ರಾಯಭಾರ | ದಿಟ್ಟಿಸುತ್ತಿದೆ ಮುಂಗಾರು- ಕೊಚ್ಚಿ ಹೋಗದಿರಲಿ ಬಣ್ಣಬಣ್ಣದ ಸಾಧನೆಗಳ ತೇರು!

Date:

Advertisements

ಈ ಲೇಖನವನ್ನು ನೀವು ಓದುತ್ತಿರುವ ಹೊತ್ತಿಗೆ ಇದಾಗಲೇ ದೇಶದ ಬಹುಭಾಗಕ್ಕೆ ಮುಂಗಾರು ವ್ಯಾಪಿಸಿಕೊಂಡಿರುವ ರೀತಿ, ಅದರಿಂದ ಉಂಟಾಗಿರುವ ಸಮಸ್ಯೆಗಳು, ವಿವಿಧ ಮಹಾನಗರಗಳಲ್ಲಿನ ಪ್ರವಾಹ ಪ್ರಕೋಪಗಳ ಸುದ್ದಿಗಳನ್ನು ನೀವು ನೋಡಿರುತ್ತೀರಿ. ಕೇರಳ, ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಮಳೆ ತೀವ್ರತೆ ಪಡೆದಿದೆ, ಕರಾವಳಿಯಿಂದ ಸಾಗಿ ಒಳನಾಡನ್ನು ಆವರಿಸಿಕೊಂಡಿದೆ.

ಕರ್ನಾಟಕದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷವು ತನ್ನ ಎರಡು ವರ್ಷದ ಸಾಧನೆಗಳನ್ನು ಸಂಭ್ರಮಿಸುವ ‘ಸಮರ್ಪಣಾ’ ಸಮಾವೇಶವನ್ನು ಕಳೆದ ವಾರ ಹೊಸಪೇಟೆಯಲ್ಲಿ ಹಮ್ಮಿಕೊಂಡಿತ್ತು. ಇದೇ ಸುಮಾರಿಗೆ ಇತ್ತ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಸುಮಾರು ಹತ್ತು-ಹನ್ನೆರಡು ತಾಸಿನ ಅವಧಿಯಲ್ಲಿ 9ಸೆಂ.ಮೀ.ನಿಂದ ಹಿಡಿದು 14ಸೆಂ.ಮೀ. ವರೆಗೆ ಮುಂಗಾರು ಪೂರ್ವ ಮುಳೆ ಸುರಿದಿತ್ತು. ಯಥಾಪ್ರಕಾರ ಬಿಬಿಎಂಪಿ, ಬಿಡಿಎ ಅಧಿಕಾರಿಗಳ ನಿಷ್ಕ್ರಿಯತೆ, ರಾಜಕಾರಣಿಗಳ ಮಬ್ಬುಗಣ್ಣಿಗೆ ಕನ್ನಡಿ ಹಿಡಿಯುವಂತೆ ಮಳೆ ಬಂದಾಗ ಯಾವ್ಯಾವ ತಗ್ಗುಪ್ರದೇಶಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಳ್ಳುತ್ತಿತ್ತೋ ಅದೇ ಪ್ರದೇಶಗಳಲ್ಲಿ ನೀರು ನುಗ್ಗಿತು. ಮಾಧ್ಯಮಗಳಿಗೆ, ವಿಪಕ್ಷಗಳಿಗೆ ಸರ್ಕಾರಕ್ಕೆ ಬಡಿಯಲು ಬಡಿಗೆ ದೊರೆಯಿತು.   

‘ನಿಮ್ಮ ಸಾಧನೆಯನ್ನು ಮಳೆ ನೀರಲ್ಲಿ ತೊಳೆದೇ ತೀರುತ್ತೇವೆ’ ಎನ್ನುವಂತೆ ಸ್ಥಳೀಯ, ರಾಷ್ಟ್ರೀಯ ಮಾಧ್ಯಮಗಳು ಬೆಂಗಳೂರಿನ ಮಳೆಯಿಂದ ಜನಜೀವನಕ್ಕೆ ಉಂಟಾದ ತೊಂದರೆ, ಹಾನಿಯ ಬಗ್ಗೆ ಮುಗಿಬಿದ್ದು ವರದಿ ಮಾಡಿದವು. ವರದಿಯ ಪರಿಣಾಮಗಳು ಹೇಗಿದ್ದವೆಂದರೆ ದೇಶ ವಿದೇಶಗಳಿಂದ ಬಂಧುಬಾಂಧವರು ಬೆಂಗಳೂರಿನ ತಮ್ಮವರಿಗೆ ಕರೆ ಮಾಡಿ ಅವರಾರೂ ಮಾಧ್ಯಮಗಳು ಸೃಷ್ಟಿಸಿರುವ ಪ್ರವಾಹದಲ್ಲಿ ಕೊಚ್ಚಿ ಹೋಗಿಲ್ಲ ಎಂದು ಖಚಿತಪಡಿಸಿಕೊಂಡು ಸಮಾಧಾನದ ನಿಟ್ಟುಸಿರುಬಿಟ್ಟರು!

ಸರಿಸುಮಾರು ಇದೇ ವೇಳೆಗೆ ಬಿಜೆಪಿ-ಶಿವಸೇನೆ-ಎನ್‌ಸಿಪಿ ಮೈತ್ರಿಯ ಮಹಾಯುತಿ ಸರ್ಕಾರವಿರುವ ಮುಂಬೈನಲ್ಲಿಯೂ ಮಳೆ ಸುರಿದು ಬೆಂಗಳೂರಿಗಿಂತ ತುಸು ಹೆಚ್ಚೇ ಎನ್ನುವಂತೆ ವಿಕೋಪ ಸಂಭವಿಸಿತ್ತು. ಜನಜೀವನ ಅಸ್ತವ್ಯವಸ್ತಗೊಂಡಿತ್ತು, ತಗ್ಗಿನಲ್ಲಿರುವ ವಸತಿ ಪ್ರದೇಶಗಳಲ್ಲಿ ನೀರು ನುಗ್ಗಿತು, ಸಬ್‌ವೇಗಳು ಮುಳುಗಿದವು, ಹೋರ್ಡಿಂಗ್‌ಗಳು ಕುಸಿದವು, ವಿಮಾನ, ರೈಲುಗಳು ಕೆಲ ಕಾಲ ರದ್ದಾದವು, ವಿಳಂಬವಾದವು. ಆದರೆ, ರಾಷ್ಟ್ರೀಯ ವಾಹಿನಿಗಳು ಮಾತ್ರ ಅದನ್ನು ಕಾಟಾಚಾರಕ್ಕೆನ್ನುವಂತೆ ವರದಿ ಮಾಡಿ ಮಂಡಿಯುದ್ದ ನೀರಿನಲ್ಲಿ ಮುಳುಗಿಹೋಗಿದ್ದ ಬೆಂಗಳೂರಿನ ಎರಡು, ಮೂರು ಬಡಾವಣೆಗಳ ಬಗ್ಗೆ ಸತತವಾಗಿ ಆಕ್ರೋಶಭರಿತ ಸುದ್ದಿ ಪ್ರಸಾರ ಮಾಡಿದವು.

Advertisements

ಮಾಧ್ಯಮವಿರುವುದೇ ಜನರ ನೋವಿಗೆ ಮಿಡಿಯಲಿಕ್ಕಾಗಿ ಹಾಗಾಗಿ ಇದರಲ್ಲಿ ಮೇಲ್ನೋಟಕ್ಕೆ ಯಾವುದೇ ತಪ್ಪಿಲ್ಲ. ಆದರೆ, ಪಕ್ಷಪಾತದಿಂದ, ನಿರ್ದಿಷ್ಟ ರಾಜಕೀಯ ಸಂಕಥನಕ್ಕೆ ನೀರೆರೆಯುವ ಉದ್ದೇಶದಿಂದ, ರಾಜಕೀಯ ದುರುದ್ದೇಶ ಸಾಧನೆಗಾಗಿ ಸುಪಾರಿ ಪಡೆದವರ ರೀತಿಯಲ್ಲಿ ಮಾಡುವ ವರದಿಗಾರಿಕೆಗಳು ಮತ್ತೊಬ್ಬರಿಗೆ ಕಳಂಕ ಹಚ್ಚುವುದಕ್ಕೆ ಹಾಗೂ ಈ ಪ್ರಕ್ರಿಯೆಯಲ್ಲಿ ತಾವೂ ಅದನ್ನು ಮೆತ್ತಿಕೊಳ್ಳುವುದಕ್ಕೆ ಸೀಮಿತಗೊಳ್ಳುತ್ತವೆಯೇ ಹೊರತು ಪರಿಹಾರದೆಡೆಗೆ ಮುಖಮಾಡುವುದಿಲ್ಲ. ಈ ಎಚ್ಚರಿಕೆ ಮಾಧ್ಯಮಗಳಿರಬೇಕಿತ್ತು. ಏಕೆಂದರೆ, ಮಳೆ ಮಾಧ್ಯಮಗಳಂತೆ ಪಕ್ಷಪಾತಿಯಾಗಿರುವುದಿಲ್ಲ, ದೇಶದುದ್ದಗಲಕ್ಕೂ ಸುರಿಯಲಿದೆ. ಎಲ್ಲರ ಬಣ್ಣವನ್ನೂ ತೊಳೆಯಲಿದೆ.

bengaluru rain

ಈ ಲೇಖನವನ್ನು ನೀವು ಓದುತ್ತಿರುವ ಹೊತ್ತಿಗೆ ಇದಾಗಲೇ ದೇಶದ ಬಹುಭಾಗಕ್ಕೆ ಮುಂಗಾರು ವ್ಯಾಪಿಸಿಕೊಂಡಿರುವ ರೀತಿ, ಅದರಿಂದ ಉಂಟಾಗಿರುವ ಸಮಸ್ಯೆಗಳು, ವಿವಿಧ ಮಹಾನಗರಗಳಲ್ಲಿನ ಪ್ರವಾಹ ಪ್ರಕೋಪಗಳ ಸುದ್ದಿಗಳನ್ನು ನೀವು ನೋಡಿರುತ್ತೀರಿ. ಕೇರಳ, ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಮಳೆ ತೀವ್ರತೆ ಪಡೆದಿದೆ, ಕರಾವಳಿಯಿಂದ ಸಾಗಿ ಒಳನಾಡನ್ನು ಆವರಿಸಿಕೊಂಡಿದೆ. ದೂರದ ದೆಹಲಿ, ಗುಜರಾತ್‌ಗಳಲ್ಲಿ, ಈಶಾನ್ಯ ರಾಜ್ಯಗಳಲ್ಲಿಯೂ ಮಳೆಯಾಗುತ್ತಿರುವ ವರದಿಗಳು ರಾರಾಜಿಸುತ್ತಿವೆ. ಅದೇ ರೀತಿ ಅಲ್ಲಿನ ನಗರಗಳಲ್ಲಿಯೂ ಮಳೆಯಿಂದಾದ ಆವಾಂತರಗಳು ವರದಿಯಾಗುತ್ತಿವೆ.   

ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ, ಕೊಲ್ಕತ್ತಾ, ಹೈದರಾಬಾದ್‌ ಈ ಎಲ್ಲ ನಗರಗಳೂ ಕಳೆದ ಕೆಲ ವರ್ಷಗಳಲ್ಲಿ ಸುಮಾರಾದ ಮಳೆಗೇ ಪ್ರವಾಹ ಪರಿಸ್ಥಿತಿಗಳನ್ನು ಕಾಣುತ್ತಿವೆ. ಗುಜರಾ‌ತ್‌ನ ಅಹಮದಾಬಾದ್ ನಗರವೂ ಕೂಡ ಈ ಪರಿಸ್ಥಿತಿಗೆ ಹೊರತಲ್ಲ ಎಂದು ನಮ್ಮ ಮಾಧ್ಯಮಗಳಿಗೆ ವಿಶೇಷವಾಗಿ ಈ ಸಂದರ್ಭದಲ್ಲಿ ಹೇಳಬೇಕಿದೆ. ಹಾಗಾಗಿ, ಮಳೆ ಪ್ರಕೋಪದಂತಹ ವಿಷಯಗಳನ್ನು ಪಕ್ಷ ರಾಜಕಾರಣಕ್ಕೆ ಮಾತ್ರವೇ ಸೀಮಿತಗೊಳಿಸದೆ ಆಧುನಿಕ ನಗರ ಸ್ವರೂಪಗಳಲ್ಲಿನ ದೋಷಗಳು, ಅದನ್ನು ಸರಿಪಡಿಸಬೇಕಾದ ವಿಚಾರಗಳ ಬಗ್ಗೆ ನಾವು ಹೆಚ್ಚು ಚರ್ಚಿಸಬೇಕಿದೆ. ಇವು ಮಾನವ  ನಿರ್ಮಿತ ವಿಕೋಪಗಳಾಗಿದ್ದು, ಇದನ್ನು ಪರಿಹರಿಸಲು ಬೇಕಾದ ಯೋಜಿತ, ವೈಜ್ಞಾನಿಕ ಕ್ರಮಗಳ ಬಗ್ಗೆ ವಿಚಾರ ವಿನಿಯಮವಾಗಬೇಕಿದೆ. ಇಂತಹ ವಿಚಾರಗಳೆಡೆಗೆ ಮುಂದಿನ ದಿನಗಳಲ್ಲಿ ಮಾಧ್ಯಮಗಳು ಹೆಚ್ಚು ಒತ್ತು ನೀಡಲಿ.

ಭಾರತದ ನಗರಗಳು ಯೋಜಿತವಾದ ರೂಪುರೇಷೆಯನ್ನು ಹೊಂದಿಲ್ಲ. ಸ್ಥಳೀಯ ಭೌಗೋಳಿಕ ಸ್ವರೂಪವನ್ನು ಅರಿತು, ನಗರಗಳನ್ನು ಯೋಜಿತವಾಗಿ ಬೆಳೆಸುವ ಪರಿಪಾಠವನ್ನು ನಮ್ಮ ನಗರಾಡಳಿತಗಳು, ಅಭಿವೃದ್ಧಿ ಪ್ರಾಧಿಕಾರಗಳು ಪಾಲಿಸಿಲ್ಲ. ಮುಖ್ಯ ರಸ್ತೆಯ ಉದ್ದಕ್ಕೂ ನಗರಗಳು ಬೆಳೆಯಲು ಬಿಡುವುದು, ಇಲ್ಲವೇ ವೃತ್ತದ ಮೇಲೊಂದು ವೃತ್ತದಂತೆ ಈರುಳ್ಳಿ ಪದರದ ರೀತಿಯಲ್ಲಿ ವರ್ತುಲಾಕಾರದಲ್ಲಿ ನಗರಗಳ ಬೆಳವಣಿಗೆಗೆ ಅನುವು ಮಾಡಿಕೊಡುವುದನ್ನು ದೇಶದುದ್ದಗಲಕ್ಕೂ ಕಾಣಬಹುದು. ಈ ಮಾದರಿಯ ನಗರಗಳು ಸುತ್ತಲಿನ ಹಸಿರು ಪ್ರದೇಶ, ಬೆಟ್ಟ-ಗುಡ್ಡ, ಇಳಿಜಾರು, ಕಣಿವೆ, ಕೆರೆ-ಕುಂಟೆಗಳ ಪರಿಸರವನ್ನು ಉಳಿಸಿಕೊಂಡು ನೂತನ ಜನವಸತಿ ಪ್ರದೇಶಗಳನ್ನು ನಿರ್ಮಿಸದೆ, ಬದಲಿಗೆ ಅವುಗಳನ್ನೆಲ್ಲಾ ಒತ್ತರಿಸಿ ಮಾಡಿದ ಕಾಂಕ್ರೀಟ್‌ ಕಾಡಿನ ರಚನೆಗಳಾಗಿವೆ.

ಬೆಂಗಳೂರಿನಲ್ಲಿ ಮಳೆ ನೀರು ಹರಿಸುವ ರಾಜಕಾಲುವೆಗಳನ್ನು ಮೊದಲಿಗೆ ನಿರ್ಮಿಸಿ ಆನಂತರ ಬಡಾವಣೆಗಳ ನಿರ್ಮಾಣ ಮಾಡುವ ಪರಿಪಾಠ ನಡೆದಿಲ್ಲ. ಬದಲಿಗೆ ಇರುವ ರಾಜಕಾಲುವೆ ಅಥವಾ ನೀರು ಹರಿಯುವ ಕೊಳ್ಳಗಳನ್ನು ಮುಚ್ಚಿ, ಕೆಳಮಟ್ಟದಲ್ಲಿರುವ ನೀರು ನಿಲ್ಲುವ ಸಮತಟ್ಟು ಪ್ರದೇಶಗಳಲ್ಲಿ ಬಡಾವಣೆ, ಮೂಲಸೌಕರ್ಯಗಳನ್ನು ನಿರ್ಮಿಸಲಾಗಿದೆ ಇಲ್ಲವೇ ನಿರ್ಮಿಸಲು ಅನುಮತಿಸಲಾಗಿದೆ. ಬೆಂಗಳೂರಿನ ಅಭಿವೃದ್ಧಿಯ ಆರಂಭದಲ್ಲಿಯೇ ಇಂತಹ ತೊಡಕುಗಳಾಗಿವೆ. ಪ್ರತಿಷ್ಠಿತ ಮೆಜೆಸ್ಟಿಕ್ ಬಸ್‌ ನಿಲ್ದಾಣ‌ ನಿರ್ಮಾಣವಾಗಿದ್ದೂ ಸಹ ಕೆರೆಯ ಪ್ರದೇಶದಲ್ಲಿಯೇ ಎನ್ನುವುದನ್ನು ಮರೆಯಬಾರದು.

ಆಧುನಿಕ ನಗರಗಳ ಬಹುದೊಡ್ಡ ತೊಡಕೆಂದರೆ ಅವುಗಳಿಗೆ ನೀರಿನ ಧಾರಣಶಕ್ತಿ ಇಲ್ಲದೇ ಇರುವುದು. ನೀರು ಈ ನಗರಗಳಲ್ಲಿ ಇಂಗುವುದಿಲ್ಲ, ಬದಲಿಗೆ ನದಿಗಳನ್ನೂ ನಾಚುವಂತೆ ಓಡುತ್ತದೆ. ಕಾರಣ ಸೂಕ್ತ ವಿನ್ಯಾಸ, ಪ್ರಾಯೋಗಿಕತೆಯಿಂದ ಕೂಡಿರದ ಕಾಂಕ್ರೀಟ್‌ ಹಾಗೂ ಡಾಂಬರು ರಸ್ತೆಗಳ ನಿರ್ಮಾಣ. ಮುಖ್ಯ ರಸ್ತೆಗಳ ಬದಿಯಲ್ಲಿ ಮಳೆ ನೀರು ಬಸಿ ಕಾಲುವೆಗಳು/ ದೊಡ್ಡ ಚರಂಡಿಗಳು ಇದ್ದರೂ ಅವುಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಅವುಗಳಲ್ಲಿ ತುಂಬಿರುವ ಹೂಳಲು, ತ್ಯಾಜ್ಯವನ್ನು ಮಳೆಗಾಲದ ಆರಂಭಕ್ಕೂ ಮುನ್ನವೇ ತೆಗೆದು ನೀರಿನ ಹರಿವಿಗೆ ಆಸ್ಪದ ಮಾಡಿಕೊಡುವುದಿಲ್ಲ. ಕೆಲವೆಡೆ ರಾಜಕಾಲುವೆಗಳಲ್ಲಿಯೇ ಅಂತರ್ಜಲ ಮರುಪೂರಣಕ್ಕೆ ಅಗತ್ಯವಾದ ರೀತಿಯಲ್ಲಿ ವಿನ್ಯಾಸಗಳನ್ನು ರೂಪಿಸಿರುವುದಾಗಿ ಹೇಳುತ್ತಿದ್ದರೂ ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

city rounds

ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ನೀರು ನೆಲದೊಳಗೆ ಬಸಿಯಲು ಅಗತ್ಯವಾದ ಚಿಕ್ಕ ಪುಟ್ಟ ಕೆರೆ-ಕುಂಟೆಗಳನ್ನು ಒಂದೋ ಉಳಿಸಿಲ್ಲ, ಇಲ್ಲವೇ ಸಮಪರ್ಕವಾಗಿ ನಿರ್ವಹಿಸುತ್ತಿಲ್ಲ. ಕನಿಷ್ಠ ಅದಕ್ಕೆ ಪರ್ಯಾಯವಾಗಿಯಾದರೂ ಪ್ರತಿಯೊಂದು ಬಡಾವಣೆಗಳಲ್ಲಿ, ಬೃಹತ್‌ ಕಟ್ಟಡಗಳು ಹಾಗೂ ಮುಖ್ಯ ರಸ್ತೆಗಳ ಬದಿಗಳಲ್ಲಿ ಮಳೆ ನೀರಿನ ಸಮರ್ಪಕ ಕೊಯ್ಲು ಮಾಡುವ ವೈಜ್ಞಾನಿಕ, ನವೀನ ಕ್ರಮಗಳ ಬಗ್ಗೆ ಗಮನಹರಿಸಿಲ್ಲ. ಇದೆಲ್ಲದರ ಪರಿಣಾಮ ಈ ಪರಿ ಪ್ರಮಾಣದಲ್ಲಿ ಬೆಂಗಳೂರಿಗೆ ಮಳೆ ಬಂದರೂ ನೀರು ನೆಲಕ್ಕೆ ಇಂಗದೆ, ಅಂತರ್ಜಲದ ಒರತೆ, ಹರಿವು ಕುಸಿಯುತ್ತಿದೆ. ಇಂತಹ ಪ್ರಾಥಮಿಕ ಸಮಸ್ಯೆಗಳನ್ನು ಬಗೆಹರಿಸದೆ, ಬೆಂಗಳೂರನ್ನು ಸುಸ್ಥಿರ, ಪರಿಸರ ಸ್ನೇಹಿ ನಗರಿಯನ್ನಾಗಿಸದೆ ‘ಬ್ರ್ಯಾಂಡ್‌ ಬೆಂಗಳೂರಿನ’ ಕನಸು ನನಸಾಗುವುದಿಲ್ಲ. ಈ ಸಣ್ಣ ಸತ್ಯ ಬೆಂಗಳೂರು ಅಭಿವೃದ್ಧಿ ಸಚಿವರಾದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಅರ್ಥವಾದಂತಿಲ್ಲ. ಅವರಿಗೆ ‘ಬೆಂಗಳೂರು ದಕ್ಷಿಣ’ ಜಿಲ್ಲೆಯನ್ನು, ಟನೆಲ್‌ ರಸ್ತೆಗಳನ್ನು ಮಾಡುವೆಡೆಗೆ ಇರುವ ಉತ್ಸಾಹ, ಅಪರಿಮಿತ ಆಸಕ್ತಿ, ಮಳೆಗಾಲದ ಪ್ರಕೋಪಗಳ ಅಗತ್ಯ ನಿರ್ವಹಣೆಗೆ ಅಧಿಕಾರಿಗಳನ್ನು ಸಜ್ಜುಗೊಳಿಸಿ, ಸ್ಥಳೀಯ ಆಡಳಿತಕ್ಕೆ ಚುರುಕು ಮುಟ್ಟಿಸಲು ಇಲ್ಲ.

ದೂರಗಾಮಿ ಪರಿಹಾರಗಳ ವಿಷಯವಿರಲಿ, ಕನಿಷ್ಠ ಮಳೆ ನೀರು ಸದಾಕಾಲ ನುಗ್ಗುವ ಬೆಂಗಳೂರಿನ ನಿರ್ದಿಷ್ಟ ಲೇಔಟ್‌ಗಳು, ಅಪಾರ್ಟ್‌ಮೆಂಟ್‌ಗಳಿರುವ ಪ್ರದೇಶಗಳಲ್ಲಿ ಹಾಗೆ ನುಗ್ಗಿದ ನೀರನ್ನು ತಕ್ಷಣಕ್ಕೆ ಹೊರಹಾಕಲು ಸಹ ಈವರೆಗೆ ಒಂದು ಸಮರ್ಥ ತಾತ್ಕಾಲಿಕ ಯೋಜನೆಯನ್ನು ರೂಪಿಸಲಾಗಿಲ್ಲವೆಂದರೆ ಏನು ಹೇಳುವುದು? ಡಿ ಕೆ ಶಿವಕುಮಾರ್‌ ಅವರ ಭವಿಷ್ಯದ ರಾಜಕೀಯ ಮಹತ್ವಾಕಾಂಕ್ಷೆಗಳು ಬೆಂಗಳೂರಿನ ಮಂಡಿಯುದ್ದದ ನೀರಿನ ಪ್ರವಾಹದಲ್ಲಿ ಕಮರಿ ಹೋಗಬಾರದೆಂದರೆ ಅವರು ಕನಿಷ್ಠ ಸಣ್ಣಪುಟ್ಟ ಆಡಳಿತಾತ್ಮಕ ಸಾಧನೆಗಳೆಡೆಗಾದರೂ ಗಂಭೀರವಾಗಿ ಗಮನಹರಿಸಬೇಕಿದೆ.

ಇನ್ನು ಪ್ರತಿಪಕ್ಷ ಬಿಜೆಪಿಗೆ ಬೆಂಗಳೂರಿನ ಮಳೆ ಪ್ರಕೋಪದ ವಿಚಾರದಲ್ಲಿ ರಾಜಕಾರಣದ ಬೇಳೆ ಬೇಯಿಸಿಕೊಳ್ಳುವುದರಾಚೆಗೆ ಬೇರೇನೊ ಕಾಣುತ್ತಿಲ್ಲ. ಬೆಂಗಳೂರಿನ ಇಂದಿನ ಸ್ಥಿತಿಗೆ ಈ ನಗರ ವ್ಯಾಪಕವಾಗಿ ಬೆಳೆದ ಕಾಲಘಟ್ಟದಲ್ಲಿ ಸಾಕಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದ್ದ – ಈ ಶತಮಾನದ ಮೊದಲ ಹಾಗೂ ಎರಡನೆಯ ದಶಕ – ಬಿಜೆಪಿಯ ಪಾಲು ದೊಡ್ಡದೇ ಇದೆ.  ತನ್ನ ಅಧಿಕಾರಾವಧಿಯಲ್ಲಿ ಒಂದಿಲ್ಲೊಂದು ಭಾನಗಡಿಗಳ ಮೂಲಕವೇ ಸುದ್ದಿಯಾಗಿದ್ದ ಬಿಜೆಪಿ ಸರ್ಕಾರ ಭೂದಾಹಿಗಳ ದಾಹವನ್ನು ಇಂಗಿಸಲು ತೋರಿಸಿದ ಆಸಕ್ತಿಯನ್ನು ನಗರವನ್ನು ಯೋಜಿತವಾಗಿ, ಸುನಿಯಂತ್ರಿತವಾಗಿ ಬೆಳೆಸುವಲ್ಲಿ ತೋರಲಿಲ್ಲ.

ಬೆಂಗಳೂರಿನಲ್ಲಿ ಮಳೆ ನೀರಿನಿಂದ ಹಾನಿಗೊಳಗಾದ ಜನವಸತಿ ಪ್ರದೇಶಗಳಿಗೆ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್‌ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದ ಒಂದು ಘಟನೆ ಇಲ್ಲಿ ಉಲ್ಲೇಖನಾರ್ಹ. ಐಟಿ ಉದ್ಯಮಗಳು ವ್ಯಾಪಕವಾಗಿರುವ ಮಹದೇವಪುರದ ಸಂತ್ರಸ್ತ ಪ್ರದೇಶದ ವೀಕ್ಷಣೆ ವೇಳೆ ರಾಜ್ಯ ಬಿಜೆಪಿಯ ಹಿರಿಯ ಮುಖಂಡ, ಮಾಜಿ ಸಚಿವ ಅರವಿಂದ ಲಿಂಬಾವಳಿ ಹಾಗೂ ಸಚಿವ ಬೈರತಿ ಸುರೇಶ್‌ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಲಿಂಬಾವಳಿ ತಮ್ಮದೇ ಪಕ್ಷದ ಆಡಳಿತವಿದ್ದ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶೋಭಾ ಡೆವಲಪರ್ಸ್‌ನ ಯೋಜನೆಯೊಂದಕ್ಕೆ ಅನುಕೂಲ ಮಾಡಿಕೊಡಲು ಕೈಗೊಂಡ ಕ್ರಮದಿಂದಾಗಿ ಹೇಗೆ ಸ್ಥಳೀಯವಾಗಿ ಪ್ರವಾಹದ ಸ್ಥಿತಿ ಉಂಟಾಗುತ್ತಿದೆ ಎಂದು ವಿವರಿಸಿದರು.

deputy chiefminister dkshivakumar ಚ

ಒಂದೆಡೆ ಯಡಿಯೂರಪ್ಪ, ಮತ್ತೊಂದೆಡೆ ಶೋಭಾ ಡೆವಲಪರ್ಸ್‌ ಎಂದಾಕ್ಷಣ ನೆನಪಾಗುವ ಡಿಸಿಎಂ ಡಿ ಕೆ ಶಿವಕುಮಾರ್! ಬೆಂಗಳೂರಿನ ‘ಅಭಿವೃದ್ಧಿ’ ಎಂದರೆ ರಿಯಲ್‌ ಎಸ್ಟೇಟ್‌ ವ್ಯವಹಾರದ ಅಭಿವೃದ್ಧಿ ಎಂದು ಭಾವಿಸಿರುವ ಆಡಳಿತ ಪಕ್ಷ, ಪ್ರತಿಪಕ್ಷಗಳ ನಾಯಕರು ಹೇಗೆ ಈ ನಗರದ ಅಭಿವೃದ್ಧಿಗೆ ಬಿಡುವಿಲ್ಲದೆ ಬೆವರು ಸುರಿಸಿ ದುಡಿದಿದ್ದಾರೆ ಎನ್ನುವುದಕ್ಕೆ ಇದೊಂದು ರೂಪಕ ಮಾತ್ರ. ಬೆಂಗಳೂರನ್ನು ಕಳೆದ ಎರಡು, ಮೂರು ದಶಕಗಳಿಂದ ಪ್ರತಿನಿಧಿಸಿರುವ ಜನಪ್ರತಿನಿಧಿಗಳು ತಮ್ಮ, ತಮ್ಮ ಕ್ಷೇತ್ರಗಳಲ್ಲಿ ಮಳೆ ನೀರು ನಿರ್ವಹಣೆ, ಪ್ರವಾಹ ಪರಿಸ್ಥಿತಿ ತಡೆ ಮುಂತಾದ ವಿಚಾರಗಳಲ್ಲಿ ಏನು ಕ್ರಮಗಳನ್ನು ಕೈಗೊಂಡಿದ್ದಾರೆ, ಇದಕ್ಕಾಗಿ ಯಾವ ಯೋಜನೆಗಳನ್ನು ರೂಪಿಸಿದ್ದಾರೆ ಎನ್ನುವ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚೆಯಾಗಬೇಕಿದೆ. 

ಇದನ್ನೂ ಓದಿ ವಿಷಮ ಭಾರತ | ಹೊರಗೆ ಗಾಂಧೀ ವೇಷ- ಒಳಗೆ ಮುಸ್ಲಿಮ್ ದ್ವೇಷ!

ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯನ್ನು ಮುಂದೂಡಲು ಪಕ್ಷಾತೀತವಾಗಿ ಎಲ್ಲ ಶಾಸಕರೂ ತೋರುವ ಉತ್ಸಾಹವೇನಿದೆ ಅದುವೇ ಈ ನಾಯಕರಿಗೆ ಬೆಂಗಳೂರಿನ ಅಭಿವೃದ್ಧಿಯೆಡೆಗೆ ಯಾವ ಪರಿ ಬದ್ಧತೆ ಇದೆ ಎನ್ನುವುದನ್ನು ಸಾರಿ ಹೇಳುತ್ತದೆ! ಸ್ಥಳೀಯ ಆಡಳಿತವಿಲ್ಲ, ಅಧಿಕಾರಿಗಳಿಗೆ ಲಂಗುಲಗಾಮಿಲ್ಲ, ಶಾಸಕರಿಗೆ, ಉಸ್ತುವಾರಿ ಸಚಿವರಿಗೆ ರಾಜಕೀಯದಾಚೆಗೆ ಬೇರೆ ಗಮನವಿಲ್ಲ… ಈ ನಡುವೆ ಮತ್ತೊಂದು ಮುಂಗಾರು ಬೆಂಗಳೂರನ್ನು ಗಾಢವಾಗಿ ದಿಟ್ಟಿಸುತ್ತಿದೆ. 

?s=150&d=mp&r=g
ನಿಶಾನ್‌ ರಾಜ್‌
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X