ದರು.