ಈ ವರ್ಷದ ಜನವರಿ 1ರಿಂದ ಮೇ 20ರವರೆಗೆ (5 ತಿಂಗಳು) ಉತ್ತರ ಪ್ರದೇಶದಲ್ಲಿ 13,000 ರಸ್ತೆ ಅಪಘಾತಗಳು ಸಂಭವಿಸಿದ್ದು, ಈ ಅಪಘಾತಗಳಲ್ಲಿ 7,700 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದಲ್ಲಿ ಸರ್ಕಾರದ ‘ರಸ್ತೆ ಸುರಕ್ಷತೆ ಮತ್ತು ಜಾಗೃತಿ ಘಟಕ’ವು ನಡೆಸಿರುವ ವಿಶ್ಲೇಷಣೆಯಲ್ಲಿ ಈ ಅಂಕಿಅಂಶ ಹೊರಬಿದ್ದಿದೆ. ವರದಿಯಾಗಿರುವ ಅಪಘಾತಗಳಲ್ಲಿ ಹೆಚ್ಚಿನವು ಮಧ್ಯಾಹ್ನ ಮತ್ತು ಸಂಜೆ ಸಮಯದಲ್ಲಿ ಸಂಭವಿಸಿದ್ದು, ಈ ಸಮಯವು ರಾಜ್ಯದಲ್ಲಿ ಅಪಾಯಕಾರಿ ಅವಧಿಗಳೆಂದು ಗುರುತಿಸಲಾಗಿದೆ.
2024ರಲ್ಲಿ, ಉತ್ತರ ಪ್ರದೇಶದಲ್ಲಿ 46,052 ರಸ್ತೆ ಅಪಘಾತಗಳು ಸಂಭವಿಸಿದ್ದವು. 24,118 ಮಂದಿ ಸಾವನ್ನಪ್ಪಿದರೆ, 34,665 ಜನರು ಗಾಯಗೊಂಡಿದ್ದರು. 2024ಕ್ಕೆ ಹೋಲಿಸಿದರೆ, 2023ರಲ್ಲಿ 44,534 ಅಪಘಾತಗಳು ಸಂಭವಿಸಿದ್ದು, 23,652 ಸಾವುಗಳು ಮತ್ತು 31,098 ಗಾಯಗೊಂಡಿದ್ದರು.
ಈ ವರ್ಷ ಸಂಭವಿಸಿರುವ ಎಲ್ಲ ಅಪಘಾತಗಳ ಪೈಕಿ 60% ಅಪಘಾತಗಳು ಮಧ್ಯಾಹ್ನ (ಮಧ್ಯಾಹ್ನ 12 ರಿಂದ ಸಂಜೆ 6) ಮತ್ತು ಸಂಜೆ (ಸಂಜೆ 6 ರಿಂದ ರಾತ್ರಿ 9) ಗಂಟೆಯ ಅವಧಿಯಲ್ಲಿ ಸಂಭವಿಸಿವೆ ಎಂದು ವಿಶ್ಲೇಷಣೆಯು ವಿವರಿಸಿದೆ.
ಮಧ್ಯಾಹ್ನದ ಸಮಯವು ಅತ್ಯಂತ ಮಾರಕ ಅವಧಿಯಾಗಿದ್ದು, ಆ ಸಮಯದಲ್ಲಿ 4,352 ಅಪಘಾತಗಳು ಮತ್ತು 2,238 ಸಾವುಗಳು ಸಂಭವಿಸಿವೆ. ಸಂಜೆಯ ಸಮಯದಲ್ಲಿ 3,254 ಅಪಘಾತಗಳು ಮತ್ತು 1,945 ಸಾವುಗಳು ಸಂಭವಿಸಿವೆ ಎಂದು ವರದಿ ಹೇಳಿದೆ.
ಇನ್ನು, ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ 2,629 ಅಪಘಾತಗಳು ಮತ್ತು 1,447 ಸಾವುಗಳು ಸಂಭವಿಸಿವೆ. ಅಲ್ಲದೆ, ರಾತ್ರಿ 9ರಿಂದ ಬೆಳಗಿನ ಜಾವ 3 ರವರೆಗೆ 2,585 ಅಪಘಾತಗಳು ಮತ್ತು 1,699 ಸಾವುಗಳು ವರದಿಯಾಗಿವೆ.
ಈ ಲೇಖನ ಓದಿದ್ದೀರಾ?: ಪ್ರತಿಷ್ಠಿತ ಹಾರ್ವರ್ಡ್ ವಿವಿ ಮೇಲೆ ಟ್ರಂಪ್ ವಕ್ರದೃಷ್ಟಿ: ವಿದ್ಯಾರ್ಥಿಗಳು ಬೀದಿಪಾಲು
ಚಾಲಕರು ನಿದ್ರೆಯಿಲ್ಲದೆ, ದಣಿದು ವಾಹನ ಚಾಲನೆ ಮಾಡುವ ಕಾರಣದಿಂದಾಗಿಯೇ ಹೆಚ್ಚು ಅಪಘಾತಗಳು ಸಂಭವಿಸಿವೆ ಎಂದು ಹೇಳಲಾಗಿದೆ.
ಹೀಗಾಗಿ, ತಡರಾತ್ರಿ ವಾಹನ ಚಲಾಯಿಸುವವರಿಗೆ ವಿಶ್ರಾಂತಿ ಪ್ರದೇಶಗಳು ಮತ್ತು 24/7 ಸಹಾಯವಾಣಿಗಳನ್ನು ಸ್ಥಾಪಿಸಲು ಹಾಗೂ ಚಾಲಕರಿಗೆ ನೆರವಾಗಲು ಹೆದ್ದಾರಿ ಚೆಕ್-ಪೋಸ್ಟ್‌ಗಳನ್ನು ಸಕ್ರಿಯಗೊಳಿಸುವಂತೆ ವರದಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಮೊದಲು ಅಲ್ಲಿರುವಂಥ ಸಿಎಂ ನ ಇಳಿಸಬೇಕು ಒಳ್ಳೆ ಸಿಎಂನ ಗೆಲ್ಲಿಸಬೇಕು ದೇಶದ ಪರವಾಗಿ ಜನತದ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡುವ ವ್ಯಕ್ತಿಯನ್ನು ಆರಿಸಬೇಕು ದೇಶದ ಮೇಲೆ ಅನೇಕ ಉದ್ಯೋಗಗಳು ತರುವಂತೆ ಅಂತ ಸಿಎಂ ಅನ್ನು ಆರಿಸಬೇಕು