ಪಂಜಾಬ್‌ನ ಅಮೃತಸರದಲ್ಲಿ ಭಾನುವಾರ ಅಪರಿಚಿತ ದುಷ್ಕರ್ಮಿಗಳು ಶಿರೋಮಣಿ ಅಕಾಲಿದಳ(ಎಸ್‌ಎಡಿ) ನಾಯಕ ಹರ್ಜಿಂದರ್ ಸಿಂಗ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹರ್ಜಿಂದರ್ ಸಿಂಗ್ ಅವರು ಜಿಲ್ಲೆಯ ಜಂಡಿಯಾಲ ಗುರುವಿನ ಕೌನ್ಸಿಲರ್ ಆಗಿದ್ದಾರೆ.
ಪೊಲೀಸರು ಆರೋಪಿಗಳನ್ನು ಗುರುತಿಸಿದ್ದು, ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳು ಹರ್ಜಿಂದರ್ ಅವರ ನಿವಾಸದ ಮೇಲೆ ಈ ಹಿಂದೆ ಗುಂಡು ಹಾರಿಸಿ ಬೆದರಿಕೆ ಹಾಕಿದ್ದರು ಎಂದು ಅವರ ಸಹೋದರ ಮತ್ತು ಸೋದರ ಮಾವ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಶಿರೋಮಣಿ ಅಕಾಲಿದಳ ನಾಯಕ ಸುಖ್‌ಬೀರ್ ಸಿಂಗ್ ಬಾದಲ್ ಮೇಲೆ ಗುಂಡಿನ ದಾಳಿ
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಪಂಜಾಬ್ ಪೊಲೀಸ್ ಎಡಿಸಿಪಿ ಹರ್ಪಾಲ್ ಸಿಂಗ್ ರಾಂಧವ, “ಹರ್ಜಿಂದರ್ ಸಿಂಗ್ ಅವರು ಅಮೃತಸರದ ಛೆಹರ್ತಾದಲ್ಲಿ ಒಂದು ಸಮಾರಂಭದಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ, ಮೂರರಿಂದ ನಾಲ್ಕು ಮಂದಿ ಬೈಕ್‌ನಲ್ಲಿ ಬಂದು ಗುಂಡು ಹಾರಿಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಾರ್ಗಮಧ್ಯೆ ಅವರು ಮೃತಪಟ್ಟರು” ಎಂದು ತಿಳಿಸಿದ್ದಾರೆ.
ಇನ್ನು ಈ ಹತ್ಯೆಯನ್ನು ಹಿರಿಯ ಎಸ್‌ಎಡಿ ನಾಯಕ ವಿಕ್ರಮ್ ಸಿಂಗ್ ಮಜಿಥಿಯಾ ಖಂಡಿಸಿದ್ದಾರೆ. ಆಮ್ ಆದ್ಮಿ ಪಕ್ಷ(ಎಎಪಿ) ನೇತೃತ್ವದ ರಾಜ್ಯ ಸರ್ಕಾರದಡಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಟೀಕಿಸಿದರು. ಹಾಗೆಯೇ ಕೆಲವು ದಿನಗಳ ಹಿಂದೆ ಕೌನ್ಸಿಲರ್ ಮನೆಯ ಮೇಲೆ ಗುಂಡಿನ ದಾಳಿ ನಡೆದ ವಿಡಿಯೋ ಹಂಚಿಕೊಂಡಿದ್ದಾರೆ.
ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಮೇಲೆ ವಾಗ್ದಾಳಿ ನಡೆಸಿರುವ ಎಸ್‌ಎಡಿ ನಾಯಕ, “ಭಗವಂತ್ ಮಾನ್ ಅವರೇ ನಿದ್ದೆಯಿಂದ ಎಚ್ಚೆತ್ತು ಕಾನೂನು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಿ. ಇಂದು ಕೌನ್ಸಿಲರ್ ಸಾವಿಗೆ ನೀವೆಲ್ಲರೂ ಜವಾಬ್ದಾರರು” ಎಂದು ಹೇಳಿದರು.
