ಸಹಜವಾಗಿ ದಾಖಲಾಗಬೇಕಿದ್ದ ಕೊಲೆ ಪ್ರಕರಣಕ್ಕೆ ಇಷ್ಟೆಲ್ಲ ಹರಸಾಹಸ ಪಡಬೇಕಾಗಿರುವುದು, ಇದು ಮತ್ತೊಂದು ಕಂಬಾಲಪಲ್ಲಿ ಪ್ರಕರಣವೆಂದು ದಲಿತರು ದುಃಖಿಸುವಂತಾಗಿರುವುದು ನಮ್ಮ ವ್ಯವಸ್ಥೆಯ ಗಾಯಗಳೇ ಸರಿ...
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಮೇ 17ರಂದು ನಡೆದಿರುವ ದಲಿತ ಯುವಕ ಜಯಕುಮಾರ್ ಅವರ ಅನುಮಾನಾಸ್ಪದ ಸಾವು ಮತ್ತು ಬೆಂಕಿಯಲ್ಲಿ ಮೃತ ದೇಹ ಸಿಕ್ಕಿರುವ ಘಟನೆಯು ನಾಗರಿಕ ಸಮಾಜಕ್ಕೆ ಕಪ್ಪು ಚುಕ್ಕೆ. ಆದರೆ ಇಂತಹ ಪ್ರಕರಣದಲ್ಲಿ ಪೊಲೀಸರು ಅಸೂಕ್ಷ್ಮತೆ ಮೆರೆದಿರುವುದು ಮತ್ತಷ್ಟು ಆಘಾತಕಾರಿ ವಿಚಾರ.
ಜಯಕುಮಾರ್ ಅವರ ಪತ್ನಿ ಕೆ.ಬಿ.ಲಕ್ಷ್ಮಿ ಅನಕ್ಷರಸ್ಥೆ. ಅವರ ಸಹಿ ಇರುವ ದೂರನ್ನು ಓದಿ ತಿಳಿಸಿರುವುದಾಗಿ ವಂಚಿಸಲಾಗಿದೆ. ”ನನ್ನ ಗಂಡ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂಬುದಾಗಿ ದೂರಿನಲ್ಲಿ ನಮೂದಿಸಿರುವುದು ಆ ಸಂತ್ರಸ್ತೆಯ ಗಮನಕ್ಕೆ ಬಂದಿಲ್ಲ ಎಂಬ ಸಂಗತಿ ನಂತರದ ಬೆಳವಣಿಗೆಗಳಿಂದ ಗೊತ್ತಾಗಿದೆ. ”ಗ್ರಾಮದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದಲೂ ನಮ್ಮ ಕುಟುಂಬಕ್ಕೆ ನಿರಂತರ ಕಿರುಕುಳ ಕೊಡುತ್ತಿದ್ದ ಗ್ರಾಮದ ಸವರ್ಣೀಯ ಕುಟುಂಬದ ಅನಿಲ್ ಕುಮಾರನೇ ನನ್ನ ಗಂಡನನ್ನು ಕೊಂದಿದ್ದಾನೆ. ನನ್ನ ಗಂಡ ಕೊಲೆಯಾಗಿದ್ದಾರೆ ಎಂದೇ ನಾನು ಹೇಳಿದ್ದೆ. ಆದರೂ ಆತ್ಮಹತ್ಯೆ ಪ್ರಕರಣ ಎಂದು ದಾಖಲಿಸಿರುವುದು ತೀವ್ರ ನೋವಿನಲ್ಲಿದ್ದ ನನಗೆ ಆ ದಿನ ತಿಳಿಯಲಿಲ್ಲ” ಎಂದು ನೊಂದು ನುಡಿಯುತ್ತಾರೆ ಲಕ್ಷ್ಮಿ.
ಗ್ರಾಮಸ್ಥರು ನೀಡುವ ಮಾಹಿತಿಗಳು ಅನೇಕ ಸಂಗತಿಗಳನ್ನು ಬಿಚ್ಚುಡುತ್ತವೆ. ”ಬಡವನಾದ ಜಯಕುಮಾರ್ ಕೆಲ ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಇತ್ತ ಕುಟುಂಬಕ್ಕೆ ಆಸರೆಯಾಗಲು ಶ್ರಮಪಡುತ್ತಿದ್ದರು. ಸರ್ಕಾರದಿಂದ ಸಿಕ್ಕಿರುವ 1 ಎಕರೆ 20 ಗುಂಟೆ ಜಮೀನಿನಲ್ಲಿ ಕಲ್ಲು, ಮುಳ್ಳು, ಗಿಡ-ಗಂಟಿಗಳು ಬೆಳೆದಿರುವುದನ್ನು ತೆರವು ಮಾಡಿಸಿ, ನೆಲವನ್ನು ಸಮತಟ್ಟು ಮಾಡಿಕೊಂಡು ಜೀವನೋಪಾಯ ಕಂಡುಕೊಳ್ಳುವ ಕನಸು ಕಂಡಿದ್ದ. ಆದರೆ ಜಯಕುಮಾರ್ ಜಮೀನಿನಲ್ಲಿ ಹುಲ್ಲಿನ ಮೆದೆ ಹಾಕಿಕೊಂಡಿದ್ದ ಅನಿಲ್ ಕುಮಾರ್ನಿಗೆ ಎಷ್ಟು ಹೇಳಿದರೂ ಅದನ್ನು ತೆರವು ಮಾಡಲಿಲ್ಲ. ಐದು ವರ್ಷಗಳಿಂದಲೂ ಈ ವಿವಾದ ನಡೆಯುತ್ತಿತ್ತು. ಎರಡು ವರ್ಷಗಳ ಹಿಂದೆ ಹುಲ್ಲು ಖಾಲಿಯಾದ ಸಂದರ್ಭದಲ್ಲಿ, ‘ಈಗಲಾದರೂ ತೆರವು ಮಾಡಿ’ ಎಂದು ಜಯಕುಮಾರ್ ಕೇಳಿಕೊಂಡಿದ್ದರು. ಆದರೆ ಅನಿಲ್ಕುಮಾರ್ ರಾತ್ರೋರಾತ್ರಿ ಹುಲ್ಲಿನ ಮೆದೆ ಹಾಕಿ ಮತ್ತೆ ದಬ್ಬಾಳಿಕೆಯನ್ನು ಮುಂದುವರಿಸಿದ.
ಈ ನಡುವೆ ಬೆಂಗಳೂರಿಗೆ ದುಡಿಯಲು ಬಂದ ಜಯಕುಮಾರ್, ಹಣ ಕೂಡಿಟ್ಟುಕೊಂಡು ಹೋಗಿ ಊರಿನ ಜಮೀನು ಹಸನು ಮಾಡಲು ಯೋಚಿಸಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ಅಂದರೆ ಮೇ 15ರಂದು ಅನಿಲ್ಕುಮಾರ್ ಮತ್ತೆ ಕ್ಯಾತೆ ತೆಗೆದಿದ್ದ. ”ನಿನ್ನ ಕೊಲೆ ಮಾಡಿ, ಇದೇ ಹುಲ್ಲಿನ ಮೆದೆಯಲ್ಲಿ ಸುಟ್ಟು ಹಾಕುವೆ” ಎಂದೆಲ್ಲ ಕೊಲೆ ಬೆದರಿಕೆ ಹಾಕಿದ್ದ. ಭಯಬಿದ್ದ ಜಯಕುಮಾರ್ ಕೆ.ಆರ್.ಪೇಟೆ ಪೊಲೀಸರಿಗೆ ಮೇ 16ರಂದು ದೂರು ನೀಡಿದ್ದರು. ಆದರೆ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಗೊತ್ತಾಗುತ್ತದೆ. ಮಾರನೇ ದಿನವೇ ಜಯಕುಮಾರ್ ಅವರ ಶವ ಮೆದೆಯ ಹುಲ್ಲಿನ ಜೊತೆಗೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಯಿತು. ”ಅನಿಲ್ ಕುಮಾರನೇ ಈ ಕೃತ್ಯ ಎಸಗಿದ್ದಾನೆ. ಅನಿಲ್ಕುಮಾರ್ ಊರಿನಲ್ಲಿ ಮೊದಲಿನಿಂದಲೂ ಗೂಂಡಾಗಿರಿ ಮಾಡಿಕೊಂಡು ತಿರುಗುತ್ತಿದ್ದ ವ್ಯಕ್ತಿ, ರೌಡಿ ಶೀಟರ್ ಆಗಿಯೂ ಗುರುತಿಸಿಕೊಂಡಿದ್ದ. ಪೋಕ್ಸೋ ಪ್ರಕರಣದಲ್ಲಿ ಸಿಲುಕಿ ಜೈಲಿನಲ್ಲೂ ಕೆಲಕಾಲ ಇದ್ದ” ಎಂಬ ಗಂಭೀರ ಆರೋಪವನ್ನು ಊರಿನ ದಲಿತರು ಮತ್ತು ಸವರ್ಣೀಯ ಮುಖಂಡರು ಮಾಡುತ್ತಿದ್ದಾರೆ. ಹೀಗಿರುವಾಗ ಜಯಕುಮಾರ್ ತಾನಾಗಿಯೇ ಬೆಂಕಿ ಹಚ್ಚಿಕೊಂಡು ಸಾಯುವ ಸನ್ನಿವೇಶ ಬರುವುದಾದರೂ ಎಲ್ಲಿ?
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಕೊಲೆ ಕೃತ್ಯಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಗಂಭೀರ ಮತ್ತು ಆಘಾತಕಾರಿ!
ಮೇ 17ರಂದು ಜಮೀನು ಸಮತಟ್ಟು ಮಾಡಿಸುವ ಕೆಲಸ ನಡೆಯುತ್ತಿತ್ತು. ಊಟ ತೆಗೆದುಕೊಂಡು ಹೋದ ಲಕ್ಷ್ಮಿ ಅವರು ಗಂಡನ ಶವ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿರುವುದನ್ನು ನೋಡಿ, ಚೀರಾಡಿದ ಬಳಿಕವಷ್ಟೇ ಘಟನೆ ಬೆಳಕಿಗೆ ಬಂದಿದೆ. ಬೆಂಕಿ ಹತ್ತಿಕೊಂಡ ಬಳಿಕ ವ್ಯಕ್ತಿಯೊಬ್ಬ ಚೀರುವುದು, ಕಾವಿಗೆ ತಡೆಯಲಾರದೆ ಸುತ್ತಲೂ ಓಡಾಡುವುದು ಸಾಮಾನ್ಯ. ಆದರೆ ಮೃತದೇಹ ಬಿದ್ದಲ್ಲೇ ಬಿದ್ದಿತ್ತು. ಚೀರಾಡಿದ ದನಿಯೂ ಇಲ್ಲ, ಪಕ್ಕದಲ್ಲೇ ಇರುವ ಮನೆಯವರಿಗೂ ಘಟನೆ ಗೊತ್ತಿಲ್ಲ. ಮೊದಲು ಕೊಲೆ ಮಾಡಿ, ನಂತರ ಬೆಂಕಿ ಹಚ್ಚಿ ಸುಟ್ಟಿರುವ ಸಾಧ್ಯತೆಯೇ ಹೆಚ್ಚು ಎಂಬುದು ಪ್ರತಿಯೊಬ್ಬರ ಗುಮಾನಿ. ಲಕ್ಷ್ಮಿ ಅವರು ಹೇಳುವಂತೆ, ಜಯಕುಮಾರ್ ತನ್ನೆರಡು ಎಳೆಯ ಮಕ್ಕಳನ್ನು ಬಿಟ್ಟು ಸಾಯುವಂತಹ ವ್ಯಕ್ತಿಯಲ್ಲ.
ಈ ಎಲ್ಲವನ್ನೂ ಗಮನಿಸಿದರೆ ಇಲ್ಲಿ ಪೊಲೀಸರು ತರಾತುರಿಯಲ್ಲಿ ಪ್ರಕರಣವನ್ನು ಮುಗಿಸಿಬಿಡುವ ಧಾವಂತದಲ್ಲಿ ಇದ್ದಂತೆ ತೋರುತ್ತದೆ. ”ನನ್ನ ಗಂಡ ಆತ್ಮಹತ್ಯೆ ಮಾಡಿಕೊಂಡಿಲ್ಲ, ಕೊಲೆಯಾಗಿದ್ದಾರೆ” ಎಂದು ಲಕ್ಷ್ಮಿ ಮರುದೂರು ನೀಡಿದ್ದಾರೆ. ಮತ್ತೊಂದೆಡೆ ಆರೋಪಿ ಅನಿಲ್ ಕುಮಾರನ ಬಂಧನವೂ ಆಗಿದೆ. ಕೊಲೆ ಪ್ರಕರಣವೆಂದೇ ಪರಿಗಣಿಸಬೇಕೆಂದು ಮೇ 27ರಂದು ಕೆ.ಆರ್.ಪೇಟೆ ಚಲೋ ಹೋರಾಟವನ್ನು ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡಿವೆ. ಸಹಜವಾಗಿ ದಾಖಲಾಗಬೇಕಿದ್ದ ಕೊಲೆ ಪ್ರಕರಣಕ್ಕೆ ಇಷ್ಟೆಲ್ಲ ಹರಸಾಹಸ ಪಡಬೇಕಾಗಿರುವುದು, ಇದು ಮತ್ತೊಂದು ಕಂಬಾಲಪಲ್ಲಿ ಪ್ರಕರಣವೆಂದು ದಲಿತರು ದುಃಖಿಸುವಂತಾಗಿರುವುದು ನಮ್ಮ ವ್ಯವಸ್ಥೆಯ ಗಾಯಗಳೇ ಸರಿ.
ಈ ಪ್ರಕರಣದಲ್ಲಿ ಪೊಲೀಸರು ಕರ್ತವ್ಯಲೋಪ ಎಸಗಿರುವುದು ಮೇಲುನೋಟಕ್ಕೇ ಕಾಣುತ್ತಿದೆ. ತಪ್ಪಿತಸ್ಥ ಪೊಲೀಸರ ಅಮಾನತಿಗೆ ಸರ್ಕಾರ ಕ್ರಮ ವಹಿಸುವ ಜರೂರು ಇದೆ. ಇದರ ಜೊತೆಗೆ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕಾಗಿದೆ. ಕೋಮು ಆಯಾಮದಲ್ಲಿ ಕೊಲೆಗಳಾದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಯಾವುದೇ ತನಿಖೆ ನಡೆಸದೆ ಸಂತ್ರಸ್ತ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರವನ್ನು ಈ ಹಿಂದೆ ನೀಡಿದೆ. ದಲಿತರ ಕೊಲೆಗಳಾದ ಸಂದರ್ಭದಲ್ಲಿ ಇಂತಹದ್ದೇ ಕ್ರಮ ತೆಗೆದುಕೊಳ್ಳುವುದು ಮಾನವೀಯ ನಡೆಯಾಗುತ್ತದೆ. ಯಾವುದೇ ಜಾತಿ, ಜನಾಂಗ, ಧರ್ಮದವರ ಜೀವವಾದರೂ ಒಂದೇ ಎಂಬ ಸಂದೇಶವನ್ನು ನೀಡುವ ನಿಟ್ಟಿನಲ್ಲಿ ಜಯಕುಮಾರ್ ಕುಟುಂಬಕ್ಕೆ 25 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡಬೇಕು. ಎಷ್ಟೇ ಕಾನೂನಿನ ರಕ್ಷಣೆ ಇದ್ದರೂ ದಲಿತರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ದುಷ್ಟ ಜಾತಿಗ್ರಸ್ತ ಮನಸ್ಥಿತಿಗೆ ಇನ್ನಾದರೂ ಮದ್ದು ಹುಡುಕಿಕೊಳ್ಳಬೇಕಾಗಿದೆ.
