ಕೆ.ಆರ್.ಪೇಟೆ ದಲಿತ ಯುವಕನ ಹತ್ಯೆ ಪ್ರಕರಣ; ಮೇ 27ಕ್ಕೆ ಬೃಹತ್ ಪ್ರತಿಭಟನೆ

Date:

Advertisements
ಕೋಮು ಆಯಾಮದಲ್ಲಿ ಕೊಲೆಗಳಾದಾಗ 25 ಲಕ್ಷ ರೂ. ಪರಿಹಾರ ನೀಡಿರುವಂತೆ, ದಲಿತ ಯುವಕನ ಸಾವಿಗೂ ಪರಿಹಾರ ದೊರಕಿಸಬೇಕು ಎಂದು ದಲಿತ, ಪ್ರಗತಿಪರ ಸಂಘಟನೆಗಳು ಆಗ್ರಹಿಸಿವೆ

ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮದ ದಲಿತ ಯುವಕ ಜಯಕುಮಾರ್ ಅವರ ಅನುಮಾನಾಸ್ಪದ ಸಾವನ್ನು ಆತ್ಮಹತ್ಯೆಯೆಂದು ಪ್ರಕರಣ ದಾಖಲು ಮಾಡಿರುವುದನ್ನು ಖಂಡಿಸಿ, ಆತ್ಮಹತ್ಯೆಯನ್ನು ಕೊಲೆ ಪ್ರಕರಣವಾಗಿ ದಾಖಲು ಮಾಡುವಂತೆ ಆಗ್ರಹಿಸಿ, ಕೆ.ಆರ್.ಪೇಟೆ ದಲಿತ ಸಂಘಟನೆಗಳ ಒಕ್ಕೂಟ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಮೇ 27ರಂದು ಹಮ್ಮಿಕೊಳ್ಳಲಾಗಿದೆ.

ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಕೆ.ಆರ್.ಪೇಟೆಯ ಟಿ.ಬಿ. ಸರ್ಕಲ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ತಾಲ್ಲೂಕು ಕಚೇರಿ ಆವರಣದಲ್ಲಿ ಬಹಿರಂಗ ಸಭೆ ನಡೆಯಲಿದೆ.

ದಲಿತ ಯುವಕ ಜಯಕುಮಾರ್ ಅವರನ್ನು ಹುಲ್ಲಿನ ಮೆದೆಗೆ ದೂಡಿ ಸಜೀವವಾಗಿ ಸುಟ್ಟಿರುವ ದುರ್ಘಟನೆ ದಿನಾಂಕ 17-05-2025ರಂದು ನಡೆದಿದ್ದು, ಸದರಿ ಪ್ರಕರಣವನ್ನು ಆತ್ಯಹತ್ಯೆ ಎಂದು ದೂರು ದಾಖಲಿಸಿಕೊಂಡಿರುವ ಪೊಲೀಸ್ ಇಲಾಖೆಯ ಕರ್ತವ್ಯಲೋಪವನ್ನು ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

Advertisements

ಜಯಕುಮಾರ್‌ ಜಮೀನಿನಲ್ಲಿ ಕಳೆದ ಐದಾರು ವರ್ಷಗಳಿಂದ ಅಕ್ರಮವಾಗಿ ಹುಲ್ಲುಮೆದೆ ಹಾಕಿದ್ದಲ್ಲದೆ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ದಿನಾಂಕ 16-05-2025 ರಂದು ಜಯಕುಮಾರ್ ಕೆ.ರ್.ಪೇಟೆ ಪೊಲೀಸ್ ಠಾಣೆಯಲ್ಲಿ ಅನಿಲ್‌ ಕುಮಾರ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ದೂರು ನೀಡಿದ ಮರುದಿನವೇ ಈ ಅಮಾನುಷ ಕೊಲೆ ನಡೆದಿದೆ. ರೌಡಿಶೀಟರ್ ಹಾಗೂ ಪೋಕ್ಸೋ ಕಾಯ್ದೆಯಡಿ ಸೆರೆವಾಸ ಕಂಡಿದ್ದ ಅನಿಲ್‌ ಕುಮಾರ್ ಬಗ್ಗೆ ಅರಿವಿದ್ದ ಸ್ಥಳೀಯ ಪೊಲೀಸರು ಸಕಾಲಿಕ ಮುನ್ನೆಚರಿಕೆ ವಹಿಸದ ಕಾರಣ ಅಮಾಯಕ ದಲಿತನೊಬ್ಬನ ದಾರುಣ ಹತ್ಯೆ ನಡೆದಿದೆ ಎಂದು ಸಂಘಟನೆಗಳು ಬೇಸರ ವ್ಯಕ್ತಪಡಿಸಿವೆ.

ಇದನ್ನೂ ಓದಿರಿ: Ground Report | ಹತ್ಯೆಯೋ, ಆತ್ಮಹತ್ಯೆಯೋ? ಕೆ.ಆರ್‌.ಪೇಟೆ ದಲಿತ ಯುವಕನ ಸಾವಿನ ಸುತ್ತ ಹಬ್ಬಿದ ಅನುಮಾನ!

ಜಯಕುಮಾರ್‌ ಅವರ ಅನಕ್ಷರಸ್ಥ ಪತ್ನಿ ಲಕ್ಷ್ಮಿಯವರು ಗಂಡನ ಕೊಲೆಯಿಂದ ಆಘಾತಗೊಂಡು ಆರೋಪಿಯ ಬಂಧನಕ್ಕೆ ಆಗ್ರಹಿಸಿ ಕೊಟ್ಟಿರುವ ದೂರನ್ನು “ನನ್ನ ಗಂಡ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ತಿರುಚಿ ಕೇಸು ದಾಖಲಿಸಿರುವ ಪೊಲೀಸರ ಈ ಕುಕೃತ್ಯಕ್ಕೆ ಕ್ಷಮೆ ಎಂಬುದು ಇರಬಾರದು. ಜಯಕುಮಾರ್‌ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವ ಪ್ರಬಲ ಕಾರಣಗಳೂ ಇರಲಿಲ್ಲ. ಅಲ್ಲದೆ ಶವ ಸಿಕ್ಕ ಸ್ಥಳ ಮತ್ತು ಅದರ ಸ್ಥಿತಿಗತಿಗಳನ್ನು ಪರಿಶೀಲಿಸಿದರೆ ಸ್ವಯಂ ಆತ್ಮಹತ್ಯೆಗೆ ಯತ್ನಿಸಿರುವ ಯಾವ ಕುರುಹು – ಗುರುತುಗಳೂ ಕಂಡು ಬರುವುದಿಲ್ಲ. ಸುಟ್ಟು ಆರೆಬೆಂದ ಶವದ ದುರವಸ್ಥೆಯ ದೃಶ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸಿದರೆ ಕೊಲೆ ಮಾಡಿ ಹುಲ್ಲಿನ ಮೆದೆಯ ಬೆಂಕಿಗೆ ಎಸೆಯಲಾಗಿದೆ ಎಂಬ ಅಂಶ ಕಣ್ಣಿಗೆ ರಾಚುವಂತಿದೆ ಎಂದು ತಿಳಿಸಿವೆ.

ಈ ದುರ್ಘಟನೆಯ ಹಿಂದಿರುವ ನಿಜ ಸಂಗತಿಗಳನ್ನು ಸ್ಥಳ ಮಹಜರಿನ ಮೂಲಕ ಗೋಚರಿಸುವ ಪುರಾವೆಗಳನ್ನು ಸರಿಯಾಗಿ ತಿಳಿದುಕೊಂಡು ಮೃತ ಜಯಕುಮಾರ್‌ ಪತ್ನಿಯ ದೂರನ್ನು ಗಂಭೀರವಾಗಿ ಪರಿಗಣಿಸದೆ ಪೊಲೀಸ್ ಅಧಿಕಾರಿಗಳು ಕೊಲೆಯನ್ನು ಆತ್ಮಹತ್ಯೆ ಪ್ರಕರಣವೆಂದು ದೂರು ದಾಖಲು ಮಾಡಿಕೊಂಡಿರುವುದು ಆಘಾತಕ್ಕೊಳಗಾಗಿರುವ ಮೃತನ ಪತ್ನಿ ಲಕ್ಷ್ಮಿಯ ಕುಟುಂಬಕ್ಕಷ್ಟೇ ಅಲ್ಲದೆ ಇಡೀ ದಲಿತ ಸಮುದಾಯಕ್ಕೆ ಉದ್ದೇಶಪೂರ್ವಕವಾಗಿ ಮಾಡುತ್ತಿರುವ ಘೋರ ಅನ್ಯಾಯವಾಗಿದೆ ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿರಿ: ಗುಜರಾತ್‌ ಮಾಡೆಲ್ | ವಲಸಿಗರ ನೆಪದಲ್ಲಿ ಮುಸ್ಲಿಮರ ವಿರುದ್ಧ ‘ಬುಲ್ಡೋಜರ್ ನ್ಯಾಯ’

ಸಾರ್ವಜನಿಕರ ಆಕ್ರೋಶ, ದಲಿತ ಸಂಘಟನೆಗಳ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಆರು ದಿನಗಳ ತರುವಾಯ ಮೇ, 22ರ ರಾತ್ರಿ ಆರೋಪಿ ಅನಿಲ್‌ಕುಮಾರ್‌ನನ್ನು ಬಂಧಿಸಲಾಗಿದೆ. ಆದರೆ ಆತ್ಮಹತ್ಯೆ ಎಂದು ದಾಖಲಾಗಿರುವ ದೂರನ್ನು ಕೊಲೆ ಎಂದು ಪರಿಗಣಿಸಿ ಸಮಗ್ರ ತನಿಖೆಗೊಳಪಡಿಸಿದಾಗ ಮಾತ್ರ ನಿಜಸಂಗತಿ ಏನೆಂದು ಸಮಾಜಕ್ಕೆ ತಿಳಿಸಲು ಪೊಲೀಸರಿಗೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡಾಗ ಮಾತ್ರ ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾಗಲು ಸಾಧ್ಯವಾಗುತ್ತದೆ ಎಂದಿವೆ.

ಬಂಧಿತ ಅನಿಲ್‌ ಕುಮಾರ್‌ನನ್ನು ತೀವ್ರ ತನಿಖೆಕ್ಕೊಳಪಡಿಸಿ ಹೊರಬಂದ ಸತ್ಯಾಂಶದ ಆಧಾರದ ಮೇಲೆ ಕೊಲೆ ಮೊಕದ್ದಮೆ ದಾಖಲಿಸಬೇಕು. ದಲಿತರ ದೂರುಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ ಕರ್ತವ್ಯಲೋಪ ಎಸಗಿರುವ ಪೊಲೀಸರನ್ನು ಅಮಾನತು ಮಾಡಬೇಕು. ಫಾರಂ ನಂ. 57ರಲ್ಲಿ ಎರಡೂವರೆ ಎಕರೆ ಬಗರ್‌ಹುಕುಂ ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸಿರುವ ಜಯಕುಮಾರ್ ಕುಟುಂಬಕ್ಕೆ ಸದರಿ ಭೂಮಿಯನ್ನು ಮಂಜೂರು ಮಾಡಿಕೊಡಬೇಕು. ಈ ಹಿಂದೆ ಕೋಮು ಆಯಾಮದಲ್ಲಿ ಕೊಲೆಗಳಾದ ಸಂದರ್ಭದಲ್ಲಿ ಯಾವುದೇ ತನಿಖೆ ಮಾಡದೆ ರಾಜ್ಯ ಸರ್ಕಾರ ಸಂತ್ರಸ್ತ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರವನ್ನು ನೀಡಿದೆ. ಇದೇ ಮಾದರಿಯಲ್ಲಿ ಸಂತ್ರಸ್ತ ದಲಿತ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷ ರೂ. ಬಿಡುಗಡೆ ಮಾಡಬೇಕು ಹಾಗೂ ಎರಡು ಎಳೆಯ ಮಕ್ಕಳ ತಾಯಿಯಾಗಿರುವ ಸಂತ್ರಸ್ತೆ ಲಕ್ಷ್ಮಿ ಅವರಿಗೆ ಸರ್ಕಾರಿ ಕೆಲಸವನ್ನು ನೀಡಬೇಕು ಎಂದು ಆಗ್ರಹಿಸಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X