ನಿರೀಕ್ಷೆಗೂ ಮುನ್ನವೇ ಮುಂಗಾರು ಕೇರಳ ಪ್ರವೇಶಿಸಿ ಕರ್ನಾಟಕದಲ್ಲೂ ಆರಂಭವಾಗಿದೆ. ಈಗಾಗಲೇ ರಾಜ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಹವಾಮಾನ ಇಲಾಖೆಯು 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಹಾಗೆಯೇ ಕೆಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಧಾರವಾಡ, ಗದಗ, ಹಾವೇರಿ, ಹಾಸನ, ಮೈಸೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದನ್ನು ಓದಿದ್ದೀರಾ? ಈ ಮಾನ್ಸೂನ್‌ನಲ್ಲಿ ದೇಶದಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆ: ಹವಾಮಾನ ಇಲಾಖೆ
ಮುನ್ನೆಚ್ಚರಿಕೆ ಕ್ರಮವಾಗಿ ಕೊಡಗು ಜಿಲ್ಲೆಯ ಶಾಲೆ, ಕಾಲೇಜಿಗೆ ಎರಡು ದಿನ ರಜೆ ಘೋಷಿಸಲಾಗಿದೆ. ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ, ವಿವಿ ವ್ಯಾಪ್ತಿಯ ಎಲ್ಲ ಘಟಕ, ಸರ್ಕಾರಿ, ಸಂಯೋಜಿತ ಮಹಾ ವಿದ್ಯಾಲಯಗಳಿಗೂ ಮೇ 26, 27 ರಜೆ ಘೋಷಿಸಲಾಗಿದೆ.
ರಾಜ್ಯದಾದ್ಯಂತ ಇಂದು(ಮೇ 26) ಗುಡುಗು, ಮಿಂಚು ಮತ್ತು ಜೋರಾದ ಗಾಳಿಯೊಂದಿಗೆ ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಿಗೆ ಹಾಗೂ ಉತ್ತರ ಒಳನಾಡು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಅದರಂತೆ ಈಗಾಗಲೇ ಮಂಗಳೂರು, ಬೆಂಗಳೂರು, ಗದಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಆರಂಭವಾಗಿದೆ.
ನಿನ್ನೆ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ಅತ್ಯಧಿಕ ಮಳೆಯಾಗಿದೆ. ಆಗುಂಬೆ(ಶಿವಮೊಗ್ಗ), ಭಾಗಮಂಡಲ(ಕೊಡಗು), ಉಡುಪಿ, ಪುತ್ತೂರು(ದಕ್ಷಿಣ ಕ್ನನಡ) ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಇನ್ನುಳಿದಂತೆ ಕಾರ್ಕಳ, ಕುಂದಾಪುರ, ಧರ್ಮಸ್ಥಳ, ಕೋಟಾ, ಕೊಡಗಿನ ನಾಪೋಕುಲು, ಕೊಪ್ಪ, ಕಳಸ, ಹುಂಚದಕಟ್ಟೆ ಮೊದಲಾದೆಡೆ ಭಾರೀ ಮಳೆಯಾಗಿದೆ.
