ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಭಾನುವಾರ ಮತ್ತೆ ಉದ್ವಿಗ್ನತೆ ಉಂಟಾಗಿದೆ. ರಾಜಭವನದ ಕಡೆಗೆ ಮೆರವಣಿಗೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಯು ಶೆಲ್‌ಗಳು ಮತ್ತು ಅಣಕು ಬಾಂಬ್‌ಗಳನ್ನು ಹಾರಿಸಿದ್ದಾರೆ. ಇದರಿಂದಾಗಿ ಪ್ರತಿಭಟನಾಕಾರರು, ಭದ್ರತಾ ಪಡೆಯ ನಡುವೆ ಘರ್ಷಣೆ ಉಂಟಾಗಿದೆ.
ಶಿರುಯಿ ಲಿಲಿ ಉತ್ಸವದ ವರದಿ ಮಾಡಲು ಉಖ್ರುಲ್‌ಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಾಧ್ಯಮ ತಂಡವನ್ನು ಮಾರ್ಗಮಧ್ಯೆ ಭದ್ರತಾ ಸಿಬ್ಬಂದಿಗಳು ತಡೆದಿದ್ದು, ವಾಹನದಲ್ಲಿ ಪ್ರದರ್ಶಿಸಲಾದ ‘ಮಣಿಪುರ ರಾಜ್ಯ ಸಾರಿಗೆ’ ಎಂಬ ಪದಗಳನ್ನು ಮರೆಮಾಡಲು ಸೂಚಿಸಿದ್ದಾರೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಮಣಿಪುರ: ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯನ್ನು ಜೀವಂತವಾಗಿ ಸುಟ್ಟ ದುಷ್ಕರ್ಮಿಗಳು
ಈ ಘಟನೆಗೆ ಸಂಬಂಧಿಸಿದಂತೆ ಕ್ಷಮೆಯಾಚಿಸದ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ವಿರುದ್ಧ ಮೈತೇಯಿ ಸಂಘಟನೆಯ ಮಣಿಪುರ ಸಮಗ್ರತೆಯ ಸಮನ್ವಯ ಸಮಿತಿ (COCOMI) ಪ್ರತಿಭಟನೆಗೆ ಕರೆ ನೀಡಿತು. ಇದು ಮಣಿಪುರದ ಗುರುತು, ಹೆಮ್ಮೆ ಮತ್ತು ಗೌರವವನ್ನು ದುರ್ಬಲಗೊಳಿಸುವ ಕೃತ್ಯವೆಂದು ಸಮಿತಿ ಆರೋಪಿಸಿದೆ. ಸರಣಿ ಪ್ರತಿಭಟನಾ ಕಾರ್ಯಕ್ರಮಗಳನ್ನು ಘೋಷಿಸಿದೆ.
ಈ ಅಭಿಯಾನದ ಭಾಗವಾಗಿ ಪ್ರತಿಭಟನಾಕಾರರು ಭಾನುವಾರ ರಾಜಭವನದ ಕಡೆಗೆ ಮೆರವಣಿಗೆ ನಡೆಸಿದರು. ಆದರೆ ಭದ್ರತಾ ಪಡೆಗಳು ಅವರನ್ನು ತಡೆದಿದ್ದು ಈ ವೇಳೆ ಘರ್ಷಣೆ ಉಂಟಾಗಿದೆ. ಘರ್ಷಣೆಯಲ್ಲಿ ಐವರು ಪ್ರತಿಭಟನಾಕಾರರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
“ಮಹಿಳೆಯರು ಸೇರಿದಂತೆ ಯಾವುದೇ ಶಸ್ತ್ರಾಸ್ತ್ರ ಹೊಂದಿರದ ಜನರ ಮೇಲೆ ಇಂತಹ ಆಕ್ರಮಣ ನಡೆಸುವುದು ತೀವ್ರ ಕಳವಳಕಾರಿ. ಇಂತಹ ಪ್ರತಿಕೂಲ ಕ್ರಮಗಳನ್ನು ಶೀಘ್ರವೇ ನಿಲ್ಲಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಇನ್ನು ಏಳು ಸದಸ್ಯರ COCOMI ನಿಯೋಗವು ಮಂಗಳವಾರ ಕೇಂದ್ರ ಗೃಹ ಸಚಿವಾಲಯದೊಂದಿಗೆ ಸಭೆ ನಡೆಸಲಿದೆ. ಇದಕ್ಕಾಗಿ ಸೋಮವಾರ ನವದೆಹಲಿಗೆ ತೆರಳಲಿದೆ.
