ಪೋಷಕರು ಮಕ್ಕಳಿಗೆ ಆರ್ಥಿಕ ಸಂಪತ್ತು ನೀಡಿದರೆ ಸಾಲದು ಪ್ರೀತಿಯ ಸಂಪತ್ತನ್ನೂ ನೀಡುವುದು ಅತ್ಯಗತ್ಯ. ಇಂದಿನ ತಲೆಮಾರಿಗೆ ಉಂಟಾಗುತ್ತಿರುವ ಮಾನಸಿಕ ಒತ್ತಡಗಳು, ತಂತ್ರಜ್ಞಾನ ಬಳಕೆಯ ದೋಷಪೂರಿತ ಪವೃತ್ತಿಗಳು ಹಾಗೂ ವಿದ್ಯಾಭ್ಯಾಸದಲ್ಲಿ ಆಸಕ್ತಿಯ ಕೊರತೆ ಪ್ರಸಕ್ತ ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಕಾರಣವಾಗಿವೆ. ಎಂದು ಬಳ್ಳಾರಿಯ ವಾಸವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ವಿಠ ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳ ಮನಸ್ಸು, ಮನೋಭಾವನೆ ಮತ್ತು ಆಧುನಿಕ ತಂತ್ರಜ್ಞಾನದ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ಜನರೇಶನ್ “Ctrl + Z – ಮನಸ್ಸಿನ ಪುನಃ ಹೊಂದಾಣಿಕೆ” ಎಂಬ ವಿಶಿಷ್ಟ ಜಾಗೃತಿ ಕಾರ್ಯಕ್ರಮವನ್ನು ವಾಸವಿ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ಮುಖ್ಯೋಪಾಧ್ಯಾಯ ವೀರೇಶ್ ಯು ಮಾತನಾಡಿ, “ಆಳವಾದ ಪರಿಶೀಲನೆ ಒಂದು ಚಿಂತನೆ ಹುಟ್ಟಿಸುತ್ತದೆ. ಅಪ್ರಾಪ್ತ ವಯಸ್ಕರಿಂದ ನಡೆಯುತ್ತಿರುವ ಕೆಲವು ಕಾನೂನು ಬಾಹಿರ ಚಟುವಟಿಕೆಗಳು, ಮಕ್ಕಳಲ್ಲಿ ಶಾರೀರಿಕ ಸಧೃಡತೆಯ ಕೊರತೆ, ಸಾಮಾಜಿಕ ಜಾಲತಾಣಗಳು, ಮೊಬೈಲ್ ಗೇಮ್ಸ್ ಮುಂತಾದವುಗಳಲ್ಲಿ ಮಗ್ನರಾಗುತ್ತಿರುವ ಅನುಪಯುಕ್ತ ಆಸಕ್ತಿಗಳು ಹೆಚ್ಚಾಗುತ್ತಿವೆ ಇದಕ್ಕೆ ಸಮಾಜ ಮತ್ತು ಪೋಷಕರು ಕಾರಣ. ಈ ಪ್ರವೃತ್ತಿ ಬದಲಾಗಬೇಕು” ಎಂದರು.
ಇದನ್ನೂ ಓದಿ: ಬಳ್ಳಾರಿ | ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಿ; ಸೋಮಶೇಖರ್ ಆಗ್ರಹ
ಕಾರ್ಯಕ್ರಮದಲ್ಲಿ ಟ್ರಸ್ಟ್ ಉಪಾಧ್ಯಕ್ಷ ಜೀತೇಂದ್ರ, ಕಾರ್ಯದರ್ಶಿ ಪಿ ಎನ್ ಸುರೇಶ್, ಜಂಟಿ ಕಾರ್ಯದರ್ಶಿ ವಠಂ ಆದಿತ್ಯ, ಸದಸ್ಯರಾದ ಅಗಡಿ, ಗವಿಸಿದ್ದೇಶ್ವರ, ಪುಸಾದ್, ಮುದುಗಲ್ ಸುಭಾಷ್, ವಿಜಯ್ ಕುಮಾರ್, ಹಾಸ್ಯ ಕಲಾವಿದ ಏರಿಸ್ವಾಮಿ, ಚಂದ್ರಶೇಖರ್ ಆಚಾರ್, ಶಿಕ್ಷಕರು, ವಿದ್ಯಾರ್ಥಿಗಳ ಹಾಗೂ ಪೋಷಕರು ಪಾಲ್ಗೊಂಡಿದ್ದರು.