ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದೊಡ್ಡಪ್ಪ ಮತ್ತು ತಾಯಿ ನಡುವೆ ಜಗಳ ನಡೆದು ಜಗಳ ತಾರಕಕ್ಕೇರಿದ ಸಮಯದಲ್ಲಿ ಕುಪಿತಗೊಂಡ ಮಗ ಸ್ವಂತ ತಂದೆಯ ಅಣ್ಣ ದೊಡ್ಡಪ್ಪನಿಗೆ ಚಾಕು ಇರಿದು ಕೊಲೆಗೈದ ಧಾರುಣ ಘಟನೆ ಶನಿವಾರ ನಡೆದಿದೆ.
ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಅಂಕಳಕೊಪ್ಪ ಗ್ರಾಮದಲ್ಲಿ ಯುವಕ ಆಫ್ರೀದ್ (25) ತನ್ನ ತಂದೆಯ ಅಣ್ಣ ದೊಡ್ಡಪ್ಪ ಕರಿಂಸಾಬ್ (60) ಅವರನ್ನು ಧಾರುಣವಾಗಿ ಕೊಲೆಗೈದ ಘಟನೆ ಇಡೀ ಗ್ರಾಮವನ್ನೇ ತಲ್ಲಣ ಗೊಳಿಸಿದೆ.
ಆಫ್ರಿದ್ ತಾಯಿ ಬೇಬಿ ಜಾನ್ ಎಂಬುವರು ಕೊಲೆಯಾದ ಕರೀಮ್ ಸಾಬ್ ವ್ಯಕ್ತಿಗೆ ಸೇರಿದ ಜಮೀನಿನಲ್ಲಿ ಮೇಕೆ ಮೇಯಿಸುತ್ತಿದ್ದ ವೇಳೆ ಈ ಜಮೀನು ನನಗೆ ಸೇರಿದ್ದು ಯಾಕೆ ಇಲ್ಲಿ ಮೇಕೆ ಮೇಯಿಸುತ್ತಿದ್ದೀಯಾ ಎಂದು ಕೇಳಲಾಗಿ ಬೇಬಿ ಜಾನ್ ಮತ್ತು ಮೃತ ವ್ಯಕ್ತಿಯ ನಡುವೆ ಜಗಳ ನಡೆದಿದ್ದು ಈ ವಿಚಾರವನ್ನು ಬೇಬಿ ಜಾನ್ ಮಗ ಅಫ್ರಿದ್ ಗೆ ಫೋನ್ ಮಾಡಿ ತಿಳಿಸಿದ ವೇಳೆ ಆಕ್ರೋಶಗೊಂಡ ಆಫ್ರಿದ್ ರಸ್ತೆಯಲ್ಲಿ ಬರುತ್ತಿದ್ದ ದೊಡ್ಡಪ್ಪ ಕರೀಂಸಾಬ್ ಅವರನ್ನು ಅಡ್ಡಗಟ್ಟಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್, ಶಿರಾ ಡಿವೈಎಸ್ಪಿ ಶೇಖರ್, ಗುಬ್ಬಿ ವೃತ್ತ ನಿರೀಕ್ಷಕ ರಾಘವೇಂದ್ರ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಅಫ್ರಿದ್, ಅಶ್ವಕ್, ಗೌಸ್ ಪೀರ್, ಬೇಬಿ ಜಾನ್ ಎಂಬುವರ ನಾಲ್ಕು ಜನರ ಮೇಲೆ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ.