ಬೇಡಿಕೆ ಇಲ್ಲದ ಕಾರಣ ರಾಯಚೂರು ಶಾಖೋತ್ಪನ್ನ ಕೇಂದ್ರದಲ್ಲಿ ನಾಲ್ಕು ವಿದ್ಯುತ್ ಘಟಕಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು, ಒಟ್ಟು ಉತ್ಪಾದನೆಯಲ್ಲಿ ಗಣನೀಯ ಇಳಿಕೆಯಾಗಿದೆ. 1720 ಮೆ.ವ್ಯಾ ವಿದ್ಯುತ್ ಉತ್ಪಾದನೆಯ ಪೈಕಿ 430 ಮೆ ವ್ಯಾ ವಿದ್ಯುತ್ ಮಾತ್ರ ಉತ್ಪಾದನೆಯಾಗುತ್ತಿದೆ ಎಂದು ತಿಳಿದುಬಂದಿದೆ.
ಶಾಖೋತ್ಪನ್ನ ಕೇಂದ್ರದಲ್ಲಿ 210 ಮೆ ವ್ಯಾ ವಿದ್ಯುತ್ ಉತ್ಪಾದನೆ ಮಾಡುವ ಒಂದು, ಎರಡು, ಮೂರು ಮತ್ತು ಆರನೇ ಘಟಕಗಳು ನಿಲುಗಡೆಯಾಗಿವೆ. 250 ಮೆ ವ್ಯಾ ವಿದ್ಯುತ್ ಉತ್ಪಾದಿಸುವ 8ನೇ ಘಟಕ ಸೇರಿದಂತೆ ಮೂರು ಘಟಕಗಳಿಂದ ಉತ್ಪಾದನೆ ಮಾಡಲಾಗುತ್ತಿದೆ. ಐದು ಮತ್ತು ಏಳನೇ ಘಟಕದಲ್ಲಿಯೂ ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ ಎನ್ನಲಾಗಿದೆ.
ಬಳ್ಳಾರಿ ಶಾಖೋತ್ಪನ್ನ ಕೇಂದ್ರದ ಮೂರು ಘಟಕ ಹಾಗೂ ವೈಟಿಪಿಎಸ್‌ನ ಎರಡು ಘಟಕಗಳಲ್ಲಿ ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಉಳಿದಂತೆ ಜಲ ವಿದ್ಯುತ್ ಘಟಕಗಳು ಬಹುತೇಕ ಸ್ಥಗಿತಗೊಂಡಿದ್ದರಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಗಣನೀಯ ಇಳಿಕೆಯಾಗಿದೆ.
11 ಸಾವಿರ ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ 2,600 ಮೆ.ವ್ಯಾ ಮಾತ್ರ ವಿದ್ಯುತ್ ಉತ್ಪಾದನೆಯಾಗುತ್ತಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವುದರಿಂದ ವಿದ್ಯುತ್ ಬೇಡಿಕೆಯಲ್ಲಿ ಇಳಿಕೆ ಕಂಡಿದೆ. ಆರ್‌ಟಿಪಿಎಸ್‌ನ 8 ಘಟಕಗಳಿಗೆ ಅಗತ್ಯವಿರುವ ಕಲ್ಲಿದ್ದಲು ಶೇ.20 ಸಂಗ್ರಹವಿದೆ. ಬೇಡಿಕೆಯಂತೆ ಪೂರೈಕೆಗೆ ಎಂಸಿಎಲ್ ಸಿದ್ದವಿದೆ. ರಾಯಚೂರು, ಯರಮರಸ್ ಹಾಗೂ ಬಳ್ಳಾರಿ ಘಟಕಗಳಲ್ಲಿ 58 ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ದಾಸ್ತಾನು ಸಂಗ್ರಹವಿದೆ ಎನ್ನಲಾಗಿದೆ.
ಶಾಖೋತ್ಪನ್ನ ಘಟಕದ ಯಂತ್ರ ಚಾಲಕ ರಂಗ ರೆಡ್ಡಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವಿದ್ಯುತ್ ಘಟಕಗಳು ವರ್ಷಕ್ಕೊಮ್ಮೆ ಸ್ಥಗಿತಗೊಳ್ಳುತ್ತವೆ. ಅಂತೆಯೇ ಈ ಬಾರಿ 2ನೇ ಘಟಕ ಸ್ಥಗಿತಗೊಂಡಿದೆ. ಇನ್ನೊಂದು ತಿಂಗಳು ಕಾಲ ಅದರಲ್ಲಿ ಕಾರ್ಯ ನಿರ್ವಹಿಸಲು ಆಗುವುದಿಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕಲುಷಿತ ನೀರು ಸೇವನೆಯಿಂದ 16 ಮಂದಿ ಅಸ್ವಸ್ಥ; ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
“ವಿದ್ಯುತ್ ಉತ್ಪಾದಿಸುವ 1ನೇ ಘಟಕದ ಕಟ್ಟಡ ಕಳೆದ ವರ್ಷ ಬಿದ್ದಿದ್ದು, ಅದರಲ್ಲಿ ಸಂಪೂರ್ಣವಾಗಿ ಕೆಲಸ ಸ್ಥಗಿತಗೊಂಡಿದೆ. ಅದರ ದುರಸ್ತಿ ಕಾರ್ಯ ನಡೆಸಲು ಮೂರು ವರ್ಷಗಳು ಬೇಕಾಗಬಹುದು. ಈ ಬಾರಿ ಯಾವುದೇ ಕೊರತೆಯಿಂದ ವಿದ್ಯುತ್ ಘಟಕ ಸ್ಥಗಿತಗೊಂಡಿಲ್ಲ” ಎಂದರು.
“ವಿದ್ಯುತ್ ಘಟಕಗಳು ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ವೇತನ ಕಡಿತಗೊಳಿಸುವುದಾಗಿ ಹೇಳುತ್ತಿದ್ದಾರೆ. ನಾವು ಗುತ್ತಿಗೆ ಕಾರ್ಮಿಕರಾಗಿರುವುದರಿಂದ ಯಾವುದೇ ಭದ್ರತೆ ಇಲ್ಲ. ಈ ಹಿನ್ನೆಲೆಯಲ್ಲಿ ಖಾಯಂ ನೇಮಕಾತಿಗೆ ಒತ್ತಾಯಿಸಿದ್ದೇವೆ” ಎಂದು ಅವಲತ್ತುಕೊಂಡರು.