ಒಂದಿಬ್ರು ಖಾವಿ ತೊಟ್ಟಿರೋ ಸ್ವಾಮಿಗಳು ಸಮತಟ್ಟಾದ ಮತ್ತೊಂದು ಬಂಡೆಯ ಮೇಲೆ ಕುಳಿತು ಆ ಕಡೆಯ ಕೇರಳದ ಪಾಲಕ್ಕಾಡ್ ಗಡಿಗೆ ಸೇರಿರೋ ಬೆಟ್ಟ ಗುಡ್ಡ ನದಿ ಕಣಿವೆಗಳತ್ತ ದೃಷ್ಟಿ ನೆಟ್ಟಿದ್ದರು. ಆ ತ್ರಿಶೂಲಗಳ ಮಧ್ಯ ಸಾಗುತ್ತಾ ಮುಂದೆ ಸಾಗಿದರೆ ಕಣ್ಣಿಗೆ ಕಾಣುವುದೇ ಬೃಹತ್ ಹೆಬ್ಬಂಡೆಗಳ ಕೆಳಗಡೆ ಗುಹೆಯಂತಿರೋ ಜಾಗದಲ್ಲಿ ನೂರೆಂಟು ಹೂಗಳಿಂದ ಅಲಂಕೃತವಾದ ಉದ್ಭವ ಲಿಂಗ
ಭೂಮಿಯು ಮೇಲಿರುವ ಎಲ್ಲಾ ಎತ್ತರದ ಶಿಖರಗಳನ್ನು ಏರಿ ತನ್ನ ಪರಾಕ್ರಮ ಮೆರೆದಿರುವ ಮಾನವನಿಗೆ ಆ ಒಂದು ಶಿಖರದ ತುದಿಯನ್ನ ಮುಟ್ಟಲಾಗಿಲ್ಲ. ಅದು ಸಾಕ್ಷಾತ್ ಶಿವನೇ ವಾಸವಿರುವ ಜಾಗ. ಅದಕ್ಕಿಂತ ದೊಡ್ಡದಾದ ಆಧ್ಯಾತ್ಮಿಕ ಸ್ಥಳ ಮತ್ತೊಂದಿಲ್ಲ. ಅದುವೇ ಕೈಲಾಸ ಪರ್ವತ; ಇಂದಿನ ಆಧುನಿಕ ಮಾನವನ ತಂತ್ರಜ್ಞಾನಕ್ಕೆ ನಿಲುಕದ ಶಿಖರ. ಆದರೆ ಈ ಕೈಲಾಸ ಪರ್ವತಕ್ಕೆ ಸಮಾನವಾಗಿ ಪೂಜಿಸಲ್ಪಡುವ ಶಿಖರವೊಂದಿದೆ ಅಂದ್ರೆ ನೀವು ನಂಬಲೇಬೇಕು. ಇದನ್ನು ನಾವು ಹತ್ತಲೂಬಹುದು, ಅಲ್ಲಿರುವ ಶಿವನ ದರ್ಶನ ಕೂಡ ಪಡೆಯಬಹುದು. ಇದು ದಕ್ಷಿಣ ಕೈಲಾಸ ಎಂದೇ ಖ್ಯಾತಿ ಪಡೆದಿರುವ ವೆಳ್ಳಿಯನ್ ಗಿರಿ ಬೆಟ್ಟ. ಕೇರಳದ ಪಾಲಕ್ಕಾಡ್ ಮತ್ತು ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಗಳ ಗಡಿಯಲ್ಲಿರುವ ಈ ವೆಳ್ಳಿಯನ್ ಗಿರಿ ಬೆಟ್ಟ ದಾಖಲೆಗಳ ಪ್ರಕಾರ ತಮಿಳುನಾಡಿಗೆ ಸೇರಿದೆ. ವರ್ಷದಲ್ಲಿ ಕೇವಲ ನಾಲ್ಕೇ ನಾಲ್ಕು ತಿಂಗಳು ತೆರೆಯುವ ಈ ಬೆಟ್ಟದ ಚಾರಣ ಶುರುವಾಗೋದು ಶಿವರಾತ್ರಿಯಂದು. ಅಲ್ಲಿಂದ ಮೇ ತಿಂಗಳು ಕೊನೆಯವರೆಗೂ ನಿತ್ಯ ಸಾವಿರಾರು ಭಕ್ತರು, ಚಾರಣಿಗರು, ವಿದೇಶಿಗರು ಭೇಟಿ ನೀಡುವುದುಂಟು.
ಕಳೆದ ವರ್ಷ ಕುಮಾರ ಪರ್ವತ ಚಾರಣ ಮಾಡಿದ ಮೇಲೆ ನನ್ನ ಗೆಳೆಯರೊಬ್ಬರು ಈ ವೆಳ್ಳಿಯನ್ ಗಿರಿ ಚಾರಣದ ಬಗ್ಗೆ ಪ್ರಸ್ತಾಪಿಸಿ ಈ ವರ್ಷ ಹೋಗೋಣ ಅಂತ ಒಂದು ನಾಲ್ಕು ತಿಂಗಳು ಮುಂಚೆನೇ ತಿಳಿಸಿದ್ರು. ಜೊತೆಗೆ ಒಂದು ತಿಂಗಳ ಮುಂಚೆನೇ ಟ್ರೈನ್ ಟಿಕೆಟ್ ಕೂಡ ಬುಕ್ ಮಾಡಿದ್ರು. ಆದರೆ ಹೊರಡೋ ಒಂದು ವಾರದ ಮುಂಚೆ ನಮ್ಮ ತಂಡದಲ್ಲಿದ್ದ ಒಂದಿಬ್ಬರು ಯಾವುದೋ ವೈಯಕ್ತಿಕ ಕಾರಣಕ್ಕಾಗಿ ಹಿಂದೆ ಸರಿದ ಕಾರಣ ನನ್ನ ಹಳೆಯ ಗೆಳೆಯನೊಬ್ಬ ಬೆಂಗಳೂರಲ್ಲಿ ಇರೋದು ಗೊತ್ತಾಗಿ ಅವನನ್ನ ಕರಕೊಂಡು ಹೋಗೋ ಮಾತಾಯ್ತು. ಅಂತೂ ನಾವು ಹೊರಡೋ ದಿನ ಬಂದೇ ಬಿಡ್ತು. ಈ ಮುಂಚೆ ಕರ್ನಾಟಕದಲ್ಲಿ ಮಾತ್ರ ಟ್ರೆಕ್ಕಿಂಗ್ ಮಾಡಿದ್ದ ನನಗೆ ಇದು ನನ್ನ ಮೊದಲ ಹೊರ ರಾಜ್ಯದ ಟ್ರೆಕ್ಕಿಂಗ್! ಯಶವಂತಪುರ ರೈಲು ನಿಲ್ದಾಣದಲ್ಲಿ ರಾತ್ರಿ 8 ಗಂಟೆಗೆ ಕಣ್ಣೂರು ಎಕ್ಸ್ಪ್ರೆಸ್ ರೈಲು ಹತ್ತಿದ ನಾವು ನಸುಕಿನ ಮೂರೂವರೆ ಗಂಟೆ ಅನ್ನುವಷ್ಟರಲ್ಲಿ ಕೊಯಂಬತ್ತೂರು ಜಂಕ್ಷನ್ ಅಲ್ಲಿ ಇಳಿದು ಕೊಂಡೆವು. ಅಲ್ಲಿಂದ ನಾವು ಹೋಗಬೇಕಾಗಿರೋ ವೆಳ್ಳಿಯನ್ ಗಿರಿ ಇರೋದು ಸುಮಾರು 24ಕಿ.ಮೀ. ದೂರ. ಅದು ಪೂಂಡಿ ಅನ್ನೋ ಊರು. ಅಲ್ಲಿಗೆ ಕೊಯಂಬತ್ತೂರಿನಿಂದ ನಿತ್ಯ ಸರ್ಕಾರಿ ಬಸ್ ಇದೆಯಾದರೂ, ಬೆಳಿಗ್ಗೆ ನಾಲ್ಕು ಗಂಟೆ ಅಷ್ಟೊತ್ತಿಗೆ ಅಲ್ಲಿಗೆ ಹೋಗಲು ಯಾವುದೇ ಸರ್ಕಾರಿ ಬಸ್ ಇರ್ಲಿಲ್ಲ. ನಿದ್ದೆಗಣ್ಣಲ್ಲಿದ್ದ ನಾವು ಸ್ವಲ್ಪ ಸುಧಾರಿಸಿಕೊಳ್ಳೋಣ ಅಂತ ರೈಲು ನಿಲ್ದಾಣದ ಹೊರಗಡೆಯ ಅಂಗಡಿಯಲ್ಲಿ ಬಿಸಿ ಬಿಸಿ ಚಹಾ ಕುಡಿಯುತ್ತಿದ್ದೆವು. ಅಷ್ಟರಲ್ಲಿ ಈ ಮುಂಚೆ ಎರಡು ಮೂರು ಬಾರಿ ವೆಳ್ಳಿಯನ್ ಗಿರಿ ಚಾರಣ ಮಾಡಿದ್ದ ಮಲ್ಲಿಕಾರ್ಜುನ ಅನ್ನೋರು ತಮಗೆ ತಿಳಿದಿದ್ದ ಅಲ್ಪಸ್ವಲ್ಪ ತಮಿಳು ಭಾಷೆಯಲ್ಲಿ ಅಲ್ಲಿಯೇ ಇದ್ದ ಆಟೋ ರಿಕ್ಷಾ ಚಾಲಕರ ಹತ್ತಿರ ಮಾತಾಡಿ ಕೊನೆಗೆ 24 ಕಿಲೋ ಮೀಟರ್ ದೂರದ ಪೂಂಡಿಗೆ ಹೋಗೋಕೆ ಎಲ್ಲರಿಗೂ ಸೇರಿ ₹1300ಕ್ಕೆ ಒಪ್ಪಿಸಿದ್ದರು!

ಕೊಯಂಬತ್ತೂರಿನಿಂದ ಹೊರಟು ಐದೂವರೆ ಅನ್ನುವಷ್ಟರಲ್ಲಿ ಆಟೋ ರಿಕ್ಷಾ ನಮ್ಮನ್ನ ಪಾದ ಬೆಟ್ಟದ ತಪ್ಪಲಿನಲ್ಲಿ ಇಳಿಸಿತು. ಇನ್ನೂ ಬೆಳಕು ಹರಿದಿರಲಿಲ್ಲ. ಅದಾಗಲೇ ಅಂಗಡಿ ಮುಗ್ಗಟ್ಟುಗಳೆಲ್ಲ ತೆರೆದಿದ್ದವು. ತೆರೆದಿದ್ದವು ಅನ್ನೋದಕ್ಕಿಂತ ಅವು ಮುಚ್ಚೋದೆ ಇಲ್ಲ. ಯಾಕಂದ್ರೆ ಇಲ್ಲಿ ನಾಲ್ಕು ತಿಂಗಳಗಳ ಕಾಲ ದಿನದ ಇಪ್ಪತ್ತನಾಲ್ಕು ಗಂಟೆಯೂ ಚಾರಣ ಮಾಡ್ತಾ ಇರುತ್ತಾರೆ. ಚಾರಣ ಮಾಡುವಾಗ ಬೇಕಾಗುವ ಎಲ್ಲಾ ವಸ್ತುಗಳು ಇಲ್ಲಿ ಸಿಗುತ್ತವೆ ಆದರೆ ದುಪ್ಪಟ್ಟು ದರ. ರಿಕ್ಷಾದಿಂದ ಇಳಿದ ನಾವು ನೇರವಾಗಿ ಅಲ್ಲಿಯೇ ಇದ್ದ ಸ್ನಾನಗೃಹ ಮತ್ತು ಶೌಚಗೃಹಕ್ಕೆ ಹೋಗಿ ಸ್ನಾನ ಮಾಡಿ ಫ್ರೆಷ್ ಆಗೋವಷ್ಟರಲ್ಲಿ ಮೂಡಲ ದಿಕ್ಕಿನಲ್ಲಿ ಬಾನು ಕೆಂಪೇರಿತ್ತು. ಹಕ್ಕಿಪಿಕ್ಕಿಗಳ ನಾದ ಕಿವಿಗೆ ತಟ್ಟುತ್ತಿತ್ತು. ಈ ಮುಂಚೆ ಚಾರಣ ಮಾಡಿದ್ದವರಿಬ್ಬರು ನಮ್ಮ ತಂಡದಲ್ಲಿ ಇದ್ದಿದ್ದರಿಂದ, ಅವರು ಈ ಹಿಂದೆ ಚಾರಣ ಮಾಡಿದ್ದ ಅನುಭವದ ಮೇಲೆ, ಚಾರಣ ಮಾಡಬೇಕಾದ್ರೆ ಬರೋದು ರಾತ್ರಿ ಹೊತ್ತಾಗಬಹುದು, ಅದಕ್ಕೆ ಎಲ್ಲರೂ ಟಾರ್ಚ್ ತಗೋಬೇಕು ಅಂತ ಹೇಳಿದ್ದರಿಂದ ಒಂದಿಬ್ಬರು ಟಾರ್ಚ್ ತಂದಿದ್ದರು. ಆದ್ರೆ ಒಂಬತ್ತು ಜನರಿಗೆ ಎರಡು ಟಾರ್ಚ್ ಸಾಲಲ್ಲ ಅಂತ ಮತ್ತೆರಡು ಅಲ್ಲೇ ಇದ್ದ ಅಂಗಡಿಯಲ್ಲಿ ಖರೀದಿಸಿದರು. ನಮ್ಮ ತಂಡದಲ್ಲಿದ್ದ ಎಲ್ಲರೂ ಬ್ಯಾಗ್ ತಂದಿದ್ದರಿಂದ, ಇಬ್ಬರಿಗೆ ಒಂದು ಬ್ಯಾಗ್ ಎಂಬಂತೆ ನಿರ್ಧಾರ ಮಾಡಿ ತಂದಿದ್ದ ವಸ್ತುಗಳನ್ನೆಲ್ಲ ಬೇರ್ಪಡಿಸಿ, ಬೇಕಾಗಿರೋ ವಸ್ತುಗಳನ್ನ ಒಂದು ಬ್ಯಾಗ್ ಗೆ ಹಾಕಿ ಇನ್ನೊಂದರಲ್ಲಿ ಅವಶ್ಯಕ ಇಲ್ಲದೇ ಇರೋ ವಸ್ತುಗಳನ್ನ ಹಾಕಿ ಅಲ್ಲಿಯೇ ಇರೋ ಭದ್ರತಾ ಕೊಠಡಿಯಲ್ಲಿ ಇಟ್ಟು ನಮ್ಮ ಕೂಪನ್ ಪಡೆದೆವು.
ಈ ಚಾರಣ ಮಾಡಬೇಕಾದ್ರೆ ಮುಖ್ಯವಾಗಿ ಬೇಕಾಗಿರೋದು ನಾಲ್ಕರಿಂದ ಆರಡಿ ಎತ್ತರದ ಊರುಗೋಲಿನಷ್ಟು ದಪ್ಪದಾದ ಕೋಲುಗಳು. ನಮ್ಗೆ ಹೊಸದು ಬೇಕಾದ್ರೆ ಮೂವತ್ತು ರೂಪಾಯಿ ಕೊಟ್ರೆ ಅಲ್ಲಿಯೇ ತಯಾರಿಸಿ ಕೊಡ್ತಾರೆ, ಇಲ್ಲಾಂದ್ರೆ ಈ ಮುಂಚೆ ಬೇರೆಯವರು ಉಪಯೋಗಿಸಿ ಬಿಟ್ಟಿರೋ ಕೋಲುಗಳು ಕೂಡ ಸಿಗುತ್ತವೆ. ನಾವು ಯಾವುದಾದರನ್ನು ಉಪಯೋಗಿಸಬಹುದು. ಚಾರಣ ಶುರು ಮಾಡೋ ಮುಂಚೆ ನಮಗೊಂದು ಚೆಕ್ ಪೋಸ್ಟ್ ಇದಿರಾಯ್ತು. ಅಲ್ಲಿ ನಾವು ತಂದಿರೋ ಪ್ಲಾಸ್ಟಿಕ್ ವಸ್ತುಗಳಿಗೆ ಸ್ಟಿಕ್ಕರ್ ಅಂಟಿಸಿ ಪ್ರತಿ ಸ್ಟಿಕ್ಕರ್ ಗೆ ಇಪ್ಪತ್ತು ರೂಪಾಯಿಯಂತೆ ಡೆಪಾಸಿಟ್ ಮಾಡಿಸಿಕೊಂಡರು. ನಾವು ಆ ಸ್ಟಿಕ್ಕರ್ ಸಮೇತ ವಸ್ತುಗಳನ್ನ ಮರಳಿ ತಂದರೆ, ನಮ್ಮ ಇಪ್ಪತ್ತು ರೂಪಾಯಿಯನ್ನು ವಾಪಸ್ ಕೊಡುತ್ತಾರೆ.
ವೆಳ್ಳಿಯನ್ ಗಿರಿ ಚಾರಣ ಒಟ್ಟು ಏಳು ಬೆಟ್ಟಗಳನ್ನು ಹೊಂದಿದ್ದು, ಇದನ್ನ ಸಪ್ತಗಿರಿ ಅಂತಲೂ ಕರೆಯುವುದುಂಟು. ನಾವು ಹರ್ ಹರ್ ಮಹಾದೇವ ಅಂತ ಹೇಳಿ ಮೊದಲ ಬೆಟ್ಟ ಹತ್ತೋಕೆ ಶುರು ಮಾಡಿದಾಗ ಸಮಯ ಏಳು ಗಂಟೆ. ಅದಾಗಲೇ ನಿನ್ನೆ ಸಂಜೆಯೇ ಬೆಟ್ಟ ಹತ್ತಿ ನಸುಕಿನ ಜಾವದಲ್ಲಿ ದರ್ಶನ ಪಡೆದವರು ತುಂಬಾ ಸುಸ್ತಾಗಿದ್ದರಿಂದ, ಕಟ್ಟಿಗೆಯ ಮೇಲೆ ಭಾರ ಹಾಕಿ ಹೆಜ್ಜೆಯನ್ನು ಮೆಲ್ಲಗೆ ಕೆಳಗಿಡುತ್ತ, ತಂಡೋಪ ತಂಡವಾಗಿ ಇಳಿದು ಬರುತ್ತಿದ್ದರು. ಅದರಲ್ಲಿ ನಾನು ನನ್ನ ಕುತೂಹಲಕ್ಕಾಗಿ ಇಳಿದು ಬರುತ್ತಿರುವರನ್ನು ಮಾತನಾಡಿಸಿದಾಗ ಅದರಲ್ಲಿದ್ದ ಕನ್ನಡದವರೊಬ್ಬರು, ನಿನ್ನೆ ರಾತ್ರಿ ಎಂಟು ಗಂಟೆಗೆ ಚಾರಣ ಶುರು ಮಾಡಿದ್ದಾಗಿ ನಸುಕಿನ ಎರಡು ಗಂಟೆಯ ಹೊತ್ತಲ್ಲಿ ದರ್ಶನ ಪಡೆದು ಬಂದುದಾಗಿ ಹೇಳಿದರು. ನಾವು ಹತ್ತುತ್ತಿದ್ದ ಮೊದಲ ಬೆಟ್ಟ ಮೆಟ್ಟಿಲುಗಳಿಂದ ಕೂಡಿತ್ತಾದರೂ ರಾತ್ರಿ ಸುರಿದ ಮಳೆಗೆ ಅಲ್ಲಲಿ ನೀರು ನಿಂತು ಕಾಲು ಜಾರುವ ಸಂಭವನೀಯತೆ ಇತ್ತು. ಅಂತೂ ಮೊದಲ ಬೆಟ್ಟದ ತುದಿ ಮುಟ್ಟಿದಾಗ ಅಂಗಡಿಯೊಂದರ ದರ್ಶನವಾಯ್ತು. ಹಾಗೆಯೇ ಚಿಕ್ಕದೊಂದು ಗಣೇಶ ದೇವಸ್ಥಾನದ ದರ್ಶನ. ಅಲ್ಲಿಯೇ ಕುಳಿತು ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಎಲ್ಲರೂ ಒಂದೊಂದು ಬಾಳೆಹಣ್ಣನ್ನು ತಿಂದು ಮುಂದಿನ ಬೆಟ್ಟ ಹತ್ತೋಕೆ ತಯಾರಾದೆವು. ಎರಡನೇ ಬೆಟ್ಟ ಹತ್ತೋಕೆ ಶುರು ಮಾಡಿದಾಗ ನಮ್ಗೆ ಹತ್ತುವವರಿಗಿಂತ ಜಾಸ್ತಿ ಇಳಿಯುವವರೆ ಕಂಡಿದ್ದು. ಬೇಸಿಗೆ ಕಾಲವಾಗಿದ್ದರಿಂದ ಇಲ್ಲಿ ಚಾರಣ ಮಾಡೋ ಅರ್ಧಕ್ಕಿಂತ ಜಾಸ್ತಿ ಜನ ರಾತ್ರಿ ಹೊತ್ತಲ್ಲೇ ಚಾರಣ ಶುರು ಮಾಡೋದು. ದಿನದ ಹೊತ್ತಲ್ಲಿ ಚಾರಣ ಮಾಡೋದು ಕಷ್ಟಕರವಾಗಿದ್ದು ಬಿಸಿಲಿನ ತಾಪಕ್ಕೆ ದೇಹ ಬೇಗ ನಿರ್ಜಲೀಕರಣಗೊಂಡು ಸುಸ್ತಾಗೋದುಂಟು, ಜೊತೆಗೆ ಚಾರಣ ಮಾಡುವಾಗ ಬೆಟ್ಟದ ಮೇಲೆ ಸಾಕಷ್ಟು ಚಿಕ್ಕ ಪುಟ್ಟ ಅಂಗಡಿಗಳಿದ್ದರು ನಮ್ಗೆಲ್ಲೂ ಕುಡಿಯಲು ಶುದ್ಧೀಕರಿಸಿದ ನೀರಿನ ಬಾಟಲ್ ಗಳು ಸಿಗೋದಿಲ್ಲ. ನಾಲ್ಕೈದು ಕಡೆ ನೀರಿನ ಝರಿಗಳಿದ್ದು ಅವೇ ನಮ್ಗೆ ಕುಡಿಯುವ ನೀರಿನ ಆಧಾರ.

ಆ ಝರಿಗಳಲ್ಲಿ ಮೊದಲು ಸಿಗೋದೇ ಎರಡನೇ ಬೆಟ್ಟದ ಮಧ್ಯದಲ್ಲಿ. ಎಲ್ಲಿಂದಲೋ ಹರಿದು ಬರುವ ಝರಿಯೊಂದಕ್ಕೆ ಚಿಕ್ಕದಾದ ಪೈಪೊಂದನ್ನು ಜೋಡಿಸಿ ನೀರು ನೇರವಾಗಿ ಬಾಟಲ್ ಗೆ ತುಂಬಿಸೋ ತರ ಮಾಡಿದ್ದಾರೆ. ನಾವು ಅಲ್ಲಿಗೆ ತಲುಪಿದಾಗ ಅದಾಗಲೇ ಐದಾರು ಜನರು ಸರತಿ ಸಾಲಲ್ಲಿ ನೀರು ತುಂಬಿಸುತ್ತಿದ್ದರು. ನಾವು ತಂದಿರೋ ಬಾಟಲ್ ಗಳು ಖಾಲಿಯಾಗಿದ್ದರಿಂದ ನಾವು ತುಂಬಿಸಿಕೊಂಡಾಯ್ತು. ಜೊತೆಗೆ ನೀರು ಇರೋದ್ರಿಂದ ಅಲ್ಲಿಯೇ ನಾವು ತಂದಿದ್ದ ಒಂದೊಂದು ಸೇಬು ಹಣ್ಣನ್ನು ಹೊಟ್ಟೆಗೆ ಇಳಿಸಿ, ಮತ್ತಷ್ಟು ನೀರು ಕುಡಿದು ಖಾಲಿಯಾದ ಬಾಟಲ್ ಗಳನ್ನ ಮತ್ತೊಮ್ಮೆ ತುಂಬಿಸಿಕೊಂಡೆವು.
ಹೀಗೆ ಒಂದಿಷ್ಟು ಹತ್ತುತ್ತಾ ಸುಸ್ತಾದಾಗ ಅಲ್ಲಲ್ಲಿ ಕುಳಿತು ಸುಧಾರಿಸಿಕೊಳ್ಳುತ ಎರಡನೇ ಬೆಟ್ಟದ ತುದಿ ತಲುಪಿದಾಗ ಪಾಂಬಡಿ ಸಿದ್ದರ್ ಅನ್ನೋ ಚಿಕ್ಕದಾದ ಗುಹಾ ದೇವಾಲಯ ಸಿಗುತ್ತೆ. ಅಲ್ಲಿರೋ ಕಲ್ಲು ಬಂಡೆಗಳ ಮಧ್ಯ ಚಿಕ್ಕದಾದ ನಾಗ ದೇವರ ವಿಗ್ರಹವೊಂದಿದೆ. ಅಲ್ಲಿಂದ ಮುಂದೆ ಶುರುವಾಗೋದೆ ಮೂರನೇ ಬೆಟ್ಟ. ಈ ಮೊದಲ ಮೂರು ಬೆಟ್ಟಗಳನ್ನು ಹತ್ತಬೇಕಾದ್ರೆ ನಾವು ಹೋಗೋ ದಾರಿಯ ಸುತ್ತ ಮುತ್ತ ಬರೀ ಮರಗಳಿಂದ ಕೂಡಿರೋ ಎಲೆ ಉದುರಿಸೋ ಕಾಡುಗಳನ್ನ ಬಿಟ್ಟರೆ ಬೇರೇನೂ ಕಾಣೋದಿಲ್ಲ. ಆದ್ರೆ ಮೂರನೇ ಬೆಟ್ಟದ ತುದಿ ಮುಟ್ಟಿದ ಮೇಲೆ ಮೊದಲ view point ಸಿಗುತ್ತೆ. ಅಲ್ಲಿಂದ ಮೇಲೆ-ಕೆಳಗೆ, ಸುತ್ತ-ಮುತ್ತ ನೋಡಿದರೆ ಅಲ್ಲಿಯೇ ಮನೆಯೊಂದನ್ನು ಕಟ್ಟಿಸಿ ವಾಸವಿದ್ದರೆ ಎಷ್ಟು ಚಂದ ಅಂತ ಮನದಲ್ಲಿ ಯೋಚನೆ ಓಡೋದಂತೂ ನಿಜ. ಇಲ್ಲೇ ನಮ್ಗೆ ಎರಡನೇ ನೀರಿನ ಝರಿ ಸಿಗೋದು. ಅಲ್ಲಿಂದ ಶುರುವಾಗೋ ನಾಲ್ಕನೇ ಬೆಟ್ಟ ಸ್ವಲ್ಪ ಕಷ್ಟ ಅನ್ಸತ್ತೆ. ಮೆಟ್ಟಿಲುಗಳಿಲ್ಲದೆ ಕೇವಲ ಕಲ್ಲು ಮಣ್ಣಿಂದ ಕೂಡಿರೋ ಕಡಿದಾದ ದಾರಿ ಇರೋದ್ರಿಂದ ಸ್ವಲ್ಪ ಹುಷಾರಾಗಿ ಹತ್ತಬೇಕು. ಈ ನಾಲ್ಕನೇ ಬೆಟ್ಟದಲ್ಲಿ ಕಾಡು ನೋಡಲು ಸಿಗೋದಿಲ್ಲ ಆದರೆ ಅದರ ಬದಲಾಗಿ ಕುರುಚಲು ಗಿಡ ಮತ್ತು ಪೊದೆಗಳನ್ನ ಹೊಂದಿರೋ ಶೋಲಾ ಕಾಡುಗಳನ್ನು ನೋಡಬಹುದು. ಜೊತೆಗೆ ಸಾಕಷ್ಟು ಔಷಧೀಯ ಗುಣಗಳು ಇರೋ ಪೊದೆಗಳು ಇಲ್ಲಿವೆ. ಬೆಟ್ಟ ಹತ್ತುತ್ತಾ ಸಾಗ್ತಿರಬೇಕಾದ್ರೆ, ಅಲ್ಲಲ್ಲಿ ದೊಡ್ಡವರ ಜೊತೆ ಚಿಕ್ಕಮಕ್ಕಳು ಇಳಿದು ಬರೋದು ನೋಡಿ ಒಂದು ಕ್ಷಣ ಅವಾಕ್ಕಾದೆ. ದೊಡ್ಡವರೇ ಹತ್ತೋಕೇ ಕಷ್ಟ ಪಡೋ ಈ ಬೆಟ್ಟವನ್ನು ಅದು ಹತ್ತು ಹನ್ನೆರಡು ವರ್ಷದ ಹುಡುಗರು ಹತ್ತಿ ಇಳಿಯೋದು ಅಂದ್ರೆ ಹುಡುಗಾಟಿಕೆನಾ? ಒಟ್ಟು ಹನ್ನೊಂದು ಕಿಲೋ ಮೀಟರ್ ದೂರದ ಟ್ರೆಕ್ ಅದು. ಬರಿಗಾಲಲ್ಲಿ ಹತ್ತಬೇಕು. ತೀರ ಇತ್ತೀಚಿಗೆ ನಾನ್ ಓದಿರೋ ಸುದ್ದಿ ಅಂದ್ರೆ ಬೆಟ್ಟ ಹತ್ತುವಾಗ ಏಕಾಏಕಿ ಹೃದಯ ಸ್ತಂಭನ ಉಂಟಾಗಿ ಸಾವಿನ ಕದ ತಟ್ಟಿದವರು ಇದಾರೆ! ಜೊತೆಗೆ ಇಲ್ಲಿ 10-50 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಪ್ರವೇಶವಿಲ್ಲ.

ಕೊಯಂಬತ್ತೂರಿನ ಪ್ರಸಿದ್ಧ ಆದಿ ಯೋಗಿ ಈಶಾ ಫೌಂಡೇಶನ್ ಪಾದ ಬೆಟ್ಟದಿಂದ ಎರಡು ಮೂರು ಕಿಲೋ ಮೀಟರ್ ದೂರವಿದ್ದು ನಾಲ್ಕನೇ ಬೆಟ್ಟದ ತುದಿಯಲ್ಲಿ ನಿಂತು ನೋಡಿದಾಗ ಆದಿ ಯೋಗಿ ಪ್ರತಿಮೆ ಕಾಣೋದುಂಟು. ನಾಲ್ಕನೇ ಬೆಟ್ಟದ ತುದಿಯಲ್ಲಿ ಒಂದೆರಡು ಅಂಗಡಿಗಳಿದ್ದು ಅಲ್ಲೊಂದಿಷ್ಟು ವಿಶ್ರಮಿಸಿ, ತಂದಿದ್ದ ಸೌತೆಕಾಯಿ ಮತ್ತು ಮೋಸಂಬಿ ಹಣ್ಣುಗಳನ್ನ ಹಂಚಿಕೊಂಡು ತಿಂದಾಯ್ತು. ನಾವು ಬೆಟ್ಟ ಹತ್ತುವಾಗ ಒಂದನೇ ಬೆಟ್ಟದಿಂದ ಶುರುವಾಗಿ ಏಳನೇ ಬೆಟ್ಟದ ಪಾದದವರೆಗೂ ಚಿಕ್ಕ ಪುಟ್ಟ ಅಂಗಡಿಗಳನ್ನ ಕಾಣಬಹುದು. ಅವೆಲ್ಲ ಕೇವಲ ತಾತ್ಕಾಲಿಕವಾಗಿದ್ದು, ಕಟ್ಟಿಗೆ ಮತ್ತು ತಾಡಪತ್ರಿಗಳಿಂದ ನಿರ್ಮಿಸಿರುವಂತವು. ಅವುಗಳಲ್ಲಿ ಹೆಚ್ಚಾಗಿ ಸಿಗೋದು ಕೆಲವೊಂದಿಷ್ಟು ಟೆಟ್ರಾ ಪಾಕೆಟ್ ನಲ್ಲಿ ಪ್ಯಾಕ್ ಮಾಡಿರೋ ತಂಪು ಪಾನೀಯಗಳು (ತಂಪಾಗಿ ಇರೋದಿಲ್ಲ), ಬಿಸ್ಕಟ್ಗಳು, ಶೇಂಗಾ ಚಿಕ್ಕಿ, ಕಲ್ಲಂಗಡಿ ಹಣ್ಣು, ಸೌತೆಕಾಯಿ, ಮಜ್ಜಿಗೆ, ಅಂಬಲಿ ಜೊತೆಗೆ ಲಿಂಬು ಶರಬತ್.
ಐದನೇ ಬೆಟ್ಟ ಹತ್ತುವಾಗ ಒಂದೆರಡು ಅಂಗಡಿಗಳಲ್ಲಿ ಕರಿದ ಬೋಂಡಾ ಬಜ್ಜಿಗಳು ಕೂಡ ಸಿಗುತ್ತವೆ. ಇನ್ನೂ ಈ ಏಳು ಬೆಟ್ಟಗಳಲ್ಲಿ ಅತಿ ಸಲಿಸಾಗಿರೋ ಬೆಟ್ಟವೆಂದರೆ ಅದು ಐದನೇ ಬೆಟ್ಟ. ಸಮತಟ್ಟಾದ ಕೇವಲ ಮಣ್ಣಿಂದ ಕೂಡಿರೋ ಈ ಬೆಟ್ಟವನ್ನು ವಿಭೂತಿ ಬೆಟ್ಟವೆಂದು ಕರೆಯುತ್ತಾರೆ. ಈ ಬೆಟ್ಟ ಹತ್ತುವಾಗಲೇ ನಮಗೆ ಇಬ್ಬರು ಜರ್ಮನಿ ಚಾರಣಿಗರು ಭೇಟಿಯಾದರು. ಒಂದಿಷ್ಟು ಮಾತುಕತೆ ನಡೆಸಿದ ಮೇಲೆ ಅವರು ಆದಿ ಯೋಗಿ ಪ್ರತಿಮೆ ನೋಡಲು ಬಂದಿದ್ದು, ಅಲ್ಲಿಂದ ಬೆಳಿಗ್ಗೆ ಮೂರೂವರೆಗೆ ಚಾರಣ ಶುರು ಮಾಡಿದ್ದು ಅಂತ ಗೊತ್ತಾಯ್ತು. ಅಲ್ಲಿಂದ ಅವರಿಗೆ ಒಂದು ವಿದಾಯ ಹೇಳಿ ನಮ್ಮ ಚಾರಣ ಮತ್ತೆ ಮುಂದುವರಿಸಿದೆವು. ಇಲ್ಲಿಂದಲೇ ನಮ್ಗೆ ಕೊನೆಯ ಅಂದ್ರೆ ಏಳನೇ ಬೆಟ್ಟ ಕಾಣಿಸುತ್ತೆ.

ಈ ಏಳು ಬೆಟ್ಟಗಳಲ್ಲಿ ಕೇವಲ ಆರು ಬೆಟ್ಟಗಳನ್ನು ಮಾತ್ರ ಹತ್ತಬೇಕು ಒಂದು ಬೆಟ್ಟವನ್ನು ಇಳಿಬೇಕು ಅದುವೇ ಆರನೇ ಬೆಟ್ಟ! ಆರನೇ ಬೆಟ್ಟವನ್ನು ಇಳಿದು ಕೆಳಕ್ಕೆ ಬಂದಾಗ ಅಲ್ಲಿ ಹರಿಯೋ ನೀರಿನ ಚಿಕ್ಕದಾದ ಹಳ್ಳದಲ್ಲಿ ಕಾಲಿಟ್ಟಾಗ ಕಾಲು ಮರಗಟ್ಟುವ ರೀತಿಯ ತಂಪಾದ ನೀರು. ಅದು ಹರಿದು ಬರೋದು ಹರಿಯುವ ನೀರಿಗೆ ಕಟ್ಟೆಯೊಂದನ್ನು ಕಟ್ಟಿ ನಿರ್ಮಿಸಿರುವ ಒಂದು ತೆರೆದ ಬಾವಿಯಷ್ಟು ದೊಡ್ಡದಾದ ಭೀಮನ ಕೊಳ್ಳದಿಂದ. ಕೊಳದಲೊಂದು ಲಿಂಗವಿದ್ದು ಒಂದೆರಡು ತ್ರಿಶೂಲಗಳು ಕೂಡ ಉಂಟು. ಹಿಮ ಕರಗಿ ಹರಿದು ಬರುವ ನೀರಿನಂತೆ ತಂಪಾಗಿರುವ ಆ ಕೊಳದಲ್ಲಿ ಧುಮುಕಿದ ಒಂದು ಕ್ಷಣ ಹೃದಯ ಬಡಿತವೆ ನಿಂತಂತಾಗಿ ಉಸಿರೆಳೆದುಕೊಳ್ಳೋದು ಕಷ್ಟವಾಗುತ್ತೆ. ಈ ಸ್ನಾನದಿಂದ ನಾವು ಐದು ಬೆಟ್ಟಗಳನ್ನ ಹತ್ತಿ ಬಂದ ದಣಿವು ತಣಿಯಿತು.
ಅಲ್ಲಿಂದ ಮುಂದೆ ಶುರುವಾಗುವುದೇ ಏಳನೇ ಬೆಟ್ಟ. ನೇರವಾಗಿ ಎತ್ತದಲ್ಲಿರೋ ಬೆಟ್ಟದ ಮೇಲೆರೆಡು ಬೃಹತ್ ಬಂಡೆಗಳು. ಬೆಟ್ಟದ ಒಂದು ಬದಿಯಲ್ಲಿ ಬರೀ ಹುಲ್ಲು; ಇನ್ನೊಂದೆಡೆ ಹಚ್ಚು ಹಸುರಿನಿಂದ ಕಂಗೊಳಿಸುವ ನಿತ್ಯ ಹರಿದವರ್ಣದ ಹಸಿರು ಕಾಡುಗಳು. ಉಳಿದೆಲ್ಲ ಬೆಟ್ಟಗಳಿಗಿಂತ ಈ ಬೆಟ್ಟ ಹತ್ತೋದಕ್ಕೆ ತುಸು ಹೆಚ್ಚಿನ ಕಷ್ಟವೇ. ಆದ್ರೂ ಆ ತುದಿಯಲ್ಲಿ ಬೀಸೊ ತಂಗಾಳಿ, ಸುತ್ತಲಿನ ಹಸಿರು ನೋಡುತ್ತಾ ಹತ್ತುತ್ತಿದ್ದರೆ ಸುಸ್ತು ಅನ್ನಿಸುವುದೇ ಇಲ್ಲ. ಹತ್ತುವಾಗ ಅಲ್ಲಲ್ಲಿ ನಮಗೆ ಶಿವನ ಆಯುಧ ತ್ರಿಶೂಲ ಕಾಣಸಿಗುತ್ತದೆ. ಬೆಟ್ಟದ ತುದಿ ತಲುಪಿದಾಗ ನಮ್ಮನ್ನ ಸ್ವಾಗತಿಸೋದೆ ತಲೆ ಎತ್ತಿ ನಿಂತಿರೋ ಹೆಬ್ಬಂಡೆಗಳು. ಅನಂತರ ಸಾಲಾಗಿ ನೆಟ್ಟಿರೋ ಲೆಕ್ಕವಿಲ್ಲದಷ್ಟು ತ್ರಿಶೂಲಗಳು. ಅವುಗಳಿಂದ ಒಂದು ಗೋಡೆಯೇ ನಿರ್ಮಿತವಾಗಿದೆಯೇನೋ ಎಂಬಂತೆ ಭಾಸವಾಗುತ್ತದೆ. ರಾತ್ರಿ ಹತ್ತಿ ಬಂದಿರೋ ಕೆಲವೊಂದಿಷ್ಟು ಭಕ್ತರು ಅಲ್ಲಿಯೇ ಬಂಡೆಯ ನೆರಳುಗಳಲ್ಲಿ ಮಲಗಿ ನಿದ್ರಿಸುತ್ತಿದ್ದರು. ಒಂದೆರಡು ಖಾವಿ ತೊಟ್ಟಿರೋ ಸ್ವಾಮಿಗಳು ಸಮತಟ್ಟಾದ ಮತ್ತೊಂದು ಬಂಡೆಯ ಮೇಲೆ ಕುಳಿತು ಆ ಕಡೆಯ ಕೇರಳದ ಪಾಲಕ್ಕಾಡ್ ಗಡಿಗೆ ಸೇರಿರೋ ಬೆಟ್ಟ ಗುಡ್ಡ ನದಿ ಕಣಿವೆಗಳತ್ತ ದೃಷ್ಟಿ ನೆಟ್ಟಿದ್ದರು. ಆ ತ್ರಿಶೂಲಗಳ ಮಧ್ಯ ಸಾಗುತ್ತಾ ಮುಂದೆ ಸಾಗಿದರೆ ಕಣ್ಣಿಗೆ ಕಾಣುವುದೇ ಬೃಹತ್ ಹೆಬ್ಬಂಡೆಗಳ ಕೆಳಗಡೆ ಗುಹೆಯಂತಿರೋ ಜಾಗದಲ್ಲಿ ನೂರೆಂಟು ಹೂಗಳಿಂದ ಅಲಂಕೃತವಾದ ಸ್ವಯಂ ಉದ್ಭವ ಲಿಂಗ. ಒಂದೆಡೆ ಭಕ್ತರ ಮಂತ್ರಗೋಷಗಳು, ಇನ್ನೊಂದೆಡೆ ಶಂಖ-ಗಂಟೆಗಳ ನಾದ, ಹದವಾದ ವಾತಾವರಣ, ತಂಪಾಗಿ ಬಿಸೋ ಗಾಳಿ, ಸುತ್ತಲೂ ಕಣ್ಣು ಹಾಯಿಸಿದಷ್ಟು ದೂರ ಹಸಿರು ಹೊದ್ದು ಮಲಗಿರೋ ಗಿರಿ ಶಿಖರಗಳು ನಮಗೆ ಅಲ್ಲಿದ್ದಷ್ಟು ಕ್ಷಣ ಹೊಸ ಲೋಕದ ಅನುಭವ ನೀಡುತ್ತವೆ. ಸಾಕ್ಷಾತ್ ಶಿವನೇ ಪ್ರತ್ಯಕ್ಷ ವಾಗಿ ನಮ್ಮ ಮುಂದೆ ನಿಂತಿರುವಂತೆ ಭಾಸವಾಗುತ್ತದೆ!
ದಂತಕಥೆಗಳ ಪ್ರಕಾರ ಒಮ್ಮೆ ವಿಷ್ಣು ಶಿವನ ಕುರಿತು ತಪಸ್ಸು ಮಾಡುತ್ತಾನೆ. ಆತನ ತಪಸ್ಸಿಗೆ ಒಲಿದ ಶಿವ ನಿನಗೇನು ವರ ಬೇಕೆಂದು ಕೇಳಿದಾಗ, “ನಿನ್ನ ತಾಂಡವ ನೃತ್ಯವನ್ನು ನನ್ನ ಕಣ್ಣುಗಳು ನೋಡಿಲ್ಲ ಅದನ್ನ ನೋಡೋ ಅದೃಷ್ಟ ನನ್ನ ಕಣ್ಣುಗಳಿಗೆ ಕರುಣಿಸು” ಅಂತ ವಿಷ್ಣು ಕೇಳಿಕೊಳ್ಳುತ್ತಾನೆ. ಅದಕ್ಕೆ ಅಸ್ತು ಎಂದ ಶಿವನು ವಿಷ್ಣುವಿಗೆ ತನ್ನ ತಾಂಡವ ನೃತ್ಯ ತೋರಿಸಿದ ಜಾಗವೇ ಇದೆ ವೆಳ್ಳಿಯನ್ ಗಿರಿ ಅನ್ನೋ ಪ್ರತೀತಿಯಿದೆ.
ಶಿವನ ದರ್ಶನ ಮುಗಿಸಿ ಮೊದಲ ಬೆಟ್ಟಕ್ಕೆ ಮರಳಿ ಇಳಿದು ಬರುವಷ್ಟರಲ್ಲಿ ಸಾಕಷ್ಟು ಜನ ಗುಂಪಾಗಿ, ಕೆಲವೊಂದಿಷ್ಟು ಜನ ಒಬ್ಬೊಬ್ಬರೇ ಬೆಟ್ಟ ಹತ್ತಲು ಶುರು ಮಾಡಿದ್ದರು. ಗುಂಪಾಗಿ ಹೊರಟವರು ಅಲ್ಲಲ್ಲಿ ಶಂಖ ನಾದ ಮಾಡುತ್ತಾ ಶಿವ ನಾಮ ಸ್ಮರಿಸುತ್ತಾ ಹತ್ತುತ್ತಿದ್ದರು.
ಇದನ್ನೂ ಓದಿ ಅರಣ್ಯಗಳು ಅಕ್ಷಯ ಪಾತ್ರೆಗಳಲ್ಲ: ಎಲ್ಲರೂ ಅರಿಯಬೇಕಾದ ಸತ್ಯ
ಅಂತೂ ಇಂತೂ ನಮ್ಮ ತಂಡದವರೆಲ್ಲರೂ ಪಾದ ಬೆಟ್ಟ ಮುಟ್ಟಿದಾಗ ಸಮಯ ಸಂಜೆ ಆರು ಗಂಟೆ. ನಾನು ಅವರಿಗಿಂತ ಮುಂಚೆ ಬಂದಿದ್ದರಿಂದ. ಅವರಿಗೋಸ್ಕರ ಕಾಯ್ತಾ ಅಲ್ಲೇ ಇದ್ದ ಕಟ್ಟೆಯ ಮೇಲೆ ವಿಶ್ರಮಿಸಿದೆ. ಬರಿಗಾಲಲ್ಲಿ ಬೆಟ್ಟ ಹತ್ತಿದ್ದರಿಂದ ಪಾದಗಳು ಉರಿಯುತ್ತಿದ್ದವು. ಅನ್ನೊದನ್ನ ಬಿಟ್ಟರೆ ನನಗೇನೂ ಅಷ್ಟೊಂದು ಸುಸ್ತಾಗಿರಲಿಲ್ಲ. ಆದರೆ ಬೆಳಿಗ್ಗೆಯಿಂದ ಖಾಲಿಯಿದ್ದ ಹೊಟ್ಟೆ ಮಾತ್ರ ಚುರ್ ಅಂತಿತು. ಆರೂವರೆ ಗಂಟೆ ಸುಮಾರಿಗೆ ಪಾದ ಬೆಟ್ಟದ ತಪ್ಪಲಿನಲ್ಲಿ ಇದ್ದ ದೇವಸ್ಥಾನದಲ್ಲಿ ಅನ್ನ ಪ್ರಸಾದ ಶುರುವಾಗಿತ್ತು. ಹಸಿದ ಹೊಟ್ಟೆಗೆ ಪ್ರತಿ ಅನ್ನದ ತುತ್ತು ಅಮೃತಕ್ಕೆ ಸಮಾನವಂತೆ. ಹಾಗೇ ಸರತಿ ಸಾಲಿನಲ್ಲಿ ನಿಂತು ಪ್ರಸಾದವನ್ನು ತಟ್ಟೆಗೆ ಹಾಕಿಸಿಕೊಂಡು ಕಟ್ಟೆಯ ಮೇಲೆ ಕುಳಿತು ಬಾಯಿಗಿಟ್ಟ ಪ್ರತಿ ಅನ್ನದ ತುತ್ತು ಅಮೃತವೆನಿಸಿದಂತೂ ನಿಜ.
ಈ ಚಾರಣದ ಪೂರ್ತಿ ವಿಡಿಯೋವನ್ನು ಕೆಳಗಿನ ಲಿಂಕ್ ಮೂಲಕ ವೀಕ್ಷಿಸಬಹುದು.
https://youtu.be/tXhbt7L716g?si=5ah7lqKvnJK4v18Q

ದರ್ಶನ್ ಆರ್ ಡಿ
ವೃತ್ತಿಪರ ಯುಟ್ಯೂಬರ್, ಚಿಕ್ಕೋಡಿ
Super Bro🔥✨