ವಿಧಾನಸಭೆಯ 18 ಶಾಸಕರನ್ನು ಅಮಾನತು ಮಾಡಿರುವ ಆದೇಶವನ್ನು ವಿಧಾನಸಭೆಯ ಸಭಾಧ್ಯಕ್ಷ ಯು. ಟಿ. ಖಾದರ್ ಅವರು ಹಿಂಪಡೆದಿದ್ದಾರೆ. ಸ್ಪೀಕರ್ ಖಾದರ್ ಅವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಬಿಜೆಪಿ ಶಾಸಕರ ಅಮಾನತು ವಾಪಸ್ ಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ.
ಯು. ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ಸಂಧಾನ ಸಭೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ. ಪಾಟೀಲ್, ವಿಪಕ್ಷ ನಾಯಕ ಆರ್.ಅಶೋಕ್ ಈ ಸಭೆಯಲ್ಲಿ ಹಾಜರಿದ್ದರು.
ಇದನ್ನು ಓದಿದ್ದೀರಾ? 18 ಬಿಜೆಪಿ ಶಾಸಕರ ಅಮಾನತು ರದ್ದುಗೊಳಿಸುವಂತೆ ಸಿಎಂಗೆ ರಾಜ್ಯಪಾಲರ ಪತ್ರ
ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ರಾಜ್ಯ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ಶಾಸಕರು ಗದ್ದಲ ಸೃಷ್ಟಿಸಿದ್ದರು. ಅಶಿಸ್ತು ಮತ್ತು ಸ್ಪೀಕರ್‌ಗೆ ಅಗೌರವ ತೋರಿದ್ದಕ್ಕಾಗಿ 18 ಬಿಜೆಪಿ ಶಾಸಕರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಿ ಮಾರ್ಚ್ 21ರಂದು ಸ್ಪೀಕರ್ ಯು. ಟಿ ಖಾದರ್ ಆದೇಶಿಸಿದ್ದರು. ಸಭೆಯಿಂದ ಹೊರಹೋಗಲು ನಿರಾಕರಿಸಿದ ಶಾಸಕರನ್ನು ಮಾರ್ಷಲ್‌ಗಳು ಎಳೆದೊಯ್ದು ಹೊರಹಾಕಿದ್ದರು.
ಇದಾದ ಬಳಿಕ ಇತ್ತೀಚೆಗೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿತ್ತು. ಶಾಸಕರ ಅಮಾನತನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಸೂಚಿಸುವಂತೆ ಮನವಿ ಮಾಡಿತ್ತು. ಈ ಬೆನ್ನಲ್ಲೇ, ಮುಖ್ಯಮಂತ್ರಿ ಮತ್ತು ಸ್ಪೀಕರ್‌ಗೆ ರಾಜ್ಯಪಾಲರು ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.
ಇದನ್ನು ಓದಿದ್ದೀರಾ? 18 ಬಿಜೆಪಿ ಶಾಸಕರ ಅಮಾನತು | ನಿರ್ಣಯ ಆದೇಶ ಹಿಂಪಡೆಯಲು ಸಭಾಧ್ಯಕ್ಷರಿಗೆ ಆರ್ ಅಶೋಕ್ ಪತ್ರ
ಈ ನಿರ್ಣಯ ಅತ್ಯಂತ ಕಠೋರವಾಗಿದ್ದು, ಚುನಾಯಿತ ಜನಪ್ರತಿನಿಧಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹಿಂಪಡೆಯಬೇಕು ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಪತ್ರ ಬರೆದು ಮನವಿ ಮಾಡಿದ್ದರು.
ಅದಾದ ಬಳಿಕ 18 ಬಿಜೆಪಿ ಶಾಸಕರ ಅಮಾನತು ರದ್ದುಗೊಳಿಸಬೇಕೆಂದು ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸ್ಪೀಕರ್ ಯು ಟಿ ಖಾದರ್ ಅವರಿಗೆ ಪತ್ರ ಬರೆದಿದ್ದು ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕೆಂದು ಸಲಹೆ ನೀಡಿದ್ದರು. ಇವೆಲ್ಲವುದರ ಬಳಿಕ ಇಂದು(ಮೇ25) ನಡೆದ ಸಂಧಾನ ಸಭೆಯಲ್ಲಿ 18 ಬಿಜೆಪಿ ಶಾಸಕರ ಅಮಾನತು ವಾಪಸ್ ಪಡೆಯುವ ನಿರ್ಧಾರ ಮಾಡಲಾಗಿದೆ.
