ವಿಜಯಪುರ ನಗರದ ಜಿಲ್ಲಾಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗಾಗಿ ಕಿಮೋಥೆರಪಿ ಚಿಕಿತ್ಸೆ ಘಟಕ ಆರಭಿಸಲಾಗಿದೆ. 10 ಬೆಡ್‌ಗಳ ಸೌಲಭ್ಯ ಮಾಡಲಾಗಿದ್ದು, ಜಿಲ್ಲೆಯ ಜನತೆ ಸ್ಥಳೀಯವಾಗಿ ಇನ್ನುಮುಂದೆ ಕಿಮೋಥೆರಪಿ ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ವೈದ್ಯರು, ಸಿಬ್ಬಂದಿ ಹಾಗೂ ಅಗತ್ಯ ಉಪಕರಣಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ತಿಳಿಸಿದ ಅವರು, “ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ತಪಾಸಣೆ ಮಾಡಿಕೊಂಡ ನಂತರದಲ್ಲಿ ಮೂರು ತಿಂಗಳು ಕಿಮೋಥೆರಪಿ ಪಡೆಯಬೇಕಾಗುತ್ತದೆ. ವಾರಕ್ಕೊಮ್ಮೆ ಈ ಚಿಕಿತ್ಸೆ, ಇಂಜೆಕ್ಷನ್ ತೆಗೆದುಕೊಳ್ಳುವುದು ಅಗತ್ಯವಾಗಿರುತ್ತದೆ. ಈಗ ಜಿಲ್ಲಾಸ್ಪತ್ರೆಯಲ್ಲಿ ಅಂತಹ ಕಿಮೋಥೆರಪಿ ನೀಡಲಾಗುತ್ತದೆ” ಎಂದು ಹೇಳಿದರು.
“10 ಬೆಡ್‌ಗಳ ಸೌಲಭ್ಯ ಮಾಡಲಾಗಿದ್ದು, ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಆಸ್ಪತ್ರೆ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಿ ನಿಯೋಜಿಸಲಾಗಿದೆ. ನಮ್ಮಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸಕರಿದ್ದು, ಶಸ್ತ್ರ ಚಿಕಿತ್ಸೆ ಹಾಗೂ ಕಿಮೋಥೆರಪಿ ಮಾಡಲಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಕಿಮೋ ವೆಚ್ಚವು ಕ್ಯಾನ್ಸರ್ ಕಾಯಿಲೆ ಮೇಲೆ ಅವಲಂಬನೆಯಾಗಿರುತ್ತದೆ. ಕೆಲವೊಮ್ಮೆ ₹5.2ಲಕ್ಷ ಇಲ್ಲವೇ ₹20,000ದಲ್ಲಿ ಚಿಕಿತ್ಸೆ ಸಿಗುತ್ತದೆ. ಆದರೆ, ಇದೀಗ ಜಿಲ್ಲಾಸ್ಪತ್ರೆಯಲ್ಲಿ ಅದರ ಸೌಲಭ್ಯ ಸಿಗಲಿದೆ” ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಐಸಿಎಂಆರ್ -ಎನ್‌ಆರ್‌ಸಿಪಿ 2023ರ ವರದಿಯ ಪ್ರಕಾರ ಸುಮಾರು 70 ಸಾವಿರ ಹೊಸ ಕ್ಯಾನ್ಸರ್ ಪ್ರಕರಣಗಳನ್ನು ವರದಿಯಾಗಿವೆ. ಪ್ರಮುಖವಾಗಿ ಸ್ತನ(ಶೇ.18), ಗರ್ಭಕಂಠ(ಶೇ.14), ಬಾಯಿ(ಶೇ.12), ಶ್ವಾಸಕೋಶ(ಶೇ.8) ಮತ್ತು ಕೊಲೊರೆಕ್ಟಲ್(ಶೇ.6) ಕ್ಯಾನ್ಸರ್‌ಗಳು ಕಾಣಿಸಿಕೊಂಡಿವೆ.
ಇದನ್ನೂ ಓದಿದ್ದೀರಾ? ಚಾಮರಾಜನಗರ | ತಾಂತ್ರಿಕ ಕಾರಣಗಳಿಂದ 273 ಕುಟುಂಬ ಜಾತಿ ಗಣತಿ ನೋಂದಣಿಯಿಂದ ಹಿಂದುಳಿದಿದೆ : ವಡಗೆರೆ ದಾಸ್
“ಪ್ರತಿ ಒಂದು ಲಕ್ಷ ಜನಸಂಖ್ಯೆಯಲ್ಲಿ 12 ಜನರಿಗೆ ಬಾಯಿ ಕ್ಯಾನ್ಸರ್, ಮಹಿಳೆಯರಲ್ಲಿ 23 ಸ್ತನ ಕ್ಯಾನ್ಸರ್ ಪ್ರಕರಣಗಳು, 15 ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ವಿಜಯಪುರ ಜಿಲ್ಲಾ ಸೇರಿ 16 ಜಿಲ್ಲೆಗಳಲ್ಲಿ ಕಿಮೋಥೆರಪಿ ಘಟಕಗಳನ್ನು ಸರ್ಕಾರ ಆರಂಭಿಸಿದೆ” ಎಂದು ಮಾಹಿತಿ ನೀಡಿದರು.