ಕೇಂದ್ರ ಸರ್ಕಾರದ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ ಮತ್ತು ರಾಜ್ಯ ಸರ್ಕಾರ ನೇತೃತ್ವದ ಸಂಧ್ಯಾ ಸುರಕ್ಷಾ ಯೋಜನೆ, ಮಾಶಾಸನ ದುರ್ಬಳಕೆ ಮಾಡಿಕೊಂಡು ಅಕ್ರಮ ದಾಖಲೆ ಸೃಷ್ಟಿಸಿ, ಅನಧಿಕೃತವಾಗಿ ವೃದ್ಧಾಪ್ಯ ವೇತನವನ್ನು ಪಡೆಯುತ್ತಿದ್ದ ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕಿನ ದಾಗಿನಕಟ್ಟೆ-ಯಲೋಧಹಳ್ಳಿಯ 23 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜನಪ್ರತಿನಿಧಿಯೊಬ್ಬರು ಈ ಬಗ್ಗೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿಯವರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಗಳಿಗೆ ತನಿಖೆಗೆ ಆದೇಶ ನೀಡಿದ್ದರು. ಅಧಿಕಾರಿಗಳ ಭೇಟಿ, ತನಿಖೆ ಕೈಗೊಂಡ ವೇಳೆ ಅಕ್ರಮ ಬಯಲಿಗೆ ಬಂದಿದ್ದು 23 ಜನರು ಅನಧಿಕೃತವಾಗಿ ಅಕ್ರಮ ದಾಖಲೆಗಳನ್ನು ಸಲ್ಲಿಸಿ ವೇತನ ಪಡೆಯುತ್ತಿದ್ದು, ಒಟ್ಟು 1,11,200 ಲಕ್ಷ ರೂಪಾಯಿ ಇದುವರೆಗೂ ವೇತನ ಪಾವತಿಯಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದ್ದು, ಆರೋಪಿಗಳ ವಿರುದ್ಧ ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹೊನ್ನಾಳಿ ಕಂದಾಯ ಉಪವಿಭಾಗದ ಉಪ ವಿಭಾಗಾಧಿಕಾರಿ ವಿ.ಅಭಿಷೇಕ್,
ದಾಗಿನಕಟ್ಟೆ ಹಾಗೂ ಯಲೋದಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ಗ್ರಾಮಗಳಲ್ಲಿ ವೃದ್ಧಾಪ್ಯ ವೇತನ ಪಡೆಯುತ್ತಿರುವವರ ಮನೆಗಳಿಗೆ ತೆರಳಿ ಪರಿಶೀಲಿಸಿದ್ದೇವೆ. ಈ ವೇಳೆ 23 ಜನ ಅನರ್ಹರು ವೃದ್ಧಾಪ್ಯ ವೇತನ ಹಾಗೂ 6 ಜನರು ಅಂಗವಿಕಲರ ಮಾಸಾಶನ ಪಡೆಯುತ್ತಿರುವುದು ಪತ್ತೆಯಾಗಿದೆ. ಅಕ್ರಮ ಹಿನ್ನೆಲೆ ತಪ್ಪು ಮಾಹಿತಿ ನೀಡಿ ಹಲವು ತಿಂಗಳಿಂದ ಪಡೆದಿದ್ದ ಮಾಸಾಶನ ನಿಲ್ಲಿಸಿ ಕ್ರಮ ಕೈಗೊಳ್ಳಲಾಗಿದೆ.
ಇವರ ವಿರುದ್ಧ ದೂರು ದಾಖಲಾಗಿದ್ದು, ಈ ಎರಡೂ ಯೋಜನೆಗಳ ಪೈಕಿ ಒಟ್ಟು 1,11,200 ಲಕ್ಷ ರೂಪಾಯಿ 23 ಜನ ಅನರ್ಹ ಫಲಾನುಭವಿಗಳ ಪಾಲಾಗಿದೆ ಎನ್ನುವ ಅಂಕಿ ಅಂಶಗಳಿದ್ದು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿರುವ ಹಣವನ್ನು ಆರೋಪಿಗಳಿಂದಲೇ ವಸೂಲಿ ಮಾಡುವಂತೆ ಕ್ರಮ ಕೈಗೊಳ್ಳಲು ವರದಿಯಲ್ಲಿ ಶಿಫಾರಸು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಜನಪ್ರತಿನಿಧಿಯೊಬ್ಬರು ವೃದ್ಧಾಪ್ಯ ವೇತನ, ಮಾಶಾಸನದ ಅಕ್ರಮದ ಬಗ್ಗೆ ವೃದ್ಧಾಪ್ಯ ವೇತನ ಅನರ್ಹರ ಪಾಲಾಗುತ್ತಿದ್ದ ವಿಚಾರವನ್ನು ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ್ ಸ್ವಾಮಿ ಅವರ ಗಮನಕ್ಕೆ ತಂದಿದ್ದು ಬಯಲಿಗೆಳೆದಿದ್ದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪರಿಶಿಷ್ಟ ಜಾತಿ ಗಣತಿ ಶೇ.100ರಷ್ಟು ಸಾಧನೆಯ ಹೆಗ್ಗಳಿಕೆ; ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.
ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಹೋಬಳಿಯ ಉಪ ತಹಶೀಲ್ದಾರ್ ನೀಲಮ್ಮ ಅವರು ವೃದ್ಧಾಪ್ಯ ವೇತನ ಮಂಜೂರು ಮಾಡುವ ವೇಳೆ ಸರಿಯಾದ ಕ್ರಮಕೈಗೊಂಡಿಲ್ಲದಿರುವುದು, ಕರ್ತವ್ಯ ಲೋಪ ಎಸಗಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ. ಅವರ ವಿರುದ್ಧ ಕ್ರಮಕ್ಕೆ ವರದಿಯಲ್ಲಿ ಒತ್ತಾಯಿಸಲಾಗಿದೆ. ಅಲ್ಲದೇ ವೃದ್ಧಾಪ್ಯ ವೇತನಕ್ಕೆ ಸಲ್ಲಿಸಿದ್ದ ಕಡತ ದಾಖಲೆಗಳು ಕಚೇರಿಯಲ್ಲಿಲ್ಲ, ಕಳೆದು ಹೋಗಿರುವುದಾಗಿ ಕಂಡು ಬಂದಿದೆ ಎನ್ನಲಾಗಿದೆ.